ಬುಧವಾರ, ಸೆಪ್ಟೆಂಬರ್ 2, 2015

ಯುನಿಕೋಡ್

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]


ಹಿಂದಿನ ಕನ್ನಡ ಪದಸಂಸ್ಕಾರಕಗಳನ್ನು ಬಳಸುವಾಗ ನಾವು ನಿರ್ದಿಷ್ಟ ಫಾಂಟುಗಳನ್ನು ಅವಲಂಬಿಸಬೇಕಾದ್ದು ಅನಿವಾರ್ಯವಾಗಿತ್ತು. ಟೈಪಿಸುವುದು ಹಾಗಿರಲಿ, ಫಾಂಟ್ ಇನ್‌ಸ್ಟಾಲ್ ಮಾಡಿಕೊಳ್ಳದೆ ಕನ್ನಡದ ಪಠ್ಯ ಓದುವುದೂ ಆಗ ಸಾಧ್ಯವಾಗುತ್ತಿರಲಿಲ್ಲ.

ಈ ಪರಿಸ್ಥಿತಿ ಬದಲಾದದ್ದು ಯುನಿಕೋಡ್ ಸಂಕೇತ ವಿಧಾನ ಬಳಕೆಗೆ ಬಂದಾಗ (ನೆನಪಿಡಿ, ಯುನಿಕೋಡ್ ಒಂದು ಸಂಕೇತ ವಿಧಾನ - ತಂತ್ರಾಂಶ ಅಲ್ಲ). ಈ ಸೌಲಭ್ಯವಿರುವ ತಂತ್ರಾಂಶಗಳಲ್ಲಿ ಬೆರಳಚ್ಚು ಮಾಡಿದ ಮಾಹಿತಿಯನ್ನು ನೇರವಾಗಿ ಯುನಿಕೋಡ್‌ನಲ್ಲೇ ಸಂಗ್ರಹಿಸಿಡಲಾಗುತ್ತದೆ, ಹಳೆಯ ತಂತ್ರಾಂಶಗಳಂತೆ ಅಕ್ಷರಶೈಲಿಯ (ಫಾಂಟ್) ಸಂಕೇತಗಳಲ್ಲಿ ಅಲ್ಲ. ಹಾಗಾಗಿ ಯುನಿಕೋಡ್‌ನಲ್ಲಿರುವ ಮಾಹಿತಿಯನ್ನು ಬೇರೊಬ್ಬರು ಓದಲು ಕನ್ನಡದ ಯಾವುದೇ ಯುನಿಕೋಡ್ ಅಕ್ಷರಶೈಲಿ (ಓಪನ್‌ಟೈಪ್ ಫಾಂಟ್) ಇದ್ದರೆ ಸಾಕು.
ಹಾಗಾಗಿ ಇಮೇಲ್ ಕಳುಹಿಸುವುದು, ಜಾಲತಾಣಗಳಿಗೆ-ಬ್ಲಾಗುಗಳಿಗೆ ಮಾಹಿತಿ ಸೇರಿಸುವುದು, ಅವನ್ನು ಓದುವುದು, ಕನ್ನಡದ ಮಾಹಿತಿಯನ್ನು ಸರ್ಚ್ ಇಂಜನ್‌ಗಳಲ್ಲಿ ಕನ್ನಡದಲ್ಲೇ ಹುಡುಕುವುದು - ಇದೆಲ್ಲವನ್ನೂ ನಿರ್ದಿಷ್ಟ ತಂತ್ರಾಂಶದ ಮೇಲೆ ಅವಲಂಬಿತರಾಗದೆ ಮಾಡುವುದು ಸಾಧ್ಯವಾಗುತ್ತದೆ.
ಯುನಿಕೋಡ್ ಬಗ್ಗೆ ಹೆಚ್ಚಿನ ಮಾಹಿತಿ (೨೦೧೨ರಲ್ಲಿ ಪ್ರಕಟವಾದ ಲೇಖನ)
'ಬರಹ', 'ನುಡಿ', 'ಪದ' ಸೇರಿದಂತೆ ಈಚಿನ ಬಹುತೇಕ ತಂತ್ರಾಂಶಗಳನ್ನು ಬಳಸಿ ಯುನಿಕೋಡ್‌ನಲ್ಲಿ ಟೈಪಿಸುವುದು ಸಾಧ್ಯ. ಈ ತಂತ್ರಾಂಶಗಳಲ್ಲಿ - ಯುನಿಕೋಡ್ ಬಳಸದೆ - ಟೈಪಿಸಿದ ಪಠ್ಯ 'ಆಸ್ಕಿ' (ಅಮೆರಿಕನ್ ಸ್ಟಾಂಡರ್ಡ್ ಕೋಡ್ ಫಾರ್ ಇನ್‌ಫರ್ಮೇಶನ್ ಇಂಟರ್‌ಚೇಂಜ್) ಸಂಕೇತ ವಿಧಾನದಲ್ಲಿ ದಾಖಲಾಗಿರುತ್ತದೆ. ಆಸ್ಕಿಯಲ್ಲಿ ಟೈಪಿಸಿದ ಪಠ್ಯವನ್ನು ಯುನಿಕೋಡ್‌ಗೆ ಪರಿವರ್ತಿಸಿಕೊಳ್ಳಲು ನೆರವಾಗುವ ತಂತ್ರಾಂಶಗಳಿವೆ. ಬರಹ ತಂತ್ರಾಂಶದೊಡನೆ ಬರುವ 'ಬರಹ ಕನ್ವರ್ಟ್' ಬಳಸಿ ಯುನಿಕೋಡ್ ಪಠ್ಯವನ್ನು ಆಸ್ಕಿಗೆ ಪರಿವರ್ತಿಸಿಕೊಳ್ಳುವುದೂ ಸಾಧ್ಯ.

ಅಂದಹಾಗೆ ಯುನಿಕೋಡ್ ಅಕ್ಷರಶೈಲಿಯೆಂದರೆ ವಿಂಡೋಸ್‌ನಲ್ಲಿ ದೊರಕುವ 'ತುಂಗಾ' ಒಂದೇ ಅಲ್ಲ. ಬರಹ, ನುಡಿ ಸೇರಿದಂತೆ ಹಲವು ತಂತ್ರಾಂಶಗಳಲ್ಲಿ ಯುನಿಕೋಡ್‌ಗೆಂದೇ ಪ್ರತ್ಯೇಕ ಫಾಂಟುಗಳಿವೆ. ಅರವಿಂದ ಅವರ ತಾಣದಿಂದ 'ಗುಬ್ಬಿ', 'ನವಿಲು' ಎನ್ನುವ ಫಾಂಟುಗಳನ್ನು ಪಡೆದುಕೊಳ್ಳಬಹುದು. ಗೂಗಲ್ ಸಂಸ್ಥೆ ಕೂಡ ಕನ್ನಡಕ್ಕಾಗಿ 'Noto Sans Kannada' ಎಂಬ ಅಕ್ಷರಶೈಲಿಯನ್ನು ರೂಪಿಸಿದೆ.

ಆಸ್ಕಿ-ಯುನಿಕೋಡ್ ಪರಿವರ್ತಕಗಳು:


ಯುನಿಕೋಡ್ ಅಕ್ಷರಶೈಲಿಗಳು:


ಈ ಸರಣಿಯಲ್ಲಿ ನೀವು ನೋಡುವುದು ಉದಾಹರಣೆಗಳನ್ನಷ್ಟೇ ಹೊರತು ಕನ್ನಡ ತಂತ್ರಾಂಶ ಸವಲತ್ತುಗಳ ಸಮೀಕ್ಷೆಯನ್ನಾಗಲೀ ಪರಿಪೂರ್ಣ ಪಟ್ಟಿಯನ್ನಾಗಲೀ ಅಲ್ಲ ಎಂದು ದಯಮಾಡಿ ಗಮನಿಸಿ.

ಕಾಮೆಂಟ್‌ಗಳಿಲ್ಲ:

badge