ಶುಕ್ರವಾರ, ಡಿಸೆಂಬರ್ 1, 2017

ಅಂಗೈಯಲ್ಲೇ ಗ್ರಂಥಾಲಯ, ಇದು ಡಿಜಿಟಲ್ ಲೈಬ್ರರಿ!

ಡಿಸೆಂಬರ್ ೧, ಪುಸ್ತಕಗಳನ್ನು ಇ-ಲೋಕಕ್ಕೆ ಕರೆತಂದ 'ಪ್ರಾಜೆಕ್ಟ್ ಗುಟನ್‌ಬರ್ಗ್' ಯೋಜನೆ ಪ್ರಾರಂಭವಾದ ದಿನ. ಇಂತಹ ಡಿಜಿಟಲ್ ಗ್ರಂಥಾಲಯಗಳ ಕುರಿತು ಇಜ್ಞಾನದಲ್ಲಿ ಹಿಂದೊಮ್ಮೆ ಪ್ರಕಟವಾಗಿದ್ದ ಲೇಖನವನ್ನು ನಿಮ್ಮ ವಿರಾಮದ ಓದಿಗಾಗಿ ಮತ್ತೆ ಪ್ರಕಟಿಸುತ್ತಿದ್ದೇವೆ.

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ ಲೋಕದಲ್ಲಿ ಕೆಲವು ಘಟನೆಗಳಿಗೆ ಎಲ್ಲಿಲ್ಲದ ಮಹತ್ವ, ಜಗತ್ತನ್ನೇ ಬದಲಿಸಿದ ಶ್ರೇಯ.

ಈ ಘಟನೆಗಳಲ್ಲಿ ಹೊಸ ಸಂಗತಿಗಳ ಆವಿಷ್ಕಾರವೇ ಆಗಿರಬೇಕು ಎಂದೇನೂ ಇಲ್ಲ. ಆಗಲೇ ಅಸ್ತಿತ್ವದಲ್ಲಿರುವ ಪರಿಕಲ್ಪನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕವೂ ಇಂತಹ ಮೈಲಿಗಲ್ಲುಗಳು ಸೃಷ್ಟಿಯಾಗುವುದುಂಟು.

ಇಂತಹುದೊಂದು ಘಟನೆಯ ಹಿಂದೆ ಇದ್ದ ವ್ಯಕ್ತಿ ಜರ್ಮನಿಯ ಯೊಹಾನೆಸ್ ಗುಟನ್‌ಬರ್ಗ್. ಏಷಿಯಾದ ಹಲವೆಡೆ ಹಂತಹಂತಗಳಲ್ಲಿ ರೂಪುಗೊಂಡಿದ್ದ ಮುದ್ರಣ ತಂತ್ರಜ್ಞಾನವನ್ನು ಕೊಂಚ ಸುಧಾರಿಸಿ, ಪ್ರಾಯೋಗಿಕವಾಗಿ ಅಳವಡಿಸಿದ ಆತನ ಸಾಧನೆ ಮುದ್ರಣ ತಂತ್ರಜ್ಞಾನದ ಉಗಮಕ್ಕೆ ಕಾರಣವಾಯಿತು. ಆ ಮೂಲಕ ಜ್ಞಾನಪ್ರಸಾರಕ್ಕೆ ಹೊಸ ವೇಗ ದೊರಕಿತು; ಮಾಹಿತಿಯನ್ನು ಯಾರು ಯಾವಾಗ ಬೇಕಿದ್ದರೂ ಪಡೆದುಕೊಳ್ಳಬಹುದೆಂಬ ಸಾಧ್ಯತೆ ಜಗತ್ತಿಗೆ ಗೋಚರಿಸಿತು.

ಮುಂದೆ ಕೆಲ ಶತಮಾನಗಳ ನಂತರ ಜ್ಞಾನಪ್ರಸಾರಕ್ಕೆ ಇಷ್ಟೇ ಮಹತ್ವದ ಕೊಡುಗೆ ನೀಡಿದ ಸಾಧನೆಗಳ ಸಾಲಿನಲ್ಲಿ ಅಂತರಜಾಲಕ್ಕೆ (ಇಂಟರ್‌ನೆಟ್) ಪ್ರಮುಖ ಸ್ಥಾನವಿರುವುದು ನಮಗೆಲ್ಲ ಗೊತ್ತೇ ಇದೆ. ಇದೇ ಅಂತರಜಾಲದ ಮೂಲಕ ಜ್ಞಾನಪ್ರಸಾರದ ವಿನೂತನ ಮಾರ್ಗವೊಂದನ್ನು ತೋರಿಸಿಕೊಟ್ಟ ಸಾಧನೆಯ ಜೊತೆಯಲ್ಲೂ ಗುಟನ್‌ಬರ್ಗ್ ಹೆಸರೇ ಇರುವುದು ವಿಶೇಷ.

ಅದು ೧೯೭೧ನೇ ಇಸವಿ. ಅಮೆರಿಕಾದ ಇಲಿನಾಯ್ ವಿವಿ ವಿದ್ಯಾರ್ಥಿಗಳಿಗೆ ಅಲ್ಲಿದ್ದ ಮೇನ್‌ಫ್ರೇಮ್ ಕಂಪ್ಯೂಟರ್ ಬಳಸಲು ಅವಕಾಶನೀಡುವ ಪರಿಪಾಠ ಅದಾಗಲೇ ಪ್ರಾರಂಭವಾಗಿತ್ತು. ಹೀಗೆ ಅವಕಾಶ ಪಡೆದ ವಿದ್ಯಾರ್ಥಿಗಳಲ್ಲೊಬ್ಬ ಮೈಕಲ್ ಹಾರ್ಟ್. ಕಂಪ್ಯೂಟರನ್ನು ನೋಡುವುದೇ ಅಪರೂಪವಾಗಿದ್ದ ಕಾಲದಲ್ಲಿ ಅದನ್ನು ಬಳಸಲು ಸಿಕ್ಕ ಅವಕಾಶವನ್ನು ಸಾರ್ಥಕವಾಗಿ ಬಳಸಬೇಕೆಂದು ಆತ ಯೋಚಿಸಿದ.

ಈ ಯೋಚನೆಯನ್ನು ಕಾರ್ಯಗತಗೊಳಿಸಲು ಅವನು ಪ್ರಾರಂಭಿಸಿದ ಕೆಲಸವೇ ಪುಸ್ತಕಗಳ ಡಿಜಿಟಲೀಕರಣ ಹಾಗೂ ಮುಕ್ತ ವಿತರಣೆ. ಹಕ್ಕುಸ್ವಾಮ್ಯದ ಅವಧಿ ಮುಗಿದಿದ್ದ ಪುಸ್ತಕಗಳನ್ನು ಕಂಪ್ಯೂಟರಿನಲ್ಲಿ ಅಳವಡಿಸಿಟ್ಟು ಯಾರು ಬೇಕಾದರೂ ಓದುವುದನ್ನು ಸಾಧ್ಯವಾಗಿಸಿದರೆ ಅದು ಜ್ಞಾನಪ್ರಸಾರದಲ್ಲಿ ಹೊಸದೊಂದು ಕ್ರಾಂತಿಯನ್ನೇ ಮಾಡಬಲ್ಲದು ಎನ್ನುವುದು ಆತನ ಆಲೋಚನೆಯಾಗಿತ್ತು. ಈ ಆಲೋಚನೆಯಂತೆ ಆತ ೧೯೭೧ರ ಡಿಸೆಂಬರ್ ೧ರಂದು ಅಮೆರಿಕಾದ ಸ್ವಾತಂತ್ರ್ಯ ಘೋಷಣೆಯನ್ನು (ಡಿಕ್ಲರೇಶನ್ ಆಫ್ ಇಂಡಿಪೆಂಡೆನ್ಸ್) ಕಂಪ್ಯೂಟರೀಕರಿಸಿ ಪ್ರಕಟಿಸಿದ. ಆ ಮೂಲಕ ಇ-ಪುಸ್ತಕಗಳು ಜನಸಾಮಾನ್ಯರಿಗೆ ಸುಲಭವಾಗಿ ದೊರಕುವಂತೆ ಮಾಡುವ ಉದ್ದೇಶದ 'ಪ್ರಾಜೆಕ್ಟ್ ಗುಟನ್‌ಬರ್ಗ್' ಯೋಜನೆ ಪ್ರಾರಂಭವಾಯಿತು.

ಸಾವಿರಾರು ಸ್ವಯಂಸೇವಕರ ನೆರವಿನಿಂದ ಕೆಲಸಮಾಡುತ್ತಿರುವ ಈ ಯೋಜನೆ ಕಳೆದ ನಲವತ್ತೈದು ವರ್ಷಗಳಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಿ ಓದುಗರಿಗೆ ಉಚಿತವಾಗಿ ಒದಗಿಸಿದೆ. ಇಂತಹುದೊಂದು ಆಲೋಚನೆಯನ್ನು ಕಾರ್ಯರೂಪಕ್ಕೆ ತಂದ ಮೈಕಲ್ ಹಾರ್ಟ್ ಈಗಿಲ್ಲ, ಆದರೆ ಇ-ಪುಸ್ತಕಗಳ ಪಿತಾಮಹನೆಂಬ ಹೆಗ್ಗಳಿಕೆಯೊಡನೆ ಆತನ ಹೆಸರು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಪುಸ್ತಕದ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡು ಅದರ ಭೌತಿಕ ರೂಪವನ್ನು ಮಾತ್ರ ವಿದ್ಯುನ್ಮಾನ ಮಾಧ್ಯಮಕ್ಕೆ ಬದಲಿಸುವ  ಇ-ಪುಸ್ತಕಗಳ ಪರಿಚಯ ನಮ್ಮಲ್ಲಿ ಅನೇಕರಿಗಿದೆ. ನೂರಾರು ಕೃತಿಗಳನ್ನು ಪುಟ್ಟದೊಂದು ಪೆನ್‌ಡ್ರೈವ್‌ನಲ್ಲಿ ಶೇಖರಿಸಬಹುದು, ಅವನ್ನು ಬೇಕೆಂದಾಗ ಬೇಕೆಂದ ಕಡೆ ಓದಿಕೊಳ್ಳಲು ಸುಲಭದ ಹಲವು ಮಾರ್ಗಗಳಿವೆ, ಪುಸ್ತಕಗಳಿಗೆ ಧೂಳು ಹಿಡಿಯುವ ಸಮಸ್ಯೆಯಿಲ್ಲ, ಪುಸ್ತಕ ಹರಿಯುವುದಿಲ್ಲ, ಕಳೆದುಹೋಗುವುದೂ ಇಲ್ಲ - ಹೀಗೆ ಅವುಗಳ ಗುಣಗಾನವನ್ನೂ ನಾವು ಸಾಕಷ್ಟು ಬಾರಿ ಕೇಳಿದ್ದೇವೆ. ಇ-ಪುಸ್ತಕಗಳನ್ನು ಓದಲೆಂದೇ ರೂಪಿಸಲಾದ, ಕಣ್ಣಿಗೆ ಶ್ರಮವಾಗದ ಇ-ಬುಕ್ ರೀಡರುಗಳನ್ನು ಉಪಯೋಗಿಸಿದ್ದೇವೆ, ಮೆಚ್ಚಿಕೊಂಡೂ ಇದ್ದೇವೆ.

ಕೆಲವೇ ಪುಸ್ತಕಗಳನ್ನು ಇಷ್ಟೆಲ್ಲ ಹೊಗಳುವಾಗ ಅಂತಹ ಪುಸ್ತಕಗಳು ದೊಡ್ಡ ಸಂಖ್ಯೆಯಲ್ಲಿ, ಅದೂ ಉಚಿತವಾಗಿ ದೊರಕಿದರೆ? ಪ್ರತಿ ಮೊಬೈಲಿನಲ್ಲೂ ಒಂದು ಗ್ರಂಥಾಲಯ ತೆರೆದುಕೊಳ್ಳುತ್ತದೆ, ಅದನ್ನು ಹಿಡಿದ ಪ್ರತಿಯೊಬ್ಬ ವ್ಯಕ್ತಿಯ ಮುಂದೆಯೂ ಜ್ಞಾನಜಗತ್ತು ಅವತರಿಸಿಬಿಡುತ್ತದೆ.

ಪ್ರಾಜೆಕ್ಟ್ ಗುಟನ್‌ಬರ್ಗ್ ಪರಿಚಯಿಸಿದ್ದು ಇದೇ ಪರಿಕಲ್ಪನೆಯನ್ನು. ಪುಸ್ತಕಗಳನ್ನು ಡಿಜಿಟಲೀಕರಿಸುವುದರ ಜೊತೆಗೆ ಅವನ್ನು ವರ್ಗೀಕರಿಸಿ ಒಂದೇ ಕಡೆ ದೊರಕುವಂತೆ ಮಾಡಿದ್ದು, ಭೌತಿಕ ಪ್ರಪಂಚದ ಗ್ರಂಥಾಲಯಗಳನ್ನು ಡಿಜಿಟಲ್ ಜಗತ್ತಿಗೆ ಪರಿಣಾಮಕಾರಿಯಾಗಿ ಕರೆತಂದದ್ದು ಈ ಯೋಜನೆಯ ಸಾಧನೆ. 'ಡಿಜಿಟಲ್ ಲೈಬ್ರರಿ'ಯೆಂಬ ಹೊಸ ಪರಿಕಲ್ಪನೆ ನಮ್ಮಂತಹ ಸಾಮಾನ್ಯರ ಸಂಪರ್ಕಕ್ಕೆ ಬರಲು ಇದೇ ಯೋಜನೆ ಒಂದಲ್ಲ ಒಂದು ರೀತಿಯಲ್ಲಿ ಕಾರಣವಾಯಿತು ಎಂದರೂ ತಪ್ಪಾಗಲಿಕ್ಕಿಲ್ಲವೇನೋ.

ಗ್ರಂಥಾಲಯಗಳಲ್ಲಿ ಅಪಾರ ಸಂಖ್ಯೆಯ ಪುಸ್ತಕಗಳಿರುತ್ತವಲ್ಲ, ಅದೇ ರೀತಿ ಡಿಜಿಟಲ್ ಲೈಬ್ರರಿಯಲ್ಲಿ ಇ-ಪುಸ್ತಕಗಳಿರುತ್ತವೆ. ಪುಸ್ತಕಗಳೆಲ್ಲ ಇ-ರೂಪದಲ್ಲಿದ್ದಮೇಲೆ ಗ್ರಂಥಾಲಯ ಕೋಣೆಯೊಳಗಿರುವುದಿಲ್ಲ, ಕಂಪ್ಯೂಟರಿನೊಳಗಿರುತ್ತದೆ ಎನ್ನುವುದೊಂದೇ ವ್ಯತ್ಯಾಸ. ಭೌತಿಕ ಜಗತ್ತಿನ ಪರಿಮಿತಿಗಳನ್ನೆಲ್ಲ ಮೀರಿ ಹೆಚ್ಚು ಓದುಗರನ್ನು ತಲುಪಲು ಸಾಧ್ಯವಾಗುವುದು, ಪಠ್ಯರೂಪದ ಮಾಹಿತಿಗೆ ಪೂರಕವಾಗಿ ಬಹುಮಾಧ್ಯಮ ಸಂಪನ್ಮೂಲಗಳನ್ನೂ ಒದಗಿಸಿಕೊಡುವುದು ಡಿಜಿಟಲ್ ಲೈಬ್ರರಿಯ ಹೆಗ್ಗಳಿಕೆ.

ಪುಸ್ತಕಗಳನ್ನೆಲ್ಲ ಸ್ಕ್ಯಾನ್ ಮಾಡಿ ಒಂದು ಜಾಲತಾಣದಲ್ಲಿ ಹಾಕಿಬಿಟ್ಟಮಾತ್ರಕ್ಕೆ ಅದು ಡಿಜಿಟಲ್ ಲೈಬ್ರರಿ ಆಗಿಬಿಡುವುದಿಲ್ಲ. ಪುಸ್ತಕಗಳ ವಿವರವನ್ನು ವಿವಿಧ ಆಯಾಮಗಳಿಂದ ಹುಡುಕಿಕೊಳ್ಳುವುದು, ಪುಸ್ತಕದಲ್ಲಿರಬಹುದಾದ ಮಾಹಿತಿಯನ್ನು ಹುಡುಕಿಕೊಳ್ಳುವುದು, ಪುಸ್ತಕದಲ್ಲಿ ಸಿಕ್ಕಿದ್ದಕ್ಕೆ ಪೂರಕವಾದ ಮಾಹಿತಿಯನ್ನು ಇತರ ಮೂಲಗಳಿಂದ (ನಿಘಂಟು, ವಿಶ್ವಕೋಶ ಇತ್ಯಾದಿ) ಪಡೆದುಕೊಳ್ಳುವುದು, ಪುಸ್ತಕದ ಪಠ್ಯವನ್ನು ಧ್ವನಿರೂಪದಲ್ಲಿ ಕೇಳುವ (ಟೆಕ್ಸ್ಟ್ ಟು ಸ್ಪೀಚ್) ವ್ಯವಸ್ಥೆಗಳನ್ನೂ ಡಿಜಿಟಲ್ ಲೈಬ್ರರಿ ಮೂಲಕ ಒದಗಿಸುವುದು ಸಾಧ್ಯ.

ಅಷ್ಟೇ ಅಲ್ಲ, ಓದುಗರು ಪುಸ್ತಕವನ್ನು ಯಾವ ಸಾಧನದಲ್ಲಿ ಹೇಗೆ ಓದಲು ಬಯಸುತ್ತಾರೆ ಎನ್ನುವುದರ ಆಧಾರದ ಮೇಲೆ ಒಂದೇ ಪುಸ್ತಕವನ್ನು ಬೇರೆಬೇರೆ ಬಗೆಯ ಕಡತಗಳಾಗಿ (ಟೆಕ್ಸ್ಟ್, ಪಿಡಿಎಫ್, ಇಪಬ್ ಇತ್ಯಾದಿ) ನೀಡುವ ಅವಕಾಶವೂ ಇಲ್ಲಿದೆ. ಕಂಪ್ಯೂಟರಿನ ದೊಡ್ಡ ಪರದೆಗೆ, ಮೊಬೈಲಿನ ಸಣ್ಣ ಪರದೆಗೆಲ್ಲ ಪುಸ್ತಕದ ಗಾತ್ರ ತನ್ನಷ್ಟಕ್ಕೆ ತಾನೇ ಹೊಂದಿಕೊಳ್ಳುವಂತೆ ಮಾಡುವುದು, ಆ ಮೂಲಕ ಓದುವ ಅನುಭವ ಇನ್ನಷ್ಟು ಉತ್ತಮವಾಗಿರುವಂತೆ ನೋಡಿಕೊಳ್ಳುವುದು ಕೂಡ ಸಾಧ್ಯ.

ಡಿಜಿಟಲ್ ಲೈಬ್ರರಿಗಳನ್ನು ರೂಪಿಸುವ ಹಲವು ಪ್ರಯತ್ನಗಳು ನಮ್ಮ ದೇಶದಲ್ಲೂ ನಡೆದಿವೆ. ಭಾರತೀಯ ವಿಜ್ಞಾನಮಂದಿರದ ನೇತೃತ್ವದಲ್ಲಿ ರೂಪುಗೊಂಡಿರುವ 'ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ' (ಸದ್ಯ ತೆರೆದುಕೊಳ್ಳುತ್ತಿಲ್ಲ) ಹಾಗೂ ಒಸ್ಮಾನಿಯಾ ವಿವಿಯ ಡಿಜಿಟಲ್ ಗ್ರಂಥಾಲಯಗಳನ್ನು ಇಲ್ಲಿ ಪ್ರಮುಖವಾಗಿ ಹೆಸರಿಸಬಹುದು. ದೇಶದ ಹಲವು ಡಿಜಿಟಲ್ ಗ್ರಂಥಾಲಯಗಳನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನವಾದ ಕೇಂದ್ರ ಸರಕಾರದ 'ನ್ಯಾಶನಲ್ ಡಿಜಿಟಲ್ ಲೈಬ್ರರಿ'ಯ ಕೆಲಸವೂ ಗಮನಾರ್ಹ.

ಕೇಂದ್ರ ಸರಕಾರದ ಭಾರತವಾಣಿ ಯೋಜನೆ ಕೂಡ ತನ್ನ ಜಾಲತಾಣದಲ್ಲಿ ಪುಸ್ತಕಗಳನ್ನು ಅಳವಡಿಸುತ್ತಿದೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ e-ಪುಸ್ತಕ ಎಂಬ ಕನ್ನಡ ಕೃತಿಗಳ ಡಿಜಿಟಲ್ ಗ್ರಂಥಾಲಯವನ್ನು ರೂಪಿಸುವ ನಿಟ್ಟಿನಲ್ಲಿ ತೊಡಗಿಕೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಾಲತಾಣದಲ್ಲಿ ಹಲವು ಅಪರೂಪದ ಪುಸ್ತಕಗಳ ಪಿಡಿಎಫ್ ರೂಪ ಲಭ್ಯವಾಗಿದೆ. ಇವು, ಮತ್ತು ಇಂತಹವೇ ಇನ್ನಷ್ಟು ಗ್ರಂಥಾಲಯಗಳ ಮೂಲಕ ಶೀಘ್ರವೇ ಭಾರತೀಯ ಭಾಷೆಗಳ ಇ-ಪುಸ್ತಕಗಳೂ ದೊಡ್ಡ ಸಂಖ್ಯೆಯಲ್ಲಿ ನಮಗೆ ದೊರಕುವ ನಿರೀಕ್ಷೆಯಿದೆ.

ಮುದ್ರಿತ ಪ್ರತಿಯ ಪಿಡಿಎಫ್ ರೂಪವನ್ನಷ್ಟೇ ಪ್ರಕಟಿಸಿ ಸುಮ್ಮನಾಗುವ ಬದಲು ಪಠ್ಯ ಹಾಗೂ ಇ-ಪಬ್ ರೂಪಗಳನ್ನು ಪ್ರಕಟಿಸುವ, ಕಿಂಡಲ್ - ಕೋಬೋ ಮುಂತಾದ ವೇದಿಕೆಗಳಲ್ಲಿ ಕನ್ನಡ ಪುಸ್ತಕಗಳು ದೊರಕುವಂತೆ ಮಾಡುವ ಪ್ರಯತ್ನಗಳೂ ನಡೆದಿವೆ.
ಪೂರಕ ಓದಿಗೆ: ಕನ್ನಡ ಪುಸ್ತಕಗಳ ಇ-ಅವತಾರ
ಅಂದಹಾಗೆ ಡಿಜಿಟಲ್ ಗ್ರಂಥಾಲಯಗಳೆಲ್ಲ ಪುಸ್ತಕಗಳನ್ನು ಉಚಿತವಾಗಿಯೇ ನೀಡಬೇಕು ಎಂದೇನೂ ಇಲ್ಲ. ವಾಣಿಜ್ಯ ಉದ್ದೇಶದ ಡಿಜಿಟಲ್ ಗ್ರಂಥಾಲಯಗಳೂ ಹಲವು ಸಂಖ್ಯೆಯಲ್ಲಿವೆ. ಅಂತಹ ಗ್ರಂಥಾಲಯಗಳಲ್ಲಿ ನಿರ್ದಿಷ್ಟ ಪುಸ್ತಕವನ್ನು ಇಂತಿಷ್ಟು ದಿನ ಓದಲು ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ. ತಿಂಗಳ ಅಥವಾ ವರ್ಷದ ಲೆಕ್ಕದಲ್ಲಿ ಚಂದಾ ಪಾವತಿಸಿದರೆ ಎಷ್ಟು ಪುಸ್ತಕಗಳನ್ನಾದರೂ ಓದಲು ಅನುವುಮಾಡಿಕೊಡುವ ವ್ಯವಸ್ಥೆಯನ್ನೂ ಹಲವು ಡಿಜಿಟಲ್ ಗ್ರಂಥಾಲಯಗಳು ಅಳವಡಿಸಿಕೊಂಡಿವೆ.

ಡಿಸೆಂಬರ್ ೨೦೧೬ರ ತುಷಾರದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge