ಸೋಮವಾರ, ಜುಲೈ 31, 2017

ಕನ್ನಡ ತಂತ್ರಾಂಶ ಲೋಕಕ್ಕೆ ಎರಡು ಹೊಸ ಸೇರ್ಪಡೆ

ಇಜ್ಞಾನ ವಾರ್ತೆ

ಸದಾಕಾಲವೂ ಬದಲಾಗುತ್ತಲೇ ಇರುವುದು ತಂತ್ರಜ್ಞಾನ ಜಗತ್ತಿನ ಹೆಗ್ಗಳಿಕೆ. ಈ ಮೂಲಕ ಸೃಷ್ಟಿಯಾಗುವ ಹೊಸಹೊಸ ಸೌಲಭ್ಯಗಳು ಎಲ್ಲ ಭಾಷೆಗಳ ಬಳಕೆದಾರರನ್ನೂ ತಲುಪುತ್ತವೆ. ಇದಕ್ಕೆ ನಮ್ಮ ಕನ್ನಡವೂ ಹೊರತಲ್ಲ. ಈಚೆಗೆ ಕನ್ನಡಕ್ಕೆ ಲಭ್ಯವಾಗಿರುವ ಇಂತಹ ಎರಡು ಹೊಸ ತಂತ್ರಾಂಶ ಸವಲತ್ತುಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ದಾರಿ ತೋರುವ 'ವೇಜ಼್'

ನಮ್ಮ ಸುತ್ತಮುತ್ತಲ ಪ್ರದೇಶದ ಭೂಪಟವನ್ನೂ ಅದರಲ್ಲಿ ನಮ್ಮ ಓಡಾಟದ ದಾರಿಯನ್ನೂ ತೋರಿಸುವ ಸೌಲಭ್ಯವನ್ನು ನಾವು ಅನೇಕ ಆಪ್‌ಗಳಲ್ಲಿ, ಜಾಲತಾಣಗಳಲ್ಲಿ ಬಳಸುತ್ತೇವೆ. ವಾಹನ ಚಲಾಯಿಸಲು ನೆರವಾಗುವ ಗೂಗಲ್ ಮ್ಯಾಪ್ಸ್‌ನಂತಹ ತಂತ್ರಾಂಶಗಳಲ್ಲಂತೂ ಧ್ವನಿರೂಪದ ಮಾರ್ಗದರ್ಶನವೂ ಸಿಗುತ್ತವೆ.

ಈವರೆಗೆ ಇಂಗ್ಲಿಷಿನಲ್ಲಷ್ಟೇ ಇದ್ದ ಈ ಸೌಲಭ್ಯ ಇದೀಗ ಕನ್ನಡದಲ್ಲೂ ಸಿಗುತ್ತಿದೆ.
ಇದನ್ನು ಸಾಧ್ಯವಾಗಿಸಿರುವುದು 'ವೇಜ಼್' ಎಂಬ ಮೊಬೈಲ್ ಆಪ್. ನಾವು ಹೋಗಬೇಕಾದ ಸ್ಥಳ ತಲುಪಲು ಬೇಕಾದ ನಿರ್ದೇಶನಗಳನ್ನು ಕನ್ನಡದಲ್ಲೇ (ಪಠ್ಯ ಹಾಗೂ ಧ್ವನಿ ಎರಡೂ ರೂಪದಲ್ಲಿ) ಪಡೆಯುವುದನ್ನು ಇದು ಸಾಧ್ಯವಾಗಿಸುತ್ತದೆ.

ಇಸ್ರೇಲಿನ ತಂತ್ರಜ್ಞರು ರೂಪಿಸಿದ, ಸದ್ಯ ಗೂಗಲ್ ಮಾಲೀಕತ್ವದಲ್ಲಿರುವ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು - ಇದಕ್ಕೆ ಹೊಸ ಮಾಹಿತಿ ಸೇರಿಸಲು ವಿಶ್ವದ ವಿವಿಧೆಡೆಯ ಸಮುದಾಯಗಳು ನೆರವಾಗುತ್ತಿವೆ. ಇದು ಕನ್ನಡಕ್ಕೆ ಬಂದಿರುವುದೂ ಇಂತಹ ಆಸಕ್ತ ತಂತ್ರಜ್ಞರಿಂದಾಗಿಯೇ.

ಈ ಆಪ್ ಐಓಎಸ್ ಹಾಗೂ ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆಗಳೆರಡರಲ್ಲೂ ಲಭ್ಯವಿದೆ (ಪ್ಲೇಸ್ಟೋರ್ ಕೊಂಡಿ: tinyurl.com/WazeKan). ಈಗ ಬಿಡುಗಡೆಯಾಗಿರುವುದು ಇನ್ನೂ ಮೊದಲ ಆವೃತ್ತಿಯಾದ್ದರಿಂದ ಇದನ್ನು ಇನ್ನಷ್ಟು ಸುಧಾರಿಸುವ ಸಾಧ್ಯತೆ ಖಂಡಿತಾ ಇದೆ. ಸೂಕ್ತ ಪ್ರತಿಕ್ರಿಯೆ ನೀಡುವ ಮೂಲಕ ಇರಬಹುದಾದ ತಪ್ಪುಗಳನ್ನು ತೋರಿಸುವುದು, ಅನುವಾದ ಉತ್ತಮಪಡಿಸಲು ನೆರವಾಗುವುದು ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿ.

ವೇಜ಼್ ಕನ್ನಡ ಆವೃತ್ತಿಯ ಕುರಿತು ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು Wazekannada@gmail.com ವಿಳಾಸಕ್ಕೆ ಇಮೇಲ್ ಮಾಡಬಹುದು.

ಮಾತು ಕೇಳುವ 'ಲಿಪಿಕಾರ್'

ನಾವು ಮಾತಿನಲ್ಲಿ ಹೇಳಿದ್ದನ್ನು ಪಠ್ಯರೂಪಕ್ಕೆ ಪರಿವರ್ತಿಸುವ ಹಲವು ತಂತ್ರಾಂಶಗಳು ಇಂಗ್ಲಿಷಿನಲ್ಲಿವೆ. ಇವನ್ನು 'ಸ್ಪೀಚ್ ಟು ಟೆಕ್ಸ್ಟ್' ತಂತ್ರಾಂಶಗಳೆಂದು ಕರೆಯುತ್ತಾರೆ (ಧ್ವನಿಯಿಂದ ಪಠ್ಯಕ್ಕೆ ಬದಲಿಸುವ ಸೌಲಭ್ಯ ಎಂಬ ಅರ್ಥದಲ್ಲಿ).

ನಮ್ಮ ಮಾತುಗಳನ್ನು ಬೇರೆಯವರಿಂದ ಬರೆಸಿದಂತೆಯೇ (ಉಕ್ತಲೇಖನ) ಕೆಲಸಮಾಡುವುದು ಇಂತಹ ತಂತ್ರಾಂಶಗಳ ವೈಶಿಷ್ಟ್ಯ. ಬೇರೊಬ್ಬ ವ್ಯಕ್ತಿ ಬರೆದುಕೊಳ್ಳುವ ಬದಲಿಗೆ ಇಲ್ಲಿ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಆ ಕೆಲಸ ಮಾಡುತ್ತದೆ ಎನ್ನುವುದಷ್ಟೇ ವ್ಯತ್ಯಾಸ. ಭಾಷಣಗಳನ್ನು, ಸಭೆಯ ನಡಾವಳಿಗಳನ್ನು ಕ್ಷಿಪ್ರವಾಗಿ ಪಠ್ಯರೂಪಕ್ಕೆ ಪರಿವರ್ತಿಸಲು ಇದು ಸುಲಭ ವಿಧಾನ. ದೈಹಿಕ ಸಮಸ್ಯೆಗಳಿಂದ ಕೀಬೋರ್ಡ್ ಬಳಸಲು ಸಾಧ್ಯವಿಲ್ಲದವರಿಗೂ ಸ್ಪೀಚ್ ಟು ಟೆಕ್ಸ್ಟ್ ತಂತ್ರಾಂಶಗಳು ನೆರವಾಗಬಲ್ಲವು.

ಕನ್ನಡ ಭಾಷೆಯಲ್ಲೂ ಈ ಸೌಲಭ್ಯ ನೀಡುವ ತಂತ್ರಾಂಶವೊಂದು ಇದೀಗ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ಲಭ್ಯವಾಗಿದೆ. 'ಲಿಪಿಕಾರ್ ಕನ್ನಡ ಕೀಬೋರ್ಡ್' ಎಂಬ ಹೆಸರಿನ ಈ ಕೀಲಿಮಣೆ ತಂತ್ರಾಂಶದಲ್ಲಿ ಕನ್ನಡ ಅಕ್ಷರಗಳನ್ನು ಟೈಪಿಸುವ ಜೊತೆಗೆ ನಮ್ಮ ಧ್ವನಿಯನ್ನು ಪಠ್ಯರೂಪಕ್ಕೆ ಬದಲಿಸುವ ಸೌಲಭ್ಯವೂ ಇರುವುದು ವಿಶೇಷ. ಇದನ್ನು ಪ್ಲೇಸ್ಟೋರ್‍‍ನಿಂದ ಡೌನ್‍ಲೋಡ್ ಮಾಡಿಕೊಳ್ಳಲು tinyurl.com/KanSTT ತಾಣಕ್ಕೆ ಭೇಟಿಕೊಡಬಹುದು.

ಸದ್ಯಕ್ಕೆ ಈ ಸೌಲಭ್ಯದ ಉಪಯೋಗ ಟೈಪಿಂಗ್ ಕೆಲಸವನ್ನು ಸುಲಭ ಮಾಡಿಕೊಳ್ಳಲಿಕ್ಕಷ್ಟೇ ಅನ್ನಿಸಬಹುದು. ಆದರೆ ಧ್ವನಿರೂಪದ ಆದೇಶಗಳನ್ನು ಸ್ವೀಕರಿಸುವ (ಸ್ಪೀಚ್ ರೆಕಗ್ನಿಶನ್) ವ್ಯವಸ್ಥೆಗಳನ್ನು ಕನ್ನಡದಲ್ಲೂ ಪರಿಚಯಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ ಎನ್ನುವುದನ್ನು ಗಮನಿಸಿದಾಗ ಇಂತಹ ಪ್ರಯೋಗಗಳ ಮಹತ್ವ, ಅವುಗಳನ್ನು ಸಹೃದಯತೆಯಿಂದ ಸ್ವೀಕರಿಸಬೇಕಾದ ಅಗತ್ಯ ಎರಡೂ ಅರಿವಾಗುತ್ತದೆ, ಅರಿವಾಗಬೇಕು.

ಜುಲೈ ೧೬ ಹಾಗೂ ಜುಲೈ ೩೦, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹಗಳ ಸಂಯುಕ್ತರೂಪ

ಕಾಮೆಂಟ್‌ಗಳಿಲ್ಲ:

badge