ಟಿ. ಜಿ. ಶ್ರೀನಿಧಿ
ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಹೆಚ್ಚು ಬದಲಾವಣೆಗಳನ್ನು ಕಂಡಿರುವ, ಕಾಣುತ್ತಿರುವ ಸಾಧನಗಳ ಪೈಕಿ ದೂರವಾಣಿಗೆ ಪ್ರಮುಖ ಸ್ಥಾನವಿದೆ. ರಸ್ತೆಗೊಂದು, ಊರಿಗೊಂದು ಇರುತ್ತಿದ್ದ ಫೋನುಗಳು ಪ್ರತಿ ಮನೆಗೆ, ಪ್ರತಿ ಕೈಗೂ ತಲುಪಿರುವುದು ಎಷ್ಟು ದೊಡ್ಡ ಸಾಧನೆಯೋ ದೂರವಾಣಿಯ ರೂಪರೇಷೆಯಲ್ಲಿ ಆಗಿರುವ ಬದಲಾವಣೆಯೂ ಅಷ್ಟೇ ಮಹತ್ವದ ಸಾಧನೆ.
ನಾವೆಲ್ಲ ಚಿಕ್ಕವರಾಗಿದ್ದಾಗ ನಮ್ಮ ದೊಡ್ಡಪ್ಪನ ಮನೆಯಲ್ಲೊಂದು ದೂರವಾಣಿ ಇತ್ತು. ಫೋನನ್ನು ನೋಡುವುದೇ ಅಪರೂಪವಾಗಿದ್ದ ಆ ಕಾಲದಲ್ಲಿ ಕೇಜಿ ತೂಕದ ಆ ಫೋನಿನ ರಿಸೀವರ್ ಎತ್ತಿ ಮಾತನಾಡುವುದೇ ಒಂದು ವಿಶೇಷ ಅನುಭವ. ಯಾವುದಾದರೂ ಕರೆಬಂದಾಗ ಅದನ್ನು ರಿಸೀವ್ ಮಾಡುವವರು ಯಾರು ಎನ್ನುವುದನ್ನು ತೀರ್ಮಾನಿಸಲು ಮಕ್ಕಳ ನಡುವೆ ಜಗಳ ನಡೆಯುತ್ತಿದ್ದದ್ದೂ ಉಂಟು.
ಈಗ, ನೂರು ಗ್ರಾಮ್ ಆಸುಪಾಸು ತೂಗುವ - ಕೆಲವೇ ಮಿಲೀಮೀಟರ್ ದಪ್ಪದ ಮೊಬೈಲುಗಳನ್ನು ನೋಡಿದಾಗ ದೂರವಾಣಿಯ ರೂಪಾಂತರ ಪರ್ವ ಸಂಪೂರ್ಣವಾಗಿದೆ ಎನ್ನಿಸದಿರದು. ಬರಿಯ ಮಾತನಾಡಲಷ್ಟೇ ಬಳಸಬಹುದಾಗಿದ್ದ ಅಷ್ಟುದೊಡ್ಡ ಯಂತ್ರದಿಂದ ಅಂಗೈ ಮೇಲಿನ ಕಂಪ್ಯೂಟರಿನಂತಹ ಇಂದಿನ ಗ್ಯಾಜೆಟ್‌ವರೆಗೆ ದೂರವಾಣಿ ಸಾಗಿಬಂದಿರುವ ಹಾದಿಯನ್ನು ನೋಡಿದಾಗ ಇನ್ನೇನು ತಾನೇ ಬದಲಾಗಲು ಸಾಧ್ಯ ಎಂಬ ಪ್ರಶ್ನೆ ಮೂಡಿದರೆ ಅದರಲ್ಲಿ ತಪ್ಪೂ ಇಲ್ಲ ಬಿಡಿ. ಆದರೆ ದೂರವಾಣಿಯ ಸ್ವರೂಪ ಬದಲಾಗುವ ಈ ಪ್ರಕ್ರಿಯೆ ಇನ್ನೂ ಮುಗಿದಿಲ್ಲ!
ಮೊಬೈಲ್ ಫೋನಿನಲ್ಲಿ ಆಗುತ್ತಿರುವ ಬದಲಾವಣೆಗಳ ಪರಿಚಯ ನಮಗೆ ಚೆನ್ನಾಗಿಯೇ ಇದೆ. ಉತ್ತಮ ಪ್ರಾಸೆಸರ್, ಹೆಚ್ಚು ಮೆಮೊರಿ, ಒಳ್ಳೆಯ ಕ್ಯಾಮೆರಾ - ಹೀಗೆ ಮೊಬೈಲಿನ ಭಾಗಗಳನ್ನು, ಅವುಗಳ ಕಾರ್ಯಕ್ಷಮತೆಯನ್ನು ಉತ್ತಮಪಡಿಸುವ ಕೆಲಸ ಆಗುತ್ತಲೇ ಇರುವುದು ನಮಗೆ ಗೊತ್ತು. ಆದರೆ ಇಲ್ಲಿ ನಡೆದಿರುವ ಕೆಲ ಬದಲಾವಣೆಗಳು - ಸಣ್ಣ ಮಟ್ಟದಲ್ಲೇ ಆದರೂ - ಮೊಬೈಲಿನ ಸ್ವರೂಪದ ಬದಲಾವಣೆಗೂ ಕಾರಣವಾಗುತ್ತಿವೆ. ಈಚೆಗೆ ಸುದ್ದಿಯಲ್ಲಿರುವ ಅಂತಹ ಎರಡು ಬದಲಾವಣೆಗಳೇ ಇಂದಿನ ಅಂಕಣದ ವಿಷಯ.
* * *
ದಿವಾನಖಾನೆಯ ಟೀವಿಯಿಂದ ಪ್ರಾರಂಭಿಸಿ ಅಂಗೈಯ ಸ್ಮಾರ್ಟ್‌ಫೋನ್‌ವರೆಗೆ ನೀವು ಯಾವುದೇ ಪ್ರದರ್ಶಕವನ್ನು (ಡಿಸ್ಪ್ಲೇ) ಗಮನಿಸಿದರೂ ಅದರ ಪರದೆಯ ಸುತ್ತ ಒಂದು ಚೌಕಟ್ಟು ಇರುವುದನ್ನು ನೋಡಬಹುದು. ಈ ಚೌಕಟ್ಟಿಗೆ ಬೆಜ಼ೆಲ್ (bezel) ಎಂದು ಹೆಸರು. ವಾಚಿನ ಸುತ್ತಲೂ ಇರುವ ಅಂಚಿನಂತೆಯೇ ಇದೂ; ಇದರ ಹೆಸರೂ ಅದರದ್ದೇ.
ಪ್ರದರ್ಶಕದ ಪರದೆಗೆ ಆಧಾರವಾಗಿರುವುದು, ಇಡೀ ಸಾಧನದ ವಿನ್ಯಾಸಕ್ಕೆ ಚೆಂದದ ರೂಪ ಕೊಡುವುದು, ಆಕಸ್ಮಿಕವಾಗಿ ಬೇರಾವುದೋ ವಸ್ತು ತಗುಲಿ ಪರದೆಯ ಅಂಚುಗಳು ಹಾಳಾಗದಂತೆ ನೋಡಿಕೊಳ್ಳುವುದು - ಹೀಗೆ ಬೆಜ಼ೆಲ್ ಬಳಕೆಯ ಹಿಂದೆ ಅನೇಕ ಉದ್ದೇಶಗಳಿರುವುದು ಸಾಧ್ಯ. ಅಷ್ಟೇ ಏಕೆ, ಸ್ಮಾರ್ಟ್‌ಫೋನು - ಟ್ಯಾಬ್ಲೆಟ್ಟುಗಳನ್ನು ಕೈಲಿ ಹಿಡಿದಾಗ ನಮ್ಮ ಬೆರಳುಗಳು ಟಚ್ ಸ್ಕ್ರೀನನ್ನು ಅನಪೇಕ್ಷಿತವಾಗಿ ಸ್ಪರ್ಶಿಸುವುದನ್ನೂ ಬೆಜ಼ೆಲ್ ತಡೆಯುತ್ತದೆ.
ಮೊಬೈಲ್ ಪರದೆಯ ಅಕ್ಕಪಕ್ಕದ ಅಂಚುಗಳೇನೋ ಈಗಾಗಲೇ ಸಾಕಷ್ಟು ತೆಳ್ಳಗಾಗಿವೆ, ನಿಜ. ಆದರೆ ಪರದೆಯ ಮೇಲೆ-ಕೆಳಗೆ ಮಿಲೀಮೀಟರ್‍ಗಟ್ಟಲೆ ಇರುವ ಕಪ್ಪನೆಯ ಅಂಚು ನೋಡಲು ಒಂದಿಷ್ಟೂ ಚೆನ್ನಾಗಿರುವುದಿಲ್ಲ ಎನ್ನುವುದು ಫ್ಯಾಶನ್ ಪರಿಣತರ ಅಭಿಪ್ರಾಯ.
ಹೀಗಾಗಿಯೇ ಹೊಸ ಮೊಬೈಲ್ ಫೋನುಗಳಲ್ಲಿ ಆದಷ್ಟು ಕಡಿಮೆ ಬೆಜ಼ೆಲ್ ಇರುವಂತೆ ನೋಡಿಕೊಳ್ಳುವ ಪ್ರಯತ್ನಗಳು ನಡೆದಿವೆ. ಇಲ್ಲವೇ ಇಲ್ಲವೆನ್ನುವಷ್ಟು ಸಣ್ಣ ಅಂಚಿನ ಕೆಲ ಫೋನುಗಳು ಮಾರುಕಟ್ಟೆಗೆ ಬಂದಿರುವುದು ಇಂತಹ ಪ್ರಯತ್ನಗಳ ಫಲವಾಗಿಯೇ. ಇಂತಹ ಫೋನುಗಳನ್ನು 'ಬೆಜ಼ೆಲ್-ಲೆಸ್' ಎಂದು ಗುರುತಿಸಲಾಗುತ್ತಿದೆ.
ಹೆಸರು 'ಬೆಜ಼ೆಲ್-ಲೆಸ್' ಆದರೂ ಅವುಗಳಲ್ಲಿ ಇನ್ನೂ ಸ್ವಲ್ಪಪ್ರಮಾಣದ ಬೆಜ಼ೆಲ್ ಇರುವುದನ್ನು ನಾವು ನೋಡಬಹುದು. ಫೋನ್ ಪರದೆಯ ಮೇಲೆ ಹಾಗೂ ಕೆಳಭಾಗದಲ್ಲಿ ಹಲವು ಯಂತ್ರಾಂಶ ಭಾಗಗಳಿರುವುದು (ಬಟನ್, ಕ್ಯಾಮೆರಾ ಇತ್ಯಾದಿ) ಇದಕ್ಕೆ ಮುಖ್ಯ ಕಾರಣ. ಬೆಜ಼ೆಲ್ ಕಡಿಮೆಮಾಡಬೇಕೆಂದರೆ ಈ ಭಾಗಗಳಷ್ಟೂ ಪರದೆಯ ಹಿಂದೆಯೇ ಅಡಕವಾಗಿರುವಂತೆ ನೋಡಿಕೊಳ್ಳಬೇಕಾಗುವುದರಿಂದ ಇದು ಸಾಕಷ್ಟು ಸವಾಲಿನ ಕೆಲಸವೇ. ಅಲ್ಲದೆ ಫೋನ್ ಪೂರ್ತಿ ಟಚ್‍ಸ್ಕ್ರೀನ್ ಪರದೆಯೇ ಇದ್ದುಬಿಟ್ಟರೆ ಅದನ್ನು ಸುಮ್ಮನೆ ಕೈಲಿ ಹಿಡಿಯುವುದೂ ಕಷ್ಟವೇ ಆಗಿಬಿಡುತ್ತದಲ್ಲ!
ಇಷ್ಟೆಲ್ಲ ಸವಾಲಿನ ಕೆಲಸದಲ್ಲೂ ಫೋನ್ ನಿರ್ಮಾತೃಗಳು ಪ್ರಗತಿ ಸಾಧಿಸಿರುವುದು ನಿಜಕ್ಕೂ ಮೆಚ್ಚುವಂತಹ ಸಂಗತಿ. ಬೆಜ಼ೆಲ್ ನಿವಾರಿಸುವ ಅವರ ಪ್ರಯತ್ನಗಳು ಇನ್ನೂ ಮುಂದುವರೆಯುತ್ತವಂತೆ. ಆ ಪ್ರಯತ್ನಗಳ ಫಲವಾಗಿ ಮುಂದೊಂದು ದಿನ ಅಂಚುಗಳೇ ಇಲ್ಲದ ಫೋನು ಬಂದರೂ ಬರಬಹುದೇನೋ, ನೋಡೋಣ.
* * *
ಮೊಬೈಲ್ ಫೋನ್ ಆಗಲಿ ಟೀವಿ - ಮಾನಿಟರ್ ಇತ್ಯಾದಿಗಳ ಪರದೆಯೇ ಆಗಲಿ ಅವುಗಳ ಉದ್ದ-ಅಗಲಗಳು ನಿರ್ದಿಷ್ಟ ಅನುಪಾತದಲ್ಲಿರುತ್ತವೆ. ಈ ಅನುಪಾತವನ್ನು 'ಆಸ್ಪೆಕ್ಟ್ ರೇಶಿಯೋ' ಎಂದು ಕರೆಯುತ್ತಾರೆ. ಉದಾಹರಣೆಗೆ ಯಾವುದೋ ಪರದೆಯ ಅಗಲ ಅದರ ಎತ್ತರದ ಒಂದೂವರೆಪಟ್ಟು ದೊಡ್ಡದಿದೆ ಎನ್ನುವುದಾದರೆ ಅದರ ಆಸ್ಪೆಕ್ಟ್ ರೇಶಿಯೋ ೩:೨ ಆಗಿರುತ್ತದೆ.
ಹಿಂದಿನ ಕಾಲದ ಟೀವಿಗಳ ಆಸ್ಪೆಕ್ಟ್ ರೇಶಿಯೋ ೪:೩ ಇರುತ್ತಿತ್ತು; ಎಲ್‍ಇಡಿ ಟೀವಿಗಳಲ್ಲಿ ಇದು ೧೬:೯ ಇರುವುದು ಸಾಮಾನ್ಯ. ಇಂದಿನ ಬಹುತೇಕ ಸ್ಮಾರ್ಟ್‍ಫೋನುಗಳ ಪರದೆಯ ಗಾತ್ರವೂ ಇದೇ ಅನುಪಾತದಲ್ಲಿರುತ್ತದೆ. ಪರದೆಯ ರೆಸಲ್ಯೂಶನ್ ೧೯೨೦*೧೦೮೦ ಎಂದೆಲ್ಲ ಬರೆದಿರುತ್ತಾರಲ್ಲ, ಆ ಅಂಕಿಗಳ ಅನುಪಾತವೂ ಇಷ್ಟೇ ಇರುತ್ತದೆ.
ಬೆಜ಼ೆಲ್ ಕಡಿಮೆ ಮಾಡಿದ್ದರ ಪರಿಣಾಮವಾಗಿ ಮೊಬೈಲ್ ಫೋನಿನ ಪರದೆಯನ್ನು ಇನ್ನಷ್ಟು ವಿಸ್ತರಿಸುವ ಅವಕಾಶ ದೊರೆತಿದೆಯಲ್ಲ, ಅದರ ಅನುಕೂಲ ಪಡೆದುಕೊಳ್ಳಲು ಕೆಲ ಹೊಸ ಫೋನುಗಳು ೧೮:೯ ಎಂಬ ಹೊಸ ಆಸ್ಪೆಕ್ಟ್ ರೇಶಿಯೋ ಅನ್ನು ಪರಿಚಯಿಸಿವೆ. ಅಂದರೆ ಈ ಪರದೆಗಳು ತಮ್ಮ ಎತ್ತರದ ಎರಡುಪಟ್ಟು ಅಗಲವಾಗಿರುತ್ತವೆ, ಹಾಗಾಗಿ ಅವುಗಳಲ್ಲಿ ಹೆಚ್ಚು ದೊಡ್ಡ ಚಿತ್ರವನ್ನು ಪ್ರದರ್ಶಿಸುವ ಸಾಮರ್ಥ್ಯ ಇರುತ್ತದೆ.
ಈ ಹಿಂದೆ ೪:೩ ಚಿತ್ರಗಳನ್ನು ನೋಡುವ ಅಭ್ಯಾಸವನ್ನು ಇದ್ದಕ್ಕಿದ್ದಂತೆ ಬದಲಿಸಿದ ೧೬:೯ ವಿನ್ಯಾಸದ ಹೋಲಿಕೆಯಲ್ಲಿ ಈ ಹೊಸ ಬದಲಾವಣೆ ಅಷ್ಟೇನೂ ದೊಡ್ಡದಲ್ಲದಿರಬಹುದು. ಆದರೂ ಈ ಬದಲಾವಣೆಯ ಪರಿಣಾಮ ಏನಿರಬಹುದು ಎನ್ನುವುದನ್ನು ಕುತೂಹಲದಿಂದ ಕಾದುನೋಡಲಾಗುತ್ತಿದೆ.
ಅಕ್ಟೋಬರ್ ೧೫, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ