ಗುರುವಾರ, ಆಗಸ್ಟ್ 10, 2017

ಜಲವಿವಾದ ಪರಿಹರಿಸಲು ತಂತ್ರಜ್ಞಾನ

ಉದಯ ಶಂಕರ ಪುರಾಣಿಕ

ಭವಿಷ್ಯದಲ್ಲಿ ನೀರಿಗಾಗಿ ಯುದ್ಧಗಳು ನಡೆಯುತ್ತವೆ ಎನ್ನುವ ಆತಂಕವನ್ನು ವಿಶ್ವಸಂಸ್ಥೆಯ ಮಾಜಿ ಮಹಾಪ್ರಧಾನ ಕಾರ್ಯದರ್ಶಿಯವರು ವ್ಯಕ್ತಪಡಿಸಿದ್ದರು. ಕಾವೇರಿ, ಕೃಷ್ಣೆ, ಮಹದಾಯಿ ಜಲವಿವಾದಗಳು ನಮಗೆ ಗೊತ್ತಿದ್ದರೆ, ವಿಶ್ವಾದ್ಯಂತ ಎಷ್ಟು ರಾಷ್ಟ್ರಗಳ ನಡುವೆ ಜಲವಿವಾದಗಳಿವೆ ಎನ್ನುವುದು ಗೊತ್ತಿರಲಾರದು.

ಕೆಲವು ಜಲವಿವಾದಗಳನ್ನು ಪರಿಹರಿಸಿಕೊಳ್ಳಲು ಅಧುನಿಕ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಇಂತಹ ಒಂದು ಉದಾಹರಣೆ ಕುರಿತ ಮಾಹಿತಿ ಈ ಲೇಖನದಲ್ಲಿದೆ. ಕೃಷ್ಣೆ, ಮದಾಯಿ, ಕಾವೇರಿ ಮೊದಲಾದ ಜಲವಿವಾದಗಳಲ್ಲಿ ನ್ಯಾಯಾಲಯ ಮತ್ತು ಟ್ರಿಬ್ಯೂನಲ್ ಗಳಲ್ಲಿ ನೆಡೆಸಿರುವ ಕಾನೂನು ಹೋರಾಟಕ್ಕೆ ಪೂರಕವಾಗಿ ಅಧುನಿಕ ತಂತ್ರಜ್ಞಾನ ಪರಿಣಿತರ ಸೇವೆಯನ್ನು ಕೂಡಾ ರಾಜ್ಯ ಸರ್ಕಾರ ಬಳಸಿಕೊಳ್ಳಲು ಮುಂದಾಗಬೇಕಾಗಿದೆ.

ವಿವಿಧ ರಾಷ್ಟ್ರಗಳ ನಡುವೆ ಇರುವ ಜಲ ವಿವಾದಗಳು, ನೀರಿನ ತೀವ್ರ ಕೊರತೆ ಇರುವ ಪ್ರದೇಶಗಳನ್ನು ಕುರಿತು ಅಧ್ಯಯನ ಮಾಡಿರುವ ಸಂಸ್ಥೆಯೊಂದು ನೀರಿಗಾಗಿ ಯುದ್ಧಗಳು ನಡೆಯಬಹುದಾದ ಪ್ರದೇಶಗಳಲಿರುವ ವಿಶ್ವ ಭೂಪಟವನ್ನು ಪ್ರಕಟಿಸಿದೆ.


ಈ ಅಧ್ಯಯನಕ್ಕಾಗಿ ವಿಜ್ಞಾನಿಗಳು, ವಿಶ್ವಾದಂತ್ಯ ೨೩೫ ನದಿ ಪಾತ್ರಗಳ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಈ ಪ್ರದೇಶದಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಪ್ರಕೃತಿ ವಿಕೋಪದಂತಹ ಸಮಸ್ಯೆಗಳು ಉಂಟಾದರೆ, ಜನಸಾಮಾನ್ಯರ ಮೇಲಾಗುವ ಪರಿಣಾಮ ತಿಳಿಯಲು ಅಧುನಿಕ ಅನೆಲೆಟಿಕ್ಸ್ ತಂತ್ರಾಂಶಗಳನ್ನು ಬಳಸಿದ್ದಾರೆ.

ನೀರು ಹಂಚಿಕೆ, ನೀರು ನಿರ್ವಹಣೆ, ನದಿಪಾತ್ರಗಳ ಒತ್ತುವರಿ ತಡೆಯುವಿಕೆ ಮತ್ತು ಅಂರ್ತಜಲ ಮರುಪೂರಣಕ್ಕಾಗಿ ಅಧುನಿಕ ತಂತ್ರಜ್ಞಾನವನ್ನು ಬಳಸಬೇಕು ಮತ್ತು ಜಲವಿವಾದಗಳನ್ನು ಪರಿಹರಿಸಲು ಸಮಗ್ರ ಕಾರ್ಯಯೋಜನೆಯನ್ನು ಜಾರಿಗೆ ತರಬೇಕು. ಹೀಗೆ ಮಾಡದಿದ್ದರೆ, ವರ್ಷ ೨೦೫೦ರ ಹೊತ್ತಿಗೆ ವಿಶ್ವಾದಂತ್ಯ ನೀರಿನ ಕೊರತೆ ಮತ್ತಷ್ಟು ಭೀಕರವಾಗಲಿದೆ ಮತ್ತು ವಿಶೇಷವಾಗಿ ಚೀನಾ, ಭಾರತ ಹಾಗೂ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೃಷಿ ಚಟುವಟಿಕೆ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ತೀವ್ರ ಪರಿಣಾಮವಾಗಲಿದೆ ಎಂದು ವಿಶ್ವಬ್ಯಾಂಕು ಪ್ರಕಟಿಸಿರುವ ಈ ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

ದಕ್ಷಿಣ ಆಫ್ರಿಕಾ ಮತ್ತು ಸ್ವಾಜೀಲ್ಯಾಂಡ್ ದೇಶಗಳ ನಡುವೆ ಕೋಮತಿ ನದಿ ನೀರಿನ ಹಂಚಿಕೆ ಕುರಿತು ಇದ್ದ ದೀರ್ಘ ಕಾಲದ ವಿವಾದವನ್ನು ಪರಿಹರಿಸಲು ಅಧುನಿಕ ತಂತ್ರಜ್ಞಾನವನ್ನು ಹೇಗೆ ಯಶಸ್ವಿಯಾಗಿ ಬಳಸಲಾಗುತ್ತಿದೆ ಎಂದು ಈಗ ತಿಳಿದುಕೊಳ್ಳೋಣ.

ವಿಶ್ವದಲ್ಲಿ ನೀರಿನ ಕೊರತೆ ಎದುರಿಸುತ್ತರುವ ಪ್ರದೇಶಗಳಲ್ಲಿ ಕೋಮತಿ ನದಿ ಕಣಿವೆ ಪ್ರದೇಶವೂ ಒಂದು ಎಂದು ತಜ್ಞರು ಹೇಳುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ದಕ್ಷಿಣ ಆಫ್ರಿಕಾ ದೇಶ ಮತ್ತು ಅರಸೊತ್ತಿಗೆ ಇರುವ ಸ್ವಾಜೀಲ್ಯಾಂಡ್ ದೇಶಗಳು ಕೋಮತಿ ನದಿ ಕುರಿತು ವಿವಾದವನ್ನು ಪರಿಹರಿಸಿ ಕೊಳ್ಳಲು ಮತ್ತು ಉಭಯ ದೇಶಗಳು ಜೊತೆಗೂಡಿ ಕೆಲಸ ಮಾಡಲು ಅಧುನಿಕ ತಂತ್ರಜ್ಞಾನದ ಕೊಡುಗೆ ಮಹತ್ವದ್ದಾಗಿದೆ.

ಕೋಮತಿ ನದಿ ವಿವರಗಳು:
ಅ) ೧೧,೨೦೯ ಚದರ ಕಿಲೋಮೀಟರ್ ಜಲಾನಯನ ಪ್ರದೇಶ ಮತ್ತು ಉಗಮ ಸ್ಥಾನವನ್ನು ದಕ್ಷಿಣ ಆಫ್ರಿಕಾದಲ್ಲಿ ಹೊಂದಿದೆ.
ಆ) ದಕ್ಷಿಣ ಆಫ್ರಿಕಾ, ಸ್ವಾಜೀಲ್ಯಾಂಡ್‌ಗಳಲ್ಲಿ ಹರಿಯುವ ಕೋಮತಿ, ನಂತರ ಮೊಜಾಂಬಿಕ್ ದೇಶದ ಗಡಿಯಲ್ಲಿರುವ ಕ್ರೋಕೋಡೈಲ್ ನದಿಯನ್ನು ಸೇರುತ್ತದೆ.
ಇ) ೧೯೬೨ ರಿಂದ ೧೯೯೮ರ ಅವಧಿಯಲ್ಲಿ ಈ ನದಿಗೆ ಅಡ್ಡವಾಗಿ ದಕ್ಷಿಣ ಆಫ್ರಿಕಾದಲ್ಲಿ ೩ ಅಣೆಕಟ್ಟು, ಸ್ವಾಜೀಲ್ಯಾಂಡ್‌ನಲ್ಲಿ ೨ ಅಣೆಕಟ್ಟು ಮತ್ತು ಮೊಜಾಂಬಿಕ್ ದೇಶದಲ್ಲಿ ೫ ಅಣೆಕಟ್ಟು ನಿರ್ಮಿಸಲಾಯಿತು.

ಜಲ ವಿವಾದ ವಿವರಗಳು :
ಅ) ೧೯೪೮ ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಸ್ವಾಜೀಲ್ಯಾಂಡ್ ನಡುವೆ ಈ ನದಿಯ ನೀರು ಹಂಚಿಕೆ ಕುರಿತು ಒಪ್ಪಂದವಿದೆ.
ಆ) ಕೋಮತಿ ನದಿಗೆ ದಕ್ಷಿಣ ಆಫ್ರಿಕಾ, ಸ್ವಾಜೀಲ್ಯಾಂಡ್ ಮತ್ತು ಮೊಜಾಂಬಿಕ್ ದೇಶಗಳು ಅಣೆಕಟ್ಟು ನಿರ್ಮಿಸಿದ ನಂತರ, ನೀರು ಹಂಚಿಕೆ ಕುರಿತು ದಕ್ಷಿಣ ಆಫ್ರಿಕಾ ಮತ್ತು ಸ್ವಾಜೀಲ್ಯಾಂಡ್ ನಡುವೆ ವಿವಾದ ಪ್ರಾರಂಭವಾಯಿತು.

ಜಲ ವಿವಾದ ಪರಿಹಾರ :
ಅ) ೧೯೯೨ರಲ್ಲಿ ಕೋಮತಿ ನದಿ ಕೊಳ್ಳದ ಅಭಿವೃದ್ಧಿ ಮತ್ತು ನೀರು ನಿರ್ವಹಣೆ ಕುರಿತು ಹೊಸ ಒಪ್ಪಂದಕ್ಕೆ ದಕ್ಷಿಣ ಆಫ್ರಿಕಾ ಮತ್ತು ಸ್ವಾಜೀಲ್ಯಾಂಡ್ ಸಹಿ ಹಾಕಿದವು. ಈ ಒಪ್ಪಂದದ ಪ್ರಕಾರ ದಕ್ಷಿಣ ಆಫ್ರಿಕಾದಲ್ಲಿ ೨೫೦.೯ ದಶಲಕ್ಷ ಕ್ಯೂಬಿಕ್ ಮೀಟರ್ ನೀರು ಸಂಗ್ರಹಣೆ ಸಾಮರ್ಥ್ಯದ ಜಲಾಶಯವನ್ನು ದಕ್ಷಿಣ ಆಫ್ರಿಕಾದಲ್ಲಿ ಮತ್ತು ೩೩೨ ದಶಲಕ್ಷ ಕ್ಯೂಬಿಕ್ ಮೀಟರ್ ನೀರು ಸಂಗ್ರಹಣೆ ಸಾಮರ್ಥ್ಯದ ಜಲಾಶಯವನ್ನು ಸ್ವಾಜೀಲ್ಯಾಂಡ್ ದೇಶದಲ್ಲಿ ನಿರ್ಮಿಸಲಾಯಿತು.
ಆ) ೧೯೯೩ರಲ್ಲಿ ಎರಡೂ ದೇಶಗಳ ಸಹಭಾಗಿತ್ವದಲ್ಲಿ ಕೋಮತಿ ನದಿ ಕೊಳ್ಳ ಜಲ ಮಂಡಳಿ ಸ್ಥಾಪನೆಯಾಯಿತು.
ಆ) ೧೯೯೮ರಲ್ಲಿ ಕೋಮತಿ ನದಿ ಕೊಳ್ಳ ನೀರು ಮಾಪನ ಮತ್ತು ನಿರ್ವಹಣೆಗಾಗಿ ಹಾಗೂ ೧೯೯೨ರ ಒಪ್ಪಂದದಂತೆ ದಕ್ಷಿಣ ಆಫ್ರಿಕಾ ಮತ್ತು ಸ್ವಾಜೀಲ್ಯಾಂಡ್ ನಿರ್ಮಿಸಿದ ಜಲಾಶಯಗಳ ನಿರ್ವಹಣೆಗಾಗಿ ಅಧುನಿಕ ತಂತ್ರಜ್ಞಾನ ಬಳಕೆ ಪ್ರಾರಂಭವಾಯಿತು.

ಕೋಮತಿ ನದಿ ಜಲವಿವಾದ ಪರಿಹರಿಸಲು ಬಳಸಲಾಗಿರುವ ಅಧುನಿಕ ತಂತ್ರಜ್ಞಾನದ ಪರಿಚಯ :
ಅ) ಕೋಮತಿ ನದಿ ಕಣಿವೆಯ ವೈಜ್ಞಾನಿಕ ಅಧ್ಯಯನ, ದೂರಸಂವೇದಿ ತಂತ್ರಜ್ಞಾನ ಬಳಸಿ ನೆಡೆಸಿದ ಸಮೀಕ್ಷೆ ಮತ್ತು ಅಧುನಿಕ ಜಿ.ಐ.ಎಸ್ ತಂತ್ರಜ್ಞಾನವನ್ನು ಬಳಸಿ, ಸಮಗ್ರ ಕೋಮತಿ ನದಿ ಕಣಿವೆ ಜಲ ಯೋಜನೆಯ ನಕ್ಷೆಯನ್ನು ತಯಾರಿಸಲಾಗಿದೆ. (ಕೆಳಗಿನ ಚಿತ್ರವನ್ನು ನೋಡಿ)
ಕೋಮತಿ ನದಿ ಕಣಿವೆ ಜಲ ಯೋಜನೆಯ ನಕ್ಷೆ
ಆ) ಈ ನಕ್ಷೆಯಲ್ಲಿ ಜಲಾನಯನ ಪ್ರದೇಶ, ನದಿ ಪಾತ್ರ, ಅರಣ್ಯ ಪ್ರದೇಶ, ಅಣೆಕಟ್ಟುಗಳು, ಜನವಸತಿ ಪ್ರದೇಶಗಳು, ಹೀಗೆ ಸಮಗ್ರ ಮಾಹಿತಿಯನ್ನು ನೀಡಲಾಗಿದೆ.
ಇ) ಸ್ವಾಜೀಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಅಧಿಕಾರಿಗಳಿಗೆ ಈ ನಕ್ಷೆ ಮತ್ತು ಸಮಗ್ರ ಮಾಹಿತಿ ದೊರೆತಿರುವುದರಿಂದಾಗಿ ದಕ್ಷಿಣ ಆಫ್ರಿಕಾದಲ್ಲಿರುವ ಜಲಾನಯನ ಪ್ರದೇಶ ಮತ್ತು ಜಲಾಶಯಗಳು ಹಾಗೂ ಸ್ವಾಜೀಲ್ಯಾಂಡ್ ದೇಶದಲ್ಲಿರುವ ನದಿ ಪಾತ್ರ ಮತ್ತು ಜಲಾಶಯಗಳ ಮಾಹಿತಿ ಕುರಿತು ಪಾರದರ್ಶಕತೆ ಇದೆ (ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಕೇಂದ್ರ ಸರ್ಕಾರಗಳ ಹತ್ತಿರ ಉಗಮ ಸ್ಥಾನದಿಂದ ಸಮುದ್ರ ಸೇರುವ ತನಕ ಕಾವೇರಿ ನದಿ ಕುರಿತು ಸಮಗ್ರ ಮಾಹಿತಿ ನೀಡುವ ಇಂತಹ ನಕ್ಷೆ ಇದ್ದರೆ, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಭರ್ತಿ ನೀರು ಇದ್ದರೂ ಕರ್ನಾಟಕ ಬಿಡುತ್ತಿಲ್ಲ ಮೊದಲಾದ ಆರೋಪ ಪ್ರತ್ಯಾರೋಪಗಳಿಗೆ ಅವಕಾಶ ಇರುವುದಿಲ್ಲ).
ಈ) ಅಧುನಿಕ ಡೇಟಾ ಲಾಗರ್ ತಂತ್ರಜ್ಞಾನವನ್ನು ಬಳಸಿ, ಕೋಮತಿ ನದಿಯ ನೀರಿನ ಗುಣಮಟ್ಟ ಕುರಿತು ಮಾಹಿತಿಯನ್ನು ನಿರಂತರವಾಗಿ ಸಂಗ್ರಹಿಸಿ, ಉಭಯ ದೇಶಗಳ ಅಧಿಕಾರಿಗಳಿಗೆ ನೀಡಲಾಗುತ್ತಿದೆ. ಪರಿಸರ ಮಾಲಿನ್ಯ, ಅಂರ್ತಜಲ ಮಾಲಿನ್ಯ, ಹೀಗೆ ವಿವಿಧ ಕಾರಣಗಳಿಂದಾಗಿ ಕೋಮತಿ ನದಿ ನೀರಿನ ಗುಣಮಟ್ಟದಲ್ಲಿ ವ್ಯತ್ಯಯವುಂಟಾದರೆ, ಆ ಕುರಿತು ಎಚ್ಚರಿಕೆಯ ಸಂದೇಶಗಳನ್ನು ಉಭಯ ದೇಶಗಳ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ.
ಉ) ಹೀಗೆ ನಿರಂತರವಾಗಿ, ನದಿಯ ನೀರಿನ ಗುಣಮಟ್ಟ ಕುರಿತು ಸಮಗ್ರ ಮಾಹಿತಿ ನೀಡುವುದರಿಂದ, ಯಾವ ದೇಶದಲ್ಲಿ, ಯಾವ ಕಾರಣದಿಂದಾಗಿ ಕೋಮತಿ ನದಿ ಮಾಲಿನ್ಯ ಉಂಟಾಯಿತು, ಇದರಿಂದಾಗಿ ಯಾವ ಪ್ರದೇಶಗಳ ಜನ, ಜಾನವಾರುಗಳಿಗೆ ನದಿ ಬಳಸದಂತೆ ನಿರ್ಭಂದಿಸ ಬೇಕು, ಮಾಲಿನ್ಯ ನಿವಾರಣೆಗಾಗಿ ಏನು ಕ್ರಮ ಕೈಗೊಳ್ಳಬೇಕು ಎಂದು ಉಭಯ ರಾಷ್ಟ್ರಗಳ ಅಧಿಕಾರಿಗಳು ಚರ್ಚಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿದೆ (ಕಾವೇರಿ ನದಿ ಮಾಲಿನ್ಯಕ್ಕೆ ಕರ್ನಾಟಕ ಕಾರಣವೆಂದು ತಮಿಳು ನಾಡು ನ್ಯಾಯಾಲಯದಲ್ಲಿ ಆರೋಪ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು).
ಊ) ಕೋಮತಿ ನದಿ ಕುರಿತು ಸ್ವಯಂಚಾಲಿತವಾಗಿ ನಿರಂತರವಾಗಿ ಮಾಹಿತಿ ಸಂಗ್ರಹಿಸಿ, ನೀಡಲು ಡೇಟಾ ಲಾಗರ್‌ಗಳನ್ನು ಬಳಸಲಾಗುತ್ತಿದೆ. ಉದಾಹರಣೆಗೆ ಜಲಾನಯನ ಪ್ರದೇಶದಲ್ಲಿರುವ ತಾಪಮಾನ, ನೀರಿನ ತೇವಾಂಶ, ಮಳೆಯ ಪ್ರಮಾಣ, ಭೂಮಿ ಸವಕಳಿ/ ಕುಸಿತ, ಅತಿವೃಷ್ಟಿಯಾದಾಗ ಪ್ರವಾಹ ಪರಿಸ್ಥಿತಿ, ಹೀಗೆ ಅನೇಕ ವಿವರಗಳನ್ನು ನಿರಂತರವಾಗಿ ಪಡೆಯಲು ಸಾಧ್ಯವಿದೆ.
ಹೀಗೆ ಡೇಟಾ ಲಾಗರ್‌ಗಳಿಂದ ದೊರೆಯುವ ಮಾಹಿತಿ, ಜಿ.ಐ.ಎಸ್ ತಂತ್ರಜ್ಞಾನ ಹಾಗೂ ಅಧುನಿಕ ವಿಶ್ಲೇಷಣೆ ಮತ್ತು ಮಾಡಲಿಂಗ್ ತಂತ್ರಾಂಶಗಳನ್ನು ಬಳಸುವುದರಿಂದ ಸಮಗ್ರ ಜಲಾನಯನ ಪ್ರದೇಶದ ವಾಸ್ತವ ಚಿತ್ರಣ ಎರಡೂ ದೇಶಗಳ ಅಧಿಕಾರಿಗಳಿಗೆ ಸುಲಭವಾಗಿ ದೊರೆಯುತ್ತದೆ (ಜಲ ವಿವಾದಕ್ಕೆ ಸೂಕ್ತವಾಗುವಂತೆ ಇಂತಹ ತಂತ್ರಜ್ಞಾನಗಳನ್ನು ಬಳಸುವುದರಿಂದ ಕರ್ನಾಟಕ ತನ್ನ ವಾದವನ್ನು ಹೆಚ್ಚು ಸಮರ್ಥವಾಗಿ ನ್ಯಾಯಲಯ, ಟ್ರಿಬ್ಯೂನಲ್ ಮತ್ತು ಕೇಂದ್ರದ ಮುಂದೆ ಮಂಡಿಸಲು ಸಾಧ್ಯವಾಗುತ್ತದೆ).
ಋ) ಡಿಜಿಟಲ್ ಪ್ರೋಬ್‌ಗಳು, ಫ್ಲೋ ಮೀಟರ್, ವಿಶೇಷ ಡಾಟಾ ಲಾಗರ್ ಮೊದಲಾದ ತಂತ್ರಜ್ಞಾನಗಳನ್ನು ಬಳಸಿ ಎರಡೂ ದೇಶಗಳಲ್ಲಿರುವ ಜಲಾಶಯಗಳ ಒಳಹರಿವು ಮತ್ತು ಹೊರಹರಿವು, ಜಲಾಶಯದಲ್ಲಿರುವ ನೀರಿನ ಸಂಗ್ರಹವನ್ನು ಪ್ರತಿದಿನವೂ ನಿರಂತರವಾಗಿ ಮಾಪನ ಮಾಡಿ, ಮಾಹಿತಿ ನೀಡಲಾಗುತ್ತದೆ.
ಹೀಗಾಗಿ ಒಂದು ವರ್ಷದ ಪ್ರಾರಂಭದಿಂದ ಅಂತ್ಯದವರೆಗೆ ಪ್ರತಿ ತಿಂಗಳು ಎರಡೂ ಜಲಾಶಯಗಳಿಗೆ ದೊರೆತ ನೀರು, ಬಳಕೆಯಾದ ನೀರು ಮತ್ತು ವ್ಯರ್ಥವಾದ ನೀರಿನ ಪ್ರಮಾಣ ತಿಳಿಯಬಹುದಾಗಿದೆ. ಮಳೆಯ ಕೊರತೆಯಾದ ವರ್ಷದಲ್ಲಿ ನೀರು ಹಂಚಿಕೆ ಕುರಿತು ಎರಡೂ ದೇಶಗಳು ಒಪ್ಪಂದಕ್ಕೆ ಬರಲು ಕೂಡಾ ಈ ಮಾಹಿತಿ ಅನುಕೂಲವಾಗಿದೆ.
ಎ) ಎರಡು ದೇಶಗಳ ಕೃಷಿ, ಕುಡಿಯುವ ನೀರಿನ ಅಗತ್ಯವೆಷ್ಟಿದೆ, ಕೋಮತಿ ನದಿಯಲ್ಲಿ ಎಷ್ಟು ನೀರು ಲಭ್ಯವಿದೆ ಮತ್ತು ಎರಡೂ ದೇಶಗಳ ನಡುವೆ ಹೇಗೆ ವೈಜ್ಞಾನಿಕವಾಗಿ ನೀರಿನ ಹಂಚಿಕೆ ಮಾಡಬಹುದು ಎಂದು ಲೆಕ್ಕ ಮಾಡಿ ಮಾಹಿತಿ ನೀಡಲು ಸಾಂಪ್ರದಾಯಿಕ ಡಿ.ಎಸ್.ಎಸ್ ತಂತ್ರಾಂಶವನ್ನು ಬಳಸಲಾಗಿದೆ (ಈಗ ಜನಪ್ರಿಯವಾಗುತ್ತಿರುವ ಅಧುನಿಕ ಅನೆಲೆಟಿಕ್ಸ್ ತಂತ್ರಾಂಶಗಳನ್ನು, ಹವಾಮಾನ ಮಾಹಿತಿ ಮೊದಲಾದ ಮಾಹಿತಿಗಳನ್ನು ಬಳಸಿ ಕಾವೇರಿ ನದಿಯಲ್ಲಿ ಮತ್ತು ಜಲಾಶಯಗಳಲ್ಲಿ ಎಷ್ಟು ನೀರು ದೊರೆಯಬಹುದು ಮತ್ತು ನೀರಿನ ಕೊರತೆಯಾದರೆ ಎಷ್ಟು ಪ್ರಮಾಣದಲ್ಲಿ ಕೊರತೆಯುಂಟಾಗಬಹುದು ಎಂದು ಮುಂಚಿತವಾಗಿಯೇ ತಿಳಿಯಬಹುದಾಗಿದೆ).
ಏ) ಪ್ರತಿವರ್ಷ, ಕೋಮತಿ ಜಲಯೋಜನೆಯ ಮಂಡಳಿಯು, ಜಲ ಯೋಜನೆಯ ಸಮಗ್ರ ಮಾಹಿತಿ, ನೀರಿನ ಬಳಕೆಯ ಮಾಹಿತಿ ಮತ್ತು ನೀರು ನಿರ್ವಹಣೆಗಾಗಿ ತಗಲಿದ ವೆಚ್ಚ, ಕೆಲಸ ಮಾಡುತ್ತಿರುವ ಸಿಬ್ಬಂದಿಯ ವಿವರಗಳು ಮತ್ತು ವೆಚ್ಚ, ಹೀಗೆ ಎಲ್ಲಾ ಮಾಹಿತಿಯುಳ್ಳ ವರದಿಯನ್ನು ಪ್ರಕಟಿಸುತ್ತಿದೆ.
ಇದಲ್ಲದೆ, ಕೋಮತಿ ಜಲಯೋಜನೆಯಲ್ಲಿ ಹೊಸ ತಂತ್ರಜ್ಞಾನ ಬಳಕೆಯ ಸಾಧ್ಯತೆ ಕುರಿತು ತಾಂತ್ರಿಕ ತಜ್ಞರ ಜೊತೆ ಮಂಡಳಿಯು ಸಂಪರ್ಕ ಹೊಂದಿದೆ.

ಈ ಲೇಖನದಲ್ಲಿರುವ ಚಿತ್ರ ಹಾಗೂ ಅಂಕಿ-ಅಂಶಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ;
ಇಲ್ಲಿರುವ ಅಭಿಪ್ರಾಯಗಳು ಲೇಖಕರ ವೈಯಕ್ತಿಕ ಅಭಿಪ್ರಾಯಗಳಾಗಿರುತ್ತವೆ
badge