ಬೆಳಿಗ್ಗೆ ಟ್ಯಾಕ್ಸಿ ಹಿಡಿದು ಆಫೀಸಿಗೆ ಹೋಗುವುದರಿಂದ ಪ್ರಾರಂಭಿಸಿ ಸಂಜೆ ಮನೆಯಲ್ಲಿ ಕುಳಿತು ಧಾರಾವಾಹಿ ನೋಡುವವರೆಗೆ ದಿನನಿತ್ಯದ ಅದೆಷ್ಟೋ ಕೆಲಸಗಳು ಕೃತಕ ಉಪಗ್ರಹಗಳನ್ನು ಅವಲಂಬಿಸಿರುವ ವಿಷಯ ನಮಗೆಲ್ಲ ಗೊತ್ತೇ ಇದೆ. ಬಾಹ್ಯಾಕಾಶ ವಿಜ್ಞಾನದ ಹೊಸ ಸಾಧನೆಗಳ ಬಗೆಗೂ ನಾವು ಆಗಿಂದಾಗ್ಗೆ ಕೇಳುತ್ತಿರುತ್ತೇವೆ. ಹೊಸ ಉಪಗ್ರಹಗಳು ಗಗನಕ್ಕೆ ಚಿಮ್ಮಿದಂತೆಲ್ಲ ಹೊಸ ಸಾಧ್ಯತೆಗಳು ನಮ್ಮೆದುರು ತೆರೆದುಕೊಳ್ಳುತ್ತಲೇ ಹೋಗುತ್ತವೆ ಎನ್ನುವುದು ನಮ್ಮಲ್ಲಿ ಅನೇಕರ ಅಭಿಪ್ರಾಯ.
ಇದನ್ನೂ ಓದಿ: ಕೃತಕ ಉಪಗ್ರಹಗಳ ಕುರಿತು ನಿಮಗೆಷ್ಟು ಗೊತ್ತು?ಈ ಅಭಿಪ್ರಾಯ ತಕ್ಕಮಟ್ಟಿಗೆ ಸರಿಯೇ ಇರಬಹುದು. ಆದರೆ ಹೊಸ ಉಪಗ್ರಹಗಳು ಗಗನಕ್ಕೆ ಚಿಮ್ಮುವುದಕ್ಕೂ ಹೊಸ ಸಾಧ್ಯತೆಗಳು ನಮ್ಮೆದುರು ತೆರೆದುಕೊಳ್ಳುವುದಕ್ಕೂ ದೊಡ್ಡದೊಂದು ಅಡಚಣೆಯಿರುವ ವಿಷಯ ನಮಗೆ ಅಷ್ಟಾಗಿ ತಿಳಿದಿಲ್ಲ.
ಬಾಹ್ಯಾಕಾಶದಲ್ಲಿರುವ ಕಸದ ರಾಶಿಯೇ ಈ ಅಡಚಣೆ. ಈ ಹಿಂದೆ ಉಡಾವಣೆಯಾದ ಉಪಗ್ರಹಗಳು, ಅವನ್ನು ಕೊಂಡೊಯ್ದ ರಾಕೆಟ್ಟುಗಳೇ ಇಂದು ಕಸವಾಗಿ ಮುಂದಿನ ಉಪಗ್ರಹಗಳಿಗೆ, ಗಗನನೌಕೆಗಳಿಗೆ ತೊಂದರೆ ಕೊಡುವ ಮಟ್ಟ ಮುಟ್ಟಿರುವುದು ವಿಪರ್ಯಾಸ.
ಅಂದಹಾಗೆ ಬಾಹ್ಯಾಕಾಶದ ಕಸದ ರಾಶಿಯನ್ನು ಸೃಷ್ಟಿಸಿರುವುದು ನಿಷ್ಕ್ರಿಯ ಉಪಗ್ರಹಗಳು, ರಾಕೆಟ್ ಚೂರುಗಳು ಮಾತ್ರವೇ ಅಲ್ಲ. ಸಣ್ಣಪುಟ್ಟ ಉಪಕರಣಗಳು, ದೊಡ್ಡ ಉಪಗ್ರಹಗಳಿಂದ ಬೇರ್ಪಟ್ಟ ಭಾಗಗಳು, ನಟ್ಟು-ಬೋಲ್ಟುಗಳಿಂದ ಪ್ರಾರಂಭಿಸಿ ಯಾವುದೋ ಸಾಧನದ ಮೇಲಿದ್ದ ಪೇಂಟಿನ ಹಲ್ಲೆ ಕೂಡ ಈ ಕಸದ ರಾಶಿಯಲ್ಲಿರುವುದು ಸಾಧ್ಯ. ಇಂತಹ ಸುಮಾರು ಐದು ಲಕ್ಷ ಸಣ್ಣ-ದೊಡ್ಡ ತುಣುಕುಗಳು ಸದ್ಯ ಬಾಹ್ಯಾಕಾಶದಲ್ಲಿರಬಹುದು ಎನ್ನುವುದು ವಿಜ್ಞಾನಿಗಳ ಅಂದಾಜು.
ಈ ಕಸದ ಚೂರುಗಳು ಭೂಮಿಯ ಗುರುತ್ವಾಕರ್ಷಣೆಗೆ ಸಿಲುಕಿ ಅಪಾರ ವೇಗದಲ್ಲಿ ಭೂಮಿಯನ್ನು ಸುತ್ತುತ್ತಿರುತ್ತದೆ. ಇಷ್ಟು ಭಾರೀ ವೇಗದಲ್ಲಿ ಭೂಮಿಯ ಸುತ್ತ ಸುತ್ತುವ ಕಸದ ತುಣುಕುಗಳು ತಮ್ಮತಮ್ಮಲ್ಲೇ ಡಿಕ್ಕಿ ಹೊಡೆದುಕೊಂಡು ಇನ್ನಷ್ಟು ಚೂರುಗಳಾಗಿ ಭೂಮಿಯ ಸುತ್ತ ಕಸದ ಪದರವನ್ನೇ ನಿರ್ಮಿಸಿಬಿಡಬಲ್ಲವು. ಇಂತಹ ಚೂರುಗಳು ಯಾವುದಾದರೂ ಉಪಗ್ರಹಕ್ಕೋ ಗಗನನೌಕೆಗೋ ಬಡಿದರೆ ಆಗಬಹುದಾದ ಅಪಾಯ ಬಹಳ ದೊಡ್ಡ ಪ್ರಮಾಣದ್ದು.
ಮನುಷ್ಯನ ಹಸ್ತಕ್ಷೇಪ ಎಲ್ಲೆಲ್ಲಿ ಹೆಚ್ಚಿದೆಯೋ ಅಲ್ಲೆಲ್ಲ ಮಾಲಿನ್ಯದ ಸಮಸ್ಯೆ ಮಿತಿಮೀರಿ ಬೆಳೆದಿದೆ. ಇಂದಿನ ಮಹಾನಗರಗಳು, ಕೈಗಾರಿಕಾ ಪ್ರದೇಶಗಳಲ್ಲಿ ಮಾತ್ರವೇ ಅಲ್ಲದೆ ದೂರಸಮುದ್ರದಲ್ಲಿ ತೇಲುವ ಕಸದ ದ್ವೀಪಗಳಲ್ಲೂ ನಾವು ಇದರ ಉದಾಹರಣೆಗಳನ್ನು ನೋಡಬಹುದು.
ಬಾಹ್ಯಾಕಾಶದಲ್ಲಿ ಕಸದ ಸಮಸ್ಯೆ ಉಲ್ಬಣವಾಗುತ್ತಿರುವುದರ ಹಿನ್ನೆಲೆಯಲ್ಲಿರುವುದೂ ಇದೇ ಅಂಶ. ಬಾಹ್ಯಾಕಾಶ ವಿಜ್ಞಾನ ಬೆಳೆದಂತೆ, ಹೆಚ್ಚುಹೆಚ್ಚು ಉಪಗ್ರಹಗಳು - ಗಗನನೌಕೆಗಳು ಉಡಾವಣೆಯಾದಂತೆ ಬಾಹ್ಯಾಕಾಶದಲ್ಲಿ ಹೆಚ್ಚಿನ ಕಸ ಸೃಷ್ಟಿಯಾಗುತ್ತಿದೆ.
ಇದನ್ನೂ ಓದಿ: ಹೆಚ್ಚುತ್ತಿದೆ ಬಾಹ್ಯಾಕಾಶದ ಟ್ರಾಫಿಕ್ಕು!ಈ ಪೈಕಿ ಕೆಲವು ತುಣುಕುಗಳು ಮತ್ತೆ ಭೂಮಿಯ ವಾತಾವರಣದತ್ತ ಬಂದು ಸುಟ್ಟುಹೋಗುತ್ತವೆ. ಅದಕ್ಕೂ ದೊಡ್ಡ ಗಾತ್ರದವು ಅಪರೂಪಕ್ಕೊಮ್ಮೆ ಭೂಮಿಯ ಮೇಲೆ ಅಪ್ಪಳಿಸುವುದೂ ಉಂಟು. ಆದರೆ ಬಹುಪಾಲು ಕಸದ ತುಣುಕುಗಳು ಅಪಾಯಕಾರಿ ಉಪಗ್ರಹಗಳಾಗಿ, ಇತರರಿಗೆ ಉಪದ್ರವಕಾರಿಗಳಾಗಿ ಬಾಹ್ಯಾಕಾಶದಲ್ಲೇ ಉಳಿದುಬಿಡುತ್ತವೆ.
ಹೀಗಾಗಿಯೇ ವಿಜ್ಞಾನಿಗಳು ಈ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಗಂಭೀರ ಪ್ರಯತ್ನಗಳನ್ನು ಕೈಗೊಂಡಿದ್ದಾರೆ. ಇಂತಹ ಪ್ರಯತ್ನಗಳನ್ನು ಕುರಿತ ಎರಡು ಸುದ್ದಿಗಳು ಇದೀಗ ಕೇಳಿಬಂದಿರುವುದು ವಿಶೇಷ.
ಬಾಹ್ಯಾಕಾಶದಲ್ಲಿರುವ ಕಸವನ್ನು ಹಿಡಿದು ಮರಳಿ ಭೂಮಿಯತ್ತ ತರಲು, ಮರುಪ್ರವೇಶದ ಸಂದರ್ಭದಲ್ಲಿ ಅದು ಉರಿದುಹೋಗುವಂತೆ ಮಾಡಲು ಪ್ರಯತ್ನಿಸಲಿರುವ 'ರಿಮೂವ್‌ಡೆಬ್ರಿ' ಎಂಬ ಬ್ರಿಟಿಷ್ ಗಗನನೌಕೆಯದು ಈ ಪೈಕಿ ಮೊದಲ ಸುದ್ದಿ. ಈ ಪ್ರಯೋಗವೇನಾದರೂ ಯಶಸ್ವಿಯಾದರೆ ಮುಂದೆ ಸ್ವಚ್ಛ ಬಾಹ್ಯಾಕಾಶ ರೂಪಿಸುವ ನಿಟ್ಟಿನಲ್ಲಿ ಇನ್ನಷ್ಟು ಗಂಭೀರ ಪ್ರಯತ್ನಗಳು ನಡೆಯಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಕಸದ ದೊಡ್ಡ ತುಣುಕುಗಳ ಜೊತೆಗೆ ಸಣ್ಣಪುಟ್ಟ ಚೂರುಗಳ ಬಗೆಗೂ ಹೆಚ್ಚಿನ ನಿಗಾವಹಿಸುವ ನಿಟ್ಟಿನಲ್ಲಿ ನಾಸಾ 'ಸ್ಪೇಸ್ ಡೆಬ್ರಿ ಸೆನ್ಸರ್' ಎಂಬ ಹೊಸ ಸಾಧನವೊಂದನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಜೋಡಿಸಲಿದೆ ಎನ್ನುವುದು ಎರಡನೇ ಸುದ್ದಿ. ಇದರಿಂದ ದೊರಕಲಿರುವ ಮಾಹಿತಿಯನ್ನು ಬಳಸಿ ಸಣ್ಣಕಸದ ಪರಿಣಾಮಕಾರಿ ನಿರ್ವಹಣೆ ಸಾಧ್ಯವಾಗುವ ನಿರೀಕ್ಷೆಯಿದೆ.
ಇವು, ಮತ್ತು ಇಂತಹವೇ ಇನ್ನಷ್ಟು ಪ್ರಯತ್ನಗಳು ಯಶಸ್ವಿಯಾಗಿ ಬಾಹ್ಯಾಕಾಶದ ಕಸ ಸಮಸ್ಯೆ ನಿಯಂತ್ರಣಕ್ಕೆ ಬರಲಿ; ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಸಾಧ್ಯತೆಗಳು ನಮ್ಮೆದುರು ತೆರೆದುಕೊಳ್ಳಲಿ ಎನ್ನುವುದು ಎಲ್ಲರದೂ ಹಾರೈಕೆ.
ಡಿಸೆಂಬರ್ ೩, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ