ಬುಧವಾರ, ಆಗಸ್ಟ್ 30, 2017

ಸ್ಮಾರ್ಟ್‌ಫೋನ್ ಒಳಗಿನ ಸಿಹಿ: ಆಂಡ್ರಾಯ್ಡ್

ಹೊಸ ಆವೃತ್ತಿಗೆ ಸಿಕ್ತು ಕ್ರೀಮ್ ಬಿಸ್ಕತ್ ಹೆಸರು!


ಟಿ. ಜಿ. ಶ್ರೀನಿಧಿ

ಕಂಪ್ಯೂಟರಿನಂತೆ ಕೆಲಸಮಾಡಬಲ್ಲ ಮೊಬೈಲ್ ಫೋನುಗಳನ್ನು ಸ್ಮಾರ್ಟ್‌ಫೋನ್ ಎಂದು ಕರೆಯುವುದು ವಾಡಿಕೆ. ಕಂಪ್ಯೂಟರಿನಂತೆಯೇ ಇವುಗಳಲ್ಲೂ ನಮ್ಮ ಆಯ್ಕೆಯ ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವುದು, ಬಳಸುವುದು ಸಾಧ್ಯ.

ಸ್ಮಾರ್ಟ್‌ಫೋನೂ ಕಂಪ್ಯೂಟರಿನಂತೆಯೇ ಎಂದಮೇಲೆ ಕಂಪ್ಯೂಟರಿನಲ್ಲಿರುವಂತೆ ಅದರಲ್ಲೂ ಓಎಸ್ (ಆಪರೇಟಿಂಗ್ ಸಿಸ್ಟಂ, ಕಾರ್ಯಾಚರಣ ವ್ಯವಸ್ಥೆ) ಇರಬೇಕು - ಕಂಪ್ಯೂಟರಿನಲ್ಲಿ ವಿಂಡೋಸ್, ಲಿನಕ್ಸ್‌ಗಳೆಲ್ಲ ಇದ್ದಂತೆ. ಇತರ ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಲು, ಬಳಸಲು ಇದು ಸಹಾಯ ಮಾಡುತ್ತದೆ.

ಸ್ಮಾರ್ಟ್‍ಫೋನುಗಳಲ್ಲಿ ಬಳಕೆಯಾಗುವ ಓಎಸ್‍ಗಳ ಪೈಕಿ ಬಹಳ ಜನಪ್ರಿಯವಾಗಿರುವುದು, ನಮಗೆ ಚೆನ್ನಾಗಿ ಪರಿಚಯವಿರುವುದು ಆಂಡ್ರಾಯ್ಡ್. ಈ ಪರಿಚಯ ಎಷ್ಟರಮಟ್ಟಿನದು ಎಂದರೆ ಅನೇಕ ಮಂದಿ ಸ್ಮಾರ್ಟ್‌ಫೋನುಗಳನ್ನು ಆಂಡ್ರಾಯ್ಡ್ ಫೋನುಗಳೆಂದೇ ಗುರುತಿಸುತ್ತಾರೆ.

ಇದು ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆ ಗೂಗಲ್‍ನ ಉತ್ಪನ್ನ. ಅಮೆರಿಕಾದ ತಂತ್ರಜ್ಞ ಆಂಡಿ ರುಬಿನ್ ಎಂಬಾತ ತನ್ನ ಸಂಗಡಿಗರ ಜೊತೆಯಲ್ಲಿ ರೂಪಿಸುತ್ತಿದ್ದ ಈ ಕಾರ್ಯಾಚರಣ ವ್ಯವಸ್ಥೆಯನ್ನು ೨೦೦೫ರಲ್ಲಿ ಕೊಂಡುಕೊಂಡ ಗೂಗಲ್ ೨೦೦೭ನೇ ಇಸವಿಯಲ್ಲಿ ಅದನ್ನು ಮುಕ್ತ ತಂತ್ರಾಂಶದ ರೂಪದಲ್ಲಿ ಬಿಡುಗಡೆಮಾಡಿತು. ಮೊಬೈಲ್ ಹ್ಯಾಂಡ್‌ಸೆಟ್‌ಗಳಿಗೆ ಮುಕ್ತ ಮಾನಕಗಳನ್ನು (ಸ್ಟಾಂಡರ್ಡ್) ರೂಪಿಸುವ ಉದ್ದೇಶದಿಂದ 'ಓಪನ್ ಹ್ಯಾಂಡ್‌ಸೆಟ್ ಅಲಯನ್ಸ್' ಒಕ್ಕೂಟ ರೂಪುಗೊಂಡಿದ್ದೂ ಅದೇ ಸಮಯದಲ್ಲಿ.

ಅಂದಹಾಗೆ ಆಂಡ್ರಾಯ್ಡ್ ಎಂಬ ಹೆಸರಿನ ಅರ್ಥ 'ಮನುಷ್ಯನಂತೆ ಕಾಣುವ, ಮನುಷ್ಯನಂತೆ ವರ್ತಿಸುವ ರೋಬಾಟ್' ಎಂದು. ಇದು ಆಂಡಿ ರುಬಿನ್‌ನ ಅಡ್ಡಹೆಸರೂ ಆಗಿತ್ತಂತೆ.

ಆಂಡ್ರಾಯ್ಡ್ ಒಂದು ಮುಕ್ತ ತಂತ್ರಾಂಶವಾಗಿರುವುದರಿಂದ ಇದನ್ನು ಯಾರು ಬೇಕಾದರೂ ಬಳಸುವುದು, ತಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳುವುದು ಸಾಧ್ಯ. ಹೀಗಾಗಿಯೇ ಬಹುತೇಕ ಮೊಬೈಲ್ ತಯಾರಕರು ತಮ್ಮ ಫೋನುಗಳಲ್ಲಿ ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆಯನ್ನು ತಮ್ಮ ಆಯ್ಕೆಗೆ ತಕ್ಕಂತೆ ಬದಲಿಸಿಕೊಂಡು ಬಳಸುತ್ತಿದ್ದಾರೆ. ಆಂಡ್ರಾಯ್ಡ್‌ನ ಒಂದೇ ಆವೃತ್ತಿ ಬಳಸುವ ಬೇರೆಬೇರೆ ಸಂಸ್ಥೆಯ ಫೋನುಗಳಲ್ಲಿ ಬೇರೆಬೇರೆ ಸೌಲಭ್ಯಗಳಿರುತ್ತವಲ್ಲ, ಅದಕ್ಕೆ ಇದೇ ಕಾರಣ.

ಲಿನಕ್ಸ್ ಆಧರಿಸಿ ಆಂಡ್ರಾಯ್ಡ್ ರೂಪುಗೊಂಡ ಹಾಗೆಯೇ ಆಂಡ್ರಾಯ್ಡ್ ಆಧರಿಸಿ ಹಲವು ಹೊಸ ಕಾರ್ಯಾಚರಣ ವ್ಯವಸ್ಥೆಗಳೂ ರೂಪುಗೊಂಡಿವೆ. ಆಂಡ್ರಾಯ್ಡ್‌ನಲ್ಲಿ ಕೆಲಸಮಾಡಬಲ್ಲ ತಂತ್ರಾಂಶಗಳನ್ನು (ಆಪ್) ಯಾರು ಬೇಕಾದರೂ ರಚಿಸಿ ಪ್ರಕಟಿಸಲು ಸಾಧ್ಯವಾಗಿರುವುದಕ್ಕೂ ಅದರ ಮುಕ್ತ ಸ್ವರೂಪವೇ ಕಾರಣ (ಅಂದಹಾಗೆ ಈ ಕಾರ್ಯಾಚರಣ ವ್ಯವಸ್ಥೆಯಲ್ಲಿ ಬಳಸಬಹುದಾದ ಆಪ್‍ಗಳನ್ನು ಒದಗಿಸುವ ಗೂಗಲ್ ಪ್ಲೇ ಸ್ಟೋರ್ ಅನ್ನು ಗೂಗಲ್ ಸಂಸ್ಥೆಯೇ ನಿರ್ವಹಿಸುತ್ತದೆ, ಹಾಗೂ ಇದಕ್ಕಾಗಿ ತಂತ್ರಾಂಶ ತಯಾರಕರಿಂದ ಶುಲ್ಕವನ್ನೂ ಪಡೆದುಕೊಳ್ಳುತ್ತದೆ).

ಆಂಡ್ರಾಯ್ಡ್‌ನ ಹೊಸ ಆವೃತ್ತಿಗಳನ್ನು ನಿಯಮಿತವಾಗಿ ಹೊರತರುವ ಗೂಗಲ್ ಆ ಆವೃತ್ತಿಗಳನ್ನು ಸಿಹಿತಿಂಡಿಗಳ ಹೆಸರಿನಿಂದ ಗುರುತಿಸುತ್ತದೆ, ಮತ್ತು ಆ ಹೆಸರುಗಳು ಇಂಗ್ಲಿಷಿನ ಅಕಾರಾದಿ ಕ್ರಮವನ್ನು ಅನುಸರಿಸುತ್ತವೆ (ಈ ಅಭ್ಯಾಸ ಶುರುವಾದದ್ದು ಆಂಡ್ರಾಯ್ಡ್‌ನ ಮೂರನೇ ಬಿಡುಗಡೆಯಿಂದ; ಹಾಗಾಗಿ ಸಿಹಿತಿಂಡಿಗಳ ಪಟ್ಟಿ ಶುರುವಾಗುವುದು 'ಎ' ಬದಲು 'ಸಿ' ಅಕ್ಷರದಿಂದ ಎನ್ನುವುದು ವಿಶೇಷ). ಕಪ್‌ಕೇಕ್, ಡೋನಟ್, ಎಕ್ಲೇರ್, ಫ್ರೋಯೋ ('ಫ್ರೋಜನ್ ಯೋಗರ್ಟ್' ಎನ್ನುವುದರ ಹ್ರಸ್ವರೂಪ), ಜಿಂಜರ್‌ಬ್ರೆಡ್, ಹನಿಕೂಂಬ್, ಐಸ್‌ಕ್ರೀಮ್ ಸ್ಯಾಂಡ್‌ವಿಚ್, ಜೆಲ್ಲಿಬೀನ್, ಕಿಟ್‌ಕ್ಯಾಟ್, ಲಾಲಿಪಾಪ್, ಮಾರ್ಶ್‌ಮ್ಯಾಲೋ, ನೌಗಾಟ್‌ಗಳೆಲ್ಲ ಆದಮೇಲೆ ಇದೀಗ ಆಂಡ್ರಾಯ್ಡ್‌ ಕಾರ್ಯಾಚರಣ ವ್ಯವಸ್ಥೆಯ ಎಂಟನೇ ಆವೃತ್ತಿಗೆ ಓರಿಯೋ ಕ್ರೀಮ್ ಬಿಸ್ಕತ್ತಿನ ಹೆಸರಿಡಲಾಗಿದೆ.

ಹೆಚ್ಚಿನ ಸುರಕ್ಷತೆ ಹಾಗೂ ಬ್ಯಾಟರಿ-ಮೆಮೊರಿಗಳ ಮಿತಬಳಕೆ ಈ ಆವೃತ್ತಿಯ ಪ್ರಮುಖ ವೈಶಿಷ್ಟ್ಯಗಳೆಂದು ಗೂಗಲ್ ಹೇಳಿಕೊಂಡಿದೆ. ಹಲವು ಆಂಡ್ರಾಯ್ಡ್ ಫೋನುಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವ 'ಗೂಗಲ್ ಪ್ಲೇ ಪ್ರೊಟೆಕ್ಟ್' ಸೌಲಭ್ಯವನ್ನು ಆಂಡ್ರಾಯ್ಡ್ ಓರಿಯೋ ಆವೃತ್ತಿಯಲ್ಲಿ ಪೂರ್ವನಿಯೋಜಿತವಾಗಿ ಸೇರಿಸಲಾಗುತ್ತಿದೆ. ಸಂಶಯಾಸ್ಪದ ಆಪ್‌ಗಳ ಮೇಲೆ ನಿಗಾ ವಹಿಸುವುದು, ಮೊಬೈಲಿನಲ್ಲಿರುವ ಖಾಸಗಿ ಮಾಹಿತಿಯನ್ನು ಕಾಪಾಡಿಕೊಳ್ಳಲು ನೆರವಾಗುವುದು ಈ ಸೌಲಭ್ಯದ ಉದ್ದೇಶ. ವಿವಿಧ ಆಪ್‌ಗಳು ಕಳಿಸುವ ಸಂದೇಶಗಳನ್ನು (ನೋಟಿಫಿಕೇಶನ್) ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸುವ ವ್ಯವಸ್ಥೆಯನ್ನೂ ಈ ಆವೃತ್ತಿಯಲ್ಲಿ ಸೇರಿಸಲಾಗುತ್ತಿದೆಯಂತೆ. ತಂತ್ರಾಂಶ ಅಭಿವೃದ್ಧಿಪಡಿಸುವವರಿಗೆ ನೆರವಾಗುವ ಹಲವು ಹೊಸ ಸವಲತ್ತುಗಳೂ ಓರಿಯೋದಲ್ಲಿವೆ.

'ಪಿಕ್ಚರ್-ಇನ್-ಪಿಕ್ಚರ್' ಮಾದರಿಯಲ್ಲಿ ಎರಡು ಆಪ್‌ಗಳನ್ನು ಏಕಕಾಲದಲ್ಲೇ ಬಳಸಲು ನೆರವಾಗುವ ಸೌಲಭ್ಯ ಕೂಡ ಇದರಲ್ಲಿರಲಿದೆ. ಇದು ಆಂಡ್ರಾಯ್ಡ್ ನೌಗಾಟ್‌ನಲ್ಲಿ ಪರಿಚಯಿಸಲಾದ ಸ್ಪ್ಲಿಟ್ ಸ್ಕ್ರೀನ್ ವ್ಯವಸ್ಥೆಗಿಂತ (ಅರ್ಧ ಪರದೆಯಲ್ಲಿ ಒಂದು ಆಪ್, ಇನ್ನರ್ಧದಲ್ಲಿ ಇನ್ನೊಂದು ಆಪ್) ಭಿನ್ನ ಎಂದು ಗೂಗಲ್ ಹೇಳಿದೆ. ತಾಂತ್ರಿಕ ವಿವರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವವರಿಗೆ ಈ ಆವೃತ್ತಿಯಲ್ಲಿ ಹೊಸ ರೂಪದ ಎಮೋಜಿಗಳೂ ದೊರಕಲಿವೆ.

ಈ ಹಿಂದಿನ ಆವೃತ್ತಿಗಳಂತೆ ಆಂಡ್ರಾಯ್ಡ್ ಓರಿಯೋ ಕೂಡ ಗೂಗಲ್ ನೆಕ್ಸಸ್ ಹಾಗೂ ಪಿಕ್ಸೆಲ್ ಫೋನುಗಳಿಗೆ ಮೊದಲು ಲಭ್ಯವಾಗಲಿದೆ. ಇನ್ನಿತರ ಫೋನುಗಳ ಬಳಕೆದಾರರು ಓರಿಯೋ ಸವಿಯಲು ತಮ್ಮತಮ್ಮ ಮೊಬೈಲ್ ಸಂಸ್ಥೆಗಳ ನಿರ್ಧಾರಕ್ಕಾಗಿ ಕಾಯುವುದು ಅನಿವಾರ್ಯ.

ಆಗಸ್ಟ್ ೨೭, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge