ಶುಕ್ರವಾರ, ಸೆಪ್ಟೆಂಬರ್ 11, 2015

ಪದಪರೀಕ್ಷೆ

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ಇಂಗ್ಲಿಷ್ ಪದಗಳನ್ನು ಟೈಪಿಸುವಾಗ ಏನಾದರೂ ಅಕ್ಷರದೋಷಗಳಿದ್ದರೆ ಅವನ್ನು ಕೆಂಪು ಅಡಿಗೆರೆಯ ಮೂಲಕ ಗುರುತಿಸುವ, ಸ್ಪೆಲಿಂಗ್ ಸರಿಪಡಿಸಲು ಸಹಾಯವನ್ನೂ ಮಾಡುವ ಸೌಲಭ್ಯಗಳನ್ನು ನಾವು ಹಲವು ತಂತ್ರಾಂಶಗಳಲ್ಲಿ, ಜಾಲತಾಣಗಳಲ್ಲಿ ಗಮನಿಸಿರುತ್ತೇವೆ. ಇಂತಹ ಸೌಲಭ್ಯ ಕನ್ನಡದಲ್ಲೂ ಇದೆ. ಪದಸಂಸ್ಕಾರಕಗಳ ಉದಾಹರಣೆ ನೋಡುವುದಾದರೆ 'ಪದ' ತಂತ್ರಾಂಶದಲ್ಲಿ ಟೈಪಿಸಿದ ನಮ್ಮ ಪಠ್ಯದಲ್ಲಿರುವ (ಬಹುತೇಕ) ತಪ್ಪುಗಳನ್ನು ಗುರುತಿಸುವುದು ಹಾಗೂ ಸರಿಯಾದ ರೂಪಗಳನ್ನು ನೋಡುವುದು ಸಾಧ್ಯ. ಅಷ್ಟೇ ಅಲ್ಲ, ಮೊದಲ ಕೆಲ ಅಕ್ಷರಗಳನ್ನು ಟೈಪಿಸುತ್ತಿದ್ದಂತೆ ಆ ಅಕ್ಷರಗಳಿಂದ ಪ್ರಾರಂಭವಾಗುವ ಪದವನ್ನು ಸೂಚಿಸುವ ಸೌಲಭ್ಯ ಕೂಡ ಇಲ್ಲಿದೆ.

ಮೈಕ್ರೋಸಾಫ್ಟ್ ಆಫೀಸ್‌ಗೆ ಮುಕ್ತ ತಂತ್ರಾಂಶ ಜಗತ್ತಿನ ಪರ್ಯಾಯವಾದ 'ಲಿಬ್ರೆ ಆಫೀಸ್' ಸಂಗ್ರಹದ ಎಲ್ಲ ತಂತ್ರಾಂಶಗಳಲ್ಲೂ ನಾವು ಟೈಪಿಸಿದ ಕನ್ನಡ ಪಠ್ಯವನ್ನು ಪರೀಕ್ಷಿಸಿ ಇರಬಹುದಾದ ತಪ್ಪುಗಳನ್ನು ಸರಿಪಡಿಸುವ ವ್ಯವಸ್ಥೆ ಇದೆ. ಇಂತಹುದೇ ಸೌಲಭ್ಯ ('ಪದ ಪರೀಕ್ಷಕ') ನುಡಿ ತಂತ್ರಾಂಶದಲ್ಲೂ ಇದೆ.

ಇಮೇಲ್ ಫೇಸ್‌ಬುಕ್ ಇತ್ಯಾದಿಗಳಲ್ಲೆಲ್ಲ ನಾವು ಸರಾಗವಾಗಿ ಕನ್ನಡ ಪಠ್ಯವನ್ನು ಟೈಪಿಸುತ್ತೇವಲ್ಲ, ಅಲ್ಲಿರಬಹುದಾದ ಅಕ್ಷರದೋಷಗಳನ್ನು ಗುರುತಿಸುವ ಸೌಲಭ್ಯವೂ ಲಭ್ಯವಿದೆ. ಫೈರ್‌ಫಾಕ್ಸ್ ಬ್ರೌಸರ್‌ಗಾಗಿ ದೊರಕುವ 'ಕನ್ನಡ ಸ್ಪೆಲ್ ಚೆಕರ್' ಎನ್ನುವ ಉಚಿತ ತಂತ್ರಾಂಶವನ್ನು (ಆಡ್-ಆನ್) ಅಳವಡಿಸಿಕೊಂಡರೆ ಸಾಕು; ಆ ಬ್ರೌಸರಿನ ಕಿಟಕಿಗಳಲ್ಲಿ ಇಮೇಲ್ ಸಂದೇಶವನ್ನೋ ಫೇಸ್‌ಬುಕ್ ಪೋಸ್ಟನ್ನೋ ಬ್ಲಾಗ್ ಪ್ರತಿಕ್ರಿಯೆಯನ್ನೋ ಕನ್ನಡದಲ್ಲಿ ಟೈಪಿಸುವಾಗ ಅಕ್ಷರ ದೋಷಗಳನ್ನು ಪತ್ತೆಮಾಡುವುದು ಹಾಗೂ ಸೂಕ್ತವಾಗಿ ತಿದ್ದುಪಡಿಮಾಡಲು ನೆರವು ಪಡೆಯುವುದು ಸಾಧ್ಯವಾಗುತ್ತದೆ.



ಕಾಮೆಂಟ್‌ಗಳಿಲ್ಲ:

badge