ಶುಕ್ರವಾರ, ಸೆಪ್ಟೆಂಬರ್ 15, 2017

ಪೋರ್ಟ್ ಅಂದರೆ ಏನು?

ಟಿ. ಜಿ. ಶ್ರೀನಿಧಿ

ಪೋರ್ಟ್ ಅಂದರೆ ಬಂದರು. ದೋಣಿಗಳ, ಹಡಗುಗಳ ನಿಲ್ದಾಣ. ಏರ್‌ಪೋರ್ಟ್ ಅಂದರೆ ವಿಮಾನಗಳ ನಿಲ್ದಾಣ. ಇದು ನಮಗೆಲ್ಲ ಗೊತ್ತಿರುವ ವಿಷಯವೇ. ಈ ಲೇಖನದಲ್ಲಿ ನಾವು ಮಾತನಾಡುತ್ತಿರುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 'ಪೋರ್ಟ್' ಏನನ್ನು ಪ್ರತಿನಿಧಿಸುತ್ತದೆ ಎನ್ನುವುದರ ಬಗ್ಗೆ.

ಸಾಮಾನ್ಯ ಬಳಕೆದಾರರ ದೃಷ್ಟಿಯಲ್ಲಿ ಯೋಚಿಸುವುದಾದರೆ ಪೋರ್ಟ್ ಎಂದಾಕ್ಷಣ ಮೊಬೈಲ್ ಸೇವೆ ಒದಗಿಸುವ ಸಂಸ್ಥೆಯನ್ನು ಬದಲಿಸುವ ಪ್ರಕ್ರಿಯೆಯೇ ನಮ್ಮ ನೆನಪಿಗೆ ಬರುತ್ತದೆ. ಆದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪೋರ್ಟ್ ಎನ್ನುವುದಕ್ಕೆ ಇನ್ನೂ ಕೆಲವು ಅರ್ಥಗಳಿವೆ.

ಪೆನ್ ಡ್ರೈವ್, ಮೌಸ್, ಕೀಬೋರ್ಡ್, ಮಾನಿಟರ್ ಮುಂತಾದ ಯಂತ್ರಾಂಶಗಳನ್ನು ಕಂಪ್ಯೂಟರಿನೊಡನೆ ಬಳಸುತ್ತೇವಲ್ಲ, ಅವನ್ನೆಲ್ಲ ಸಂಪರ್ಕಿಸುವ ಅಂತರ ಸಂಪರ್ಕ ಸಾಧನಗಳನ್ನು (ಇಂಟರ್‌ಫೇಸ್) 'ಪೋರ್ಟ್'ಗಳೆಂದು ಗುರುತಿಸುತ್ತಾರೆ. ಮೊಬೈಲ್ ಫೋನಿಗೆ ಚಾರ್ಜಿಂಗ್ ಕೇಬಲ್ ಜೋಡಿಸುವುದು, ಟೀವಿಗೆ ಎಚ್‌ಡಿಎಂಐ ಸಂಪರ್ಕ ಕಲ್ಪಿಸುವುದೂ ಪೋರ್ಟ್‌ಗಳ ಮೂಲಕವೇ.

ತಂತ್ರಾಂಶದ ಲೋಕದಲ್ಲೂ ಪೋರ್ಟ್ ಪರಿಕಲ್ಪನೆ ಇದೆ. ಯಾವುದೋ ಒಂದು ಕಾರ್ಯಾಚರಣ ವ್ಯವಸ್ಥೆಯಲ್ಲಿ (ಉದಾ: ವಿಂಡೋಸ್) ಕೆಲಸಮಾಡಲೆಂದು ಸಿದ್ಧಪಡಿಸಿದ ಕಂಪ್ಯೂಟರ್ ತಂತ್ರಾಂಶ ಅಥವಾ ಮೊಬೈಲ್ ಆಪ್ ಅನ್ನು ಇನ್ನೊಂದು ವ್ಯವಸ್ಥೆಯಲ್ಲೂ (ಉದಾ: ಮ್ಯಾಕ್) ಕೆಲಸಮಾಡುವಂತೆ ಪರಿವರ್ತಿಸುವ ಕೆಲಸವನ್ನು 'ಪೋರ್ಟ್ ಮಾಡುವುದು' ಎಂದು ಕರೆಯುತ್ತಾರೆ.

ಇನ್ನು ಅಂತರಜಾಲದ ವಿಷಯಕ್ಕೆ ಬಂದರೆ ಅಲ್ಲೂ ಪೋರ್ಟ್‍‍ಗಳ ಪ್ರಸ್ತಾಪ ಕೇಳಸಿಗುತ್ತದೆ. ಯಾವುದೇ ಸರ್ವರ್ ನಿರ್ದಿಷ್ಟ ಕೆಲಸಕ್ಕಾಗಿ ಯಾವ ಶಿಷ್ಟಾಚಾರವನ್ನು ಬಳಸುತ್ತಿದೆ ಎನ್ನುವುದನ್ನು 'ಇಂಟರ್‍‍ನೆಟ್ ಪೋರ್ಟ್' ಸೂಚಿಸುತ್ತದೆ. ಜಾಲತಾಣಗಳನ್ನು ಪ್ರದರ್ಶಿಸಲು, ಇಮೇಲ್ ಸಂದೇಶಗಳನ್ನು ನಿಭಾಯಿಸಲು, ಎಫ್‍ಟಿಪಿ ಮನವಿಗಳಿಗೆ ಸ್ಪಂದಿಸಲು ಸರ್ವರ್‍‍ಗಳು ಬೇರೆಬೇರೆ ಪೋರ್ಟ್‍‍ಗಳನ್ನು ಬಳಸುತ್ತವೆ. ಇಂತಹ ಪೋರ್ಟ್‍‍ಗಳನ್ನು ನಿರ್ದಿಷ್ಟ ಸಂಖ್ಯೆಗಳು ಪ್ರತಿನಿಧಿಸುತ್ತವೆ. ಕೆಲವೊಮ್ಮೆ ಈ ಸಂಖ್ಯೆಗಳನ್ನು ಜಾಲತಾಣದ ವಿಳಾಸದಲ್ಲೇ ಬಳಸುವುದೂ ಇದೆ (ಉದಾ: http://www.ejnana.com:80/).

ಮೇ ೧೭, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge