ಮನೆಯಿಂದ ಹೊರಬಂದರೆ ಸಾಕು, ನಾವು ಹೋದಲ್ಲೆಲ್ಲ ಒಂದಲ್ಲ ಒಂದು ರೀತಿಯ ಕುರುಹುಗಳನ್ನು ಉಳಿಸುತ್ತಲೇ ಸಾಗುತ್ತೇವೆ. ನೀವು ಮನೆಯಿಂದ ಹೊರಹೋದದ್ದನ್ನು ಎದುರುಮನೆಯವರು ನೋಡಿರುತ್ತಾರೆ, ಪಕ್ಕದ ಬೀದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ನಿಮ್ಮ ವಾಹನ ಹಾದುಹೋಗಿದ್ದು ದಾಖಲಾಗಿರುತ್ತದೆ, ಆಫೀಸಿಗೆ ಎಷ್ಟುಹೊತ್ತಿಗೆ ತಲುಪಿದಿರಿ ಎನ್ನುವುದನ್ನು ಕಚೇರಿಯ ಹಾಜರಾತಿ ವ್ಯವಸ್ಥೆ ಗುರುತಿಟ್ಟುಕೊಳ್ಳುತ್ತದೆ.
ಡಿಜಿಟಲ್ ಜಗತ್ತಿನಲ್ಲೂ ಹೀಗೆಯೇ.
ಮನೆಯೊಳಗೇ ಕುಳಿತು ಕಂಪ್ಯೂಟರು-ಮೊಬೈಲುಗಳ ಮೂಲಕ ಪ್ರಪಂಚ ಪರ್ಯಟನೆ ಮಾಡುತ್ತೇವಲ್ಲ, ನಾವು ಆಗಲೂ ಇಂತಹ ಹೆಜ್ಜೆಗುರುತುಗಳನ್ನು ಉಳಿಸುತ್ತೇವೆ. ನಮ್ಮ ಐಪಿ ವಿಳಾಸ ಯಾವುದು, ಯಾವ ಜಾಲತಾಣಗಳಿಗೆ ಭೇಟಿನೀಡುತ್ತಿದ್ದೇವೆ, ಯಾವ ಮಾಹಿತಿಗಾಗಿ ಹುಡುಕುತ್ತಿದ್ದೇವೆ, ಏನು ಮಾಹಿತಿ ಸೇರಿಸುತ್ತಿದ್ದೇವೆ, ಯಾರಿಗೆ ಇಮೇಲ್ ಕಳಿಸುತ್ತಿದ್ದೇವೆ ಎನ್ನುವುದೆಲ್ಲ ಈ ಹೆಜ್ಜೆಗುರುತುಗಳಲ್ಲಿ ಉಳಿದುಕೊಳ್ಳುತ್ತದೆ. ಡಿಜಿಟಲ್ ಹೆಜ್ಜೆಗುರುತುಗಳು, ಅರ್ಥಾತ್ 'ಡಿಜಿಟಲ್ ಫುಟ್‌ಪ್ರಿಂಟ್' ಎಂದು ಕರೆಯುವುದು ಇದನ್ನೇ.
ಇಂತಹ ಮಾಹಿತಿಯನ್ನು ನಾವು ಉದ್ದೇಶಪೂರ್ವಕವಾಗಿ ನೀಡಬೇಕೆಂದೇನೂ ಇಲ್ಲ. ನಾವು ಭೇಟಿಕೊಡುವ ಹಲವು ತಾಣಗಳು ನಮ್ಮ ಐಪಿ ವಿಳಾಸವನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ, ನಾವು ಏನು ಹುಡುಕುತ್ತಿದ್ದೇವೆ ಎಂಬ ಮಾಹಿತಿ ಸರ್ಚ್ ಇಂಜನ್ನುಗಳಲ್ಲಿ ಉಳಿದುಕೊಳ್ಳುತ್ತದೆ. ಇದರ ಜೊತೆಗೆ ನಾವಾಗಿಯೇ ಸೇರಿಸುವ ಮಾಹಿತಿ (ಸಮಾಜಜಾಲದ ಪೋಸ್ಟುಗಳು, ಇಮೇಲ್ ಸಂದೇಶಗಳು, ಬ್ಲಾಗ್ ಬರಹ ಇತ್ಯಾದಿ) ಸೇರಿ ಡಿಜಿಟಲ್ ಲೋಕದ ನಮ್ಮ ಹೆಜ್ಜೆಗುರುತುಗಳು ರೂಪಗೊಳ್ಳುತ್ತವೆ. ನಾವು ಬರೆದ ಉತ್ತಮ ಕವಿತೆಗಳು - ಸ್ಮರಣೀಯ ಪ್ರವಾಸದ ಫೋಟೋಗಳ ಜೊತೆಗೆ ಇತರರನ್ನು ನಿಂದಿಸಿದ - ದ್ವೇಷಸಾಧನೆ ಮಾಡಿದ ಫೇಸ್‌ಬುಕ್ ಪೋಸ್ಟುಗಳೂ ಇಲ್ಲಿ ಉಳಿದುಕೊಳ್ಳುತ್ತವೆ.
ನೆನಪಿರಲಿ, ಒಂದು ಬಾರಿ ಅಂತರಜಾಲ ಲೋಕಕ್ಕೆ ಸೇರಿದ ಮಾಹಿತಿಯನ್ನು ನಮಗೆ ಬೇಕೆಂದಾಗ ಅಳಿಸಿಹಾಕಲು ಸಾಧ್ಯವಿಲ್ಲ. ಹಾಗಾಗಿಯೇ ನಮ್ಮ ಹೆಜ್ಜೆಗುರುತುಗಳಲ್ಲಿ ಮುಂದೆ ಪಶ್ಚಾತ್ತಾಪ ಪಡಬೇಕಾಗಿ ಬರುವಂತಹ ಯಾವ ಅಂಶಗಳೂ ಇಲ್ಲದಂತೆ ನೋಡಿಕೊಳ್ಳುವುದು ಒಳ್ಳೆಯದು - ನಮ್ಮ ದೃಷ್ಟಿಯಿಂದಲೂ, ಸಮಾಜದ ದೃಷ್ಟಿಯಿಂದಲೂ!
ಇದನ್ನೂ ಓದಿ: ಆನ್‌ಲೈನ್ ಲೋಕದಲ್ಲಿ ನಿಮಗೆ ತಿಳಿದಿಲ್ಲದ ನೀವು!ಜುಲೈ ೧, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ