ಭಾನುವಾರ, ನವೆಂಬರ್ 26, 2017

ಆಡಳಿತ, ತಂತ್ರಜ್ಞಾನ ಮತ್ತು ಕನ್ನಡ

೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭ ನವೆಂಬರ್ ೨೬, ೨೦೧೭ರಂದು ನಡೆದ 'ಕನ್ನಡ ತಂತ್ರಜ್ಞಾನ' ಗೋಷ್ಠಿಯಲ್ಲಿ ಇ-ಆಡಳಿತ ಅನುಷ್ಠಾನದ ಸಮಸ್ಯೆಗಳ ಕುರಿತು ಮಂಡಿಸಿದ ಅಭಿಪ್ರಾಯಗಳ ಸಾರಾಂಶ

ಕೆ. ಎ. ದಯಾನಂದ, ಕ.ಆ.ಸೇ.

ಕ್ಷೀರ ಸಾಗರದೊಳಗಿದ್ದು ಹಂಸ ಹಾಲ ಬಯಸಲುಂಟೆ
ಕಡಲೊಳಗಿದ್ದ ಕಪ್ಪೆ ಜಲವ ಬಯಸಲುಂಟೆ
ಪುಷ್ಪದೊಳಗಿದ್ದ ದುಂಬಿ ಪರಿಮಳವ ಅರಸಲುಂಟೆ
ಎದೆಂತಯ್ಯ ತಾ ಲಿಂಗದೊಳಗಿದ್ದು ಬೇರೆ ಇತರ
ಕಾವ್ಯದೊಳಗಿರ್ಪ ಭ್ರಾಂತರನೇನೆಂಬೆನಯ್ಯ ಗುಹೇಶ್ವರ

20ನೇ ಶತಮಾನದಲ್ಲಿ ಬಳಸುವ ಜನಸಂಖ್ಯೆ ನಶಿಸಿದ ಕಾರಣ ಅಥವ ಜನ ಭಾಷೆಯನ್ನು ಸಂವಹನಕ್ಕೆ ಬಳಸದೇ ಇರುವುರಿಂದ 110 ಭಾಷೆಗಳು ನಾಶವಾಗಿವೆ. ಆಧುನಿಕತೆಯ ವೇಗದಲ್ಲಿ ಈ ನಾಶದ ಪ್ರಕ್ರಿಯೆಯು ಕೂಡ ವೇಗ ಪಡೆದುಕೊಂಡಿದ್ದು 21ನೇ ಶತಮಾನದ ಮೊದಲ ಅವಧಿಯಲ್ಲಿನ ಕೇವಲ 16 ವರ್ಷಗಳಲ್ಲಿ 12 ಭಾಷೆಗಳು ನಾಶವಾಗಿವೆ.

ಭಾಷೆಯನ್ನು ಕೇವಲ ಜನರಾಡುವ ಭಾಷೆಯಾಗಿ ಹೆಚ್ಚು ಬಳಕೆ ಮಾಡಿದ ಮಾತ್ರಕ್ಕೆ ಭಾಷೆ ಉಳಿಯುವುದೂ ಇಲ್ಲ ಬೆಳೆಯುವುದೂ ಇಲ್ಲ. ಭಾಷೆಯನ್ನು ನಮ್ಮ ಸಂವಹನದ ಮತ್ತು ಆರ್ಥಿಕ ಬದುಕಿನ ಭಾಗವಾಗಿ ಬಳಕೆ ಮಾಡಿದಾಗ ಮಾತ್ರ ಭಾಷೆ ಉಳಿಯುತ್ತದೆ ಹಾಗೂ ಬೆಳೆಯುತ್ತದೆ.

ತಂತ್ರಜ್ಞಾನ ಬೆಳೆಯುತ್ತ ಬಂದಂತೆ ಕಂಡು ಬಂದ ಮೊತ್ತಮೊದಲ ಬೃಹತ್ ಸಮಸ್ಯೆ ಎಂದರೆ ತಂತ್ರಜ್ಞಾನದ ವಿಷಯಗಳು ಸ್ಥಳೀಯ ಭಾಷೆಯಲ್ಲಿ ಲಭಿಸದೇ ಹೋದದ್ದು. ಆರಂಭಿಕ ಹಂತದಲ್ಲಿ ಈ ಕಾರಣಕ್ಕಾಗಿಯೇ ತಂತ್ರಜ್ಞಾನ ಸಾಮಾನ್ಯ ಜನರ ಬಳಕೆಯಿಂದ ದೂರವೇ ಉಳಿಯಿತು.

ಇಂದು ತಂತ್ರಜ್ಞಾನವು ವ್ಯವಹಾರದ ಮಾಧ್ಯಮವಾಗಿ ಬೆಳೆಯುತ್ತ ಸಾಗಿದಂತೆ ಭಾಷೆಯ ಪ್ರಭಾವದಿಂದ ವ್ಯವಹಾರವು ಸುಲಭಸಾಧ್ಯವಾಗುವ ಹಂತ ತಲುಪಿದೆ. ಆದರೆ ಭಾಷೆಯ ತಿಳಿವಳಿಕೆಯ ಕೊರತೆಯಿಂದ ಸಾಮಾನ್ಯರು ವಂಚಿತರಾಗುತ್ತಾರೆ. ಇಂಗ್ಲಿಷ್ ಭಾಷೆಯ ಹೊಡೆತಕ್ಕೆ ಸಿಕ್ಕು ಅಳಿವಿನಂಚಿಗೆ ಸಿಲುಕುವ ಅಪಾಯವಿರುತ್ತದೆ.

ಆದ್ದರಿಂದ ಆರ್ಥಿಕವಾಗಿ ಎಂದಾಗ ವ್ಯವಹಾರದಲ್ಲಿ ಹಾಗೂ ಆಡಳಿತದಲ್ಲಿ ಬಳಕೆಯಾದಾಗ ಮಾತ್ರ ನಮ್ಮ ಭಾಷೆಗಳು ಸಮೃದ್ಧವಾಗಿ ಬೆಳೆದಿರುವುದರಿಂದ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಇಂಗ್ಲಿಷ್ ಮತ್ತು ಇತರ ಭಾಷೆಗಳ ಸಹಕಾರ ಬಯಸುವ ಅಗತ್ಯ ಕಂಡುಬರುವುದಿಲ್ಲವಾದ್ದರಿಂದ ಅಲ್ಲಮನ ಈ ವಚನವು ಪ್ರಸ್ತುತವೆನಿಸುತ್ತದೆ.ಕನ್ನಡ ಭಾಷೆಯ ಬಳಕೆಯು ಸ್ಥಳೀಯ ಆಡುಭಾಷೆಯಾಗಿ ಆಡಳಿತದ ಸುಗಮ ನಿರ್ವಹಣೆಗೆ ತುಂಬಾ ಅನಿವಾರ್ಯವಿದೆ.

ಕಂಪನಿ ಸರ್ಕಾರ ತನ್ನ ಕೆಲಸವನ್ನು ಮೆಚ್ಚಿ ಸರ್ಪಿಟಿಕೇಟ್ ಕೊಟ್ಟಿದೆ. ಪಿಂಚಣಿ ಕೊಡಿ ಬುದ್ದೀ ಅಂತ ಅಮಲ್ದಾರರ ಕಚೇರಿಯಲ್ಲಿ ಪ್ರತಿಯೊಬ್ಬ ಸಿಬ್ಬಂದಿಯನ್ನು ಬೇಡುವ ತಬರನ ಕತೆಯಲ್ಲಿನ ಚಾರುಹಾಸನ್ ಪಾತ್ರವು ಮನ ಮುಟ್ಟುವಂತಹುದು. ಹೇಗೆ ಸರ್ಕಾರಿ ನೌಕರರು ಕಾರಣವಲ್ಲದ ಕಾರಣಕ್ಕೆ ಆತನ ಪಿಂಚಣಿಯನ್ನು ಕೊಡದೆ ಸತಾಯಿಸುತ್ತಾರೆ ಅನ್ನುವ ಉದಾಹರಣೆ.

ನಾನು ಪ್ರೊಬೆಷನರಿ ಎಸಿ ಆಗಿ ಕೆಲಸ ಮಾಡುತ್ತಿದ್ದಾಗ ಪ್ರತಿ ತಿಂಗಳ ಅದಾಲತ್ ಅಲ್ಲಿ ಜಿಲ್ಲಾಧಿಕಾರಿಗಳ ಸಮಕ್ಷಮ ತನ್ನ ಕೆಲಸ ಮಾಡಿಕೊಳ್ಳಲು ಬರುತ್ತಿದ್ದ ಮಹಿಳೆಯೊಬ್ಬಳು ಬರುತ್ತಿದ್ದರೆ ಜಿಲ್ಲಾಧಿಕಾರಿಗಳು ಕೆಲಸ ಮಾಡಿಕೊಡಲು ಸಂಬಂಧಪಟ್ಟ ಸಿಬ್ಬಂದಿಗೆ ಸೂಚನೆ ಕೊಡುತ್ತಿದ್ದರು. ಆದರೆ ಎರಡು ಮೂರು ತಿಂಗಳು ಯಾವುದೇ ಪರಿಹಾರ ಕೆಲಸ ಸಾಧ್ಯವಾಗಿರಲಿಲ್ಲ. ಪ್ರತಿ ತಿಂಗಳೂ ಆ ಹೆಂಗಸು ಬರುವುದು ನಿಂತಿರಲಿಲ್ಲ. ನಂತರ ಜಿಲ್ಲಾಧಿಕಾರಿಗಳು ಸಂಕೋಚಗೊಂಡು ತಮ್ಮ ನೇರ ಉಸ್ತುವಾರಿಯಲ್ಲಿ ಆ ಸಮಸ್ಯೆಯನ್ನು ಪರಿಹರಿಸಿದರು.

ಹೀಗೆ ವೈಯಕ್ತಿಕ ನೆಲೆಯಲ್ಲಿ ಅಧಿಕಾರಿಗಳು ಮನಸ್ಸು ಮಾಡಿದಾಗ ಮಾತ್ರ ಕೆಲಸ ಆಗುವಂತಿರುವುದು ಈ ಆಡಳಿತದ ದೊಡ್ಡ ಪರಿಮಿತಿ ಕೂಡಾ ಹೌದು. ಒಬ್ಬ ಅಧಿಕಾರಿಯು ತನ್ನ ಸೇವಾಧಿಯ ಮೂರು ವರ್ಷಗಳಿಗೆ ಮಾತ್ರ ಯೋಜನೆ ರೂಪಿಸುತ್ತಾನೆ. ಒಬ್ಬ ರಾಜಕಾರಣಿ ತನ್ನ ಆಡಳಿತಾವಧಿಯ ಐದು ವರ್ಷಗಳಿಗೆ ಮಾತ್ರ  ಯೋಜನೆ ರೂಪಿಸುತ್ತಾನೆ. ಆದರೆ ಒಬ್ಬ ದೂರದರ್ಶಿತ್ವ ಉಳ್ಳ ತಜ್ಞರು ಮಾತ್ರ ಮುಂದಿನ ದಶಕ ಎರಡು ದಶಕಗಳ ಗುರಿ ಇರಿಸಿಕೊಂಡು ಯೋಜನೆಗಳನ್ನು ರೂಪಿಸಬಲ್ಲ. ಹೀಗೆ ವಿಷನ್-2020 ಕೊಟ್ಟ ಎಪಿಜೆ ಅಬ್ದುಲ್ ಕಲಾಮ್ ನಮಗೆ ನೆನಪಾಗ್ತಾರೆ.

ಸರ್. ಎಂ ವಿಶ್ವೇಶ್ವರಯ್ಯ ಅವರು ಮೈಸೂರು ಮಹಾರಾಜರಿಗೆ ಮೈಸೂರು ಸಂಸ್ಥಾನದ ಸರ್ವತೋಮುಖ ಬೆಳವಣಿಗೆಗೆ ಯೋಜನೆ ರೂಪಿಸುವ ಸಲುವಾಗಿ ಮಾರ್ಗದರ್ಶನ ನೀಡಲು ಸಮಿತಿಗಳನ್ನು ರೂಪಿಸಲು ಸಲಹೆ ಕೊಡ್ತಾರೆ. ಹಾಗೆ 1911ರಲ್ಲಿ ರಚನೆಯಾದ ಮೈಸೂರು ಸಂಪದಭಿವೃದ್ಧಿ ಸಮಾಜವು (ಮೈಸೂರು ಇಕನಾಮಿಕ್ ಕಾನ್ಪೆರೆನ್ಸ್) ತನ್ನ ಅಂಗವಾಗಿ  ಕಾರ್ಖಾನೆಗಳ ಕೈಗಾರಿಕಾ ಸಮಿತಿ, ವಿದ್ಯಾಸಮಿತಿ ಮತ್ತು  ಭೂ ವ್ಯವಸಾಯ ಸಮಿತಿ ಎಂದು ಮೂರು ಸಮಿತಿಗಳನ್ನು ರಚಿಸುತ್ತದೆ. ಆ ಸಮಿತಿಗಳ ವರದಿಗಳ ಫಲವೇ ಇಂದು ನಾವು ಕರ್ನಾಟಕದಲ್ಲಿ ಕಂಡಿರುವ ಪ್ರಗತಿಯ ಪಥಗಳು. ಇದೇ ವಿದ್ಯಾಸಮಿತಿಯ ವರದಿಯ ಫಲವಾಗಿ ರಚನೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಈಗ ನೂರು ತುಂಬಿದೆ.

ಆಡಳಿತದಲ್ಲಿ ಬಹಳಷ್ಟು ಸ್ಥಿತ್ಯಂತರಗಳು ಕಾಲಕಾಲಕ್ಕೆ ನಡೆಯುತ್ತಲೇ ಬಂದಿವೆ. ಇಂದು ಹಳೆಯ ಸಿಬ್ಬಂದಿಗಳು ಮತ್ತು ಹಳೆಯ ಆಡಳಿತ ವ್ಯವಸ್ಥೆ ತನ್ನ ನಿಧಾನಗತಿಯಿಂದ ಅಡಳಿತದ ವೇಗ ಕುಂದಿದೆ. ಹೊಸ ನೇಮಕಾತಿಗಳು ನಡೆಯುತ್ತಿಲ್ಲ.  ವಯೋಸಹಜವಾಗಿ ಸಿಬ್ಬಂದಿಯ ಕ್ಷಮತೆ ಕಡಿಮೆಯಾಗಿದೆ. ಖಾಸಗಿ ವಹಿವಾಟುಗಳು ನಾಗಾಲೋಟದಲ್ಲಿ ಓಡುತ್ತಿವೆ. ಬೆಂಗಳೂರಿನಂತಹ ನಗರ ಜಾಗತಿಕವಾಗಿ ಐಟಿ ಹಬ್ ಎಂದು ಗುರುತಿಸಲ್ಪಡುತ್ತಿದೆ. ಆದರೆ ಸಾಮಾನ್ಯ ಸರ್ಕಾರಿ ಆಡಳಿತದಲ್ಲಿ ಇದರ ಪಾಲೆಷ್ಟು? ನಾವು ಪ್ರಮುಖವಾಗಿ ಕೇಳಿಕೊಳ್ಳಬೇಕಾದ ಪ್ರಶ್ನೆ ಇದು.

ಸರ್ಕಾರದ ಪುಟಗಟ್ಟಲೆ ಇರುವ ಕಡತಗಳು ಕೆಲವೊಂದು ಅಗತ್ಯ ಸಂದರ್ಭಗಳಲ್ಲಿ ಕಾಣೆಯಾಗಿಬಿಡುತ್ತವೆ. ವಿವಾದಗಳು ಉಂಟಾದಾಗ ಕಡತಗಳಲ್ಲಿನ ಹಾಳೆಗಳೇ ನಾಪತ್ತೆ ಆಗಿಬಿಡುತ್ತವೆ. ಇಂತಹ ಸಮಸ್ಯೆಗಳು ಪರಿಹಾರದ ಮಾರ್ಗಗಳನ್ನು ಕಗ್ಗಂಟು ಮಾಡಿಬಿಡುತ್ತವೆ.

ಸರ್ಕಾರದಲ್ಲಿ ಸಿಬ್ಬಂದಿ ನಿವೃತ್ತರಾದ ನಂತರ ನಿರೀಕ್ಷಿತ ಪ್ರಮಾಣದಲ್ಲಿ ಹೊಸ ನೇಮಕಾತಿ ನಡೆಯುತ್ತಿಲ್ಲ. ಆದರೆ ಜನಸಂಖ್ಯೆ ಜಾಸ್ತಿ ಆಗುತ್ತಿದೆ.  ಕೆಲಸದ ಹೊರೆ ಕೂಡ. ಇದಕೆಲ್ಲ ಏನು ಪರಿಹಾರ. ಕಡತಗಳನ್ನು ನಿರ್ವಹಿಸುವ ಹೊಸಹೊಸ ವಿಧಾನಗಳನ್ನು ಸರ್ಕಾರ ಆವಿಷ್ಕಾರ ಮಾಡುತ್ತಲೇ ಬಂದಿದೆ. ಹಾಗೆ ಸರ್ಕಾರದ ಮನಸ್ಸಿಗೆ ಬಂದ ತಕ್ಷಣದ ಪರಿಹಾರವೇ ತಂತ್ರಜ್ಞಾನ. ಸರ್ಕಾರದ ಕಚೇರಿಗಳಲ್ಲಿ ಮೊದಲ ಹಂತವಾಗಿ LMS (Letter Management System) ಮತ್ತು FMS (File Management System) ಬಳಕೆಗೆ ಬಂದಿದ್ದರ ಹಿನ್ನೆಲೆಯಲ್ಲಿದ್ದದ್ದು ಇದೇ ಆಲೋಚನೆ. ಸರ್ಕಾರದ ಕಚೇರಿಗಳಲ್ಲಿ ಸ್ವೀಕೃತವಾದ ಮನವಿಗಳನ್ನು ನಿರ್ವಹಿಸಿ ಅದರ ನಿರ್ವಹಣೆಯ ವಿವಿಧ ಹಂತಗಳನ್ನು ದಾಖಲಿಸುವುದು LMS ಕೆಲಸವಾಗಿದ್ದರೆ ಕಡತಗಳನ್ನು ಚಲನೆಯನ್ನು ದಾಖಲಿಸುವುದು FMS ಜವಾಬ್ದಾರಿಯಾಗಿತ್ತು.

ಈ ತಂತ್ರಜ್ಞಾನ ಸರ್ಕಾರದ ಕೆಲಸವನ್ನು ಸುಲಭ ಮಾಡುವ ಬದಲು ಇರುವ ಸಿಬ್ಬಂದಿಗೆ  ಕಡತದ ನಿರ್ವಹಣೆ ಮಾತ್ರವಲ್ಲದೆ ಕಂಪ್ಯೂಟರಿನಲ್ಲಿ ದಾಖಲಿಸುವ ಹೆಚ್ಚುವರಿ ಹೊರೆಯಾಗಿ ಪರಿಣಾಮಕಾರಿ ಅನುಷ್ಠಾನದಲ್ಲಿ ಹಿನ್ನಡೆ ಕಂಡಿತು. ಇರುವ ಕೆಲಸವನ್ನು ಸುಲಭಗೊಳಿಸುವ ಸಾಧ್ಯತೆಗಳನ್ನು ಆಡಳಿತ ಮನಗಾಣಬೇಕು. ಆಗಷ್ಟೆ ಜನರಿಗೆ ತತ್ಕಾಲದಲ್ಲಿ ಪರಿಹಾರ ನೀಡಲು ಸಾಧ್ಯ.

ಸರ್ಕಾರದಲ್ಲಿ ದೊಡ್ಡ ಮಟ್ಟದ ಸಮಸ್ಯೆ ಇದ್ದದ್ದು ಕಾಲಬದ್ಧತೆಯಲ್ಲಿ. ಇದಕ್ಕೆ ಪರಿಹಾರ ರೂಪವಾಗಿ ಸಕಾಲ ಯೋಜನೆಯನ್ನು ಅಳವಡಿಸಲಾಯಿತು. ಸರ್ಕಾರ ನೀಡುವ ಸವಲತ್ತು ಮತ್ತು ಸೇವೆಗಳು ಸಕಾಲಿಕವಾಗಿ ಲಭಿಸಿದರಷ್ಟೇ ಆಡಳಿತಕ್ಕೆ ಅರ್ಥ ಎಂಬ ಮಾತು ಈ ಯೋಜನೆಯ ಅನುಷ್ಠಾನದಲ್ಲಿ ದೊಡ್ಡ ಮಟ್ಟದಲ್ಲಿ ಜನರಿಗೆ ತಿಳಿಯಿತು. ಜನರ ಅಂಗೈಗೆ ಅಡಳಿತ ತಲುಪುವಂತಾಯಿತು.

ಯಾವುದೇ ಹೊಸವಿಧಾನವನ್ನು ಆಡಳಿತದಲ್ಲಿ ಅಳವಡಿಸುವಾಗ ಅದರದ್ದೇ ಆದ ಪರಿಮಿತಿಗಳು ಆಡಳಿತವನ್ನು ಬಾಧಿಸುತ್ತವೆ. ಕಾರಣ ಆ ಬದಲಾವಣೆಯನ್ನು ಅನುಷ್ಠಾನ ಮಾಡಬೇಕಾದವರು ಕೂಡ ಅದೇ ಸಮಸ್ಯೆಗಳಿಗೆ ಕಾರಣರಾದ ಅಧಿಕಾರಿ ಸಿಬ್ಬಂದಿ ವರ್ಗದವರೇ.

ಅನಕ್ಷರಸ್ಥ ಜನಪದ ಕಲಾವಿದರಿಂದ ಹಿಡಿದು ಪ್ರಕಾಂಡ ಸಂಶೋಧಕರವರೆಗೆ ಹಲವು ಸ್ಥರಗಳ ಜನವರ್ಗ ಭೇಟಿ ನೀಡುವ ಇಲಾಖೆ ಎಂದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಇಲ್ಲಿ ತಮಟೆ ಬಡಿಯುವ ಒಬ್ಬ ಕಲಾವಿದ ತನ್ನ  ಕಾರ್ಯಕ್ರಮದ ಸಂಭಾವನೆ ಪಡೆಯಲು ಹಲವು ಬಾರಿ ಕಚೇರಿ ಮೆಟ್ಟಿಲು ಎಡತಾಕಬೇಕಿತ್ತು. ಅದರ ಮಧ್ಯೆ ಅವರನ್ನು ಸುಲಿದು ತಿನ್ನುವ ಮಧ್ಯವರ್ತಿಗಳ ಕಾಟ ಬೇರೆ. ಚೆಕ್ ಖಜಾನೆಯಿಂದ ಕಲಾವಿದರ ಹೆಸರಿಗೆ ಬಂದರೂ ಅದನ್ನು ಕಲಾವಿದರಿಂದ ಕಸಿದುಕೊಂಡು ಡಿಸ್ಕೌಂಟ್ ಮಾಡಿ ಪುಡಿಗಾಸು ಕಲಾವಿದನ ಕೈಗಿತ್ತು ಕಳಿಸುವ ದುರುಳರ ಸಮಸ್ಯೆಗಳ ಬಗ್ಗೆ ಹಲವಾರು ದೂರುಗಳ ಬಂದವು. ಆ ಸಮಸ್ಯೆಯ ಪರಿಹಾರಕ್ಕೆ ನಮಗೆ ಕಂಡ ಮಾರ್ಗ ತಂತ್ರಜ್ಞಾನ.

ಸರ್ಕಾರದ ಖಜಾನೆಯಿಂದ ಚೆಕ್ ಪಡೆಯುವ ಬದಲು ಮೊತ್ತ ಮೊದಲಿಗೆ ಸರ್ಕಾರದ ಹಣಕಾಸು ಇಲಾಖೆ, ಖಜಾನೆ ಮತ್ತು ರಿಸರ್ವ್ ಬ್ಯಾಂಕ್ ಅಧಿಕಾರಗಳ ಸಂಗಡ ಚರ್ಚಿಸಿ ಸಲ್ಲಿಕೆಯಾದ ಬಿಲ್ ಮೊತ್ತವನ್ನು ಕಲಾವಿದರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಯೋಜನೆ ಜಾರಿಗೆ ತಂದೆವು. ಅನಕ್ಷರಸ್ಥ ಕಲಾವಿದರಿಂದ ಬ್ಯಾಂಕ್ ವಿವರಗಳನ್ನು ತಪ್ಪಿಲ್ಲದೆ ಪಡೆಯುವ ಜವಾಬ್ದಾರಿಯುದ ಕಾರ್ಯವನ್ನು ಇಲಾಖೆಯ ಸಿಬ್ಬಂದಿ ಅತ್ಯಂತ ಜತನದಿಂದ ಮಾಡಿದರು. ಫಲವೇನೆಂದರೆ ಸರಕಾರವು ಇಡಿಯ ಪಾವತಿ ವ್ಯವಸ್ಥೆಯನ್ನೇ ಇವತ್ತು ಖಜಾನೆ-2 ಮೂಲಕ ಆರ್.ಟಿ.ಜಿ.ಎಸ್ ಮೂಲಕವೇ ಪಾವತಿಸುವ ವ್ಯವಸ್ಥೆ ಅನುಷ್ಠಾನ ಮಾಡಿದೆ. ಮಧ್ಯವರ್ತಿಗಳು ಹೇಳಹೆಸರಿಲ್ಲದಂತೆ ಹಳೆದುಹೋಗುವಂತಾಗಿದೆ.

ಮಧ್ಯವರ್ತಿಗಳು ಚಾಪೆಯ ಕೆಳಗೆ ನುಸುಳಿ ಬರುವ ಹೊಸ ದಾರಿ ಹುಡುಕುತ್ತಲೇ ಇರುತ್ತಾರೆ. ರಂಗೋಲಿ ಕೆಳಗೆ ಕೂಡ ನುಸುಳದಂತೆ ವ್ಯವಸ್ಥೆಯನ್ನು ಕಾಲಕಾಲಕ್ಕೆ ಬಲಪಡಿಸುತ್ತಿರಬೇಕು. ತಂತ್ರಜ್ಞಾನದ ಸವಲತ್ತನ್ನು ಬಳಸುತ್ತಿರಬೇಕು.

ಸಂಘ- ಸಂಸ್ಥೆಗಳಿಗೆ ನೀಡುವ ಧನಸಹಾಯ, ರಂಗಮಂದಿರಗಳನ್ನು ಕಾಯ್ದಿರಿಸುವ ವ್ಯವಸ್ಥೆ, ಇಂತಹ ವ್ಯವಸ್ಥೆಗಳು  ಸರ್ಕಾರದ ಯೋಜನೆಗಳು ಯಾವುದೇ ಪ್ರಭಾವ ಇಲ್ಲದ ಒಬ್ಬ ಸಾಮಾನ್ಯ ವ್ಯಕ್ತಿ ಅಡಳಿತದ ಸವಲತ್ತುಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದೆ. ವರ್ಷಕ್ಕೆ ಕೇವಲ 300-400 ಜನ ಪಡೆಯುತ್ತಿದ್ದ ಸವಲತ್ತಿಗೆ ಇಂದು ರಾಜ್ಯದ ಮೂಲೆಮೂಲೆಗಳಿಂದ ಸುಮಾರು 6,000-7000 ಸಂಸ್ಥೆಗಳು ಅರ್ಜಿ ಸಲ್ಲಿಸುತ್ತಿವೆ. ಕೆಲವರಿಗಷ್ಟೆ ದೊರೆಯುತ್ತಿದ್ದ ಸವಲತ್ತು ಎಲ್ಲರಿಗೂ ವಿಸ್ತರಣೆ ಆದಾಗ ಅದಾಗಲೇ ಬೇರೂರಿರುವ ವ್ಯಕ್ತಿಗಳು ವಿರೋಧಿಸುವದು ಸಹಜ. ಇಲಾಖಾ ಮುಖ್ಯಸ್ಥರ ಇಚ್ಛಾಶಕ್ತಿ ಇದ್ದರಷ್ಟೇ ಇಂತಹ ವ್ಯವಸ್ಥೆಗಳು ಮುಂದುವರೆಯಲು ಸಾಧ್ಯ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಶಾಸಕರು ಮತ್ತು ಸಚಿವರು ನೀಡವ ಸುಮಾರು ಪತ್ರಗಳು ಯಾವುದೇ ವ್ಯವಹಾರ ನಡೆಯದೇ ಕೈಗೂ ಸಿಕ್ಕದಂತೆ ಕಣ್ತಪ್ಪಿ ಹೋಗಿದ್ದವು. ಯಾವುದೇ ಕಡತ ಅಥವ ಮನವಿ ಕೇಳಿದರೂ ಹುಡುಕಲು ಅರ್ಧ ದಿನ ಬೇಕಾಗುತ್ತಿತ್ತು. ಕ್ರಮದ ಪ್ರಯತ್ನ ಮತ್ತು ಪ್ರಕ್ರಿಯೆಯ ಮಾತು ಬರೋದು ಆ ನಂತರ. ಮನವಿ ಇದೆಯೋ ಇಲ್ಲವೋ ಅಂತ ಹುಡುಕಲೇ ಅರ್ಧ ದಿನ. ಹೀಗಾಗಿ ದಿನವಹಿ ಕೆಲಸಗಳೀಗೂ ತೊಂದರೆ. ಕಡೆಗೆ ಇದಕೆಲ್ಲ ಪರಿಹಾರವಾಗಿ ಕಂಡದ್ದು ತಂತ್ರಜ್ಞಾನ.
ನ್ಯಾಷನಲ್ ಇನ್ಫಾಮ್ಯಾಟಿಕ್ಸ್ ಕಾರ್ಪೋರೇಷನ್ ಸಹಯೋಗದಲ್ಲಿ ರಾಷ್ಟ್ರದ ಪ್ರಧಾನಮಂತ್ರಿ ಕಾರ್ಯಾಲಯ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಹದಿನಾಲ್ಕು ಇಲಾಖೆಗಳು ಬಳಸುತ್ತಿದ್ದ ಇ-ಆಫೀಸ್ ತಂತ್ರಜ್ಞಾನವನ್ನು ಕನ್ನಡ ಸಂಸ್ಕೃತಿ ಇಲಾಖೆಗೆ ತರಲಾಯಿತು. ಪೇಪರ್ ರೂಪದಲ್ಲಿ ಕಡತಗಳ ವಹಿವಾಟು ನಿಂತ ನಂತರ ವಿಷಯ ನಿರ್ವಾಹಕರ ಬಳಿ ಶಾಸಕರ ಮತ್ತು ಸಚಿವರ ಶಿಫಾರಸ್ಸುಗಳೂ ಸೇರಿದಂತೆ ಇದ್ದ ವಹಿವಾಟು ನಡೆಸದ ಸುಮಾರು ಐದಾರು ಸಾವಿರ ಮನವಿಗಳು ಹೊರಬಂದವು. ಅವೆಲ್ಲವನ್ನೂ ಸ್ಕ್ಯಾನ್ ಮಾಡಿ ಇ-ಕಡತ ರೂಪದಲ್ಲಿ ಕ್ರಮ ವಹಿಸಲಾಯಿತು.

ಅನಂತರ ಬರುವ ಎಲ್ಲ ಪತ್ರಗಳು ಇ-ಸ್ವೀಕೃತಿ ರೂಪದಲ್ಲಿ ವಿಷಯ ನಿರ್ವಾಹಕರಿಗೆ ಹೋಗುವುದರಿಂದ ಅವರು ಕಡತದಲ್ಲಿ ದಾಖಲಿಸಲೇಬೇಕಾದ ಅನಿವಾರ್ಯತೆ ಇದೆ. ನಿರ್ವಹಿಸಬೇಕಾದ ಸ್ವೀಕೃತಿಗಳ ಸಂಖ್ಯೆ ಮತ್ತು ವಿವರಗಳು ಕಾಣಸಿಗುವುದರಿಂದ ಅವರಿಗೂ ಕೆಲಸದಲ್ಲಿ ವೇಗ ಸಾಧ್ಯವಾಗಿದೆ. ಇಂದು ಅರ್ಧರ್ಧ ದಿನ ಮನವಿ ಹುಡುಕಬೇಕಾಗಿಲ್ಲ. ಮತ್ತು ಇಲಾಖಾ ಮುಖ್ಯಸ್ಥರೇ ತಮ್ಮ ಲಾಗಿನ್ ಮೂಲಕ ಮನವಿ ಅಥವ ಕಡತದ ಸ್ಥಿತಿಯನ್ನು ಗಮನಿಸಬಹುದಾಗಿರುವುದರಿಂದ ಯಾವುದೇ ಮನವಿ ಅಥವ ಕಡತ ವಹಿವಾಟಿಲ್ಲದೆ ಹಂತಗಳಲ್ಲಿ ನಿಲುಗಡೆ ಆಗುವುದಿಲ್ಲ. ಇರುವ ಸಿಬ್ಬಂದಿ ಕೊರತೆಯ ನಡುವೆಯೇ ಸುಮಾರು 40-50 ಅಧಿಕಾರಿ ಸಿಬ್ಬಂದಿ ಇರುವ ಕೇಂದ್ರ ಕಚೇರಿ ಮತ್ತು ಸಹಾಯಕರೇ ಇಲ್ಲದ ಜಿಲ್ಲಾ ಕಚೇರಿಗಳು ವರ್ಷಕ್ಕೆ ಸುಮಾರು 30 ಜಯಂತಿ ಆಚರಣೆ  ಮಾಡುತ್ತ ಸುಮಾರು 300 ಕೋಟಿಗಳ ಅನುದಾನವನ್ನು ವೆಚ್ಚಮಾಡುವಲ್ಲಿ ಯಾವುದೇ ವಿಳಂಬವಿಲ್ಲದೇ ಆದೇಶ ಪಡೆಯಲು ಸಾಧ್ಯವಾಗಿದೆ.

ಒಬ್ಬ ಸಹಾಯಕ ನಿರ್ದೇಶಕರು ಮೊದಲ ವ್ಯವಸ್ಥೆಯಲ್ಲಿ ಒಂದು ಮನವಿ ಬರೆದು ಅಂಚೆಯಲ್ಲಿ ಕಳಿಸಿ, ಅದು ಕಡತ ರೂಪದಲ್ಲಿ ಮಂಡನೆ ಆಗಿ ಆದೇಶ ಪಡೆಯುವುದಕ್ಕೆ ಕನಿಷ್ಠ ಹತ್ತು ದಿನಗಳಾದರೂ ಬೇಕಿತ್ತು. ಆದರೆ ಇಂದು ಇ-ಕಡತ ವ್ಯವಸ್ಥೇಯಲ್ಲಿ ಸಹಾಯಕ ನಿರ್ದೇಶಕರು ಕಳಿಸಿದ ಮನವಿ ಕೂಡಲೇ ನಿರ್ದೇಶಕರ ಲಾಗಿನ್ ಐಡಿಗೆ ಬರುತ್ತದೆ. ಅಲ್ಲಿ ಆದೇಶಗಳನ್ನು ದಾಖಲಿಸಿ ಮರಳಿಸಿದರೆ ಹತ್ತು ನಿಮಿಷದಲ್ಲಿ ಹತ್ತು ದಿನಗಳ ಕೆಲಸ ಮುಗಿಯುತ್ತದೆ. ಇದು ತಂತ್ರಜ್ಞಾನದ ಸಾಧ್ಯತೆಗೆ ದೊಡ್ಡ ಮಾದರಿ.

ತಂತ್ರಜ್ಞಾನವನ್ನು ಅಳವಡಿಸುವಲ್ಲಿ ಇರುವ ದೊಡ್ಡ ಸವಾಲು ತಿಳಿವಳಿಕೆ ಮಿತಿಯದ್ದು. ತೀರ್ಮಾನ ಮಾಡಬೇಕಾದ ಅಧಿಕಾರಿ ವಲಯಕ್ಕೆ ತಂತ್ರಜ್ಞಾನದ ಸಾಧ್ಯತೆಗಳ ಅರಿವಿನ ಕೊರತೆ ಮತ್ತು ಅವರ ಹಿಡನ್ ಅಜೆಂಡಾಗಳ ಅನುಷ್ಠಾನಕ್ಕೆ ಅಡ್ಡಿ ಬರಬಹುದಾದ ಭಯದ ಕಾರಣ ಇ-ಆಡಳಿತ ಅನುಷ್ಠಾನ ಬರುವಲ್ಲಿನ ದೊಡ್ಡ ತೊಡಕು.

ತಂತ್ರಜ್ಞಾನವು ಬಂದ ನಂತರ ಆಡಳಿತ ಸ್ವರೂಪದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಅವುಗಳನ್ನು ಅರ್ಥೈಸಿಕೊಂಡು ಬಳಸುವ ಕಾನೂನುಗಳು ಕೂಡ ಪರಿಷ್ಕಾರಗೊಳ್ಳಬೇಕು. ಅದಕ್ಕೆ ಸಂಬಂಧಿಸಿದ ಹಿರಿಯ ಅಧಿಕಾರಿಗಳ ಇಚ್ಛಾಶಕ್ತಿ ಕೂಡ ಪೂರಕವಾಗಿ  ಬದಲಾಗಬೇಕು.

ಇ-ಆಡಳಿತದ ಅನುಷ್ಠಾನದಲ್ಲಿ ಇರಬಹುದಾದ ಕೆಲವು ಅನುಷ್ಠಾನದ ಸಮಸ್ಯೆಗಳನ್ನು ಪ್ರಮುಖವಾಗಿ ಈ 2 ವಿಧಗಳನ್ನಾಗಿ ಗುರುತಿಸಬಹುದು.

ಖಾಸಗಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ ಆಗುತ್ತಿದ್ದು ಅದರಲ್ಲಿ ಕನ್ನಡದಲ್ಲಿ ಬಳಕೆಯಾಗದಿರುವುದು ಒಂದು ಸಮಸ್ಯೆ. ಆದರೆ ಸರ್ಕಾರಿ ಆಡಳಿತದಲ್ಲಿ ಕನ್ನಡ ಅನುಷ್ಠಾನವಾಗಿದ್ದರೂ ಅದರಲ್ಲಿ ತಂತ್ರಜ್ಞಾನದ ಬಳಕೆ ಆಗದೆ ಇರುವುದು ಇಲ್ಲಿ ಇ-ಆಡಳಿತದ ಅನುಷ್ಠಾನದ ಸಮಸ್ಯೆಗಳು ಮುಖ್ಯವಾಗಿ ಇಲ್ಲಿ ಸರ್ಕಾರದ ಆಡಳಿತದಲ್ಲಿರುವ ಸಮಸ್ಯೆಗಳನ್ನು ಗುರಿಯಾಗಿಸಿಕೊಂಡು ಸಮಸ್ಯೆಯನ್ನು ಈ ಕೆಳಕಂಡಂತೆ ಪಟ್ಟಿ ಮಾಡಬಹುದು.
  • ಆಡಳಿತ ಯಂತ್ರವು ಪ್ರಾರಂಪರಿಕ ಚಿಂತನೆ ಹಾಗೂ ಮನಸ್ಥತಿಯಿಂದ ಇನ್ನೂ ಹೊರಬರದಿರುವುದು.
  • ಅಧಿಕಾರಿಗಳು ಮತ್ತು ಸಿಬ್ಬಂದಿಗಳಲ್ಲಿ ತಂತ್ರಜ್ಞಾನದ ಬಗ್ಗೆ ಇರುವ ನಕರಾತ್ಮಕ ಧೋರಣೆ.
  • ಸರ್ಕಾರದ ಕೆಲಸದಲ್ಲಿ ಹಾಗೂ ಹಲವು ಮೇಲಾಧಿಕಾರಿಗಳಲ್ಲಿ ಸ್ಥಳೀಯ ಭಾಷೆಯನ್ನು ಬೆಳೆಸಬೇಕು ಉಳಿಸಬೇಕು ಎಂಬ ಇಚ್ಛಾಶಕ್ತಿ, ಬದ್ಧತೆ ಇಲ್ಲದಿರುವುದು.
  • ತಂತ್ರಜ್ಞಾನದ ಬಳಕೆಯಲ್ಲಿ ಏಕರೂಪತೆ, ಶಿಷ್ಟತೆ, ಸಂವಹನಶೀಲತೆ ಇರದೇ ಇರುವುದು.
  • ನೌಕರರ ಕೌಶಲ್ಯದ ಕೊರತೆ. ಆಂಗ್ಲ ಭಾಷೆಯಲ್ಲಿ ಕೌಶಲ್ಯವಿದ್ದರೂ ನಮ್ಮ ಭಾಷೆಯಲ್ಲಿ ಬಳಕೆ ಬಗ್ಗೆ ತಿಳುವಳಿಕೆ ಇಲ್ಲದಿರುವುದು. 
  • ಆಡಳಿತದ ಗೌಪ್ಯತೆ ನಷ್ಟವಾಗಿ ಹ್ಯಾಕರ್‌ಗಳ ವಶವಾಗಬಹುದು ಎಂಬ ಭಯ.
  • ಸ್ಥಳೀಯ ಭಾಷೆಗನುಗುಣವಾಗಿ ತಂತ್ರಾಂಶಗಳ ನಿರೀಕ್ಷಿತ ಮಟ್ಟದಲ್ಲಾಗದಿರುವುದು.
  • ಕಾನೂನಿನ ಪರಿಷ್ಕರಣೆ ಆಗದಿರುವುದು. 
  • ಶಿಕ್ಷಣ ಮಾತೃ ಭಾಷೆ ಕಡ್ಡಾಯವಾಗದಿರುವುದರಿಂದ ಓದುವ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಬೆಳವಣಿಗೆ ಅದಕ್ಕೆ ತಕ್ಕಂತೆ ತಂತ್ರಜ್ಞಾನ ಬಳಕೆಯಾಗುತ್ತಿರುವುದು.
  • ತಂತ್ರಜ್ಞಾನಕ್ಕೆ ಪೂರಕವಾದ ಆಡಳಿತ ವ್ಯವಸ್ಥೆ ಇರದೇ ಇರುವುದು.
  • ಐಟಿ, ಬಿಟಿ, ಇ-ಆಡಳಿತ ಇಲಾಖೆ ಇದ್ದರೂ ಇ-ಆಡಳಿತದಲ್ಲಿ ಕನ್ನಡ ಬಳಕೆ ಅನುಷ್ಠಾನದ ಸಮಗ್ರ ಅಭಿವೃದ್ಧಿ ಬಗ್ಗೆ ನಿರೀಕ್ಷಿತ ಮಟ್ಟದಲ್ಲಿ ಕೆಲಸಗಳಾಗದಿರುವುದು.
  • ಜಾಲತಾಣಗಳು ಸುಲಭಗ್ರಾಹ್ಯವಲ್ಲದೆ ಇರುವುದು. 
  • ಯೂನಿಕೋಡ್ ಶಿಷ್ಟತೆಯನ್ನು ಪರಿಪಾಲಿಸದಿರುವುದು. 
  • ಶಿಷ್ಟತೆ ಹೊಂದಿರದ ಏಕರೂಪ ಮಾಹಿತಿಯ ಕೊರತೆ.
  • ಆಡಳಿತ ವರ್ಗಕ್ಕೆ ಅಗತ್ಯ ತರಬೇತಿಯ ಕೊರತೆ ಇರುವುದು.
  • ತಂತ್ರಜ್ಞಾನದ ಬಗ್ಗೆ ಸ್ಪಷ್ಟ ಧನಾತ್ಮಕ ತಿಳುವಳಿಕೆ ಇರದೇ ಇರುವುದು.
  • ಆಡಳಿತ ವರ್ಗದಲ್ಲಿರುವ ಭ್ರಷ್ಟಾಚಾರದಿಂದಾಗಿ ಇ-ಆಡಳಿತ ಅನುಷ್ಠಾನವಾದಲ್ಲಿ ಸ್ವ ಲಾಭಕ್ಕೆ ಅವಕಾಶವಿಲ್ಲ ಎಂಬ ಭಾವನೆ.
  • ತಂತ್ರಜ್ಞಾನಕ್ಕೆ ತಕ್ಕಂತೆ ಆಯಾ ಪ್ರಾಂತೀಯ ಭಾಷೆಗಳು ಬೆಳೆಯದೆ ಇರುವುದು. 
  • ಭ್ರಷ್ಟಾಚಾರದ ಮನಸಿನ ಪಾರದರ್ಶಕತೆ ವಿರೋಧಿ ಮನಸ್ಸುಗಳು.
  • ಸರ್ಕಾರದ ಇಲಾಖೆಗಳಲ್ಲಿ ತಂತ್ರಜ್ಞಾನ ಪರಿಣಿತರನ್ನು ಗಮನದಲ್ಲಿಟ್ಟುಕೊಂಡು ನೇಮಕಾತಿ ಮಾಡದಿರುವುದು.
  • ವಿವಿಧ ಪ್ರಕಾರದ ತಂತ್ರಾಂಶಗಳ ಬಳಕೆ. ಉದಾ: ಎಲ್.ಎಮ್.ಎಸ್., ಎಫ್.ಎಂ.ಎಸ್., ಪಂಚತಂತ್ರ, ಸಿ.ಎಮ್.ಒ ಡ್ಯಾಶ್‌ಬೋರ್ಡ್, ಇತ್ಯಾದಿ.
  • ಹಣಕಾಸಿನ ಹಾಗೂ ಅಗತ್ಯ ಪರಿಕರಗಳ ಕೊರತೆ.
  • ತಂತ್ರಜ್ಞಾನದ ಅನಕ್ಷರತೆಯಿಂದ ಜನರ ಸಹಭಾಗಿತ್ವದ ಕೊರತೆ.
ಮಹಾರಾಷ್ಟ್ರದಲ್ಲಿ ಸಚಿವಾಲಯ ಪೂರ್ಣವಾಗಿ ಇ-ಆಡಳಿತವನ್ನು ಅನುಷ್ಟಾನ ಮಾಡಿದೆ. ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕರ್ಣಾಟಕದಲ್ಲಿ ಏಕೆ ಅನುಷ್ಠಾನ ಆಗಿಲ್ಲ ಎಂಬ ಪ್ರಶ್ನೆ ಪ್ರಶ್ನೆ ಆಗಿಯೇ ಇದೆ. ಹಾಗಾದರೆ ಇ-ಆಡಳಿತದ ಇಲಾಖೆ ಜವಾಬ್ದಾರಿ ಏನು? ಎಂಬ ಪ್ರಶ್ನೆಯು ಉದ್ಭವವಾಗುತ್ತದೆ.

ಹಾಗಂತ ಯಾವುದೇ ತಂತ್ರಜ್ಞಾನ ಕನ್ನಡದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಪರಿಭಾವಿಸಬೇಕಾಗಿಲ್ಲ. ನೆಮ್ಮದಿ, ಭೂಮಿ, ಕಾವೇರಿ, ಗಾಂಧಿ ಕಾಯಕಸಾಕ್ಷಿ, ಎಲ್.ಎಮ್.ಎಸ್. ಎಫ್.ಎಂ.ಎಸ್., ಪಂಚತಂತ್ರ, ಸಿ.ಎಮ್.ಒ ಡ್ಯಾಶ್ ಬೋರ್ಡ್, ಕೆಡಿಪಿ, ಎಂಪಿಕ್, ಸಕಾಲ, ವಿವಿಧ ಮೊಬೈಲ್ ಆಪ್ಗಳು ಹೀಗೆ ಬಿಡಿಬಿಡಿಯಾಗಿ ಆಡಳಿತದಲ್ಲಿ ಇ-ತಂತ್ರಜ್ಞಾನ ಅಳವಡಿಕೆ ಆಗಿದೆ. ಇದು ನೌಕರರ ಕೊರತೆ ಇರುವ ಇಲಾಖೆಗಳಲ್ಲಿ ಮತ್ತಷ್ಟು ಕೆಲಸದ ಹೊರೆಯನ್ನು ಹೆಚ್ಚಿಸಿದೆ. ನಿರಂತರ ಹಾರ್ಡ್ ಫೈಲುಗಳನ್ನು ನಿರ್ವಹಿಸಿದ ನಂತರ ಕಂಪ್ಯೂಟರಿನಲ್ಲಿ ನಮೂದು ಮಾಡುವ ಮೂಲಕ ಅಧಿಕ ಹೊರೆಯಾಗುತ್ತಿದೆ. ಮೊದಲೇ ಸಿಬ್ಬಂದಿ ಸಂಖ್ಯೆ ಕಡಿಮೆ ಇದೆ.

ಕೆಲಸದ ಜೊತೆಗೆ ಇದರಿಂದ ತಂತ್ರಜ್ಞಾನದಿಂದ ಕೆಲಸ ಕಡಿಮೆಯಾಗುತ್ತದೆ ಎಂದು ಭಾವಿಸಿದ್ದ ಆಡಳಿತ ವರ್ಗಕ್ಕೆ ತಂತ್ರಜ್ಞಾನದ ಬಳಕೆಯಿಂದ ಹೆಚ್ಚು ಕೆಲಸದ ಹೊರೆ ಹಾಗೂ ಕಿರಿಕಿರಿಯಾಗುತ್ತದೆ ಎಂಬ ಭಾವನೆ ಮೂಡಿದೆ. ಆದ್ದರಿಂದ ಇ-ಆಡಳಿತ ವ್ಯವಸ್ಥೆಯನ್ನು ಅನುಷ್ಟಾನಗೊಳಿಸಿ ಅದೆ ತಂತ್ರಾಂಶದಲ್ಲಿ ಇತರೆ ಅಗತ್ಯ ಮಾಹಿತಿ ಅಂದರೆ ಮಾಸಿಕ ಕಡತಗಳ ವಿಲೇವಾರಿ, ಬಾಕಿ ಕಡತಗಳ ಮಾಹಿತಿ, ಆರ್ಥಿಕ ವೆಚ್ಚಗಳ ಪ್ರಗತಿ, ಫ್ಲ್ಯಾಗ್ ಶಿಪ್ ಕಾರ್ಯಕ್ರಮಗಳ ಪ್ರಗತಿ ಪಡೆಯಬಹುದು ಹಾಗೂ ತಪ್ಪು ಮಾಹಿತಿ ನೀಡುವುದನ್ನು ತಪ್ಪಿಸಬಹುದಾಗಿದೆ.

ಕನ್ನಡ ಭಾಷೆಯು ಆಡಳಿತದ ಭಾಷೆಯಾಗಿ ಸಂಪೂರ್ಣವಾಗಿ ಅನುಷ್ಠಾನ ಆಗಬೇಕಾದರೆ ಸ್ಥಳೀಯ ಜನರ ಭಾಷೆಯಲ್ಲಿ ಆಡಳಿತ ನಡೆಸುವಂತಾಗಬೇಕು. ಮತ್ತು ಆಧುನಿಕತೆಯ ವೇಗದಲ್ಲಿ ಹೊಂದುವಂತೆ ತಂತ್ರಜ್ಞಾನದ ನೆಲೆಯಲ್ಲಿ ಭಾಷೆಯ ಅಭಿವೃದ್ಧಿ ಆದ್ಯತೆಯಾಗಬೇಕು.

ಕನ್ನಡ ಭಾಷೆಯನ್ನು ಯೂನಿಕೋಡ್ ಶಿಷ್ಟತೆಯಲ್ಲಿ ಬಳಸುವ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕು. ತಂತ್ರಜ್ಞಾನದ ಸಂಪೂರ್ಣ ಬಳಕೆಗೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಇಚ್ಛಾಶಕ್ತಿ ತೋರಬೇಕು.

(ಲೇಖಕರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‌‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು)

ಕಾಮೆಂಟ್‌ಗಳಿಲ್ಲ:

badge