ಗುರುವಾರ, ಜುಲೈ 6, 2017

ಓಸಿಆರ್ ಎಂದರೇನು?

ಟಿ. ಜಿ. ಶ್ರೀನಿಧಿ

ಮುದ್ರಿತ ಅಥವಾ ಕೈಬರಹದ ಅಕ್ಷರಗಳನ್ನು ಕಂಪ್ಯೂಟರ್ ಸಹಾಯದಿಂದ ಗುರುತಿಸಲು ನೆರವಾಗುವುದು ಓಸಿಆರ್. ಇದು 'ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್' ಎನ್ನುವುದರ ಹ್ರಸ್ವರೂಪ. ಕಂಪ್ಯೂಟರ್ ಹಾಗೂ ಮಾನವರ ನಡುವಿನ ಸಂವಹನದ ಹೊಸದೊಂದು ಆಯಾಮವನ್ನು ಪರಿಚಯಿಸುವ ತಂತ್ರಜ್ಞಾನ ಇದು.

ಸ್ಕ್ಯಾನ್ ಮಾಡಿಯೋ ಫೋಟೋ ಕ್ಲಿಕ್ಕಿಸಿಯೋ ಅಕ್ಷರಗಳನ್ನು ಕಂಪ್ಯೂಟರಿಗೆ ಊಡಿಸುತ್ತೇವಲ್ಲ, ಆ ಚಿತ್ರದಲ್ಲಿ ಇರಬಹುದಾದ ಬರಹವನ್ನು ಗುರುತಿಸುವುದು ಹೇಗೆ, ಗುರುತಿಸಿದ ಚಿತ್ರವನ್ನು ಪಠ್ಯರೂಪಕ್ಕೆ ಬದಲಿಸುವುದು ಹೇಗೆ ಎನ್ನುವುದನ್ನೆಲ್ಲ ಕಂಪ್ಯೂಟರಿಗೆ ಹೇಳಿಕೊಡುವುದು ಓಸಿಆರ್ ತಂತ್ರಾಂಶದ ಕೆಲಸ.
ಹಳೆಯ ಪುಸ್ತಕಗಳಲ್ಲಿರುವ ಪಠ್ಯವನ್ನು ಗುರುತಿಸಿ ಕಂಪ್ಯೂಟರೀಕರಿಸಲು, ಮುದ್ರಿತ ಅಥವಾ ಲಿಖಿತ ದಾಖಲೆಗಳನ್ನು ಸ್ವಯಂಚಾಲಿತವಾಗಿ ವರ್ಗೀಕರಿಸಲು - ಸಂಸ್ಕರಿಸಲು ಇದು ನೆರವಾಗುತ್ತದೆ.

ಸ್ಕ್ಯಾನ್ ಮಾಡಿದ ಪುಟಗಳಲ್ಲಿ ಏನು ಮುದ್ರಿತವಾಗಿದೆ ಎಂದು ಗುರುತಿಸುವ, ಹಾಗೂ ಅದನ್ನು ಪಠ್ಯರೂಪಕ್ಕೆ ಬದಲಿಸಿಕೊಡುವ ಹಲವು ಓಸಿಆರ್ ತಂತ್ರಾಂಶಗಳು ಕನ್ನಡದಲ್ಲೂ ಇವೆ. ಈ ಪೈಕಿ ಗೂಗಲ್ ಒದಗಿಸಿರುವ ಸೌಲಭ್ಯ ಕೂಡ ಒಂದು: ಕನ್ನಡ ಪಠ್ಯವಿರುವ ಚಿತ್ರವನ್ನು ಡ್ರೈವ್‌ನಲ್ಲಿ ಉಳಿಸಿಟ್ಟು ಗೂಗಲ್ ಡಾಕ್ಸ್ ಮೂಲಕ ತೆರೆದರೆ (ಓಪನ್ ವಿತ್ > ಗೂಗಲ್ ಡಾಕ್ಸ್) ಅದರಲ್ಲಿರುವ ಪಠ್ಯ ಬದಲಾಯಿಸಬಹುದಾದ ರೂಪಕ್ಕೆ ಬಂದುಬಿಡುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನೂ ಓದಿ: ಓಸಿಆರ್ ಎಂಬ ಅಕ್ಷರ ಜಾಣ 
ಜೂನ್ ೯, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge