ಸೋಮವಾರ, ಜುಲೈ 3, 2017

ಎಚ್‌ಡಿಎಂಐ: ಒಂದು ಪರಿಚಯ

ಟಿ. ಜಿ. ಶ್ರೀನಿಧಿ

ಉತ್ತಮ ಗುಣಮಟ್ಟದ ವೀಡಿಯೋ ಚಿತ್ರೀಕರಿಸುವುದು ಈಗ ಬಹಳ ಸುಲಭ. ವೀಡಿಯೋ ಕ್ಯಾಮೆರಾಗಳಲ್ಲಿ ಮಾತ್ರವೇ ಅಲ್ಲ, ಡಿಎಸ್‌ಎಲ್‌ಆರ್‌ಗಳಲ್ಲಿ, ಸಾಮಾನ್ಯ ಡಿಜಿಟಲ್ ಕ್ಯಾಮೆರಾಗಳಲ್ಲಿ, ಕಡೆಗೆ ಮೊಬೈಲ್ ಫೋನುಗಳಲ್ಲೂ ನಾವು ಸರಾಗವಾಗಿ ಎಚ್‌ಡಿ ವೀಡಿಯೋ ಚಿತ್ರೀಕರಿಸಿಕೊಳ್ಳಬಹುದು.

ಎಚ್‌ಡಿ ವೀಡಿಯೋ ಚಿತ್ರೀಕರಿಸಿ ಅದನ್ನು ಎಲ್ಲೋ ಒಂದು ಕಡೆ ಶೇಖರಿಸಿಟ್ಟುಬಿಟ್ಟರೆ ಆಯಿತೆ, ಅದನ್ನು ಅಷ್ಟೇ ಒಳ್ಳೆಯ ಗುಣಮಟ್ಟದಲ್ಲಿ ನೋಡಲೂಬೇಕಲ್ಲ? ಇದಕ್ಕೆ ನೆರವಾಗುವ ತಂತ್ರಜ್ಞಾನದ ಹೆಸರು ಎಚ್‌ಡಿಎಂಐ, ಅಂದರೆ ಹೈ ಡೆಫನಿಶನ್ ಮಲ್ಟಿಮೀಡಿಯಾ ಇಂಟರ್‌ಫೇಸ್.
ಅತ್ಯುತ್ತಮ ಗುಣಮಟ್ಟದ ವೀಡಿಯೋ ಸಂಕೇತಗಳನ್ನು ಅತ್ಯಂತ ಕ್ಷಿಪ್ರವಾಗಿ ವರ್ಗಾಯಿಸುವ ಸಾಮರ್ಥ್ಯ ಈ ತಂತ್ರಜ್ಞಾನದ ಪ್ರಮುಖ ವೈಶಿಷ್ಟ್ಯ.

ಎಚ್‌ಡಿ ಟೀವಿಗಳಲ್ಲಿ, ಡಿವಿಡಿ ಪ್ಲೇಯರುಗಳಲ್ಲಿ, ಸೆಟ್ ಟಾಪ್ ಬಾಕ್ಸುಗಳಲ್ಲಿ, ಕಂಪ್ಯೂಟರುಗಳಲ್ಲಿ, ಹಲವಾರು ಡಿಜಿಟಲ್ ಕ್ಯಾಮೆರಾ, ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲೂ ಈಗ ಎಚ್‌ಡಿಎಂ‌ಐ ಪೋರ್ಟ್ ಇರುತ್ತದೆ. ನೋಡಲು ಸರಿಸುಮಾರು ಯುಎಸ್‌ಬಿ ಪೋರ್ಟ್‌ನಂತೆಯೇ ಕಾಣುವ ಎಚ್‌ಡಿಎಂ‌ಐ ಪೋರ್ಟ್ ಮೂಲಕ ನಾವು ವಿವಿಧ ಸಾಧನಗಳನ್ನು ಪರಸ್ಪರ ಸಂಪರ್ಕಿಸಿ ಎಚ್‌ಡಿ ಗುಣಮಟ್ಟದ ವೀಡಿಯೋ ವೀಕ್ಷಿಸುವುದು ಸಾಧ್ಯ.

ಕ್ರೋಮ್‌ಕಾಸ್ಟ್‌ನಂತಹ ಮೀಡಿಯಾ ಸ್ಟ್ರೀಮಿಂಗ್ ಸಾಧನಗಳನ್ನೂ ಎಚ್‌ಡಿಎಂ‌ಐ ಪೋರ್ಟ್ ಮೂಲಕ ಸಂಪರ್ಕಿಸಲಾಗುತ್ತದೆ [ಓದಿ: ಟೀವಿಯನ್ನು ಸ್ಮಾರ್ಟ್ ಮಾಡೋಣ ಬನ್ನಿ!]. ಹಲವು ಪ್ರೊಜೆಕ್ಟರುಗಳೂ ಎಚ್‌ಡಿಎಂಐ ಸಂಪರ್ಕವನ್ನೇ ಬಳಸುತ್ತವೆ.

ಅಂದಹಾಗೆ ಎಚ್‌ಡಿಎಂಐ ಸೌಲಭ್ಯವಿರುವ ಉಪಕರಣಗಳನ್ನು ಸಂಪರ್ಕಿಸಲು ಎಚ್‌ಡಿಎಂಐ ಕೇಬಲ್ಲುಗಳನ್ನೇ ಬಳಸಬೇಕಾದ್ದು ಕಡ್ಡಾಯ. ಎಚ್‍ಡಿಎಂಐ ಸೌಲಭ್ಯವಿಲ್ಲದ ಸಾಧನಗಳನ್ನು (ಉದಾ: ಹಳೆಯ ಮಾನಿಟರ್) ಹೊಸ ಸಾಧನಗಳ (ಉದಾ: ವಿಜಿಎ ಕನೆಕ್ಟರ್ ಇಲ್ಲದ ಲ್ಯಾಪ್‍ಟಾಪ್) ಎಚ್‍ಡಿಎಂ ಪೋರ್ಟ್‍ಗೆ ಜೋಡಿಸಲು ಅನುವುಮಾಡಿಕೊಡುವ ಕನ್ವರ್ಟರ್‍‍ಗಳೂ ಇವೆ.

ಆಗಸ್ಟ್ ೧೧, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge