ಗುರುವಾರ, ಡಿಸೆಂಬರ್ 21, 2017

ಜಿಯೋಫೋನ್ ಬಂದಿದೆ, ಅದರಲ್ಲಿ ಏನಿದೆ?

ಅಭಿಷೇಕ್ ಜಿ. ಎಸ್.

ರಿಲಯನ್ಸ್‌ ಸಂಸ್ಥೆಯ ಜಿಯೋ ಉಚಿತ ಅಂತರ್ಜಾಲ ಸೇವೆಗಳನ್ನು ನೀಡುವುದರ ಮೂಲಕ ಬಹು ಬೇಗನೆ ಬಳಕೆದಾರರನ್ನು ತಲುಪಿದ್ದು ನಮಗೆಲ್ಲ ಗೊತ್ತೇ ಇದೆ. ಭಾರತದಾದ್ಯಂತ ಕೋಟ್ಯಂತರ ಬಳಕೆದಾರರು ಇದೀಗ ಜಿಯೋ ಸೇವೆಗಳನ್ನು ಬಳಸುತ್ತಿದ್ದಾರೆ.

ಇತರ ಸಂಸ್ಥೆಗಳಂತೆ ಮೊಬೈಲ್ ಸೇವೆಗಳಿಗೆ ಮಾತ್ರ ಸೀಮಿತವಾಗಿ ಉಳಿಯಲು ಬಯಸದ ಜಿಯೋ ಈಚೆಗೆ 'ಇಂಡಿಯಾದ ಸ್ಮಾರ್ಟ್‌ಫೋನ್' ಎಂಬ ಘೋಷಣೆಯೊಂದಿಗೆ ತನ್ನ ಮೊದಲ ಮೊಬೈಲ್ ಫೋನ್ ಆದ 'ಜಿಯೋಫೋನ್' ಅನ್ನು ಮಾರುಕಟ್ಟೆಗೆ ತಂದಿದೆ.

'ಇಂಡಿಯಾದ ಸ್ಮಾರ್ಟ್‌ಫೋನ್' ಎಂಬ ಘೋಷವಾಕ್ಯ ನೋಡಿ ಇದೊಂದು ಸ್ಮಾರ್ಟ್‌ಫೋನ್ ಎಂದು ಭಾವಿಸಿದರೆ ಅದು ತಪ್ಪಾಗುತ್ತದೆ; ಏಕೆಂದರೆ ಜಿಯೋಫೋನ್ ಒಂದು ಫೀಚರ್ ಫೋನ್ (ಕೀಪ್ಯಾಡ್ ಹೊಂದಿರುವ ಫೋನ್). ಈ ವರ್ಷವಷ್ಟೇ ಮಾರುಕಟ್ಟೆಗೆ ಬಂದ ಜಿಯೋ ಫೋನ್ ಮೊದಲ ಹಂತದ ಬುಕ್ಕಿಂಗ್‌ನಲ್ಲಿ ೬೦ ಲಕ್ಷ ಗ್ರಾಹಕರನ್ನು ತಲುಪಿದೆ.

ಮೇಲೆ ಹೇಳಿದಂತೆ ಜಿಯೋಫೋನ್ ಒಂದು ಫೀಚರ್ ಫೋನ್ ಆಗಿದ್ದರೂ ಸ್ಮಾರ್ಟ್ ಆಗಿದೆ! ಈ ಮೊಬೈಲು ೧ ಗಿಗಾಹರ್ಟ್ಸ್‌ನ ಡ್ಯೂಯಲ್ ಕೋರ್ ಪ್ರೊಸೆಸರ್, ೪ ಜಿ.ಬಿ ಆಂತರಿಕ ಮೆಮೊರಿ, ೫೧೨ ಎಂ.ಬಿ ರಾಮ್ ಹಾಗೂ ೪ಜಿ ಸಂಪರ್ಕವನ್ನು ಹೊಂದಿದ್ದು, ಹೆಚ್ಚುವರಿ ಶೇಖರಣಾ ಸಾಮರ್ಥ್ಯಕ್ಕಾಗಿ ಮೆಮೊರಿ ಕಾರ್ಡ್ ಬಳಸುವ ಅವಕಾಶವನ್ನೂ ನೀಡುತ್ತದೆ.

ಇದರ ಜೊತೆಗೆ ಜಿಯೋಫೋನಿನಲ್ಲಿ ೨ ಮೆಗಾಪಿಕ್ಸೆಲಿನ ಪ್ರಾಥಮಿಕ ಕ್ಯಾಮೆರಾ, ೦.೩ ಎಂಪಿಯ ಸೆಲ್ಫಿ ಕ್ಯಾಮೆರಾ, ಸಾಕಷ್ಟು ಸಮಯ ಬಾಳುವ ೨೦೦೦ ಎಂಎಹೆಚ್ ಬ್ಯಾಟರಿ, ೨.೪೦ ಇಂಚಿನ ೨೪೦×೩೨೦ ರೆಸಲ್ಯೂಷನ್ ಪರದೆ ಹಾಗೂ ವೈಫೈ - ಬ್ಲೂಟೂತ್ ಸಂಪರ್ಕಗಳ ಸೌಲಭ್ಯವಿದೆ. ಎಫ್‌ಎಂ ರೇಡಿಯೋ, ಟಾರ್ಚ್‌ ಬಳಸುವುದು ಸರಾಗ. ಜಿಯೋ ಟಿವಿ, ಜಿಯೋ ಸಿನೆಮಾ, ಜಿಯೋ ಮ್ಯೂಸಿಕ್, ಜಿಯೋ ನ್ಯೂಸ್, ಜಿಯೋ ವಿಡಿಯೋ ಕಾಲಿಂಗ್, ಜಿಯೋ ಗೇಮ್ಸ್, ಜಿಯೋ ಶೇರ್, ಜಿಯೋ ಸ್ಟೋರ್, ಮೈಜಿಯೋ ಹಾಗೂ ಬ್ರೌಸರ್ ಆಪ್‌ಗಳೂ ಇವೆ. ಕನ್ನಡವೂ ಸೇರಿದಂತೆ ಸ್ಥಳೀಯ ಭಾಷೆಗಳನ್ನು ಬಳಸಬಹುದು. ಪ್ರತಿತಿಂಗಳೂ ರೂ. ೧೫೩ ರೀಚಾರ್ಜ್ ಮಾಡುವ ಮೂಲಕ ಅಪರಿಮಿತ ಕರೆಗಳು ಹಾಗೂ ಅಂತರಜಾಲ ಸಂಪರ್ಕವನ್ನು (ಅತಿವೇಗದ ಸಂಪರ್ಕ ದಿನಕ್ಕೆ ೫೦೦ಎಂಬಿವರೆಗೆ ಮಾತ್ರ) ಬಳಸುವುದು ಸಾಧ್ಯ.


ಇಷ್ಟೆಲ್ಲ ಇರುವ ಫೋನನ್ನು ಹಾಟ್‌ಸ್ಪಾಟಿನಂತೆ ಬಳಸಿ ಇತರ ಸಾಧನಗಳನ್ನೂ ಸಂಪರ್ಕಿಸಿಕೊಳ್ಳೋಣ ಎಂದರೆ ಅದು ಮಾತ್ರ ಸಾಧ್ಯವಿಲ್ಲ. ಅದೊಂದು ಸೌಲಭ್ಯ ಇದ್ದುಬಿಟ್ಟಿದ್ದರೆ ಈ ಫೋನು ಇನ್ನೂ ಚೆನ್ನಾಗಿರುತ್ತಿತ್ತು ಅನಿಸಿದರೂ ಸದ್ಯ ಇರುವ ಸೌಲಭ್ಯಗಳೂ ಖುಷಿಕೊಡುತ್ತವೆ. ಸ್ಮಾರ್ಟ್‌ಫೋನಿನ ಸ್ಪರ್ಶಸಂವೇದಿ ಪರದೆ ಅಭ್ಯಾಸವಾದವರಿಗೆ ಇದನ್ನು ಉಪಯೋಗಿಸುವಾಗ ಕೈ ಬೆರಳುಗಳು ಪದೇ ಪದೇ ಪರದೆಯತ್ತ ಹೋಗುತ್ತವೆ ಎನ್ನುವುದೂ ನಿಜವೇ. ಇದನ್ನು ಟೀವಿಗೆ ಸಂಪರ್ಕಿಸಿ ವೀಡಿಯೋ - ಸಿನಿಮಾ ಇತ್ಯಾದಿಗಳನ್ನು ದೊಡ್ಡ ಪರದೆಯಲ್ಲಿ ನೋಡುವ ಸೌಲಭ್ಯವೂ ಬರಲಿದೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆಯಾಗಿ ಸ್ಮಾರ್ಟ್ ರಚನೆ ಹಾಗೂ ಕುತೂಹಲಕರ ಸೌಲಭ್ಯಗಳುಳ್ಳ ಈ ಫೋನಿನ ಬೆಲೆ ರೂ. ೧೫೦೦. ಕೊಟ್ಟ ಹಣ ವ್ಯರ್ಥವೆಂದು ಸ್ವಲ್ಪವೂ ಅನಿಸುವುದಿಲ್ಲ. ಈ ಫೋನನ್ನು ಬುಕ್ ಮಾಡುವ ಹಾಗೂ ಕೊಳ್ಳುವ ಕುರಿತ ಹೆಚ್ಚಿನ ವಿವರಗಳನ್ನು ಜಿಯೋ ಜಾಲತಾಣದಿಂದ ಪಡೆದುಕೊಳ್ಳಬಹುದು.

3 ಕಾಮೆಂಟ್‌ಗಳು:

ಸೋಮು ಕುದರಿಹಾಳ ಹೇಳಿದರು...

ಧನ್ಯವಾದ ಸರ್. ನಾನು ಖರೀದಿಸುವ ಮನಸ್ಸು ಮಾಡಿದ್ದೆ.. ಹಾಟ್ ಸ್ಪಾಟ್ ಬಳಸಿಕೊಳ್ಳಬಹುದೆಂದು.. ಸೌಲಭ್ಯ ಇಲ್ಲದಿರುವ ಮಾಹಿತಿಗೆ ಧನ್ಯವಾದಗಳು.

DUNDESHAAAAAAA ಹೇಳಿದರು...

Already using not a bad deal for Rs 1500

B.H. Sudhindra ಹೇಳಿದರು...

No apps can be downloaded what is the use?

badge