ಸೋಮವಾರ, ಆಗಸ್ಟ್ 7, 2017

ಸಾಫ್ಟ್‌ವೇರ್, ಹಾರ್ಡ್‌ವೇರ್, ವೇಪರ್‌ವೇರ್!

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನದ ಲೋಕದಲ್ಲಿ ಸದಾಕಾಲವೂ ಹೊಸ ಸಂಗತಿಗಳದೇ ಭರಾಟೆ. ಪ್ರತಿದಿನವೂ ಒಂದಲ್ಲ ಒಂದು ಹೊಸ ಯಂತ್ರಾಂಶ ಅಥವಾ ತಂತ್ರಾಂಶದ ಸುದ್ದಿ ಇಲ್ಲಿ ಕೇಳಸಿಗುತ್ತಲೇ ಇರುತ್ತದೆ.

ಆದರೆ ಹಾಗೆ ಸುದ್ದಿಮಾಡುವ ಎಲ್ಲ ಉತ್ಪನ್ನಗಳೂ ಹೇಳಿದ ಸಮಯಕ್ಕೆ ಮಾರುಕಟ್ಟೆಗೆ ಬರುವುದಿಲ್ಲ. ಈ ಪೈಕಿ ಕೆಲ ಉತ್ಪನ್ನಗಳು ಮಾರುಕಟ್ಟೆಗೆ ಬರುವುದು ತೀರಾ ನಿಧಾನವಾದರೆ ಇನ್ನು ಕೆಲವು ಪತ್ರಿಕಾಗೋಷ್ಠಿಯಿಂದಾಚೆಗೆ ಎಲ್ಲಿಯೂ ಕಾಣಿಸಿಕೊಳ್ಳುವುದೇ ಇಲ್ಲ.

ವಿಪರೀತ ಸುದ್ದಿಮಾಡಿ ಆಮೇಲೆ ಸದ್ದಿಲ್ಲದೆ ಆವಿಯಾಗಿಬಿಡುತ್ತವಲ್ಲ, ಇಂತಹ ಉತ್ಪನ್ನಗಳನ್ನು ತಾಂತ್ರಿಕ ಪರಿಭಾಷೆಯಲ್ಲಿ 'ವೇಪರ್‌ವೇರ್' ಎಂದು ಕರೆಯುತ್ತಾರೆ (ವೇಪರ್ ಎಂದರೆ ಆವಿ).

ಕೆಲವರ್ಷಗಳ ಹಿಂದೆ ವಿಪರೀತ ಸುದ್ದಿಮಾಡಿದ್ದ, ಹಾಗೂ ವಿಪರೀತ ತಡವಾಗಿ ಮಾರುಕಟ್ಟೆಗೆ ಬಂದ ಆಕಾಶ್ ಟ್ಯಾಬ್ಲೆಟ್ ಅನ್ನು ವೇಪರ್‌ವೇರ್ ಉದಾಹರಣೆಯೆಂದು ಕರೆಯಬಹುದು. ಎರಡುನೂರ ಐವತ್ತೊಂದು ರೂಪಾಯಿಗಳಿಗೆ ಮೊಬೈಲ್ ಕೊಡುವುದಾಗಿ ಹೇಳಿ ಪುಕ್ಕಟೆ ಪ್ರಚಾರ ಗಳಿಸಿಕೊಂಡ 'ಫ್ರೀಡಮ್ ೨೫೧' ಕೂಡ ಇದೇ ಗುಂಪಿಗೆ ಸೇರುವ ಇನ್ನೊಂದು ಉತ್ಪನ್ನ.

ಅಂದಹಾಗೆ ಒಂದು ಸಮಯದಲ್ಲಿ ವೇಪರ್‌ವೇರ್ ಎಂದು ಕರೆಸಿಕೊಂಡ ಉತ್ಪನ್ನ ಇಲ್ಲವೇ ತಂತ್ರಜ್ಞಾನ ಆನಂತರದಲ್ಲಿ ಯಶಸ್ವಿಯಾಗಬಾರದು ಎಂದೇನೂ ಇಲ್ಲ. ಏಕೆಂದರೆ ಥ್ರೀಜಿ ಹಾಗೂ ಬ್ಲೂಟೂತ್ ತಂತ್ರಜ್ಞಾನಗಳನ್ನೂ ಒಂದು ಕಾಲದಲ್ಲಿ ವೇಪರ್‌ವೇರ್ ಎಂದು ಗುರುತಿಸಲಾಗಿತ್ತು!

ಫೆಬ್ರುವರಿ ೧, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge