ಗುರುವಾರ, ಡಿಸೆಂಬರ್ 14, 2017

ಸೈಬರ್‍ ಅಪರಾಧಗಳ ಲೋಕದಲ್ಲಿ

ಉದಯ ಶಂಕರ ಪುರಾಣಿಕ


ಇ-ಮೇಲ್‍, ಜಾಲತಾಣ, ಮೊಬೈಲ್ ಫೋನ್‍, ಬ್ಯಾಂಕು ಖಾತೆ, ಖಾಸಗಿ ದಾಖಲೆಗಳು, ವೈಯಕ್ತಿಕ ಮಾಹಿತಿ, ಹೀಗೆ ವಿವಿಧ ರೀತಿಯ ಸೈಬರ್‍ ಅಪರಾಧಗಳನ್ನು ಕುರಿತು ಸುದ್ದಿಗಳನ್ನು ಮಾಧ್ಯಮಗಳು ಪ್ರಕಟಿಸುತ್ತಿವೆ. ಈ ಕೆಲಸ ಮಾಡಿದ ಪಡ್ಡೆ ಹುಡುಗರು ಚೀನಾದಲ್ಲಿದ್ದಾರೆ, ಅವರು ಮನಸ್ಸು ಮಾಡಿದರೆ ಇಡೀ ಭಾರತವನ್ನು ಹ್ಯಾಕ್‍ ಮಾಡಬಲ್ಲರು ಎನ್ನುವಂತಹ ಮಾಹಿತಿಯನ್ನೆಲ್ಲ ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಅಧಿಕಾರಿ ನೀಡಿದರು, ಸೈಬರ್‍ ಕ್ರೈಂ ವಿಭಾಗದ ಹಿರಿಯ ಅಧಿಕಾರಿ ಹೇಳಿದರು ಎನ್ನುವಂತಹ ವರದಿಗಳೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ.

ಸೈಬರ್‍ ಅಪರಾಧದ ವ್ಯಾಪ್ತಿಯ ಅರಿವಾಗಲೀ, ಸೈಬರ್‍ ಅಪರಾಧಗಳನ್ನು ತಡೆಯಲು ಬಳಸುವ ಅಧುನಿಕ ತಂತ್ರಜ್ಞಾನ - ಸೈಬರ್‍ ವಿಧಿ ವಿಜ್ಞಾನ ತಂತ್ರಜ್ಞಾನ ಮೊದಲಾದವುಗಳನ್ನು ಕುರಿತು ಅನುಭವವಾಗಲೀ ಇಲ್ಲದವರು ನೀಡುವ ಇಂತಹ ಬ್ರೇಕಿಂಗ್‍ ನ್ಯೂಸ್‍ಗಳು, ಹೀಗೆ ಮಾಡಿದರೆ ಸಾಕು ನಿಮಗೆ ಸೈಬರ್‍ ಅಪರಾಧಿಗಳಿಂದ ತೊಂದರೆ ಇಲ್ಲ ಎನ್ನುವಂತಹ ಉಪದೇಶಗಳು ಜನಸಾಮಾನ್ಯರನ್ನು ಗೊಂದಲಕ್ಕೀಡು ಮಾಡುತ್ತಿವೆ.

ಸೈಬರ್‍ ಅಪರಾಧ ಇಂದು ವಿಶ್ವವನ್ನು ಕಾಡುತ್ತಿರುವ ಅತ್ಯಂತ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದೆ. ದೇಶ, ಗಡಿ, ಭಾಷೆಯನ್ನು ಮೀರಿ, ಬೆಳೆಯುತ್ತಿರುವ ಸೈಬರ್‍ ಅಪರಾಧ ಜಗತ್ತು, ಪ್ರತಿ ವರ್ಷ ಸುಮಾರು 6 ಲಕ್ಷ ಕೋಟಿ ಡಾಲರ್‍ ವಹಿವಾಟು ನೆಡೆಸುತ್ತಿದೆ. ಅನೇಕ ಅನುಭವಿ ತಂತ್ರಜ್ಞರು ಕೆಲಸ ಮಾಡುತ್ತಿರುವ ಈ ಅಪರಾಧಿಗಳ ಜಗತ್ತಿನಿಂದಾಗಿ ಪ್ರತಿದಿನ 2 ಲಕ್ಷ 80 ಸಾವಿರಕ್ಕೂ ಹೆಚ್ಚು ಸೈಬರ್‍ ದಾಳಿಗಳು ನಡೆಯುತ್ತಿವೆ. ಮುಂಬರುವ ದಿನಗಳಲ್ಲಿ ಇಂತಹ ದಾಳಿಗಳ ಸಂಖ್ಯೆ, ನಿಮಿಷಕ್ಕೆ 3ರಿಂದ 4 ರಂತೆ ನಡೆಯಲಿದೆ.

ಹಾಗಾದರೆ ಈ ಸೈಬರ್ ಅಪರಾಧಿಗಳ ಬಂಧನ ಸಾಧ್ಯವಿಲ್ಲವಾ? ಎನ್ನುವ ಪ್ರಶ್ನೆಗೆ ಉತ್ತರ, ಅನೇಕ ಕುಖ್ಯಾತ ಅಂತರಾಷ್ಟ್ರೀಯ ಸೈಬರ್ ಅಪರಾಧಿಗಳ ಬಂಧನವಾಗಿದೆ ಮತ್ತು ಅವರ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯಗಳು ತೀರ್ಮಾನಿಸಬೇಕಾಗಿದೆ. ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸೈಬರ್‍ ಅಪರಾಧಿಗಳ ಜಾಲವನ್ನು ನಿಷ್ಕ್ರೀಯಗೊಳಿಸಲಾಗುತ್ತಿದೆ. ಇಂತಹ ಪ್ರಯತ್ನದಲ್ಲಿ ಭಾರತದ ಸೈಬರ್ ಪರಿಣಿತರ ಜೊತೆಯಲ್ಲಿ ಕೆಲವು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಮತ್ತು ವಿವಿಧ ದೇಶಗಳ ಪೋಲಿಸರು ಹಾಗೂ ಸೈಬರ್‍ ತಂತ್ರಜ್ಞರು ಕೆಲಸ ಮಾಡುತ್ತಿದ್ದು, ಸೈಬರ್‍ ಅಪರಾಧ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಣೆಗಳು ಹೆಚ್ಚಾಗುತ್ತಿವೆ.

2011ರಿಂದ ಪ್ರಮುಖವಾಗಿ ಭಾರತ ಮತ್ತು ಇತರೆ 9 ದೇಶಗಳನ್ನು ಗುರಿಯಾಗಿಟ್ಟು ಕೊಂಡು ಸೈಬರ್‍ ದಾಳಿ ನೆಡೆಸುತ್ತಿದ್ದ ಆಂಡ್ರೋಮಿಡಾ ಬಾಟ್‍ನೆಟ್‍ ಹೆಸರಿನ ಸೈಬರ್‍ ಅಪರಾಧ ಜಾಲವನ್ನು ಭೇದಿಸಿ, ನಿಷ್ಕ್ರೀಯಗೊಳಿಸಿರುವುದು, ಸೈಬರ್‍ ಅಪರಾಧ ಜಗತ್ತಿನ ವಿರುದ್ಧದ ಹೋರಾಟದಲ್ಲಿ ಒಂದು ಪ್ರಮುಖ ವಿಜಯವಾಗಿದೆ.

ನಮ್ಮ ಕಂಪ್ಯೂಟರ್ ಅಥವಾ ಮೊಬೈಲ್‍ ಫೋನ್‍ನ್ನು ಪ್ರವೇಶಿಸಲು ಇಂತಹ ಬಾಟ್‌ನೆಟ್‌ಗಳ ಕುತಂತ್ರಾಂಶಕ್ಕೆ ಸಾಧ್ಯವಾದರೆ ಸಾಕು, ಅದು ನಮಗರಿವಿಲ್ಲದಂತೆ ನಮ್ಮ ಕಂಪ್ಯೂಟರ್‍ ಮತ್ತು ಮೊಬೈಲ್‍ ಫೋನ್‍ನಲ್ಲಿರುವ ಮಾಹಿತಿಯನ್ನು ಕದಿಯಲು ಪ್ರಾರಂಭಿಸುತ್ತದೆ. ನಮ್ಮ ವೈಯಕ್ತಿಕ ಮಾಹಿತಿಯನ್ನು ಕಳವು ಮಾಡುವುದು ಒಂದು ಅಪಾಯವಾದರೆ, ನಮ್ಮ ಕಂಪ್ಯೂಟರ್‍ ಅಥವಾ ಮೊಬೈಲ್‍ ಫೋನ್‍ನ್ನು ತನ್ನ ಬಾಟ್‍ನೆಟ್‍ ಜಾಲಕ್ಕೆ ಸೇರಿಸಿಕೊಳ್ಳುವುದು ಅದಕ್ಕಿಂತ ಹೆಚ್ಚು ಅಪಾಯಕಾರಿಯಾಗುತ್ತದೆ.

ನಮಗರಿವಿಲ್ಲದಂತೆ ಬಾಟ್‍ನೆಟ್‍ ಜಾಲದಲ್ಲಿ ಸೇರಿರುವ ನಮ್ಮ ಕಂಪ್ಯೂಟರ್‍ ಅಥವಾ ಮೊಬೈಲ್‍ ಫೋನ್‍ನ್ನು ಬಳಸಿ ಬೇರ ಕಂಪ್ಯೂಟರ್‍ ಅಥವಾ ಮೊಬೈಲ್ ಫೋನ್‍ಗಳ ಮೇಲೆ ಸೈಬರ್ ದಾಳಿ ನಡೆಸಬಹುದು. ಭಯೋತ್ಪಾದಕರ ಮತ್ತು ಸಮಾಜ ದ್ರೋಹಿಗಳ ನಡುವಿನ ಸಂವಹನಕ್ಕೆ ನಮ್ಮ ಕಂಪ್ಯೂಟರ್‍ ಅಥವಾ ಮೊಬೈಲ್‍ ಫೋನ್‍ ಬಳಕೆಯಾಗಲೂಬಹುದು.

ಆಂಡ್ರೋಮಿಡಾ ಬಾಟ್‍ನೆಟ್‍ನಲ್ಲಿ ಹೀಗೆ ಸೇರ್ಪಡೆಯಾದ ಲಕ್ಷಾಂತರ ಕಂಪ್ಯೂಟರುಗಳನ್ನು ನಿಯಂತ್ರಿಸಲೆಂದು ಸುಮಾರು 1214 ಕಮಾಂಡ್‍ ಮತ್ತು ಕಂಟ್ರೋಲ್‍ ಸರ್ವರುಗಳನ್ನೂ 464 ಉಪ ಬಾಟ್‍ನೆಟ್‍ ಜಾಲಗಳನ್ನೂ ಸೈಬರ್‍ ಅಪರಾಧಿಗಳು ಬಳಸುತ್ತಿದ್ದರು ಎಂದರೆ ಆಂಡ್ರೋಮಿಡಾ ಸಾಮ್ರಾಜ್ಯ ಎಷ್ಟು ವಿಶಾಲವಾಗಿತ್ತು ಎನ್ನುವ ಕಲ್ಪನೆ ನಿಮಗೆ ಸಿಗಬಹುದು.

ಹಲವಾರು ವರ್ಷಗಳ ಪ್ರಯತ್ನದ ಫಲವಾಗಿ ಆಂಡ್ರೋಮಿಡಾ ಬಾಟ್‍ನೆಟ್‍ ಜಾಲವನ್ನು ಭೇದಿಸಿ ಅದನ್ನು ನಿಷ್ಕ್ರಿಯಗೊಳಿಸಲಾಗಿದೆ. ಆದರೆ ಸೈಬರ್ ಅಪರಾಧ ಲೋಕದಲ್ಲಿ ಈ ಆಂಡ್ರೋಮಿಡಾ ಕೇವಲ ಒಂದು ಭಾಗವಷ್ಟೇ ಆಗಿತ್ತು.

ಕಂಪ್ಯೂಟರ್‍, ಇಂಟರ್‍ನೆಟ್, ಮೊಬೈಲ್‍ ಪೋನ್‍ ಬಳಸುವವರು ನಮ್ಮ ದೇಶದಲ್ಲಿ ಹೆಚ್ಚಾಗುತ್ತಿದ್ದಾರೆ. ಆದರೆ ಸೈಬರ್‍ ಅಪರಾಧಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನಸಾಮಾನ್ಯರಿಗೆ ಮಾರ್ಗದರ್ಶನದ ಕೊರತೆ ಇದೆ. ನಿಮಗೆ ಗೊತ್ತಿಲ್ಲದ ಯಾವುದೇ ಇ-ಮೇಲ್‍, ಸಾಮಾಜಿಕ ಜಾಲತಾಣ ಅಥವಾ ಜಾಲತಾಣದಿಂದ ಚಿತ್ರಗಳು, ದಾಖಲೆಗಳು, ವೀಡಿಯೋ, ಆಡಿಯೋಗಳನ್ನು ಬಳಸಬೇಡಿ. ನಿಮಗೆ ಲಕ್ಷಾಂತರ ಡಾಲರ್‍ ಲಾಟರಿ ಬಂದಿದೆ ಎನ್ನುವಂತಹ ಸುಳ್ಳು ಸಂದೇಶಗಳು, ಕರೆಗಳು ಮೊಬೈಲ್‍ ಫೋನ್‍ಗೆ ಬಂದರೆ ಆ ಕುರಿತು ಮಾಹಿತಿಯನ್ನು ಸೈಬರ್‍ ಪೋಲಿಸರಿಗೆ ನೀಡಿ. ಯಾವ ಬ್ಯಾಂಕಿನ ಅಧಿಕಾರಿಯೂ ನಿಮ್ಮ ಬ್ಯಾಂಕಿನ ಖಾತೆ, ಕ್ರೆಡಿಟ್‍ ಕಾರ್ಡ್ ಅಥವಾ ಡೆಬಿಟ್‍ ಕಾರ್ಡ್ ಮಾಹಿತಿಯನ್ನು ಫೋನ್‍ ಮಾಡಿ ಕೇಳುವುದಿಲ್ಲ. ಅಂತಹ ಕರೆಗಳು ಬಂದರೆ ಸಂಬಂಧಪಟ್ಟ ಬ್ಯಾಂಕಿಗೆ ಈ ಕುರಿತು ಮಾಹಿತಿ ನೀಡಿ.

ಸೈಬರ್ ಅಪರಾಧಿಗಳು ಈ ವರ್ಷ ನೆಡೆಸಿರುವ ಅಪರಾಧಗಳು ಒಂದು ದೇಶದ ಸುರಕ್ಷತೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವಂತಹದಾಗಿದೆ. ಭಾರತದ ಸೈಬರ್‍ ಸುರಕ್ಷತೆ ಬಲಪಡಿಸಲು ಭಾರತ ಸರ್ಕಾರ, ವಿವಿಧ ದೇಶಗಳ ಜೊತೆ ಸೈಬರ್‍ ಸುರಕ್ಷತೆ ಕುರಿತು ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡಿದೆ. ಸೈಬರ್ ಅಪರಾಧ ಕುರಿತು ಅನಧಿಕೃತ ಮೂಲಗಳಿಂದ ಬರುವ ಅಂತೆ ಕಂತೆ ಸುದ್ದಿಗಳನ್ನು ನಂಬಬೇಡಿ. ನಿಮಗೆ ಅನುಮಾನ ಬಂದರೆ ಸೈಬರ್ ಪರಿಣತರನ್ನು ಸಂಪರ್ಕಿಸಿ.
badge