ಶುಕ್ರವಾರ, ಸೆಪ್ಟೆಂಬರ್ 1, 2017

ವಿಜ್ಞಾನದ ಇಜ್ಞಾನ: ಬಣ್ಣಬಣ್ಣದ ಎಲೆ ಹಣ್ಣಾಗಿ ಉದುರುವ ಬಗೆ...

ಕ್ಷಮಾ ವಿ. ಭಾನುಪ್ರಕಾಶ್


ನವಿರಾದ ಚಿಗುರು ಎಲೆಗಳ ಬಣ್ಣ ಎಷ್ಟು ತಿಳಿ ಹಸಿರು. ಬಲಿತ ಎಲೆಗಳದ್ದು ಗಾಢ ಹಸಿರು ಬಣ್ಣವಾದರೆ ಉದುರಿಹೋಗುವ ಹಣ್ಣೆಲೆಗಳ ಬಣ್ಣ ಹಳದಿ ಅಥವಾ ಕೇಸರಿ. ಇದರ ಜೊತೆಗೆ ಕೆಂಪು, ಹಳದಿ, ಕೇಸರಿ ಬಣ್ಣದ ಎಲೆಗಳಿರೋ ಗಿಡಗಳನ್ನೂ ನಾವು ನೋಡಬಹುದು.

ಎಲೆಗಳು ಹಾಗೂ ಇಡೀ ಗಿಡದ ಬಣ್ಣವನ್ನು ನಿರ್ಧರಿಸುವುದು ಅವುಗಳಲ್ಲಿ ಅಡಗಿರುವ 'ವರ್ಣದ್ರವ್ಯ', ಅಂದರೆ 'ಪಿಗ್ಮೆಂಟ್'ಗಳು.

ಹಾಗಾದರೆ ಹಸಿರು ಎಲೆಗಳಲ್ಲಿರುವುದು ಹಸಿರು ವರ್ಣದ್ರವ್ಯ ಮಾತ್ರವೇ?
ಅಲ್ಲ. ಯಾವುದೇ ಗಿಡದ ಎಲೆಯಲ್ಲಿ ಎರಡರಿಂದ ಮೂರು ತರಹದ ಪಿಗ್ಮೆಂಟ್‍ಗಳು ಅಡಗಿರುತ್ತವೆ.

ಸಾಮಾನ್ಯವಾಗಿ ಎಲೆಗಳಲ್ಲಿ ಮೂರು ತರಹದ ಪಿಗ್ಮೆಂಟ್‍ಗಳಿರುತ್ತವೆ - 'ಕ್ಲೊರೋಫಿಲ್' , 'ಕರೋಟಿನೊಯಿಡ್' ಮತ್ತು 'ಫ಼ೈಕೊಬಿಲ್ಲಿನ್'. ಈ ಮೂರು ತರಹದ ಪಿಗ್ಮೆಂಟ್‍ಗಳಲ್ಲಿ ಯಾವುದು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೋ ಅದರ ಬಣ್ಣವೇ ಎಲೆಯ ಬಣ್ಣವಾಗಿ ಕಾಣುತ್ತದೆ. ಕ್ಲೊರೋಫಿಲ್ ಹೆಚ್ಚಿದ್ದರೆ ಎಲೆಗಳ ಬಣ್ಣ ಹಸಿರಾಗಿರುತ್ತದೆ. ಕರೋಟಿನೊಯಿಡ್ ಹೆಚ್ಚಿದ್ದರೆ ಹಳದಿ, ಕೇಸರಿ ಅಥವಾ ಕೆಂಪು ಬಣ್ಣ ಬರುತ್ತದೆ. ಅದೇರೀತಿ ಫ಼ೈಕೊಬಿಲ್ಲಿನ್ ಹೆಚ್ಚಿದ್ದರೆ ಎಲೆಗಳ ಬಣ್ಣ ನೀಲಿಯಾಗಿರುತ್ತದೆ.

ಈ ವರ್ಣ'ದ್ರವ್ಯ'ಗಳೇನೂ ಬಣ್ಣ ಬಣ್ಣದ ನೀರಿನಂತಹ ವಸ್ತುಗಳಲ್ಲ. ಅವು ಘನ ಪದಾರ್ಥಗಳು. ಏಳು ಬಣ್ಣ ಸೇರಿ ಬಿಳಿ ಬಣ್ಣದ ಕಿರಣಗಳು ರೂಪುಗೊಂಡಿರುತ್ತವಲ್ಲ? ಎಲೆಗಳ ಮೇಲೆ ಈ ಕಿರಣಗಳು ಬಿದ್ದಾಗ, ಈ ವರ್ಣದ್ರವ್ಯಗಳು ಆರು ಬಣ್ಣದ ಕಿರಣಗಳನ್ನು ಹೀರಿಕೊಂಡು ಒಂದು ಬಣ್ಣದ ಕಿರಣವನ್ನು ಮಾತ್ರ ಪ್ರತಿಫಲಿಸುತ್ತವೆ. ಯಾವ ವರ್ಣದ್ರವ್ಯ ಯಾವ ಬಣ್ಣವನ್ನು ಪ್ರತಿಫಲಿಸುತ್ತದೋ ಅದನ್ನೇ ಆ ವರ್ಣ ದ್ರವ್ಯದ ಬಣ್ಣ ಎಂದು ಗುರುತಿಸಲಾಗುತ್ತದೆ.

ಅಂದಹಾಗೆ ಈ ವರ್ಣದ್ರವ್ಯಗಳ ಕೆಲಸ ಎಲೆಗಳಿಗೆ ಬಣ್ಣ ನೀಡುವುದು ಮಾತ್ರವೇ ಅಲ್ಲ. ದ್ಯುತಿಸಂಶ್ಲೇಷಣೆ (ಫೋಟೊಸಿಂಥೆಸಿಸ್) ಕ್ರಿಯೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸುವುದೂ ಇವೇ ಪಿಗ್ಮೆಂಟ್‌ಗಳು. ಅದರಲ್ಲೂ ಮುಖ್ಯವಾಗಿ ಕ್ಲೊರೋಫಿಲ್ ವರ್ಣದ್ರವ್ಯ ಸೂರ್ಯನ ಕಿರಣಗಳಲ್ಲಿರುವ ಶಕ್ತಿಯನ್ನು ರಾಸಾಯನಿಕ ಶಕ್ತಿಯನ್ನಾಗಿ ಮಾರ್ಪಡಿಸುತ್ತದೆ. ಆ ರಾಸಾಯನಿಕ ಶಕ್ತಿಯನ್ನು ಉಪಯೊಗಿಸಿ ಎಲೆಗಳು ಆಹಾರ ತಯಾರಿಸಲು ಸಾಧ್ಯವಾಗುತ್ತದೆ.

ಮೊದಲು ಹಸಿರಾಗಿದ್ದ ಎಲೆ, ಹಣ್ಣೆಲೆಯಾಗಿ ಉದುರಿ ತರಗೆಲೆ ಆಗುವ ಮೊದಲು ಬಣ್ಣ ಬದಲಾಯಿಸುವ ಪ್ರಕ್ರಿಯೆ ಕುತೂಹಲಕಾರಿ. ಎಲೆಗಳು ಕಾಂಡಕ್ಕೆ ಸೇರುವ ಜಾಗದಲ್ಲಿ ಸಣ್ಣ ಸಣ್ಣ ಕೊಳವೆಗಳು ಅಥವಾ 'ಟ್ಯೂಬ್'ಗಳು ಇರುತ್ತವೆ. ಆ ಕೊಳವೆಗಳ ಮೂಲಕ ನೀರು, ಆಹಾರ ಮತ್ತಿತರ ಪೋಷಕಾಂಶಗಳು ಕಾಂಡದಿಂದ ಎಲೆಗಳಿಗೆ ದೊರಕುತ್ತವೆ. ಎಲೆಗಳಿಗೂ ಕಾಂಡಕ್ಕೂ ಇರುವ ಸಂಪರ್ಕಕ್ಕೆ ತಡೆ ಉಂಟಾಗದಂತೆ ಕಾಪಾಡುವ ಕೆಲಸ 'ಓಕ್ಸಿನ್' ಎನ್ನುವ ಕಿಣ್ವದ್ದು.

ಈ 'ಓಕ್ಸಿನ್' ಕಿಣ್ವ (ಎನ್‌ಜೈಮ್) ಬಹಳ ಚುರುಕಾಗಿ ತನ್ನ ಕೆಲಸ ನಿರ್ವಹಿಸುತ್ತಿರುವವರೆಗೂ, ಅಂದರೆ, ಎಲೆಗಳು ತಮ್ಮ ತಾರುಣ್ಯಾವಸ್ಥೆಯಲ್ಲಿ ಇರುವವರೆಗೂ ಅವು ಹಸಿರಾಗಿಯೇ ಇರುತ್ತವೆ. ಓಕ್ಸಿನ್ ಪ್ರಮಾಣ ಇಳಿಕೆಯಾಗುತ್ತಾ ಹೋದಾಗ ಒಂದು ಹೊಸ ಬದಲಾವಣೆಯಾಗುತ್ತದೆ, ಎಲೆಗಳು ಮತ್ತು ಕಾಂಡಗಳು ಸೇರುವ ಜಾಗದಲ್ಲಿ ಒಂದು ಹೊಸ ಅಡ್ಡ ಪರದೆ ಬೆಳೆಯಲು ಶುರುವಾಗುತ್ತದೆ. ಆ ಪರದೆ ಪೂರ್ತಿ ಬೆಳೆದ ನಂತರ ಎಲೆಗಳಿಗೂ ಕಾಂಡಕ್ಕೂ ಸಂಪರ್ಕ ಸೇತುವೆಯಾಗಿದ್ದ ಟ್ಯೂಬ್ ಸಂಪರ್ಕ ತಪ್ಪಿಹೋಗುತ್ತದೆ.

ಸಂಪರ್ಕ ಸೇತುವೆಯಾಗಿದ್ದ ಈ ಟ್ಯೂಬ್‌ಗಳು ಮುಚ್ಚಿ ಹೋದ ಮೇಲೆ ನೀರು ಆಹಾರ ಸಿಗದೆ ಹಸಿರು ವರ್ಣದ್ರವ್ಯ ಕ್ಲೊರೋಫಿಲ್ ನಶಿಸುತ್ತ ಹೋಗತ್ತದೆ, ಕ್ಲೊರೋಫಿಲ್‌ನ ಪ್ರಮಾಣದಲ್ಲಿ ಇಳಿಕೆ ಆದ ಮೇಲೆ ಬೇರೆ ಪಿಗ್ಮೆಂಟ್‌ಗಳು, ಅದರಲ್ಲೂ ಮುಖ್ಯವಾಗಿ 'ಕರೋಟಿನೊಯಿಡ್' ನ ಅಧಿಪತ್ಯ ಸ್ಥಾಪಿತವಾಗುತ್ತದೆ.

ಆಹಾರ ಮತ್ತು ನೀರಿನ ಪೂರೈಕೆ ಸ್ಥಗಿತವಾದ ಕಾರಣ ಎಲೆಗಳು ತೊಟ್ಟು ಕಳಚಿ ಗಿಡದಿಂದ ಉದುರುತ್ತವೆ. ಆ ಹಣ್ಣೆಲೆಗಳ ಬಣ್ಣ ಕರೋಟಿನೊಯಿಡ್‌ನ ಪ್ರಭಾವದಿಂದ ಹಳದಿ ಮಿಶ್ರಿತ ಕೆಂಪಾಗಿ ಬದಲಾಗುತ್ತದೆ; ವರ್ಣದ್ರವ್ಯಗಳ ಮೇಲಾಟದಿಂದ ಚಿಗುರೆಲೆಗೂ, ಹಣ್ಣೆಲೆಗೂ ಸುಂದರ ವ್ಯತ್ಯಾಸ ಕಂಡುಬರುತ್ತದೆ!

ಜುಲೈ ೮, ೨೦೧೨ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge