'ಮೈತ್ರಿ'
ಈ ಪ್ರಪಂಚದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಅಭ್ಯಾಸವಿರುತ್ತದೆ. ಹಾಡು ಹೇಳುವುದು, ಹರಟೆ ಹೊಡೆಯುವುದು, ಮೂಗಿಗೆ ಬೆರಳು ಹಾಕುವುದು, ಸುಳ್ಳು ಹೇಳುವುದು, ಸಿಗರೇಟು ಸೇದುವುದು, ಹೆಂಡ ಕುಡಿಯುವುದು - ಹೀಗೆ ಇಂತಹ ಅಭ್ಯಾಸಗಳು ಯಾವ ರೀತಿಯದ್ದಾದರೂ ಆಗಿರುವುದು ಸಾಧ್ಯ.
ಕೆಲವೊಮ್ಮೆ ಕೆಲವು ಅಭ್ಯಾಸಗಳು ನಿಯಂತ್ರಣಗಳನ್ನೆಲ್ಲ ಮೀರಿ ಬೆಳೆದುಬಿಡುತ್ತವೆ. ಕಚೇರಿಯ ವೇಳೆಯಲ್ಲೂ ಗೆಳೆಯರೊಡನೆ ಹರಟುವ ಆಸೆಯಾಗುವುದು, ಎಷ್ಟು ಸಿಗರೇಟ್ ಸೇದಿದರೂ ಸಾಲದೆನ್ನಿಸುವುದೆಲ್ಲ ಇಂತಹ ಪರಿಸ್ಥಿತಿಯಲ್ಲೇ.
ಚಟ ಎಂದು ಕರೆಯುವುದು ಇದನ್ನೇ. ಹೆಸರಾಂತ ವಿಜ್ಞಾನಿ, ಲೇಖಕ ಡಾ. ಬಿ. ಜಿ. ಎಲ್. ಸ್ವಾಮಿ ತಮ್ಮ 'ಸಾಕ್ಷಾತ್ಕಾರದ ದಾರಿಯಲ್ಲಿ' ಕೃತಿಯಲ್ಲಿ "ಇಷ್ಟು ದೊರಕಿದರೆ ಅಷ್ಟು ಬೇಕೆಂಬಾಸೆ, ಅಷ್ಟು ದೊರಕಿದರೆ ಮತ್ತಷ್ಟರಾಸೆ"ಯನ್ನು ಹುಟ್ಟಿಸುವುದೇ ಚಟ ಎಂದು ಹೇಳುತ್ತಾರೆ.
ಈ ಕೃತಿಯಲ್ಲಿ ಎಲೆ-ಅಡಕೆ, ತಂಬಾಕು, ಅಫೀಮು-ಗಾಂಜಾ, ಕಾಫಿ-ಟೀಗಳನ್ನೆಲ್ಲ ಚಟಕ್ಕೆ ಉದಾಹರಣೆಗಳೆಂದು ಪಟ್ಟಿಮಾಡಲಾಗಿದೆ. ಸ್ವಾಮಿಯವರು ಈಗ ಇದ್ದಿದ್ದರೆ ಖಂಡಿತಾ ಇನ್ನೊಂದು ವಸ್ತುವನ್ನೂ ಈ ಸಾಲಿಗೆ ಸೇರಿಸಿರುತ್ತಿದ್ದರು ಅನ್ನಿಸುತ್ತದೆ.
ಆ ವಸ್ತುವೇ ಮೊಬೈಲ್ ಫೋನು!
ಕೆಲವು ದಶಕಗಳ ಹಿಂದೆ ಆವಿಷ್ಕಾರಗೊಂಡು ಅತ್ಯಂತ ಕಡಿಮೆ ಅವಧಿಯಲ್ಲಿ ನಮ್ಮೆಲ್ಲರ ಬದುಕುಗಳನ್ನೂ ಪ್ರಭಾವಿಸಿರುವುದು ಈ ಸಾಧನದ ಹೆಗ್ಗಳಿಕೆ, ನಿಜ. ಅದೇ ರೀತಿ ಮಿತಿಮೀರಿದ ಅವಲಂಬನೆಯಿಂದಾಗಿ ಮೊಬೈಲ್ ಫೋನಿನ ಬಳಕೆ ಅನೇಕರಿಗೆ ಚಟವಾಗಿ ಪರಿಣಮಿಸಿರುವುದೂ ನಿಜವೇ.
ಬೇಕಿದ್ದರೆ ನಿಮ್ಮ ಸುತ್ತಮುತ್ತಲಿನ ಮೊಬೈಲ್ ಬಳಕೆದಾರರ ಅಭ್ಯಾಸಗಳನ್ನೇ ಕೊಂಚ ಕೂಲಂಕಷವಾಗಿ ನೋಡಿ: ಬೆಳಿಗ್ಗೆ ಎದ್ದತಕ್ಷಣ - ರಾತ್ರಿ ಮಲಗುವ ಮುನ್ನ ಮೊಬೈಲ್ ನೋಡುವುದು, ಕೆಲ ನಿಮಿಷಗಳಿಗೆ ಒಂದುಬಾರಿಯಂತೆ ಇಡೀ ದಿನ ಅದನ್ನು ನೋಡುತ್ತಲೇ ಇರುವುದು, ರಸ್ತೆಯಲ್ಲಿ ನಡೆಯುವಾಗ - ವಾಹನ ಚಲಾಯಿಸುವಾಗ ಮೊಬೈಲ್ ಬಳಸುವುದು, ಇತರರೊಡನೆ ಇದ್ದಾಗಲೂ ಮೊಬೈಲಿನಲ್ಲೇ ಮುಳುಗಿರುವುದು,... ಹೀಗೆ ಅನೇಕ ವಿಚಿತ್ರ ಅಭ್ಯಾಸಗಳು ನಮ್ಮ ಗಮನಕ್ಕೆ ಬರುತ್ತವೆ. ಈ ಪೈಕಿ ಕೆಲವು ನಮ್ಮ ಅಭ್ಯಾಸಗಳೇ ಆಗಿದ್ದರೂ ಆಶ್ಚರ್ಯವೇನಿಲ್ಲ!
ಹೌದು, ಮೊಬೈಲ್ ಫೋನಿನಿಂದಾಗಿ ಅನುಕೂಲಗಳಾಗಿರುವಂತೆಯೇ ಹಲವಾರು ದುಷ್ಪರಿಣಾಮಗಳೂ ಆಗಿವೆ. ಮುಖಾಮುಖಿ ಸಂವಹನಕ್ಕೆ ಅಡಚಣೆ ತಂದದ್ದು ಇಂತಹ ದುಷ್ಪರಿಣಾಮಗಳ ಪೈಕಿ ಪ್ರಮುಖವಾದದ್ದು. ಗೆಳೆಯನ ಜೊತೆ ಹೋಟಲಿಗೆ ಹೋದಾಗ, ಕಚೇರಿಯ ಮೀಟಿಂಗಿನಲ್ಲಿ ಭಾಗವಹಿಸುವಾಗ, ಕಾಲೇಜಿನಲ್ಲಿ ಪಾಠ ಕೇಳುವಾಗಲೆಲ್ಲ ಸಂವಹನದ ಪರಿಣಾಮವನ್ನು ಕಡಿಮೆಮಾಡುವುದರಲ್ಲಿ ಮೊಬೈಲ್ ಫೋನ್ ಪ್ರಮುಖ ಪಾತ್ರ ವಹಿಸುತ್ತಿದೆ. ಮೊಬೈಲಿನೊಳಗಿನ ಡಿಜಿಟಲ್ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎನ್ನುವುದರ ಕುರಿತು ಕ್ಷಣಕ್ಷಣದ ಸುದ್ದಿ ಪಡೆಯುವ, ಹಂಚಿಕೊಳ್ಳುವ ಹಪಾಪಿಯಲ್ಲಿ ನಾವು ನಮ್ಮೆದುರಿಗೆ ನಡೆಯುತ್ತಿರುವ ಸಂಗತಿಗಳತ್ತ ಗಮನಕೊಡುವುದನ್ನೇ ಮರೆಯುತ್ತಿದ್ದೇವೆ. ಇದು ಅಪಘಾತಗಳಿಗೆ, ದುರಂತಗಳಿಗೆ ಕಾರಣವಾಗುತ್ತಿರುವುದೂ ಉಂಟು.
ಇನ್ನೊಬ್ಬರೊಡನೆ ನಡೆಯುವ ಸಂವಹನ ಹಾಗಿರಲಿ, ನಾವು ಒಬ್ಬರೇ ಮಾಡುವ ಕೆಲಸಗಳಲ್ಲಿ ಸಾಧಿಸಬೇಕಾದ ಏಕಾಗ್ರತೆಗೂ ಮೊಬೈಲ್ ಫೋನ್ ಭಂಗತರುತ್ತಿದೆ. ಓದು ಬರಹಗಳ ನಡುವೆ, ಕಚೇರಿ ಕೆಲಸದ ನಡುವೆ ಮೊಬೈಲಿನಿಂದಾಗುವ ಅಡಚಣೆ ನಮಗೆ ಎಷ್ಟು ಅಭ್ಯಾಸವಾಗಿದೆಯೆಂದರೆ ಒಂದಷ್ಟು ಹೊತ್ತು ಮೊಬೈಲ್ ಸದ್ದುಮಾಡಲಿಲ್ಲವೆಂದರೆ ಅದು ಸರಿಯಿದೆಯೋ ಇಲ್ಲವೋ ಎಂದು ನಾವೇ ಪರೀಕ್ಷಿಸುತ್ತೇವೆ. ಬೇರೆ ಕೆಲಸಗಳ ಮಾತು ಹಾಗಿರಲಿ, ಅಮೆರಿಕಾದಲ್ಲಿ ನಡೆದ ಒಂದು ಅಧ್ಯಯನದಲ್ಲಿ ಶೇ. ೭೫ರಷ್ಟು ಬಳಕೆದಾರರು ತಮ್ಮ ಮೊಬೈಲುಗಳನ್ನು ಬಾತ್‍ರೂಮಿಗೂ ಕೊಂಡೊಯ್ಯುತ್ತಾರೆ ಎಂಬ ಅಂಶ ಬೆಳಕಿಗೆ ಬಂದಿತ್ತು!
ಕೆಲಸಗಳನ್ನು ಸಮಯಕ್ಕೆ ಸರಿಯಾಗಿ, ಸರಿಯಾದ ಗುಣಮಟ್ಟದಲ್ಲಿ ಮಾಡಿ ಮುಗಿಸದಿರುವ ಹಿನ್ನೆಲೆಯಲ್ಲೂ ಮೊಬೈಲ್ ಫೋನ್ ಇದೆ. ಯಾವುದೋ ಜರೂರು ಕೆಲಸ ಇನ್ನರ್ಧ ಗಂಟೆಯಲ್ಲಿ ಮುಗಿಯಬೇಕು ಎಂದು ಗೊತ್ತಿದ್ದಾಗಲೂ ಒಮ್ಮೆ ಫೇಸ್‌ಬುಕ್ ನೋಡಿಬಿಡೋಣ ಎನ್ನುವಂತೆ ಮಾಡುವುದು ಅದರ ಶಕ್ತಿ. ಮುಂದಿನವಾರದಲ್ಲೇ ಪರೀಕ್ಷೆ ಎನ್ನುವಾಗಲೂ ಇಂದಿನ ವಿದ್ಯಾರ್ಥಿಗಳನ್ನು ವಾಟ್ಸ್‌ಆಪ್-ಫೇಸ್‌ಬುಕ್‌ಗಳಿಂದ ದೂರವಿಡುವುದು ಎಷ್ಟು ಕಷ್ಟ ಎನ್ನುವುದು ಆ ಪರಿಸ್ಥಿತಿಯ ಅನುಭವವಿದ್ದವರಿಗಷ್ಟೇ ಗೊತ್ತು.
ಮೊಬೈಲ್ ಮೂಲಕ ಸುಲಭಕ್ಕೆ ಎಟುಕುವ ಸಮಾಜಜಾಲಗಳ - ವಾಟ್ಸ್‌ಆಪ್‌ನಂತಹ ಸವಲತ್ತುಗಳ ಮೂಲಕ ಸಂವಹನ ಸುಲಭವಾಗಿದೆಯಲ್ಲ, ಅದು ನಮ್ಮಲ್ಲಿ ಅನೇಕರನ್ನು ಸೋಮಾರಿಗಳನ್ನಾಗಿಯೂ ಮಾಡಿದೆ. ಅಗತ್ಯ ಮಾಹಿತಿ ಪಡೆದುಕೊಳ್ಳಲು ಸ್ವಲ್ಪವೂ ಪ್ರಯತ್ನಪಡದೆ ಸಣ್ಣಪುಟ್ಟ ಪ್ರಶ್ನೆಗಳನ್ನೂ ಇತರರಿಗೆ ವರ್ಗಾಯಿಸುವ ಕೆಟ್ಟ ಅಭ್ಯಾಸ ಹೆಚ್ಚಲು ಕಾರಣವಾಗಿರುವುದು ಇದೇ ಅಂಶ. ಇಲಾಖೆಯ ಜಾಲತಾಣದಲ್ಲಿರಬಹುದಾದ, ಅಥವಾ ಗುಮಾಸ್ತನೊಬ್ಬ ನೀಡಬಹುದಾದ ಮಾಹಿತಿ ಪಡೆಯಲು - ಅವರ ಸಂಪರ್ಕ ವಿವರ ಗೊತ್ತು ಎಂಬ ಒಂದೇ ಕಾರಣಕ್ಕಾಗಿ - ಆ ಇಲಾಖೆಯ ಮುಖ್ಯಸ್ಥರನ್ನೇ ಸಂಪರ್ಕಿಸುವ ಅನೇಕ ಬೃಹಸ್ಪತಿಗಳನ್ನು ನಾನೇ ಸ್ವತಃ ನೋಡಿದ್ದೇನೆ. ಇಂಥದ್ದೊಂದು ವಿಷಯದ ಬಗ್ಗೆ ಪಿಎಚ್‌ಡಿ ಮಾಡುತ್ತಿದ್ದೇನೆ, ಅದರ ಬಗ್ಗೆ ಇಷ್ಟು ವಿವರ ಬೇಕು, ಅದನ್ನೆಲ್ಲ ಟೈಪ್ ಮಾಡಿ ವಾಟ್ಸ್‌ಆಪ್ ಮಾಡಿಬಿಡಿ ಎನ್ನುವವರೂ ನನ್ನ ಸಂಪರ್ಕಕ್ಕೆ ಬಂದಿದ್ದಾರೆ!
ಮೊಬೈಲಿನಿಂದ ಇಷ್ಟೆಲ್ಲ ತೊಂದರೆಗಳಿವೆ ಎಂದಾದರೆ ಯಾರಿಗೂ ಅವುಗಳ ಪರಿಚಯವೇ ಇಲ್ಲವೇ? ಹಾಗೆಂದು ಭಾವಿಸುವುದು ಖಂಡಿತಾ ತಪ್ಪಾಗುತ್ತದೆ. ಮೊಬೈಲ್ (ಅಥವಾ ಇನ್ನಾವುದೇ ಗ್ಯಾಜೆಟ್) ಒಂದು ಚಟವಾಗಿ ಬದಲಾಗುತ್ತಿರುವ ಸಂಗತಿ ಅದರಿಂದ ಬಾಧಿತರಾದವರೂ ಸೇರಿ ಎಲ್ಲರಿಗೂ ಗೊತ್ತು. ಆದರೆ ಹೆಚ್ಚುಕಾಲ ಆ ಚಟದಿಂದ ದೂರವಿರುವುದು ಕಷ್ಟ, ಅಷ್ಟೇ.
ಚಟದ ಲಕ್ಷಣಗಳೇನು ಎಂದು ವಿವರಿಸುತ್ತ ಸ್ವಾಮಿಯವರು ತಮ್ಮ ಪುಸ್ತಕದಲ್ಲಿ ಇನ್ನೂ ಒಂದು ಅಂಶವನ್ನು ಬರೆದಿದ್ದಾರೆ: "ದೈಹಿಕ ಮತ್ತು ಮಾನಸಿಕ ಕ್ರಿಯೆಗಳೆರಡೂ ಆ ವಸ್ತುವಿನಿಂದ ಮಾರ್ಪಾಟಿಗೆ ಒಗ್ಗಿಹೋಗಿರಬೇಕು. ಸೇವನೆಯನ್ನು ನಿಲ್ಲಿಸಿದರೆ ಬೇರೆ ವಿಧವಾದ ದುಷ್ಪರಿಣಾಮ ಉಂಟಾಗಬೇಕು." ಈ ವಿವರಣೆ ಮೊಬೈಲ್ ಫೋನುಗಳಿಗೆ ಎಷ್ಟು ಚೆನ್ನಾಗಿ ಹೊಂದುತ್ತದೆ ಅಲ್ಲವೇ?
ನಮ್ಮಲ್ಲಿ ಅನೇಕರು ಮೊಬೈಲ್ ಫೋನ್ ಬಿಟ್ಟು ಇರುವುದೇ ಸಾಧ್ಯವಿಲ್ಲ ಎನ್ನುವ ಮಟ್ಟದ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡುಬಿಟ್ಟಿದ್ದೇವೆ. ಒಂದು ದಿನ ಅಕಸ್ಮಾತ್ತಾಗಿ ಫೋನನ್ನು ಮನೆಯಲ್ಲೇ ಮರೆತು ಆಫೀಸಿಗೋ ಕಾಲೇಜಿಗೋ ಹೋದರೆ ನಮ್ಮಲ್ಲಿ ಶುರುವಾಗುವ ಚಡಪಡಿಕೆ ಯಾವ ವರ್ಣನೆಗೂ ನಿಲುಕುವಂಥದ್ದಲ್ಲ. ಬ್ಯಾಟರಿ ಇನ್ನೇನು ಮುಗಿದುಹೋಗುತ್ತದೆ ಎನ್ನುವ ಸಂದರ್ಭದಲ್ಲಿ, ಮೊಬೈಲ್ ಸಿಗ್ನಲ್ ಸರಿಯಾಗಿ ಸಿಗದ ಪ್ರದೇಶಗಳಲ್ಲಿ, ಅಂತರಜಾಲ ಸಂಪರ್ಕ ಕೆಲಸಮಾಡದ ಸನ್ನಿವೇಶಗಳಲ್ಲೂ ನಮ್ಮದು ಇಂಥದ್ದೇ ಚಡಪಡಿಕೆ.
ಪರಿಣತರು ಇದನ್ನು ತಂತ್ರಜ್ಞಾನದ ಅತಿಬಳಕೆಯಿಂದ ಉಂಟಾಗುವ ಒತ್ತಡ, ಅರ್ಥಾತ್ 'ಟೆಕ್ನೋಸ್ಟ್ರೆಸ್' ಎಂದು ಕರೆಯುತ್ತಾರೆ. ಇಮೇಲ್, ಫೇಸ್‌ಬುಕ್, ವಾಟ್ಸ್‌ಆಪ್ ಮೊದಲಾದ ಖಾತೆಗಳನ್ನು - ಆ ಸಾಧ್ಯತೆಯಿದೆ ಎನ್ನುವ ಒಂದೇ ಕಾರಣಕ್ಕಾಗಿ - ಪದೇಪದೇ ಪರಿಶೀಲಿಸುವುದರ ಹಿಂದೆ ಇದೇ ಒತ್ತಡದ ಕೈವಾಡವಿದೆ ಎನ್ನುವುದು ಅವರ ಅಭಿಪ್ರಾಯ. ಅಲ್ಲೆಲ್ಲೋ ಘಟಿಸಬಹುದಾದ ಯಾವುದೋ ಮುಖ್ಯವಾದ ಘಟನೆಗಳು ನಮ್ಮ ಗಮನಕ್ಕೆ ಬಾರದೇ ಹೋಗಬಹುದು ಎಂಬ ಭೀತಿಯೂ ಇಲ್ಲಿ ಕೆಲಸಮಾಡುತ್ತದಂತೆ. ಇದನ್ನು 'ಫಿಯರ್ ಆಫ್ ಮಿಸ್ಸಿಂಗ್ ಔಟ್' (FOMO) ಎಂದು ಕರೆಯುತ್ತಾರೆ. ಕ್ಲಾಸಿನಲ್ಲಿ ಕುಳಿತಿದ್ದಾಗಲೂ ಕದ್ದುಮುಚ್ಚಿ ಫೇಸ್‍ಬುಕ್ ನೋಡುವ ಕಾಲೇಜು ವಿದ್ಯಾರ್ಥಿ, ರಜಾದಿನಗಳಲ್ಲೂ ಆಫೀಸಿನ ಇಮೇಲ್ ಖಾತೆಗೆ ಇಣುಕುವ ಉದ್ಯೋಗಿ - ಎಲ್ಲರೂ ಈ ಭೀತಿಯ ಸಂತ್ರಸ್ತರೇ. ಆನ್‍ಲೈನ್ ಜಗತ್ತಿನಲ್ಲಿ ಪ್ರತಿ ಕ್ಷಣವೂ ಘಟಿಸುವ ಅಸಂಖ್ಯ ಸಂಗತಿಗಳನ್ನೆಲ್ಲ ನಾವೂ ತಿಳಿದುಕೊಳ್ಳುತ್ತಲೇ ಇರಬೇಕು, ಈ ಮಾಹಿತಿಯ ಪ್ರವಾಹಕ್ಕೆ ನಮ್ಮ ಕೊಡುಗೆಯನ್ನೂ ನೀಡುತ್ತಿರಬೇಕು ಎನ್ನುವ ಈ ಕೃತಕ ಅಗತ್ಯವನ್ನು ಹುಟ್ಟುಹಾಕಿರುವುದು, ಮತ್ತೆ ಅದೇ, ಮೊಬೈಲ್ ಚಟ!
ಮೊಬೈಲ್ ಚಟ ಇಷ್ಟೆಲ್ಲ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ ಎನ್ನುವುದು ಗೊತ್ತಿದ್ದಮೇಲೆ ಅದರ ಬಳಕೆಯನ್ನೇ ನಿಲ್ಲಿಸಿಬಿಟ್ಟರೆ ಹೇಗೆ?
ಇದು ನೆಗಡಿಯಾದುದಕ್ಕೆ ಮೂಗನ್ನೇ ಕೊಯ್ದುಕೊಳ್ಳುವ ಮಾತಾಯಿತು. ಮೊಬೈಲ್ ಫೋನಿನ ಅನುಕೂಲತೆಗಳ ಸದುಪಯೋಗ ಪಡೆದುಕೊಳ್ಳುತ್ತಲೇ ಅದರ ದುಷ್ಪರಿಣಾಮಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ನಮ್ಮ ಮುಂದಿರುವ ಅತ್ಯುತ್ತಮ ಆಯ್ಕೆ.
ಇದನ್ನು ಸಾಧ್ಯವಾಗಿಸುವ ಅನೇಕ ಮಾರ್ಗಗಳೂ ಇವೆ. ಈ ಪೈಕಿ ಮೊದಲನೆಯದು ಸ್ವಯಂನಿಯಂತ್ರಣ. ಅಗತ್ಯಬಿದ್ದಾಗ ಅಗತ್ಯವಿದ್ದಷ್ಟೇ ಹೊತ್ತು ಮೊಬೈಲ್ ಬಳಸುತ್ತೇನೆ ಎಂದು ತೀರ್ಮಾನ ಮಾಡಿ ಅದಕ್ಕೆ ಬದ್ಧರಾಗಿರುವ ಮೂಲಕ ನಾವು ಮೊಬೈಲ್ ಚಟಕ್ಕೆ ದಾಸರಾಗುವುದನ್ನು ತಪ್ಪಿಸಿಕೊಳ್ಳಬಹುದು. ಇದು ಸುಲಭವಲ್ಲ ಎನ್ನುವವರು ಅದೇ ಮೊಬೈಲಿನಲ್ಲಿರುವ ಕೆಲವು ಸಾಧ್ಯತೆಗಳನ್ನು ಬಳಸಿಕೊಳ್ಳಬಹುದು: ಲ್ಯಾಪ್‌ಟಾಪ್-ಮೊಬೈಲ್ ಎರಡೂ ಬಳಸುವವರು ಕನಿಷ್ಟ ಒಂದು ಸಾಧನದಲ್ಲಾದರೂ ಫೇಸ್‌ಬುಕ್ ಬಳಸದಿರುವುದು, ಅತಿರೇಕವೆನಿಸುವಷ್ಟು ಚಟುವಟಿಕೆಯಿರುವ ವಾಟ್ಸ್‌ಆಪ್ ಗುಂಪುಗಳನ್ನು ಮ್ಯೂಟ್ ಮಾಡಿಟ್ಟು ನಮ್ಮ ಬಿಡುವಿನ ವೇಳೆಯಲ್ಲಷ್ಟೇ ಅವನ್ನು ಗಮನಿಸುವುದು, ಪರೀಕ್ಷೆಯಂತಹ ಮಹತ್ವದ ಸಂದರ್ಭಗಳಲ್ಲಿ ಒಂದಷ್ಟು ದಿನ ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳಿಂದ ದೂರವಿರುವುದು - ಇವೆಲ್ಲ ಅವರಿಗೆ ಲಭ್ಯವಿರುವ ಕೆಲ ಆಯ್ಕೆಗಳು. ಮೊಬೈಲಿನ ಅತಿಬಳಕೆಯನ್ನು ಏಕಾಏಕಿ ನಿಲ್ಲಿಸುವ ಬದಲು ಕೆಲದಿನಗಳ ಅವಧಿಯಲ್ಲಿ ಕೊಂಚಕೊಂಚವಾಗಿ ಕಡಿಮೆಮಾಡಿದರೆ ಅದರಿಂದ ಉಂಟಾಗಬಹುದಾದ ಮಾನಸಿಕ ಸಮಸ್ಯೆಗಳಿಂದಲೂ ಪಾರಾಗಬಹುದು.
ಮೊಬೈಲ್ ಚಟಕ್ಕೆ ದಾಸರಾಗುವುದೇನೋ ಸುಲಭ. ಅದರಿಂದ ಪಾರಾಗುವುದೂ ಸುಲಭ ಎನ್ನುವುದು ನಮಗೆ ಗೊತ್ತಿದ್ದರೆ ಸಾಕು. ಸಮಸ್ಯೆಯ ಅರಿವು ಮತ್ತು ಅದರಿಂದ ಪಾರಾಗುವ ದೃಢನಿರ್ಧಾರ - ಇಷ್ಟೇ, ಅದಕ್ಕೆ ಬೇಕಾದ್ದು!
ಅಕ್ಟೋಬರ್ ೩೧, ೨೦೧೭ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನದ ಮೂಲರೂಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ