ಶುಕ್ರವಾರ, ನವೆಂಬರ್ 17, 2017

ವಾರಾಂತ್ಯ ವಿಶೇಷ: ತಂತ್ರಜ್ಞಾನದಲ್ಲಿ ಕನ್ನಡವೆಂದರೆ ಟೈಪಿಂಗ್ ಮಾತ್ರವೇ ಅಲ್ಲ!

ಟಿ. ಜಿ. ಶ್ರೀನಿಧಿ


ನವೆಂಬರ್ ತಿಂಗಳಿನಲ್ಲಿ ಎಲ್ಲೆಡೆಯೂ ಕನ್ನಡದ ನಾಳೆಗಳದೇ ಮಾತು. ನಮ್ಮ ಭಾಷೆ ತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕು, ವಿಶ್ವದ ಇತರ ಭಾಷೆಗಳಲ್ಲಿ ಲಭ್ಯವಿರುವ ಸವಲತ್ತುಗಳು ನಮ್ಮ ಭಾಷೆಯಲ್ಲೂ ಸಿಗಬೇಕು ಎನ್ನುವಂತಹ ಹೇಳಿಕೆಗಳು ಅತಿಹೆಚ್ಚುಬಾರಿ ಕೇಳಸಿಗುವುದು ಬಹುಶಃ ಈ ತಿಂಗಳಲ್ಲೇ ಇರಬೇಕು.

ತಂತ್ರಜ್ಞಾನದಲ್ಲಿ ಕನ್ನಡ ಎಂದರೇನು?
ನಾವು ಕಳಿಸುವ ಸಂದೇಶಗಳನ್ನು ಕನ್ನಡ ಅಕ್ಷರಗಳಲ್ಲೇ ಟೈಪಿಸುವುದು, ಕಂಗ್ಲಿಷ್ ಬಳಕೆ ನಿಲ್ಲಿಸುವುದು, ಜಾಲತಾಣಗಳ ಮಾಹಿತಿ ಕನ್ನಡದಲ್ಲೇ ಇರುವಂತೆ ನೋಡಿಕೊಳ್ಳುವುದು - ಹೀಗೆ ಈ ಪ್ರಶ್ನೆಗೆ ಅನೇಕ ಉತ್ತರಗಳು ಸಿಗಬಹುದು.
'ಕನ್ನಡ ತಂತ್ರಜ್ಞಾನ: ನಿನ್ನೆ-ಇಂದು-ನಾಳೆ' ಉಚಿತ ಇ-ಪುಸ್ತಕ ಕುರಿತು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಈ ಉತ್ತರಗಳಲ್ಲಿ ಬಹಳಷ್ಟು ಪಠ್ಯರೂಪದ ಮಾಹಿತಿಯನ್ನು ದಾಖಲಿಸುವುದಕ್ಕೆ - ದಾಖಲಿಸಿದ ಪಠ್ಯವನ್ನು ಓದುವುದಕ್ಕೆ ಮಾತ್ರವೇ ಸೀಮಿತವಾಗಿರುವುದನ್ನು ನೀವು ಗಮನಿಸಬಹುದು. ಇಷ್ಟರ ಜೊತೆಗೆ ಕನ್ನಡ-ತಂತ್ರಜ್ಞಾನದ ನಂಟನ್ನು ಇನ್ನಷ್ಟು ಭದ್ರಪಡಿಸಲು ಬೇರೆ ಏನೆಲ್ಲ ಆಯ್ಕೆಗಳು ಲಭ್ಯವಿವೆ?

ಬೇರೆ ಆಯ್ಕೆ ಎಂದರೆ? ಟೈಪ್ ಮಾಡಿದ ಮಾಹಿತಿಯನ್ನು ನಾನು ಓದುವುದಿಲ್ಲ, ನೀನೇ ಓದು ಎಂದು ಕಂಪ್ಯೂಟರಿಗೆ ಹೇಳಬಹುದೇ?

ಖಂಡಿತಾ ಹೇಳಬಹುದು. ಇದನ್ನು ಸಾಧ್ಯವಾಗಿಸುವ 'ಟೆಕ್ಸ್ಟ್ ಟು ಸ್ಪೀಚ್' (ಪಠ್ಯದಿಂದ ಧ್ವನಿಗೆ ಬದಲಿಸುವ) ತಂತ್ರಜ್ಞಾನ ಕನ್ನಡದಲ್ಲಿ ಈಗಾಗಲೇ ಇದೆ. ಪಠ್ಯರೂಪದ ಮಾಹಿತಿಯನ್ನು ಪೂರ್ವನಿರ್ಧಾರಿತ ಧ್ವನಿಯಲ್ಲಿ ಓದಿಹೇಳುವುದು ಈ ತಂತ್ರಜ್ಞಾನದ ವೈಶಿಷ್ಟ್ಯ. ದೃಷ್ಟಿಸಮಸ್ಯೆ ಇರುವವರಿಗೆ ಮಾತ್ರವೇ ಅಲ್ಲ, ಪರದೆಯನ್ನು ಹೆಚ್ಚುಹೊತ್ತು ನೋಡುವುದು ಕಿರಿಕಿರಿಯ ಕೆಲಸ ಎನ್ನುವವರಿಗೂ ಈ ತಂತ್ರಜ್ಞಾನ ನೆರವಾಗಬಲ್ಲದು.

ಟೈಪ್ ಮಾಡಿದ್ದನ್ನು ಓದಿಹೇಳುವುದೇನೋ ಸರಿ, ಮೊದಲಿಗೆ ಟೈಪ್ ಮಾಡುವ ಕೆಲಸವನ್ನೂ ಕಂಪ್ಯೂಟರೇ ಮಾಡುವಂತಿದ್ದರೆ?

ಅದೂ ಸಾಧ್ಯವಿದೆ. ಇಲ್ಲಿ ಬಳಕೆಯಾಗುವ ತಂತ್ರಜ್ಞಾನದ ಹೆಸರು 'ಸ್ಪೀಚ್ ಟು ಟೆಕ್ಸ್ಟ್' (ಧ್ವನಿಯಿಂದ ಪಠ್ಯಕ್ಕೆ) ಎಂದು. ಬಳಕೆದಾರರ ಧ್ವನಿಯನ್ನು ಗುರುತಿಸುವ ಈ ತಂತ್ರಜ್ಞಾನ ಅವರ ಮಾತುಗಳನ್ನು ಪಠ್ಯರೂಪಕ್ಕೆ ಪರಿವರ್ತಿಸಿಕೊಡುತ್ತದೆ. ನಾವು ಕಳಿಸುವ ಸಂದೇಶಗಳನ್ನು ಕಂಪ್ಯೂಟರಿಗೋ ಮೊಬೈಲಿಗೋ ಉಕ್ತಲೇಖನ ಕೊಟ್ಟು ಬರೆಸುವುದಷ್ಟೇ ಅಲ್ಲ, ವಿವಿಧ ಸಾಧನಗಳಿಗೆ ಆದೇಶ ಕೊಡುವ - ನಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳುವ ಕೆಲಸಗಳನ್ನು ಸ್ಪರ್ಶರಹಿತವಾಗಿ (ಹ್ಯಾಂಡ್ಸ್-ಫ್ರೀ) ಮಾಡಿಕೊಳ್ಳುವುದನ್ನೂ ಈ ತಂತ್ರಜ್ಞಾನ ಸಾಧ್ಯವಾಗಿಸುತ್ತದೆ.

ಈಗಾಗಲೇ ಟೈಪ್ ಮಾಡಿದ ಪಠ್ಯ ಹಾಗೂ ಈಗ ಟೈಪ್ ಮಾಡಬೇಕಾದ ಪಠ್ಯದ ಕತೆಯೇನೋ ಸರಿ. ಕಂಪ್ಯೂಟರ್ ಬರುವುದಕ್ಕೂ ಮುನ್ನ ಮುದ್ರಿತವಾಗಿರುವ ಸಾವಿರಾರು ಪುಸ್ತಕಗಳಿವೆಯಲ್ಲ, ಅವುಗಳಲ್ಲಿರುವ ಮಾಹಿತಿಯನ್ನು ಕಂಪ್ಯೂಟರಿಗೆ ಊಡಿಸುವುದು ಹೇಗೆ?

ಮುದ್ರಿತ ಅಕ್ಷರಗಳನ್ನು ಗುರುತಿಸುವ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್) ತಂತ್ರಜ್ಞಾನ ಈ ಪ್ರಶ್ನೆಗೆ ಉತ್ತರ ನೀಡಬಲ್ಲದು. ಶತಮಾನದಷ್ಟು ಹಿಂದೆ ಮುದ್ರಣವಾದ ಪುಸ್ತಕವಾದರೂ ಸರಿಯೇ, ಅದರ ಪುಟವನ್ನು ಸ್ಕ್ಯಾನ್ ಮಾಡಿ ಹಾಕಿದರೆ ಅಲ್ಲಿರುವ ಅಕ್ಷರಗಳನ್ನು ಗುರುತಿಸಿ ಪಠ್ಯರೂಪಕ್ಕೆ ಪರಿವರ್ತಿಸಿಕೊಡುವುದು ಈ ತಂತ್ರಜ್ಞಾನದ ಹೆಗ್ಗಳಿಕೆ. ಮರುಮುದ್ರಣಕ್ಕೆಂದು ಟೈಪ್ ಮಾಡುವ ಕೆಲಸ ತಪ್ಪಿಸುವುದಷ್ಟೇ ಅಲ್ಲ, ಪಠ್ಯವನ್ನು ಅಂತರಜಾಲಕ್ಕೆ ಅಳವಡಿಸಿ ಅಗತ್ಯ ಮಾಹಿತಿ ಹುಡುಕಿಕೊಳ್ಳುವ ವ್ಯವಸ್ಥೆ ನೀಡುವುದು - ಸಂಶೋಧನೆಗಾಗಿ ಆ ಪಠ್ಯವನ್ನು ತಂತ್ರಾಂಶಗಳ ನೆರವಿನಿಂದ ವಿಶ್ಲೇಷಿಸುವುದು ಮುಂತಾದ ಇನ್ನೂ ಅನೇಕ ಕೆಲಸಗಳನ್ನು ಈ ತಂತ್ರಜ್ಞಾನ ಬಳಸಿ ಸಾಧಿಸಿಕೊಳ್ಳಬಹುದು.

ಟೈಪ್ ಮಾಡುವ - ಪ್ರಿಂಟ್ ಮಾಡುವ ಗೊಡವೆಯೇ ಬೇಡ, ನನಗೇನಿದ್ದರೂ ಪೆನ್ನು-ಕಾಗದವೇ ಸರಿ ಎನ್ನುವವರನ್ನೂ ಡಿಜಿಟಲ್ ಲೋಕದತ್ತ ಕರೆತರುವ ದಾರಿಗಳಿವೆ. ಮೊಬೈಲಿನದೋ ಟ್ಯಾಬ್ಲೆಟ್ಟಿನದೋ ಟಚ್‌ಸ್ಕ್ರೀನಿನ ಮೇಲೆ ಬರೆದ ಅಕ್ಷರಗಳನ್ನು ಗುರುತಿಸಿ ಅವನ್ನು ಪಠ್ಯರೂಪಕ್ಕೆ ಪರಿವರ್ತಿಸುವ ಹ್ಯಾಂಡ್‌ರೈಟಿಂಗ್ ರೆಕಗ್ನಿಶನ್ ತಂತ್ರಜ್ಞಾನ ಇಂತಹ ದಾರಿಗಳಲ್ಲೊಂದು. ಪೆನ್ನಿನಂತೆಯೇ ಇರುವ ಸ್ಟೈಲಸ್ ಎನ್ನುವ ಕಡ್ಡಿಯನ್ನು ಅಥವಾ ನಮ್ಮ ಕೈಬೆರಳನ್ನೇ ಬಳಸಿಯೂ ಹೀಗೆ ಅಕ್ಷರಗಳನ್ನು ಮೂಡಿಸುವುದು ಸಾಧ್ಯ.

ಈ ಸವಲತ್ತುಗಳೆಲ್ಲ ಕನ್ನಡದಲ್ಲಿವೆ ಎಂದಮಾತ್ರಕ್ಕೆ ಅವೆಲ್ಲ ಈಗಾಗಲೇ ಅತ್ಯಂತ ಉತ್ತಮ ಗುಣಮಟ್ಟದಲ್ಲಿವೆ ಎಂದೇನೂ ಅರ್ಥವಲ್ಲ. ಸದ್ಯ ಇವೆಲ್ಲ ತಂತ್ರಜ್ಞಾನ ಲೋಕದಲ್ಲಿ ನಮ್ಮ ಭಾಷೆಯ ಸಾಧ್ಯತೆಗಳನ್ನು ನಮಗೆ ತೋರಿಸಿಕೊಡುತ್ತಿವೆ. ಈ ತಂತ್ರಜ್ಞಾನಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವುದರಲ್ಲಿ, ಸಕ್ರಿಯವಾಗಿ ಬಳಸಿ ನಮ್ಮ ಪ್ರತಿಕ್ರಿಯೆ ನೀಡುವುದರಲ್ಲಿ ನಮ್ಮ ಜವಾಬ್ದಾರಿ ಎಷ್ಟಿದೆ ಎನ್ನುವುದನ್ನೂ ನೆನಪಿಸುತ್ತಿವೆ.

ತಂತ್ರಜ್ಞಾನವನ್ನು ಅಭ್ಯಸಿಸುವ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟುಗಳಲ್ಲಿ ಕನ್ನಡಕ್ಕೆ ಸ್ಥಾನಕೊಟ್ಟರೆ, ಈ ಕ್ಷೇತ್ರದ ಪರಿಣತರು ಕೊಂಚ ಬಿಡುವು ಮಾಡಿಕೊಂಡು ಅವರಿಗೆ ಮಾರ್ಗದರ್ಶನ ನೀಡಿದರೆ, ನಮ್ಮಂತಹ ಬಳಕೆದಾರರು ಸಿನಿಕತನ ಬಿಟ್ಟು ಇರುವ ಸೌಲಭ್ಯಗಳನ್ನು ಬಳಸಿದರೆ ಕನ್ನಡ-ತಂತ್ರಜ್ಞಾನದ ನಂಟು ಬಹಳ ಬೇಗ ಇನ್ನಷ್ಟು ಗಾಢವಾಗಿ ಬೆಸೆದುಕೊಳ್ಳುವುದು ಖಂಡಿತಾ ಸಾಧ್ಯವಿದೆ. ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎಂದೆಲ್ಲ ಹೇಳುವುದನ್ನು ಕೇಳುತ್ತಿರುತ್ತೇವಲ್ಲ, ಭಾಷಣಮಾಡುವ - ಘೋಷಣೆಕೂಗುವ ಜೊತೆಗೆ ಈ ಕೆಲಸಗಳೂ ಆ ಹೇಳಿಕೆಗಳನ್ನು ಕಾರ್ಯರೂಪಕ್ಕೆ ತರುವ ಮಾರ್ಗಗಳೇ!

ನವೆಂಬರ್ ೫, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ. ಈ ಲೇಖನದಲ್ಲಿ ಪ್ರಸ್ತಾಪಿಸಿರುವ ತಂತ್ರಜ್ಞಾನಗಳನ್ನು ಬಳಸಿರುವ ಕನ್ನಡ ತಂತ್ರಾಂಶಗಳ ಪ್ರಾತಿನಿಧಿಕ ಪಟ್ಟಿ links.ejnana.com ತಾಣದಲ್ಲಿದೆ.

ಕಾಮೆಂಟ್‌ಗಳಿಲ್ಲ:

badge