ಕೃತಕ ಉಪಗ್ರಹಗಳ ಉಡಾವಣೆಯಲ್ಲಿ ಇಸ್ರೋ ಸಾಧಿಸುತ್ತಿರುವ ವಿಕ್ರಮಗಳ ಬಗ್ಗೆ ನಾವು ಕೇಳುತ್ತಲೇ ಇದ್ದೇವೆ. ಹಲವಾರು ವರ್ಷಗಳ ಹಿಂದೆ "ಇದೆಲ್ಲ ಭಾರತೀಯರಿಂದ ಆಗುವ ಕೆಲಸವಲ್ಲ" ಎನ್ನುವ ಕುಹಕ ವ್ಯಾಪಕವಾಗಿ ಕೇಳಿಬರುತ್ತಿದ್ದದ್ದೂ ಹಲವರಿಗೆ ಗೊತ್ತು.
ಉಪಗ್ರಹಗಳ ಬಗ್ಗೆ ಇಷ್ಟೆಲ್ಲ ಕೇಳಿದ್ದರೂ ಅವುಗಳ ಉಪಯೋಗವೇನು ಎನ್ನುವ ಬಗ್ಗೆ ನಮ್ಮಲ್ಲಿ ಅಷ್ಟೇನೂ ಸ್ಪಷ್ಟವಾದ ಚಿತ್ರಣ ಇಲ್ಲ. ಉಪಗ್ರಹಗಳು ಯಶಸ್ವಿಯಾಗಿ ಅಂತರಿಕ್ಷ ಸೇರಿದ ಬಗ್ಗೆ ದೊರಕುವಷ್ಟು ಮಾಹಿತಿ ಅವು ಅಲ್ಲಿ ಏನು ಮಾಡುತ್ತವೆ ಎನ್ನುವುದರ ಕುರಿತು ದೊರಕದೆ ಇರುವುದು ಇದಕ್ಕೆ ಪ್ರಮುಖ ಕಾರಣ ಇರಬಹುದೇನೋ.
ಹಾಗೆ ನೋಡಿದರೆ ನಮ್ಮ ದಿನನಿತ್ಯದ ಬದುಕಿನಲ್ಲಿ ಕೃತಕ ಉಪಗ್ರಹಗಳ ಪಾತ್ರ ಬಹಳ ದೊಡ್ಡದು. ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲರ ಬದುಕನ್ನೂ ಅವು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಿಸುತ್ತವೆ. ಅಂತರಿಕ್ಷದಲ್ಲಿರುವ ಉಪಗ್ರಹಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲವಲ್ಲ, ಹಾಗೆಯೇ ಅವುಗಳ ಮಹತ್ವವೂ ನಮ್ಮ ಗಮನಕ್ಕೆ ಬಂದಿರುವುದಿಲ್ಲ ಅಷ್ಟೇ.
ಕಣ್ಣಿಗೆ ಕಾಣದ ಈ ಕಣ್ಮಣಿಗಳು ನಮ್ಮ ಬದುಕನ್ನು ಹೇಗೆಲ್ಲ ಪ್ರಭಾವಿಸುತ್ತವೆ? ಒಂದಷ್ಟು ಮಾಹಿತಿ ಇಲ್ಲಿದೆ.
ಕೃತಕ ಉಪಗ್ರಹಗಳ ಉದ್ದೇಶ ಹಲವು ಬಗೆಯದಾಗಿರುವುದು ಸಾಧ್ಯ. ಅಂತರಿಕ್ಷದಲ್ಲಿದ್ದುಕೊಂಡು ಭೂಮಿಯತ್ತ ಒಂದು ಕಣ್ಣಿಟ್ಟಿರುವುದು, ಅರ್ಥಾತ್ 'ಅರ್ಥ್ ಅಬ್ಸರ್‌ವೇಶನ್', ಇಂತಹ ಉದ್ದೇಶಗಳಲ್ಲೊಂದು. ಈ ಉದ್ದೇಶಕ್ಕಾಗಿ ಬಳಕೆಯಾಗುವ ಉಪಗ್ರಹಗಳಿಗೆ ಅರ್ಥ್ ಅಬ್ಸರ್‌ವೇಶನ್ ಸ್ಯಾಟೆಲೈಟ್‍ಗಳೆಂದೇ ಹೆಸರು. ಹವಾಮಾನ ಹಾಗೂ ವಾಯುಗುಣ ಪರಿವೀಕ್ಷಣೆ, ವಸತಿ ಪ್ರದೇಶ - ಕೃಷಿಭೂಮಿ - ಅರಣ್ಯ - ಜಲಸಂಪನ್ಮೂಲ ಮುಂತಾದವುಗಳ ಸಮೀಕ್ಷೆ, ಭೂಪ್ರದೇಶದ ನಕ್ಷೆಯ ರಚನೆ, ಪ್ರಕೃತಿವಿಕೋಪಗಳ ಸಂದರ್ಭದಲ್ಲಿ ಪರಿಹಾರ ಕಾರ್ಯಗಳಿಗೆ ನೆರವು ನೀಡುವುದೇ ಮುಂತಾದ ಕೆಲಸಗಳಲ್ಲಿ ಈ ಉಪಗ್ರಹಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಷ್ಟೇ ಏಕೆ, ಖನಿಜ ನಿಕ್ಷೇಪಗಳ ಅನ್ವೇಷಣೆಯಂತಹ ಕೆಲಸಗಳಲ್ಲೂ ಇವುಗಳ ನೆರವು ಪಡೆಯುವುದು ಸಾಧ್ಯ.
ಟೀವಿ ಚಾನೆಲ್ಲುಗಳಲ್ಲಿ, ಪತ್ರಿಕೆಗಳಲ್ಲಿ ಪ್ರಕಟವಾಗುವ ಹವಾಮಾನ ಮುನ್ಸೂಚನೆಯ ಮಾಹಿತಿ ದೊರಕುವುದು ಕೂಡ ಉಪಗ್ರಹಗಳಿಂದಲೇ. ಸುರಕ್ಷತೆಯ ದೃಷ್ಟಿಯಿಂದ ಪ್ರಮುಖವೆನಿಸುವ ಕಣ್ಗಾವಲಿನಂತಹ (surveillance) ಚಟುವಟಿಕೆಗಳಲ್ಲೂ ಉಪಗ್ರಹಗಳನ್ನು ಬಳಸುವುದು ಸಾಧ್ಯ.
ಬಾಹ್ಯಾಕಾಶ ಸಂಶೋಧನೆಯ ಕುರಿತು ವಿದ್ಯಾರ್ಥಿಗಳಲ್ಲೂ ಆಸಕ್ತಿ ಮೂಡಿಸುವ, ಅವರನ್ನೂ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಇಸ್ರೋ ಸೇರಿದಂತೆ ಹಲವು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ವಿದ್ಯಾರ್ಥಿಗಳ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತವೆ. ಇಂತಹ ಪ್ರೋತ್ಸಾಹದ ಪರಿಣಾಮವಾಗಿ ವಿದ್ಯಾರ್ಥಿಗಳೇ ನಿರ್ಮಿಸಿದ ಹಲವು ಉಪಗ್ರಹಗಳು ಈಗಾಗಲೇ ಭೂಮಿಯ ಸುತ್ತ ಸುತ್ತುತ್ತಲೂ ಇವೆ ಎನ್ನುವುದು ವಿಶೇಷ.
ಅಂದಹಾಗೆ ಕೃತಕ ಉಪಗ್ರಹಗಳ ಕಾರ್ಯವ್ಯಾಪ್ತಿ ನಮ್ಮ ಭೂಮಿಯ ಸುತ್ತಲೇ ಇರಬೇಕು ಎಂದೇನೂ ಇಲ್ಲ. ಸೌರವ್ಯೂಹದ ಇತರ ಗ್ರಹಗಳನ್ನು ಸುತ್ತುಹಾಕುತ್ತ ಅವುಗಳ ಕುರಿತು ಮಾಹಿತಿ ಸಂಗ್ರಹಿಸುವ ಉಪಗ್ರಹಗಳೂ ಇವೆ. ಇತರ ಆಕಾಶಕಾಯಗಳ ಕುರಿತು ನಮ್ಮ ಅರಿವನ್ನು ವಿಸ್ತರಿಸುವಲ್ಲಿ ಇವು ನೆರವಾಗುತ್ತವೆ. ಇಸ್ರೋ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿದ 'ಮಂಗಳಯಾನ' ಇಂತಹ ಉಪಗ್ರಹಗಳಿಗೊಂದು ಉದಾಹರಣೆ. ಇಂಥದ್ದೊಂದು ಪ್ರಯೋಗವನ್ನು ತನ್ನ ಮೊತ್ತಮೊದಲ ಪ್ರಯತ್ನದಲ್ಲೇ, ಅದೂ ಅತ್ಯಂತ ಕಡಿಮೆ ವೆಚ್ಚದಲ್ಲಿ, ಸಫಲಗೊಳಿಸಿದ್ದು ಇಸ್ರೋ ಹೆಗ್ಗಳಿಕೆ. ಇದೇ ರೀತಿ ಭೂಮಿಯ ಉಪಗ್ರಹ ಚಂದ್ರನ ಸುತ್ತ ಸುತ್ತುವ 'ಚಂದ್ರಯಾನ', ಉಪಗ್ರಹದ ಉಪಗ್ರಹ!
ಮೇಲಿನ ಬಹುತೇಕ ಉದಾಹರಣೆಗಳು ಸಂಶೋಧಕರಿಗೆ, ಸರ್ಕಾರಗಳಿಗೆ ಸಂಬಂಧಪಟ್ಟಿವೆ, ನಿಜ. ಹಾಗಾದರೆ ಉಪಗ್ರಹಗಳ ನೇರ ಪ್ರಯೋಜನ ಜನಸಾಮಾನ್ಯರಿಗೆ ಸಿಗುವುದಿಲ್ಲವೇ?
ಖಂಡಿತಾ ಸಿಗುತ್ತದೆ. ಉಪಗ್ರಹಗಳ ಇನ್ನೊಂದು ಪ್ರಮುಖ ವಿಧವಾದ ಸಂವಹನ, ಅಂದರೆ 'ಕಮ್ಯೂನಿಕೇಶನ್ ಸ್ಯಾಟೆಲೈಟ್'ಗಳ ಪ್ರಯೋಜನವನ್ನು ನಾವೆಲ್ಲ ಪ್ರತಿದಿನವೂ ಒಂದಲ್ಲ ಒಂದು ರೀತಿಯಲ್ಲಿ ಪಡೆಯುತ್ತೇವೆ. ಟೀವಿ ಪ್ರಸಾರ ಹಾಗೂ ದೂರಸಂಪರ್ಕ ಕ್ಷೇತ್ರಗಳಲ್ಲಿ ಇವುಗಳ ಪಾತ್ರ ಮಹತ್ವದ್ದು. ಟೀವಿ ಚಾನೆಲ್ಲುಗಳ ಸ್ಟೂಡಿಯೋದಿಂದ ಹೊರಟ ಸಂಕೇತಗಳು ಡಿಶ್ ಆಂಟೆನಾ ಹಾಗೂ ಸೆಟ್ ಟಾಪ್ ಬಾಕ್ಸ್ ಮೂಲಕ ನಮ್ಮ ಟೀವಿಯನ್ನು ತಲುಪುವುದು (ಡೈರೆಕ್ಟ್ ಟು ಹೋಮ್) ಈ ಉಪಗ್ರಹಗಳ ಮೂಲಕವೇ. ಇದೇರೀತಿ ಸ್ಯಾಟೆಲೈಟ್ ಫೋನ್ ಸೇವೆ ಹಾಗೂ ಉಪಗ್ರಹ ಆಧಾರಿತ ಅಂತರಜಾಲ ಸಂಪರ್ಕಗಳನ್ನು ಒದಗಿಸುವುದೂ ಸಂವಹನ ಉಪಗ್ರಹಗಳದೇ ಕೆಲಸ. ಹ್ಯಾಮ್ ರೇಡಿಯೋ ಹಾಗೂ ಮಿಲಿಟರಿ ಸಂವಹನದಂಥ ಕ್ಷೇತ್ರಗಳಲ್ಲೂ ಇವು ಪ್ರಮುಖ ಪಾತ್ರ ವಹಿಸುತ್ತವೆ.
ಪ್ರಯಾಣಿಸುವಾಗ ಚಾಲನೆಯ ನಿರ್ದೇಶನಗಳನ್ನು ಪಡೆದುಕೊಳ್ಳುವುದರಿಂದ ಪ್ರಾರಂಭಿಸಿ ನಾವು ಇರುವಲ್ಲಿಗೆ ಟ್ಯಾಕ್ಸಿ ಕರೆಸುವವರೆಗೆ ಅನೇಕ ಸಂದರ್ಭಗಳಲ್ಲಿ ನಮ್ಮ ಫೋನಿನ 'ಲೊಕೇಶನ್' ಸೇವೆ ಬಳಸುತ್ತೇವಲ್ಲ, ಅದರ ಹಿಂದಿರುವುದೂ ಉಪಗ್ರಹಗಳದೇ ಕೈವಾಡ.
ಸದ್ಯ ನಾವೆಲ್ಲ ಬಳಸುವ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ, ಅರ್ಥಾತ್ 'ಜಿಪಿಎಸ್' ವ್ಯವಸ್ಥೆಯ ಹಿಂದೆ ಉಪಗ್ರಹಗಳ ಒಂದು ಜಾಲವೇ ಇದೆ. ಮೊಬೈಲ್ ಫೋನಿನಲ್ಲೋ ಪ್ರತ್ಯೇಕ ಉಪಕರಣದಲ್ಲೋ ಜಿಪಿಎಸ್ ರಿಸೀವರ್ ಇರುವ ಯಾರು ಬೇಕಿದ್ದರೂ ಈ ಉಪಗ್ರಹಗಳಿಂದ ಸಂಕೇತ ಪಡೆದುಕೊಂಡು ತಮ್ಮ ಸ್ಥಾನವನ್ನು ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ. ಆದರೆ ಈ ಸೇವೆಯನ್ನು ಒದಗಿಸುವುದು ಅಮೆರಿಕಾ ದೇಶದ ಉಪಗ್ರಹಗಳು. ಹೊರದೇಶದ ಮೇಲಿನ ಈ ಅವಲಂಬನೆಯನ್ನು ತಪ್ಪಿಸಲು 'ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂ' (ಐಆರ್‌ಎನ್‌ಎಸ್‌ಎಸ್) ಎಂಬ ವ್ಯವಸ್ಥೆಯನ್ನು ನಮ್ಮ ದೇಶ ರೂಪಿಸಿಕೊಂಡಿದೆ. ಜಿಪಿಎಸ್ ರೀತಿಯಲ್ಲೇ ಸೇವೆ ನೀಡಲಿರುವ ಏಳು ಉಪಗ್ರಹಗಳ ಈ ವ್ಯವಸ್ಥೆಗೆ 'ನಾವಿಕ್' (ನ್ಯಾವಿಗೇಶನ್ ವಿಥ್ ಇಂಡಿಯನ್ ಕಾನ್ಸ್‌ಟೆಲೇಶನ್) ಎಂಬ ಹೆಸರೂ ಇದೆ. ಈ ವ್ಯವಸ್ಥೆ ಸಾಮಾನ್ಯ ಬಳಕೆದಾರರಿಗೆ ಸ್ಟಾಂಡರ್ಡ್ ಪೊಸಿಶನಿಂಗ್ ಸರ್ವಿಸ್ (ಎಸ್‌ಪಿಎಸ್) ಹಾಗೂ ಸೇನಾಪಡೆಗಳಂತಹ ವಿಶೇಷ ಬಳಕೆದಾರರಿಗೆ ರಿಸ್ಟ್ರಿಕ್ಟೆಡ್ ಸರ್ವಿಸ್ (ಆರ್‌ಎಸ್) ಎಂಬ ಎರಡು ಮಾರ್ಗದರ್ಶಕ ಸೇವೆಗಳನ್ನು ಒದಗಿಸಲಿದೆ.
ಕೃತಕ ಉಪಗ್ರಹಗಳ ಇತಿಹಾಸಜುಲೈ ೩೦, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
೧೮೬೯ನೇ ಇಸವಿಯಲ್ಲಿ ಅಮೆರಿಕಾದ ಪತ್ರಿಕೆಯೊಂದರಲ್ಲಿ 'ದ ಬ್ರಿಕ್ ಮೂನ್' ಎಂಬ ಕತೆ ಪ್ರಕಟವಾಗಿತ್ತು. ಇಟ್ಟಿಗೆಯಿಂದ ನಿರ್ಮಿಸಿದ ಗೋಲವೊಂದನ್ನು ಅಂತರಿಕ್ಷಕ್ಕೆ ಹಾರಿಬಿಡುವ ಪ್ರಯತ್ನ ಈ ಕತೆಯ ಹೂರಣ. ಕೃತಕ ಉಪಗ್ರಹ ಕುರಿತ ಕಲ್ಪನೆಗಳ ಅತ್ಯಂತ ಹಳೆಯ ಉದಾಹರಣೆಗಳಲ್ಲಿ ಈ ಕತೆಗೆ ಪ್ರಮುಖ ಸ್ಥಾನವಿದೆ. ಬಹುಕಾಲ ಕಾಗದದ ಮೇಲಷ್ಟೇ ಉಳಿದಿದ್ದ ಈ ಕಲ್ಪನೆ ವಾಸ್ತವವಾಗಿ ಬದಲಾಗಿದ್ದು ೧೯೫೭ರಲ್ಲಿ. ಆ ವರ್ಷ ಉಡಾವಣೆಯಾದ ರಷ್ಯಾ ನಿರ್ಮಿತ ಸ್ಪುಟ್ನಿಕ್-೧, ಮೊತ್ತಮೊದಲ ಮಾನವನಿರ್ಮಿತ ಉಪಗ್ರಹ. ಮುಂದಿನ ವರ್ಷ, ಅಂದರೆ ೧೯೫೮ರಲ್ಲಿ ಅಮೆರಿಕಾ ತನ್ನ ಮೊದಲ ಉಪಗ್ರಹ ಎಕ್ಸ್‌ಪ್ಲೋರರ್-೧ ಅನ್ನು ಉಡಾಯಿಸಿತು. ಮುಂದಿನ ವರ್ಷಗಳಲ್ಲಿ ಜಗತ್ತಿನ ಇತರ ರಾಷ್ಟ್ರಗಳೂ ತಮ್ಮ ಉಪಗ್ರಹಗಳನ್ನು ಉಡಾಯಿಸಿದವು. ೧೯೭೫ರಲ್ಲಿ ರಷ್ಯಾದಿಂದ ಉಡಾವಣೆಯಾದ 'ಆರ್ಯಭಟ' ಭಾರತದ ಮೊದಲ ಉಪಗ್ರಹ. ಇದಾದ ಐದೇ ವರ್ಷಗಳಲ್ಲಿ (೧೯೮೦) 'ರೋಹಿಣಿ' ಉಪಗ್ರಹ ಭಾರತದಿಂದಲೇ ಯಶಸ್ವಿಯಾಗಿ ಉಡಾವಣೆಯಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ