ಈಚಿನ ದಿನಗಳಲ್ಲಿ ಎಲ್ಲ ಸಾಧನಗಳೂ ಒಂದರ ನಂತರ ಒಂದರಂತೆ ಸ್ಮಾರ್ಟ್ ಆಗುತ್ತಿವೆ. ಸ್ಮಾರ್ಟ್ ಫೋನ್, ಸ್ಮಾರ್ಟ್ ಟೀವಿ, ಸ್ಮಾರ್ಟ್ ವಾಚ್ - ಹೀಗೆ ಮನೆಯ ಸಾಧನಗಳೆಲ್ಲ ಸ್ಮಾರ್ಟ್ ಆದಮೇಲೆ ಇನ್ನೇನು, ಪೂರ್ತಿ ಮನೆಯೂ ಸ್ಮಾರ್ಟ್ ಆಗುವುದೇ ಬಾಕಿ!
ಹೌದು, ಡಿಜಿಟಲ್ ತಂತ್ರಜ್ಞಾನದ ಅನುಕೂಲತೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮನೆ, ಅರ್ಥಾತ್ 'ಸ್ಮಾರ್ಟ್ ಹೋಮ್'ಗಳು ಇದೀಗ ರೂಪುಗೊಳ್ಳುತ್ತಿವೆ. ಇಲ್ಲಿನ ಫ್ಯಾನು-ಲೈಟುಗಳನ್ನು ಮೊಬೈಲಿನಿಂದ ನಿಯಂತ್ರಿಸಬಹುದು, ಮನೆಯ ತಾಪಮಾನ-ಗಾಳಿಯ ಗುಣಮಟ್ಟದ ಮಾಹಿತಿಯನ್ನು ಮೊಬೈಲಿನಲ್ಲೇ ಪಡೆದುಕೊಳ್ಳಬಹುದು, ವಾಶಿಂಗ್ ಮಶೀನ್ - ಮೈಕ್ರೋವೇವ್ ಓವನ್ ಕೆಲಸಗಳನ್ನೆಲ್ಲ ಆಫೀಸಿನಲ್ಲಿ ಕುಳಿತೇ ಗಮನಿಸಿಕೊಳ್ಳಬಹುದು, ಸೆಕ್ಯೂರಿಟಿ ಕ್ಯಾಮೆರಾಗೆ ಕಾಣುತ್ತಿರುವ ದೃಶ್ಯಗಳನ್ನು ಸ್ಮಾರ್ಟ್‌ಫೋನಿನಲ್ಲಿ ನೋಡಬಹುದು.
ಅಂದಹಾಗೆ ಇದೆಲ್ಲ ಮುಂದೆಂದೋ ಸಾಧ್ಯವಾಗುವ ಸಂಗತಿಗಳಲ್ಲ - ಮೇಲಿನ ಉದಾಹರಣೆಗಳ ಪೈಕಿ ಬಹಳಷ್ಟು ಸೌಲಭ್ಯಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ, ನಮ್ಮ ದೇಶದಲ್ಲೂ!
ಈ ಪೈಕಿ ಸ್ಮಾರ್ಟ್ ಬಲ್ಬ್‌ನಂತಹ ಸಾಧನಗಳಂತೂ ಕೆಲವೇ ನೂರು ರೂಪಾಯಿಗಳಲ್ಲಿ ದೊರಕುತ್ತವೆ. ಮೊಬೈಲ್ ಮೂಲಕ ನಿಯಂತ್ರಿಸಬಹುದಾದ ಈ ದೀಪಗಳು ನಮಗೆ ಬೇಕಾದಾಗ ಬೆಳಕನ್ನು ಹೆಚ್ಚು-ಕಡಿಮೆ ಮಾಡಿಕೊಳ್ಳಬಲ್ಲವು, ಬೆಳಕಿನ ಬಣ್ಣವನ್ನೂ ಬದಲಿಸಬಲ್ಲವು. ಮೊಬೈಲಿನಿಂದ ಹೊಮ್ಮುವ ಹಾಡಿಗೆ ಸ್ಮಾರ್ಟ್‍ಬಲ್ಬ್ ಸಾಂಗತ್ಯವಿದ್ದರೆ ಮನೆಯಲ್ಲೇ ಡಿಸ್ಕೋ ಎಫೆಕ್ಟ್ ರೆಡಿ! ಸೀಲಿಂಗ್ ಫ್ಯಾನ್‍ನಿಂದ ಟಾಯ್ಲೆಟ್ ಸೀಟ್‍ವರೆಗೆ ಇದೇ ರೀತಿ ಮೊಬೈಲ್ ಮೂಲಕ ನಿಯಂತ್ರಿಸಬಹುದಾದ ಇನ್ನೂ ಅನೇಕ ಸ್ಮಾರ್ಟ್ ಸಾಧನಗಳು ಮಾರುಕಟ್ಟೆಯಲ್ಲಿವೆ.
ಸ್ಮಾರ್ಟ್ ಟೀವಿ ಬಳಸಿ ಆಟವಾಡುವುದೂ ಸಾಧ್ಯ! |
ಗಮನಿಸಬೇಕಾದ ಅಂಶವೆಂದರೆ ಸ್ಮಾರ್ಟ್‌ಫೋನ್, ಸ್ಮಾರ್ಟ್‌ವಾಚ್‌ಗಳಿಗೆಲ್ಲ ಇರುವಂತೆ ಸ್ಮಾರ್ಟ್ ಮನೆಗೆ ನಿರ್ದಿಷ್ಟವಾದ ಸ್ವರೂಪವೇನೂ ಇರುವುದಿಲ್ಲ. ಮೇಲೆ ಹೇಳಿದ ವಿವಿಧ ಸೌಲಭ್ಯಗಳು ಸೇರಿದ ಒಂದು ವಿಶಾಲವಾದ ಪರಿಕಲ್ಪನೆಯಷ್ಟೇ ಆದ್ದರಿಂದ ನಮ್ಮ ಸ್ಮಾರ್ಟ್‌ಮನೆ ಇನ್ನೊಬ್ಬರದ್ದಕ್ಕಿಂತ ಸಂಪೂರ್ಣ ಭಿನ್ನವಾಗಿರುವುದು ಸಾಧ್ಯ. ನಮ್ಮ ಅಗತ್ಯಗಳಿಗೆ ತಕ್ಕಂತೆ ನಾವು ಬಳಸುವ ಸಾಧನಗಳೂ ಬೇರೆಬೇರೆಯಾಗಿರಬಹುದು: ಹಿರಿಯರ ಆರೋಗ್ಯದ ಮೇಲೆ ನಿಗಾ ಇಡುವ ಯಂತ್ರಗಳಿಂದ ಪ್ರಾರಂಭಿಸಿ ಸಾಕುಪ್ರಾಣಿಗಳಿಗೆ ಸಮಯಕ್ಕೆ ಸರಿಯಾಗಿ ಊಟ ಹಾಕುವ ವ್ಯವಸ್ಥೆಯವರೆಗೆ ವಿವಿಧ ಅಗತ್ಯಗಳಿಗೆ ಸ್ಪಂದಿಸುವ ಅದೆಷ್ಟೋ ಸ್ಮಾರ್ಟ್ ಸಾಧನಗಳು ಈಗಾಗಲೇ ರೂಪುಗೊಂಡಿವೆ. ಅಷ್ಟೇ ಅಲ್ಲ, ಕೊಂಚ ತಾಂತ್ರಿಕ ಪರಿಣತಿ ಇದ್ದರೆ ಹೊಸ ವ್ಯವಸ್ಥೆಗಳನ್ನು ನಾವೇ ರೂಪಿಸಿ ಸ್ಮಾರ್ಟ್ ಮನೆಯ ಸಾಧ್ಯತೆಗಳನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವುದೂ ಸಾಧ್ಯವಾಗಿದೆ.
ಮನೆಯೊಳಗಿನ ವಸ್ತುಗಳಷ್ಟೇ ಅಲ್ಲ, ವಾಹನಗಳೂ ಸ್ಮಾರ್ಟ್ ಆಗಿವೆ. ನಾವು ಹೊರಗಡೆ ಎಲ್ಲೋ ಇದ್ದಾಗಲೂ ಸ್ಮಾರ್ಟ್‌ಫೋನ್ ಮೂಲಕ ನಮ್ಮ ಕಾರಿನೊಡನೆ ಸಂಪರ್ಕದಲ್ಲಿರುವುದು ಇದೀಗ ಸಾಧ್ಯ. ಅಷ್ಟೇ ಅಲ್ಲ, ಕಾರಿನೊಳಗಿರುವ ಕಂಪ್ಯೂಟರುಗಳೊಡನೆ ಸಂಪರ್ಕ ಏರ್ಪಡಿಸಿಕೊಡುವ ಸಾಧನಗಳ ನೆರವಿನಿಂದ ನಮ್ಮ ಕಾರಿನ ಆರೋಗ್ಯದ ಸ್ಥಿತಿಗತಿಯನ್ನು ಥಟ್ ಅಂತ ತಿಳಿದುಕೊಂಡುಬಿಡಬಹುದು.
ಜಿಯೋ ಎಕ್ಸ್‌ಪೀರಿಯೆನ್ಸ್ ಸೆಂಟರಿನಲ್ಲಿ 'ಕನೆಕ್ಟೆಡ್ ಕಾರ್' ಪರಿಕಲ್ಪನೆಯ ಪ್ರಾತ್ಯಕ್ಷಿಕೆ |
ಇಂಟರ್ನೆಟ್ ಎಂದಾಕ್ಷಣ ಕಂಪ್ಯೂಟರ್ ಹಾಗೂ ಮೊಬೈಲ್ ಫೋನುಗಳಷ್ಟೇ ನಮ್ಮ ಮನಸ್ಸಿಗೆ ಬರುವುದು ಸಾಮಾನ್ಯ. ಅಂತರಜಾಲ ಸಂಪರ್ಕವನ್ನು ಇಂತಹ ಸಾಧನಗಳಿಗಷ್ಟೇ ಸೀಮಿತಗೊಳಿಸದೆ ನಿತ್ಯದ ಬಳಕೆಯ ವಸ್ತುಗಳನ್ನೂ ಅದರ ವ್ಯಾಪ್ತಿಗೆ ತರುವುದು, ಅವುಗಳ ನಡುವೆ ಸಂವಹನ ಸಾಧ್ಯವಾಗಿಸುವುದು ಈ ಪರಿಕಲ್ಪನೆಯ ವೈಶಿಷ್ಟ್ಯ.
ನಾವು ದಿನನಿತ್ಯವೂ ಬಳಸುವ ನೂರಾರು, ಸಾವಿರಾರು ಸಂಖ್ಯೆಯ ವಸ್ತುಗಳು (ಥಿಂಗ್ಸ್) ಬೃಹತ್ ಜಾಲವೊಂದರ ಭಾಗವಾಗಿ ಬೆಳೆದಾಗ ವಸ್ತುಗಳ ಅಂತರಜಾಲ ರೂಪುಗೊಳ್ಳುತ್ತದೆ. ನಮ್ಮ ಪರಿಚಯದ ಅಂತರಜಾಲದಲ್ಲಿ ಹೇಗೆ ಲ್ಯಾಪ್‌ಟಾಪ್-ಡೆಸ್ಕ್‌ಟಾಪುಗಳು, ಸರ್ವರುಗಳು, ಮೊಬೈಲ್-ಟ್ಯಾಬ್ಲೆಟ್ಟುಗಳು ಒಂದಕ್ಕೊಂದು ಸಂಪರ್ಕಿತವಾಗಿವೆಯೋ ಹಾಗೆ ವಸ್ತುಗಳ ಈ ಅಂತರಜಾಲದಲ್ಲಿ ನಾವು ಕಲ್ಪಿಸಿಕೊಳ್ಳಬಹುದಾದ ಎಲ್ಲ ಸಾಧನಗಳೂ ಅಂತರಜಾಲ ಸಂಪರ್ಕ ಪಡೆದುಕೊಳ್ಳಬಲ್ಲವು, ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಬಲ್ಲವು. ಗೃಹೋಪಯೋಗಿ ವಸ್ತುಗಳು - ವಾಹನಗಳು ಮುಂತಾದ ದೊಡ್ಡ ಸಾಧನಗಳಷ್ಟೇ ಅಲ್ಲ, ನಮ್ಮ ದೇಹದೊಳಗೆ ಸೇರಿ ಆರೋಗ್ಯವನ್ನೂ ನಮ್ಮ ಓಡಾಟವನ್ನೂ ಗಮನಿಸಿಕೊಳ್ಳುವ ಸೆನ್ಸರುಗಳಂತಹ ಅತಿಸೂಕ್ಷ್ಮ ವಸ್ತುಗಳೂ ಈ ಜಾಲದ ಭಾಗವಾಗಿರುವುದು ಸಾಧ್ಯ.
ಇಷ್ಟೆಲ್ಲ ಸಾಧನಗಳು ಅಂತರಜಾಲದ ಸಂಪರ್ಕಕ್ಕೆ ಬಂದರೆ ಅವುಗಳ ನಡುವೆ ವಿನಿಮಯವಾಗುವ ಮಾಹಿತಿಯ ಪ್ರಮಾಣವೂ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತದಲ್ಲ, ಅದನ್ನು ನಿಭಾಯಿಸುವ ಸಿದ್ಧತೆಗಳೂ ನಡೆದಿವೆ. ಈಗ ನಮಗೆ ಪರಿಚಯವಿರುವುದಕ್ಕಿಂತ ಹಲವಾರು ಪಟ್ಟು ಹೆಚ್ಚು ವೇಗದ ಅಂತರಜಾಲ ಸಂಪರ್ಕಗಳನ್ನು ಕಲ್ಪಿಸಿಕೊಡುವುದು ಇಂತಹ ಸಿದ್ಧತೆಗಳ ಪೈಕಿ ಪ್ರಮುಖವಾದದ್ದು. ರಿಲಯನ್ಸ್ ಜಿಯೋ ಸೇರಿದಂತೆ ದೂರಸಂಪರ್ಕ ಕ್ಷೇತ್ರದ ಹಲವು ದೊಡ್ಡ ಸಂಸ್ಥೆಗಳು ಈ ನಿಟ್ಟಿನಲ್ಲಿ ಈಗಾಗಲೇ ಕೆಲಸಮಾಡುತ್ತಿವೆ. ಮನೆಯ ದೂರವಾಣಿ, ಬ್ರಾಡ್‍ಬ್ಯಾಂಡ್ ಹಾಗೂ ಡಿಟಿಎಚ್ ಸಂಪರ್ಕಗಳೆಲ್ಲ ಪ್ರತ್ಯೇಕವಾಗಿರುವ ಬದಲು ಒಂದೇ ಅಂತರಜಾಲ ಸಂಪರ್ಕ ಅವೆಲ್ಲದರ ಕೆಲಸವನ್ನೂ ನಿಭಾಯಿಸುವಂತೆ ಮಾಡುವ ಯೋಚನೆ ಕೂಡ ಇದೀಗ ಕಾರ್ಯಗತವಾಗುತ್ತಿದೆ!
ಆಗಸ್ಟ್ ೬, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
ಚಿತ್ರ ಕೃಪೆ: ರಿಲಯನ್ಸ್ ಜಿಯೋ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ