ಗುರುವಾರ, ಸೆಪ್ಟೆಂಬರ್ 21, 2017

ಕ್ಯಾಮೆರಾ ಇಜ್ಞಾನ: ಎಚ್‌ಡಿಆರ್ ಎಂದರೇನು?

ಟಿ. ಜಿ. ಶ್ರೀನಿಧಿ


ಡಿಜಿಟಲ್ ಕ್ಯಾಮೆರಾಗಳ ಸ್ಥಾನವನ್ನು ಮೊಬೈಲುಗಳು ಆಕ್ರಮಿಸಿಕೊಳ್ಳುತ್ತಿದ್ದಂತೆ ಕ್ಯಾಮೆರಾಗಳಲ್ಲಿದ್ದ ಸೌಲಭ್ಯಗಳು ಒಂದರ ನಂತರ ಒಂದರಂತೆ ಮೊಬೈಲಿನಲ್ಲೂ ಕಾಣಿಸಿಕೊಳ್ಳುತ್ತಿವೆ. ಇಂತಹ ಸೌಲಭ್ಯಗಳ ಪೈಕಿ ಎಚ್‍ಡಿಆರ್ ಕೂಡ ಒಂದು.

ಎಚ್‍ಡಿಆರ್‌ ಎಂಬ ಹೆಸರು 'ಹೈ ಡೈನಮಿಕ್ ರೇಂಜ್' ಇಮೇಜಿಂಗ್ ಎನ್ನುವ ಪರಿಕಲ್ಪನೆಯನ್ನು ಪ್ರತಿನಿಧಿಸುತ್ತದೆ.  ಛಾಯಾಚಿತ್ರದಲ್ಲಿರುವ ನೆರಳು-ಬೆಳಕಿನ ಪ್ರಮಾಣಗಳ ನಡುವೆ ಸಮತೋಲನ ಮೂಡಿಸುವುದು ಹಾಗೂ ಆ ಮೂಲಕ ಚಿತ್ರದ ಗುಣಮಟ್ಟವನ್ನು ಹೆಚ್ಚಿಸುವುದು ಈ ಪರಿಕಲ್ಪನೆಯ ಉದ್ದೇಶ.

ಈಗ ನೀವು ಪ್ರಕೃತಿ ದೃಶ್ಯವೊಂದನ್ನು (ಲ್ಯಾಂಡ್‌ಸ್ಕೇಪ್) ಕ್ಯಾಮೆರಾದಲ್ಲಿ ಸೆರೆಹಿಡಿಯಲು  ಹೊರಟಿದ್ದೀರಿ ಎಂದುಕೊಳ್ಳೋಣ. ಆ ದೃಶ್ಯದಲ್ಲಿ ಆಕಾಶದ ಭಾಗವನ್ನು ಫೋಕಸ್ ಮಾಡಿದರೆ ನೆಲದ ಭಾಗ ಕಪ್ಪಗೆ ಮೂಡುವುದು, ನೆಲದ ಭಾಗದತ್ತ ಫೋಕಸ್ ಮಾಡಿದರೆ ಆಕಾಶದ ವಿವರಗಳು ಅಸ್ಪಷ್ಟವಾಗುವುದು ಸಾಮಾನ್ಯ ಸಮಸ್ಯೆ.

ಈ ಸಮಸ್ಯೆಯನ್ನು ಬಗೆಹರಿಸಲು ಕ್ಯಾಮೆರಾದ ಎಚ್‌ಡಿಆರ್ ಮೋಡ್ ಅನ್ನು ಬಳಸುವುದು ಸಾಧ್ಯ. ಒಂದಕ್ಕಿಂತ ಹೆಚ್ಚು ಸಂಖ್ಯೆಯ ಚಿತ್ರಗಳನ್ನು ವಿಭಿನ್ನ ಸಂಯೋಜನೆಗಳಲ್ಲಿ ಕ್ಲಿಕ್ಕಿಸುವುದು, ಮತ್ತು ಆ ಚಿತ್ರಗಳನ್ನು ಸೇರಿಸಿ ನೆರಳು-ಬೆಳಕುಗಳ ಸಮತೋಲನವಿರುವ ಉತ್ತಮ ಛಾಯಾಚಿತ್ರವನ್ನು ರೂಪಿಸುವುದು ಈ ಮೋಡ್‌ನ ವೈಶಿಷ್ಟ್ಯ. ಹಿನ್ನೆಲೆಯಲ್ಲಿ ಇಷ್ಟೆಲ್ಲ ಕೆಲಸ ನಡೆಯುವುದರಿಂದಲೇ ಎಚ್‌ಡಿಆರ್ ಚಿತ್ರ ಕ್ಲಿಕ್ಕಿಸಲು ಸಾಮಾನ್ಯ ಚಿತ್ರಕ್ಕಿಂತ ಕೊಂಚ ಹೆಚ್ಚಿನ ಸಮಯ ಬೇಕಾಗುತ್ತದೆ.

ಅಂದಹಾಗೆ ಎಲ್ಲ ಸಂದರ್ಭಗಳಲ್ಲೂ ಎಚ್‌ಡಿಆರ್ ಮೋಡ್ ಬಳಸುವುದು ಸೂಕ್ತವೇನಲ್ಲ. ಉದಾಹರಣೆಗೆ ಕ್ಯಾಮೆರಾ ಮುಂದಿನ ವಸ್ತು-ವಿಷಯಗಳು ಚಲನೆಯಲ್ಲಿದ್ದಾಗ ಎಚ್‌ಡಿಆರ್ ಚಿತ್ರ ಚೆನ್ನಾಗಿ ಮೂಡಿಬರುವುದಿಲ್ಲ.

ಮಾರ್ಚ್ ೨೩, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
(ಚಿತ್ರ: ಬಾದಾಮಿಯ ಭೂತನಾಥ ದೇವಾಲಯ, ಎಚ್‌ಡಿಆರ್ ಸೌಲಭ್ಯ ಬಳಸಿ ಕ್ಲಿಕ್ಕಿಸಿದ್ದು, ಕೃಪೆ: ಶ್ರೀನಿಧಿಯ ಪ್ರಪಂಚ)

ಕಾಮೆಂಟ್‌ಗಳಿಲ್ಲ:

badge