ಗುರುವಾರ, ಜುಲೈ 13, 2017

ರೀಟೇಲ್ ಉದ್ಯಮದಲ್ಲೊಂದು ಹೊಸ ಸಂಚಲನ

ಉದಯ ಶಂಕರ ಪುರಾಣಿಕ

ಈ ಮೊದಲು ವಸತಿ ಪ್ರದೇಶಗಳಲ್ಲಿ ಚಿಲ್ಲರೆ ವ್ಯಾಪಾರಿಗಳು ಅಥವಾ ಕಿರಾಣಿ ಅಂಗಡಿಗಳು ಸಾಮಾನ್ಯವಾಗಿದ್ದವು. ನಂತರ ಡಿಪಾರ್ಟಮೆಂಟ್ ಸ್ಟೋರ್‌ಗಳು, ಸೂಪರ್ ಮಾರುಕಟ್ಟೆಗಳು, ಶಾಪಿಂಗ್ ಮಾಲ್‌ಗಳು ಬರಲಾರಂಭಿಸಿದವು. ದೂರವಾಣಿ ಕರೆ ಮಾಡಿ ಆರ್ಡರ್ ಮಾಡಿ, ನಿಮ್ಮ ಮನೆಗೆ ತಂದು ತಲುಪಿಸುತ್ತವೆ ಎನ್ನುವ ಪಿಜ್ಜಾ ಅಂಗಡಿಗಳಂತಹ ವ್ಯಾಪಾರ, ಡ್ರೈವ್ ಇನ್ ಶಾಪಿಂಗ್ ಮಾರುಕಟ್ಟೆ, ಅಂತರಜಾಲ ಮತ್ತು ಸ್ಮಾರ್ಟ್‌ಫೋನ್ ಬಳಸಿ ಮಾಡುವ ಆನ್‌ಲೈನ್ ಶಾಪಿಂಗ್ - ಹೀಗೆ ಗ್ರಾಹಕರಿಗೆ ವಿವಿಧ ರೀತಿಯ ಶಾಪಿಂಗ್ ಸೌಲಭ್ಯಗಳು ದೊರೆಯುತ್ತಿವೆ. ಇಷ್ಟೆಲ್ಲ ಬದಲಾಗಿರುವ ರೀಟೇಲ್ ಉದ್ಯಮದಲ್ಲಿ ಹೊಸ ಸಂಚಲನ ಮೂಡಿಸಿರುವುದು 'ಅಮೇಜಾನ್ ಗೋ' ಎಂಬ ಪರಿಕಲ್ಪನೆ.

1800 ಚದುರ ಅಡಿ ಪ್ರದೇಶ ಹೊಂದಿರುವ ಅಮೇಜಾನ್ ಗೋ ಅಂಗಡಿಯಲ್ಲಿ, ಪರಿಣಿತ ಬಾಣಸಿಗರು ಪ್ರತಿದಿನ ತಯಾರಿಸುವ ಉಪಹಾರ, ಊಟ, ತಿಂಡಿ ತಿನಿಸುಗಳು, ಬೇಕರಿ ಪದಾರ್ಥಗಳು, ಹಾಲು, ಮೊಸರು, ಚಾಕಲೇಟ್, ಚೀಸ್, ದಿನಸಿ ಮೊದಲಾಗಿ ವಿವಿಧ ಪದಾರ್ಥಗಳು ದೊರೆಯುತ್ತದೆ. ಗ್ರಾಹಕರ ಬಳಿ ಸ್ಮಾರ್ಟ್‌ಫೋನ್, ಉಚಿತವಾಗಿ ದೊರೆಯುವ ಅಮೇಜಾನ್ ಗೋ ಮೊಬೈಲ್ ಆ್ಯಪ್ ಮತ್ತು ಅಮೇಜಾನ್ ಸದಸ್ಯತ್ವ ಇದ್ದರೆ ಸಾಕು ಈ ಅಂಗಡಿಯನ್ನು ಪ್ರವೇಶಿಸಬಹುದು. ಈ ಅಂಗಡಿ ಪ್ರವೇಶಿಸುವಾಗ ಅಮೇಜಾನ್ ಗೋ ಮೊಬೈಲ್ ಅ್ಯಪ್ ಬಳಸಬೇಕು. ನಂತರ ಅಂಗಡಿಯಲ್ಲಿ ದೊರೆಯುವ ಉಪಹಾರ, ತಿಂಡಿ ತಿನಿಸು ಅಥವಾ ತನಗೆ ಇಷ್ಟವಾದ ಬೇರೆ ಯಾವುದೇ ವಸ್ತುಗಳನ್ನು ಖರೀದಿಸಬಹುದು. ನಂತರ ಅಂಗಡಿಯಿಂದ ಹೊರಗೆ ಹೋಗಬಹುದು. ಇಲ್ಲಿ ಗ್ರಾಹಕರಿಗೆ ಬಿಲ್ ಕಟ್ಟಲು ಸಾಲು ನಿಲ್ಲಬೇಕಿಲ್ಲ, ಚಿಲ್ಲರೆ ಇಲ್ಲವೆಂದು ಜಗಳವಾಡುವುದಿಲ್ಲ, ಕ್ರೆಡಿಟ್, ಡೆಬಿಟ್ ಕಾರ್ಡಗಳನ್ನು ಬಳಸಿ ಅವುಗಳ ಪಿನ್ ನಂಬರ್ ನಮೂದಿಸಲು ಕಾಯಬೇಕಿಲ್ಲ, ಹೊರಗೆ ಹೋಗುವಾಗ ತಾವು ಕೊಂಡು ಒಯ್ಯುವ ವಸ್ತುಗಳನ್ನು ಸೆಕ್ಯೂರಿಟಿ ಸಿಬ್ಬಂದಿ ತಪಾಸಣೆ ಮಾಡುವುದಿಲ್ಲ.

ಹಾಗಾದರೆ ಗ್ರಾಹಕರು ಹಣ ಪಾವತಿ ಮಾಡುವುದು ಹೇಗೆ? ಗ್ರಾಹಕರು ಅಂಗಡಿಯಿಂದ ಹೊರಬರುತ್ತಿರುವಂತೆ ಅವರ ಬಿಲ್ ಪ್ರತಿಯನ್ನು ಅವರ ಮೊಬೈಲ್ ಫೋನ್‍ಗೆ  ಅಮೇಜಾನ್ ಸಂಸ್ಥೆ ಕಳುಹಿಸುತ್ತದೆ. ಈ ಬಿಲ್‍ನ ಪಾವತಿಯನ್ನು ಗ್ರಾಹಕ ಹೊಂದಿರುವ ಸದಸ್ಯತ್ವದಿಂದ ಮಾಡಲಾಗುತ್ತದೆ. ಸುಲಭ, ಸುರಕ್ಷಿತ, ನಗದು ರಹಿತ ವ್ಯವಹಾರದಿಂದಾಗಿ ಅಮೇಜಾನ್ ಮತ್ತು ಗ್ರಾಹಕರಿಬ್ಬರಿಗೂ ಲಾಭವಾಗುತ್ತದೆ.

ಅಮೇಜಾನ್ ಗೋ ಅಂಗಡಿಯ ಕಾರ್ಯಾಚರಣೆಗಾಗಿ ಬಳಸಿರುವ ಕಂಪ್ಯೂಟರ್ ವಿಷನ್, ಸೆನ್ಸರ್ ಫ್ಯೂಷನ್, ಡೀಪ್ ಲರ್ನಿಂಗ್ ತಂತ್ರಜ್ಞಾನ ಮತ್ತು ವಿವಿಧ ತಂತ್ರಾಂಶಗಳು ಇಲ್ಲಿ ಮುಖ್ಯವಾಗಿವೆ.

ಸುರಕ್ಷತೆಯ ದೃಷ್ಟಿಯಿಂದ ವಿವಿಧ ಕಡೆ ಸಿ.ಸಿ.ಕ್ಯಾಮರಾಗಳನ್ನು ಬಳಸುತ್ತಿರುವುದನ್ನು ನೋಡುತ್ತಿದ್ದೇವೆ. ಅದೇ ರೀತಿ ಅಮೇಜಾನ್ ಗೋ ಅಂಗಡಿಗಳಲ್ಲಿ ಹಲವಾರು ವಿಶೇ಼ಷ ಕ್ಯಾಮರಾಗಳನ್ನು ಮತ್ತು ಇಮೇಜಿಂಗ್ ತಂತ್ರಾಂಶಗಳನ್ನು ಬಳಸುತ್ತಾರೆ. ಗ್ರಾಹಕ ಅಂಗಡಿಯನ್ನು ಪ್ರವೇಶಿಸುತ್ತಿರುವಂತೆಯೇ ಈ ಕ್ಯಾಮರಾಗಳು ಆತನ ಮುಖದ ಚಿತ್ರವನ್ನು ಸೆರೆಹಿಡಿಯುತ್ತವೆ. ನಂತರ ಈ ಚಿತ್ರವನ್ನು ಅಮೇಜಾನ್ ಸದಸ್ಯತ್ವ ಪಡೆಯಲು ಗ್ರಾಹಕ ನೀಡಿದ ಭಾವ ಚಿತ್ರದೊಡನೆ ಹೋಲಿಕೆ ಮಾಡಿ, ಅಂಗಡಿಗೆ ಬಂದಿರುವುದು ಗ್ರಾಹಕನೆಂದು ಧೃಡಿಕರಿಸುವುದು ಒಂದು ಹಂತದ ಪ್ರಕ್ರಿಯೆಯಾಗಿದೆ. ಹೀಗೆ ಗ್ರಾಹಕನೆಂದು ಧೃಡಿಕರಣಗೊಳಿಸುವ ಹಲವು ಹಂತಗಳ ಪ್ರಕ್ರಿಯೆಲ್ಲಿ ಹಲವಾರು ಸುರಕ್ಷತೆ, ಅನೆಲೆಟಿಕ್ಸ್ ಮತ್ತು ಇಮೇಜಿಂಗ್ ತಂತ್ರಾಂಶಗಳನ್ನು ಬಳಸಲಾಗುತ್ತದೆ. ಇನ್ನು ಅಂಗಡಿಯಲ್ಲಿ ಗ್ರಾಹಕ ಓಡಾಡುತ್ತಾ ಅಲ್ಲಿರುವ ವಿವಿಧ ವಸ್ತುಗಳನ್ನು ಖರೀದಿಸುವಾಗ ಅದನ್ನು ಸೆರೆಹಿಡಿಯುವ ಕ್ಯಾಮರಾಗಳು, ಈ ಮಾಹಿತಿಯನ್ನು ಡೀಪ್ ಲರ್ನಿಂಗ್ ತಂತ್ರಾಂಶಕ್ಕೆ ನೀಡುತ್ತವೆ. ಗ್ರಾಹಕ ಒಂದು ವಸ್ತುವನ್ನು ಖರೀದಿಸಲು ಕೈಗೆತ್ತಿಕೊಂಡಾಗ ಅದರ ತೂಕ, ಪ್ರಮಾಣ ಮತ್ತು ಸಂಖ್ಯೆಯನ್ನು ಸೆನ್ಸರ್‍‍ಗಳು ದಾಖಲಿಸಿ ಡೀಪ್ ಲರ್ನಿಂಗ್ ತಂತ್ರಾಂಶಕ್ಕೆ ನೀಡುತ್ತವೆ. ಹಲವಾರು ಸೆನ್ಸರ್‍‍ಗಳನ್ನು ಬಳಸಿ ಮಾಹಿತಿ ಕ್ರೋಢೀಕರಣ ಮಾಡುವ ವ್ಯವಸ್ಥೆಗೆ ಸೆನ್ಸರ್ ಫ್ಯೂಷನ್ ಎನ್ನಲಾಗುತ್ತದೆ.

ಹೀಗೆ, ಏಕ ಕಾಲದಲ್ಲಿ ಕ್ಯಾಮರಾಗಳು ಮತ್ತು ಸೆನ್ಸರ್‍‍ಗಳಿಂದ ಬರುವ ಮಾಹಿತಿಯನ್ನು ಸಮೀಕರಣಗೊಳಿಸಿ, ವಿಶ್ಲೇಷಿಸುವ ಡೀಪ್ ಲರ್ನಿಂಗ್ ತಂತ್ರಾಂಶವು ಈ ಗ್ರಾಹಕ ಎಷ್ಟು ಸಲ ಈ ಅಂಗಡಿಗೆ ಬಂದಿದ್ದಾನೆ, ಈತನಿಂದ ಎಷ್ಟು ವ್ಯಾಪಾರವಾಗಿದೆ, ಮೊದಲಾದ ವಿವರಗಳನ್ನು ಪರಿಶೀಲಿಸುತ್ತದೆ. ನಂತರ ಈ ಗ್ರಾಹಕನಿಗೆ ಏನಾದರೂ ವಿಶೇಷ ರಿಯಾಯತಿ ನೀಡಹುದೆಂದು ನಿರ್ಧರಿಸಿದರೆ, ಆ ಸೂಚನೆಯನ್ನು  ಬಿಲ್ಲಿಂಗ್ ತಂತ್ರಾಂಶಕ್ಕೆ ನೀಡುತ್ತದೆ. ಅಂಗಡಿಯಿಂದ ಗ್ರಾಹಕ ಹೊರಗೆ ಹೋಗುವಾಗ ಬಿಲ್ಲಿಂಗ್ ತಂತ್ರಾಂಶದಲ್ಲಿ ಅಂತಿಮ ಬಿಲ್ ಸಿದ್ಧವಾಗುತ್ತದೆ. ಈ ಬಿಲ್ ಮೊತ್ತವನ್ನು ಗ್ರಾಹಕನ ಸದಸ್ಯತ್ವದಿಂದ ಪಡೆದು, ರಸೀದಿಯನ್ನು ಆತನ ಮೊಬೈಲ್ ಫೋನಿಗೆ ಕಳುಹಿಸಲಾಗುತ್ತದೆ.


ಅಪರೂಪಕ್ಕೊಮ್ಮೆ ಬರುವ ಗ್ರಾಹಕರಿಗೂ ಮತ್ತು ಮತ್ತೆ ಮತ್ತೆ ಬರುವ ಗ್ರಾಹಕರಿಗೂ ಒಂದೇ ಬೆಲೆ ಎನ್ನುವ ಪದ್ಧತಿ ಸಾಂಪ್ರದಾಯಿಕ ರೀಟೇಲ್ ವ್ಯವಸ್ಥೆಯಲ್ಲಿದೆ. ಆದರೆ ಅಮೇಜಾನ್ ಗೋನಂತಹ ಅಂಗಡಿಗಳಲ್ಲಿ ಮತ್ತೆ ಮತ್ತೆ ಬರುವ ಗ್ರಾಹಕರಿಗೆ ವಿಶೇಷ ರಿಯಾಯತಿ ನೀಡಲು ಸಾಧ್ಯವಾಗುತ್ತದೆ. ಕಡಿಮೆ ಸಮಯದಲ್ಲಿ ಶಾಪಿಂಗ್ ಮುಗಿಸಿ ಹೋಗಬೇಕು ಎನ್ನುವ ಗ್ರಾಹಕರಿಗೆ ಇಲ್ಲಿ ಬಿಲ್ ಕೌಂಟರಿನಲ್ಲಿ ಕಾಯುವ ಸಮಯದ ಉಳಿತಾಯವಾಗುತ್ತದೆ. ಅಂಗಡಿಗೆ ಬರುವ ಗ್ರಾಹಕರಿಗೆ ಯಾವ ವಸ್ತು ಹೆಚ್ಚು ಇಷ್ಟವಾಗುತ್ತದೆ, ಯಾವುದು ಇಷ್ಟವಾಗುವುದಿಲ್ಲ, ಯಾವ ಜಾಹಿರಾತು ಗಮನಿಸುತ್ತಾರೆ ಅಥವಾ ಗಮನಿಸುವುದಿಲ್ಲ, ಯಾವ ಸೇವೆಗಳನ್ನು ಹೆಚ್ಚಾಗಿ ಬಳಸುತ್ತಾರೆ, ಯಾವ ರೀತಿಯ ಹೊಸ ಸೇವೆಗಳನ್ನು ನೀಡಬಹುದು, ಹೀಗೆ ವಿವಿಧ ಅಂಶಗಳ ವಿಶ್ಲೇಷಣೆ ಮಾಡುವ ಡೀಪ್ ಲರ್ನಿಂಗ್ ತಂತ್ರಾಂಶವು ಈ ವರದಿಯನ್ನು ಅಂಗಡಿಯ ಪ್ರಮುಖ ಅಧಿಕಾರಿಗಳಿಗೆ ನೀಡುತ್ತದೆ.

[ಅಮೇಜಾನ್ ಗೋ ಪರಿಕಲ್ಪನೆ ಸದ್ಯ ಪ್ರಾಯೋಗಿಕ ಹಂತದಲ್ಲಿದೆ. ಇದರ ಮೊದಲ ಮಳಿಗೆ ಅಮೆರಿಕಾದ ಸಿಯಾಟಲ್‍ನಲ್ಲಿ ತೆರೆದಿದ್ದು ಅಮೆಜಾನ್ ಉದ್ಯೋಗಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಅಮೇಜಾನ್ ಜಾಲತಾಣಕ್ಕೆ ಭೇಟಿನೀಡಬಹುದು.]

ಕಾಮೆಂಟ್‌ಗಳಿಲ್ಲ:

badge