ಇಜ್ಞಾನ ವಾರ್ತೆ
ರಿಲಯನ್ಸ್ ಜಿಯೋ ಸಂಸ್ಥೆಯ ಬಹುನಿರೀಕ್ಷಿತ ಜಿಯೋಫೋನ್ ಪ್ರಿ-ಬುಕಿಂಗ್ 2017 ಆಗಸ್ಟ್ 24ರ ಸಂಜೆ 5:30ಕ್ಕೆ ಪ್ರಾರಂಭವಾಗಲಿದೆ. ಇದೇ ವರ್ಷ ಜುಲೈ 21ರಂದು ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪರಿಚಯಿಸಲಾದ ಈ 4ಜಿ ಫೀಚರ್‌ಫೋನ್ ಗ್ರಾಹಕರಿಗೆ ಶೂನ್ಯ ವಾಸ್ತವಿಕ ಬೆಲೆಯಲ್ಲಿ, ಅಂದರೆ ಉಚಿತವಾಗಿ, ದೊರಕಲಿದೆ ಎಂದು ಸಂಸ್ಥೆಯ ಪ್ರಕಟಣೆ ಹೇಳಿದೆ.
ಈ ಫೋನ್ ಪಡೆಯಲು ಗ್ರಾಹಕರು ರೂ. 1500ರ ಹಿಂದಿರುಗಿಸಲಾಗುವ ಠೇವಣಿ ಪಾವತಿಸಬೇಕಾಗುತ್ತದೆ. ಹೀಗೆ ಕಾಯ್ದಿರಿಸುವ ಗ್ರಾಹಕರಿಗೆ 'ಮೊದಲು ಬಂದವರಿಗೆ ಮೊದಲು' ಎನ್ನುವ ಸೂತ್ರದಂತೆ ಜಿಯೋಫೋನ್ ಅನ್ನು ವಿತರಿಸಲಾಗುತ್ತದೆ.
ಜಿಯೋಫೋನ್ ಬುಕ್ ಮಾಡಲು ಬಯಸುವ ಗ್ರಾಹಕರಿಗೆ ಆನ್‌ಲೈನ್ ಹಾಗೂ ಆಫ್‌ಲೈನ್ ಆಯ್ಕೆಗಳೆರಡೂ ಲಭ್ಯವಿವೆ. ಜಿಯೋ ರೀಟೇಲರ್‌ಗಳು ಹಾಗೂ ರಿಲಯನ್ಸ್ ಡಿಜಿಟಲ್ ಸೇರಿದಂತೆ ಹಲವಾರು ಮಳಿಗೆಗಳಲ್ಲಿ ಆಫ್‌ಲೈನ್ ಬುಕಿಂಗ್ ಮಾಡುವುದು ಸಾಧ್ಯ. 'ಮೈಜಿಯೋ' ಆಪ್ ಹಾಗೂ ರಿಲಯನ್ಸ್ ಜಿಯೋ ಜಾಲತಾಣ jio.com ಮೂಲಕ ಆನ್‌ಲೈನ್ ಬುಕಿಂಗ್ ಮಾಡಬಹುದು.
ರೂ. 500 ಪ್ರಿ-ಬುಕಿಂಗ್ ಮೊತ್ತ ಪಾವತಿಸಿ ಜಿಯೋಫೋನ್ ಅನ್ನು ಕಾದಿರಿಸಬಹುದಾಗಿದ್ದು ಈ ಮೊತ್ತವನ್ನು ಹಿಂದಿರುಗಿಸಲಾಗುವ ಏಕಕಾಲಿಕ ಸುರಕ್ಷತಾ ಠೇವಣಿಗೆ ಹೊಂದಿಸಿಕೊಳ್ಳಲಾಗುವುದು. ಠೇವಣಿಯ ಬಾಕಿ ರೂ. 1000 ಮೊತ್ತವನ್ನು ಜಿಯೋಫೋನ್ ಪಡೆದುಕೊಳ್ಳುವಾಗ ನೀಡಬೇಕಾಗುತ್ತದೆ. 36 ತಿಂಗಳವರೆಗೆ ಜಿಯೋಫೋನ್ ಬಳಸಿದ ಗ್ರಾಹಕರು ಆ ಅವಧಿಯ ಕೊನೆಯಲ್ಲಿ ತಮ್ಮ ಜಿಯೋಫೋನ್ ಮರಳಿಸಿ ರೂ. 1500 ಠೇವಣಿಯನ್ನು ಹಿಂಪಡೆಯಬಹುದು.
ಇತರ ಜಿಯೋ ಸಂಪರ್ಕಗಳಂತೆ ಜಿಯೋಫೋನ್‌ನಲ್ಲೂ ದೂರವಾಣಿ ಕರೆಗಳು ಉಚಿತ. ಆದರೆ ಡೇಟಾ ಸಂಪರ್ಕಕ್ಕೆ ರೂ.153 ಮಾಸಿಕ ಶುಲ್ಕ ನಿಗದಿಪಡಿಸಲಾಗಿದೆ. ಇದು ಬೇಡ ಎನ್ನುವವರು ರೂ. 53ರ ಸಾಪ್ತಾಹಿಕ ಪ್ಲಾನ್ ಹಾಗೂ ರೂ. 23ರ ಎರಡು ದಿನಗಳ ಪ್ಲಾನ್ ಬಳಸುವುದು ಕೂಡ ಸಾಧ್ಯ. ಮೆಸೇಜಿಂಗ್ - ಮನರಂಜನೆ ಮುಂತಾದ ಉದ್ದೇಶಗಳಿಗೆ ಬೇಕಾದ ಹಲವಾರು ಆಪ್‌ಗಳು ಜಿಯೋಫೋನ್‌ನಲ್ಲಿ ಪೂರ್ವನಿಯೋಜಿತವಾಗಿ ದೊರಕಲಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ