ಸೋಮವಾರ, ಸೆಪ್ಟೆಂಬರ್ 11, 2017

ಮನೆಯಲ್ಲೇ ಮಲ್ಟಿಪ್ಲೆಕ್ಸ್!

ಟಿ. ಜಿ. ಶ್ರೀನಿಧಿ


ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಟೀವಿ ಇಟ್ಟುಕೊಳ್ಳುವುದು ಸಾಮಾನ್ಯ ಅಭ್ಯಾಸ. ರಿಮೋಟ್‌ ಕಂಟ್ರೋಲ್‌ಗಾಗಿ ನಡೆಯುವ ಜಗಳ ಬಗೆಹರಿಸುವ ದೃಷ್ಟಿಯಿಂದ ಇದು ಅನುಕೂಲಕರ, ನಿಜ. ಆದರೆ ಇಲ್ಲಿ ಸಮಸ್ಯೆಗಳೂ ಇವೆ: ಟೀವಿಗಳನ್ನು ಬೇಕೆಂದಾಗ ಬೇಕಾದ ಕೋಣೆಗೆ ವರ್ಗಾಯಿಸಿಕೊಳ್ಳುವುದು ಕಷ್ಟ, ಹಾಗೆಂದು ಕೋಣೆಗೊಂದು ಟೀವಿ ಕೊಳ್ಳುವುದೂ ಕಷ್ಟ. ಮನೆಯಿಂದ ಹೊರಗೆಲ್ಲೋ ಹೋಗುವಾಗ ಜೊತೆಯಲ್ಲೇ ಟೀವಿಯನ್ನೂ ಕೊಂಡೊಯ್ಯಬಹುದೇ ಎನ್ನುವುದಂತೂ ತೀರಾ ಹಾಸ್ಯಾಸ್ಪದವೆನಿಸುವ ಪ್ರಶ್ನೆ.

ಇವೆಲ್ಲ ಸಮಸ್ಯೆಗಳ ಗೊಡವೆಯಿಲ್ಲದೆ ಕೋಣೆಯ ಗೋಡೆ-ಸೀಲಿಂಗುಗಳನ್ನೇ ಪರದೆಯನ್ನಾಗಿಸಿಕೊಂಡು ನಮಗೆ ಬೇಕಾದ್ದನ್ನು ವೀಕ್ಷಿಸಲು ನೆರವಾಗುವುದು ಪ್ರೊಜೆಕ್ಟರುಗಳ ಹೆಗ್ಗಳಿಕೆ.
ಈಗಾಗಲೇ ಇರುವ ಟೀವಿ ಜೊತೆಗೆ ಪ್ರೊಜೆಕ್ಟರೂ ಸೇರಿದರೆ ಒಂದೇ ಕಟ್ಟಡದೊಳಗೆ ಹಲವು ಪರದೆಗಳಲ್ಲಿ ಚಿತ್ರ ಪ್ರದರ್ಶನ ಮಾಡುವ ಮಲ್ಟಿಪ್ಲೆಕ್ಸ್ ನಮ್ಮ ಮನೆಯಲ್ಲೇ ಸೃಷ್ಟಿಯಾಗಿಬಿಡುತ್ತದೆ.

ಶಾಲೆ, ಕಾಲೇಜು, ಕಚೇರಿಗಳಲ್ಲಿ ಪ್ರೊಜೆಕ್ಟರುಗಳು ವ್ಯಾಪಕವಾಗಿ ಬಳಕೆಯಾಗುವುದು ನಮಗೆಲ್ಲ ಗೊತ್ತೇ ಇದೆ. ದೊಡ್ಡ ಗಾತ್ರ, ನಿರ್ವಹಣೆಯ ದುಬಾರಿ ವೆಚ್ಚ, ಬಿಸಿಯಾಗುವ ಬಿಡಿಭಾಗಗಳೇ ಮುಂತಾದ ಸಮಸ್ಯೆಗಳಿಂದ ಅವು ಬಳಲುವುದೂ ನಮ್ಮಲ್ಲಿ ಅನೇಕರಿಗೆ ಗೊತ್ತು. ಈಗ ಮಾರುಕಟ್ಟೆಗೆ ಬರುತ್ತಿರುವ ಹೊಸ ಪ್ರೊಜೆಕ್ಟರುಗಳು ಈ ಸಮಸ್ಯೆಗಳನ್ನು ಬಹುಪಾಲು ಬಗೆಹರಿಸಿಕೊಂಡಿವೆ ಎನ್ನುವುದು ವಿಶೇಷ.


ಹೊಸ ತಲೆಮಾರಿನ ಈ ಪ್ರೊಜೆಕ್ಟರುಗಳಿಗೆ ಕಂಪ್ಯೂಟರ್ ಅಷ್ಟೇ ಅಲ್ಲದೆ ಮೊಬೈಲ್, ಟ್ಯಾಬ್ಲೆಟ್, ಸೆಟ್‌ ಟಾಪ್ ಬಾಕ್ಸ್‌ನಂತಹ ಇನ್ನಿತರ ಸಾಧನಗಳನ್ನೂ ಸುಲಭವಾಗಿ ಸಂಪರ್ಕಿಸಬಹುದು. ಕಡಿಮೆ ಕಾರ್ಯಕ್ಷಮತೆಯ ಬಲ್ಬುಗಳ ಬದಲು ಇವು ದೀರ್ಘಕಾಲ ಬಾಳುವ, ಪ್ರಖರವಾದ ಎಲ್‍ಇಡಿ ದೀಪಗಳನ್ನು ಬಳಸುತ್ತವೆ. ಅನೇಕ ಮಾದರಿಗಳಲ್ಲಿ ಬ್ಯಾಟರಿಯೂ ಇರುವುದರಿಂದ ಸದಾಕಾಲ ವಿದ್ಯುತ್ ಸಂಪರ್ಕ ಇರಲೇಬೇಕೆಂಬ ಅನಿವಾರ್ಯತೆಯೂ ಇಲ್ಲ. ಇಷ್ಟರಮೇಲೆ ಇವುಗಳ ಗಾತ್ರವೂ ಸಾಮಾನ್ಯ ಪ್ರೊಜೆಕ್ಟರುಗಳ ಹೋಲಿಕೆಯಲ್ಲಿ ಅನೇಕ ಪಟ್ಟು ಕಡಿಮೆಯಿರುತ್ತದೆ. ಹೀಗಾಗಿಯೇ ಇವನ್ನು 'ಪೀಕೋ ಪ್ರೊಜೆಕ್ಟರ್'ಗಳೆಂದು ಕರೆಯಲಾಗುತ್ತದೆ (ಪೀಕೋ = ಬಹಳ ಸಣ್ಣದು). ಮನೆ, ಶಾಲೆ, ಕಚೇರಿಗಳಲ್ಲಷ್ಟೇ ಅಲ್ಲದೆ ಹೊರಾಂಗಣದಲ್ಲೂ ಸುಲಭವಾಗಿ ಬಳಸಲು ಸಾಧ್ಯವಾಗುವುದು ಈ ಪ್ರೊಜೆಕ್ಟರುಗಳ ಹೆಚ್ಚುಗಾರಿಕೆ.

ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆಗಳು ಈಗಾಗಲೇ ಹಲವು ಮಾದರಿಯ ಪೀಕೋ ಪ್ರೊಜೆಕ್ಟರುಗಳನ್ನು ಭಾರತೀಯ ಮಾರುಕಟ್ಟೆಗೂ ಪರಿಚಯಿಸಿವೆ. ಏಸುಸ್ ಸಂಸ್ಥೆ ಈಚೆಗೆ ಬಿಡುಗಡೆ ಮಾಡಿರುವ 'ಜ಼ೆನ್‍ಬೀಮ್ ಗೋ ಇ೧ಜ಼ೆಡ್' ಇಂತಹ ಮಾದರಿಗಳಲ್ಲೊಂದು. ಸಣ್ಣಗಾತ್ರ ಹಾಗೂ ಕಡಿಮೆ ತೂಕದ (ಸುಮಾರು ೩೦೦ ಗ್ರಾಮ್) ಈ ಪ್ರೊಜೆಕ್ಟರಿಗೆ ಕಂಪ್ಯೂಟರ್, ಮೊಬೈಲ್ ಹಾಗೂ ಟ್ಯಾಬ್ಲೆಟ್‍ಗಳನ್ನು ಯುಎಸ್‌ಬಿ ಮೂಲಕ ಸುಲಭವಾಗಿ ಸಂಪರ್ಕಿಸಬಹುದು. ೬೦೦೦ ಎಂಎಎಚ್ ಬ್ಯಾಟರಿ ಇರುವುದರಿಂದ ವಿದ್ಯುತ್ ಸಂಪರ್ಕವಿಲ್ಲದಾಗಲೂ ಚಿತ್ರಗಳನ್ನು ನೋಡಬಹುದು, ಅಗತ್ಯಬಿದ್ದರೆ ಮೊಬೈಲನ್ನೂ ಚಾರ್ಜ್ ಮಾಡಿಕೊಳ್ಳಬಹುದು. ಸ್ಪೀಕರ್ ಸೌಲಭ್ಯವೂ ಈ ಪ್ರೊಜೆಕ್ಟರಿನೊಳಗೇ ಅಡಕವಾಗಿರುವುದು ವಿಶೇಷ. ಪರದೆಯಿಂದ ಮೂರು-ಮೂರೂವರೆ ಮೀಟರುಗಳಷ್ಟು ದೂರದಲ್ಲಿಟ್ಟಾಗ ನಮ್ಮ ಚಿತ್ರವನ್ನು ೧೨೦ ಇಂಚಿನಷ್ಟು ದೊಡ್ಡ ಗಾತ್ರದಲ್ಲಿ ನೋಡುವುದು ಸಾಧ್ಯ!

ಯುಎಸ್‍ಬಿ ಸಂಪರ್ಕ ಬಳಸುವ 'ಜ಼ೆನ್‍ಬೀಮ್ ಗೋ'ನಂತಹ ಮಾದರಿಗಳಷ್ಟೇ ಅಲ್ಲದೆ ಎಚ್‍ಡಿಎಂಐ ಸೌಲಭ್ಯವಿರುವ ಪ್ರೊಜೆಕ್ಟರುಗಳೂ ಇವೆ. ಗೂಗಲ್ ಕ್ರೋಮ್‌ಕಾಸ್ಟ್‌ನಂತಹ ಸಾಧನಗಳನ್ನು, ಎಚ್‌ಡಿ ಸೆಟ್‌ಟಾಪ್ ಬಾಕ್ಸ್‌ಗಳನ್ನು ಸಂಪರ್ಕಿಸಲು ಅನುವುಮಾಡಿಕೊಡುವುದು ಇಂತಹ ಪ್ರೊಜೆಕ್ಟರುಗಳ ವೈಶಿಷ್ಟ್ಯ. 'ಮಿರಾಕಾಸ್ಟ್‌'ನಂತಹ ತಂತ್ರಜ್ಞಾನಗಳ ನೆರವಿನಿಂದ ಮೊಬೈಲಿನೊಡನೆ ನಿಸ್ತಂತು ಸಂಪರ್ಕವನ್ನು ಸಾಧ್ಯವಾಗಿಸುವ ಪ್ರೊಜೆಕ್ಟರುಗಳೂ ಇವೆ.


ಇಂತಹ ಪುಟ್ಟ ಪ್ರೊಜೆಕ್ಟರುಗಳನ್ನು ಮೊಬೈಲ್ ಜೊತೆಗೆ ಸರಾಗವಾಗಿ ಬಳಸಬಹುದು ಎಂದಮೇಲೆ ಮೊಬೈಲಿನಲ್ಲೇ ಪ್ರೊಜೆಕ್ಟರನ್ನೂ ಸೇರಿಸಿಬಿಡಬಹುದಲ್ಲ? ಇಂತಹ ಪ್ರಯತ್ನವನ್ನೂ ಹಲವು ಸಂಸ್ಥೆಗಳು ಮಾಡಿವೆ. ಮೋಟರೋಲಾ ಸಂಸ್ಥೆಯ 'ಮೋಟೋ ಜ಼ೀ' ಸರಣಿಯ ಫೋನುಗಳನ್ನು ಇಲ್ಲಿ ಉದಾಹರಿಸಬಹುದು. 'ಇನ್‍ಸ್ಟಾಶೇರ್ ಪ್ರೊಜೆಕ್ಟರ್' ಎಂಬ ಬಾಹ್ಯ ಘಟಕವನ್ನು (ಮಾಡ್) ಈ ಫೋನುಗಳ ಹಿಂಬದಿಗೆ (ಕವಚ ತೆರೆದು) ಜೋಡಿಸಿದರೆ ಆಯಿತು, ನಮ್ಮ ಮೊಬೈಲ್ ಫೋನೇ ಪ್ರೊಜೆಕ್ಟರ್ ಆಗಿ ಬದಲಾಗಿಬಿಡುತ್ತದೆ.

ಇಷ್ಟೆಲ್ಲ ಬೆಳವಣಿಗೆಗಳಾಗಿದ್ದರೂ ಪ್ರೊಜೆಕ್ಟರುಗಳು ಟೀವಿಗೆ ಪರ್ಯಾಯವಾಗಿ ಬೆಳೆಯುವ ಸನ್ನಿವೇಶ ಇನ್ನೂ ಬಂದಿಲ್ಲ ಎಂದೇ ಹೇಳಬೇಕು. ಟೀವಿ ಮನೆಯಲ್ಲೊಂದುಕಡೆ ಸ್ಥಾವರರೂಪಿಯಾಗಿ ಇದ್ದುಬಿಟ್ಟರೆ ಸಾಕು ಎನ್ನುವುದರಿಂದ ಪ್ರಾರಂಭಿಸಿ ಪ್ರೊಜೆಕ್ಟರನ್ನು ಜೋಡಿಸುವುದು - ಬೇರೆಬೇರೆ ಸಾಧನಗಳನ್ನು ಅದಕ್ಕೆ ಸಂಪರ್ಕಿಸುವುದೆಲ್ಲ ಕಿರಿಕಿರಿಯ ಸಂಗತಿ ಎನ್ನುವವರೆಗೆ ಇದಕ್ಕೆ  ಹಲವು ಕಾರಣಗಳಿವೆ. ಟೀವಿಗಳ ಹೋಲಿಕೆಯಲ್ಲಿ ಪ್ರೊಜೆಕ್ಟರುಗಳ ಬೆಲೆ ದುಬಾರಿಯಾಗಿರುವುದು ಹಾಗೂ ಬಹುತೇಕ ಪ್ರೊಜೆಕ್ಟರುಗಳಿಂದ ಮೂಡಿಬರುವ ಚಿತ್ರದ ಗುಣಮಟ್ಟ ಟೀವಿ ಹೋಲಿಕೆಯಲ್ಲಿ ಕಡಿಮೆಯೇ ಎನ್ನಿಸುವುದು ಕೂಡ ಸತ್ಯ ಸಂಗತಿಗಳೇ.

ಹೀಗಿದ್ದರೂ ನಮ್ಮ ದೇಶದಲ್ಲಿ ಪ್ರೊಜೆಕ್ಟರುಗಳ ಜನಪ್ರಿಯತೆ ನಿಧಾನಕ್ಕೆ ಹೆಚ್ಚುತ್ತಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಕಚೇರಿ ಹಾಗೂ ಶಾಲಾಕಾಲೇಜುಗಳಷ್ಟೇ ಅಲ್ಲದೆ ಮನರಂಜನೆಗಾಗಿ ಪ್ರೊಜೆಕ್ಟರ್ ಬಳಸುವವರೂ ಇದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಪ್ರೊಜೆಕ್ಟರುಗಳಲ್ಲಿ ಬಳಕೆಯಾಗುವ ತಂತ್ರಜ್ಞಾನದ ಬೆಳವಣಿಗೆಯೊಡನೆ ಅವುಗಳ ಬಳಕೆ ಇನ್ನಷ್ಟು ವ್ಯಾಪಕವಾಗಲಿದೆ ಎನ್ನುವುದು ಅವರ ಅಭಿಪ್ರಾಯ. ಆಗಿಂದಾಗ್ಗೆ ಹೊಸ ಟ್ರೆಂಡ್‌ಗಳನ್ನು ಸೃಷ್ಟಿಸುವ ತಂತ್ರಜ್ಞಾನ ಕ್ಷೇತ್ರದ ಇತಿಹಾಸ ನೋಡಿದರೆ ಅದು ಅಸಾಧ್ಯವೆಂದೇನೂ ಅನಿಸುವುದಿಲ್ಲ!

ಜುಲೈ ೨೩, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge