ಮಂಗಳವಾರ, ಅಕ್ಟೋಬರ್ 10, 2017

ಸೆಲ್ಫಿ ಸುತ್ತಮುತ್ತ

ಟಿ. ಜಿ. ಶ್ರೀನಿಧಿ

ಈಚಿನ ವರ್ಷಗಳಲ್ಲಿ ಮೊಬೈಲ್ ಫೋನುಗಳ ಬಳಕೆ ಎಷ್ಟು ವ್ಯಾಪಕವಾಗಿದೆಯೋ ಅಷ್ಟೇ ವ್ಯಾಪಕವಾಗಿ ಬೆಳೆದಿರುವುದು ಸೆಲ್ಫಿ ಸೆರೆಹಿಡಿಯುವ ಅಭ್ಯಾಸ. ಮೊಬೈಲ್ ಫೋನ್ ಬಳಕೆ ಹಾಗೂ ಸಮಾಜಜಾಲಗಳ (ಸೋಶಿಯಲ್ ನೆಟ್‌ವರ್ಕ್) ಜನಪ್ರಿಯತೆ ಎರಡೂ ಬೆಳೆದಂತೆ ಸೆಲ್ಫಿಗಳನ್ನು ಕ್ಲಿಕ್ಕಿಸುವುದು ಹಾಗೂ ಇತರರೊಡನೆ ಹಂಚಿಕೊಳ್ಳುವುದು ಸರ್ವೇಸಾಮಾನ್ಯವಾದ ಸಂಗತಿಯಾಗಿದೆ. ಫೇಸ್‌ಬುಕ್, ಇನ್ಸ್‌ಟಾಗ್ರಾಮ್, ಟ್ವಿಟರ್ ಮುಂತಾದ ತಾಣಗಳಲ್ಲಿ ಸೆಲ್ಫಿಗಳು ಲಕ್ಷಾಂತರ ಸಂಖ್ಯೆಯಲ್ಲಿರುತ್ತವೆ.

ಪ್ರವಾಸಿ ತಾಣಗಳಲ್ಲಂತೂ ಸೆಲ್ಫಿ ಕ್ಲಿಕ್ಕಿಸುವ ಭರಾಟೆ ಅತ್ಯುನ್ನತ ಮಟ್ಟದಲ್ಲಿರುವುದನ್ನು ನಾವು ನೋಡಬಹುದು. ಕಿರಿಕಿರಿಮಾಡುವ ಸ್ಮಾರ್ಟ್‌ಫೋನ್ ಅಭ್ಯಾಸಗಳ ಕುರಿತು ನಡೆದಿರುವ ಹಲವು ಸಮೀಕ್ಷೆಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ, ಹಲವು ದುರಂತಗಳಿಗೆ ಕಾರಣವಾಗಿರುವ ಕುಖ್ಯಾತಿಯೂ ಸೆಲ್ಫಿಯದೇ.

ಹೀಗಿದ್ದರೂ ಸೆಲ್ಫಿ ಜನಪ್ರಿಯತೆ ಮಾತ್ರ ಹೆಚ್ಚುತ್ತಲೇ ಇದೆ. ರಾಷ್ಟ್ರದ ನಾಯಕರಿಂದ ಪ್ರಾರಂಭಿಸಿ ಕಾಲೇಜು ವಿದ್ಯಾರ್ಥಿಗಳವರೆಗೆ ಎಲ್ಲರೂ ಸೆಲ್ಫಿಪ್ರಿಯರಾಗಿಬಿಟ್ಟಿದ್ದಾರೆ. ಜಾಗತಿಕ ಸಮಾವೇಶಗಳ ವೇದಿಕೆಯಿಂದ ಪ್ರಾರಂಭಿಸಿ ಪಾನಿಪುರಿ ಗಾಡಿಯ ಪಕ್ಕದವರೆಗೆ ಇವರೆಲ್ಲ ಎಲ್ಲಿ ಯಾವಾಗ ಬೇಕಾದರೂ ಸೆಲ್ಫಿಗೆ ಸಿದ್ಧರಿರುತ್ತಾರೆ.

ಸ್ವತಃ ಛಾಯಾಗ್ರಾಹಕನೇ ಸೆರೆಹಿಡಿದ ತನ್ನ ಸ್ವಂತ ಚಿತ್ರವನ್ನು ‘ಸೆಲ್ಫಿ’ ಎಂದು ಗುರುತಿಸುವುದು ನಮಗೆಲ್ಲ ಗೊತ್ತು. ಇದು ಜನಪ್ರಿಯವಾದದ್ದು ಸ್ಮಾರ್ಟ್‌ಫೋನ್ ಬಂದಮೇಲೆ, ನಿಜ. ಆದರೆ ಈ ಪರಿಕಲ್ಪನೆ ಛಾಯಾಗ್ರಹಣದ ಬೆಳವಣಿಗೆಯೊಂದಿಗೇ ಬೆಳೆದುಬಂದದ್ದು. ವಿಶ್ವದ ಮೊತ್ತಮೊದಲ ಸೆಲ್ಫಿಯೆಂದು ಗುರುತಿಸಲಾಗಿರುವ ಚಿತ್ರವನ್ನು ಕ್ಲಿಕ್ಕಿಸಿದ್ದು ೧೮೩೯ರಲ್ಲಂತೆ! ಆದರೆ ಸೆಲ್ಫಿ ಎಂಬ ಹೆಸರು ಪ್ರಚಲಿತಕ್ಕೆ ಬಂದದ್ದು ಮಾತ್ರ ಈ ಶತಮಾನದ ಪ್ರಾರಂಭದಲ್ಲಿ.

ಸೆಲ್ಫಿ ಜನಪ್ರಿಯತೆಯ ಜೊತೆಯಲ್ಲೇ ಮೊಬೈಲ್ ಕ್ಯಾಮೆರಾಗಳಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಮೊಬೈಲುಗಳ ಮುಂಭಾಗದಲ್ಲಿರುವ (ಫ್ರಂಟ್ ಫೇಸಿಂಗ್) ಕ್ಯಾಮೆರಾ ಅಂತೂ ಸೆಲ್ಫಿ ಕ್ಯಾಮೆರಾ ಎಂದೇ ಹೆಸರಾಗಿದೆ. ಮೂಲತಃ ವೆಬ್‌ಕ್ಯಾಮೆರಾಗಳಂತೆ ಮಾತ್ರವೇ ಕೆಲಸಮಾಡುತ್ತಿದ್ದ, ಬಹಳ ಕಳಪೆ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯುತ್ತಿದ್ದ ಈ ಕ್ಯಾಮೆರಾಗಳ ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದದ್ದು ಸೆಲ್ಫಿ ಜನಪ್ರಿಯತೆಯಿಂದಾಗಿಯೇ ಎನ್ನಬಹುದು. ಸೆಲ್ಫಿ ಕ್ಯಾಮೆರಾಗಳಲ್ಲಿ ಉತ್ತಮ ಸೆನ್ಸರ್ ಬಳಕೆ ಪ್ರಾರಂಭವಾದದ್ದು, ಹೆಚ್ಚಿನ ಮೆಗಾಪಿಕ್ಸೆಲ್ ಸಾಮರ್ಥ್ಯ ಬಂದಿದ್ದು, ಸೆಲ್ಫಿಗೂ ಫ್ಲ್ಯಾಶ್ ಸೌಲಭ್ಯ ಸಿಕ್ಕಿದ್ದೆಲ್ಲ ಈ ಸುಧಾರಣೆಯ ಅಂಗವಾಗಿಯೇ.

ಸೆಲ್ಫಿ ಕ್ಯಾಮೆರಾ ಗುಣಮಟ್ಟ ಹೆಚ್ಚಿದಂತೆ ಒಳ್ಳೆಯ ಸೆಲ್ಫಿಗಳನ್ನು ಕ್ಲಿಕ್ಕಿಸುವ ಪ್ರಯತ್ನಗಳೂ ಹೆಚ್ಚಿದವು. ಮೊಬೈಲ್ ಹಿಡಿದ ಕೈಯನ್ನು ಮುಂದಕ್ಕೆ ಚಾಚಿ, ನಮ್ಮ ಭಂಗಿಯನ್ನು ಬೇಕಾದಂತೆ ಸರಿಹೊಂದಿಸಿಕೊಂಡು ಚಿತ್ರ ಕ್ಲಿಕ್ಕಿಸುವ ಈ ಸರ್ಕಸ್ಸು ಅಷ್ಟೇನೂ ಸುಲಭವಲ್ಲ ಎನ್ನುವ ಭಾವನೆ ಮೂಡಿದ್ದು ಈ ಸಂದರ್ಭದಲ್ಲಿಯೇ ಇರಬೇಕು. ಈ ಕಷ್ಟವನ್ನು ದೂರಮಾಡಲು ಸೃಷ್ಟಿಯಾದದ್ದೇ  ‘ಸೆಲ್ಫಿ ಸ್ಟಿಕ್’ ಎನ್ನುವ ಸಾಧನ. ಚಾಚಿದ ಕೈಗಿಂತ ಹೆಚ್ಚು ದೂರದಿಂದ ಸೆಲ್ಫಿ ಕ್ಲಿಕ್ಕಿಸುವುದನ್ನು ಸಾಧ್ಯವಾಗಿಸುವುದು ನಮಗೆಲ್ಲ ಪರಿಚಿತವಾದ ಈ ಕೋಲಿನ ಹೆಚ್ಚುಗಾರಿಕೆ.

ಸೆಲ್ಫಿ ಸ್ಟಿಕ್ಕನ್ನು ಎಲ್ಲ ಕಡೆಗೂ ಕೊಂಡೊಯ್ಯುವುದು ಕಷ್ಟ. ಕೊಂಡೊಯ್ಯುವ ಕಿರಿಕಿರಿಯಷ್ಟೇ ಏಕೆ, ಪ್ರವಾಸಿ ತಾಣಗಳಲ್ಲಿ ಅವು ಇತರ ಪ್ರವಾಸಿಗರಿಗೆ ಮಾಡುವ ತೊಂದರೆಯೂ ಕಡಿಮೆಯೇನಲ್ಲ. ಸೆಲ್ಫಿ ಸ್ಟಿಕ್‌ ಅನ್ನು ಬೇಜವಾಬ್ದಾರಿಯಿಂದ ಬಳಸಿದರೆ ಉಂಟಾಗಬಹುದಾದ ಅಪಾಯವನ್ನು ಮನಗಂಡು ವಸ್ತುಸಂಗ್ರಹಾಲಯಗಳಂತಹ ಹಲವೆಡೆ ಅವುಗಳ ಬಳಕೆಯನ್ನು ನಿಷೇಧಿಸಿರುವ ಉದಾಹರಣೆಗಳೂ ಇವೆ.

ಹೀಗಾಗಿಯೇ ಈಗ ಸೆಲ್ಫಿ ಸ್ಟಿಕ್ ಬೇಡದ ಸೆಲ್ಫಿ ಕ್ಯಾಮೆರಾಗಳನ್ನು ರೂಪಿಸುವ ಪ್ರಯತ್ನಗಳು ನಡೆದಿವೆ. ಹೆಚ್ಚು ವ್ಯಾಪ್ತಿಯ ಸೆಲ್ಫಿಗಾಗಿ ಕ್ಯಾಮೆರಾವನ್ನು ನಮ್ಮಿಂದ ದೂರ ಕೊಂಡೊಯ್ಯುವ ಬದಲು ಕ್ಯಾಮೆರಾ ಸಾಮರ್ಥ್ಯವನ್ನೇ ಹೆಚ್ಚಿಸುವುದು ಇಂತಹ ಪ್ರಯತ್ನಗಳಲ್ಲೊಂದು.

ಯಾವುದೇ ಕ್ಯಾಮೆರಾ ತನ್ನ ಮುಂದಿನ ದೃಶ್ಯದ ಎಷ್ಟು ಭಾಗವನ್ನು ಸೆರೆಹಿಡಿಯಬಲ್ಲದು ಎನ್ನುವುದನ್ನು ಅದರ 'ಫೀಲ್ಡ್ ಆಫ್ ವ್ಯೂ' ಸೂಚಿಸುತ್ತದೆ. ಇದು ಜಾಸ್ತಿಯಿದ್ದಷ್ಟೂ ನಾವು ಕ್ಲಿಕ್ಕಿಸುವ ಚಿತ್ರದ ವ್ಯಾಪ್ತಿ ಜಾಸ್ತಿಯಿರುತ್ತದೆ. ನಾಲ್ಕಾರು ಆಪ್ತರ ಗುಂಪೊಂದು ಸೆಲ್ಫಿ ಕ್ಲಿಕ್ಕಿಸಲು ಹೊರಟಿದೆ ಎಂದುಕೊಳ್ಳೋಣ. ಸೆಲ್ಫಿ ಕ್ಯಾಮೆರಾದ ಫೀಲ್ಡ್ ಆಫ್ ವ್ಯೂ ೬೦ ಡಿಗ್ರಿ ಇದ್ದರೆ ಆ ಸೆಲ್ಫಿಯೊಳಗೆ ಎಲ್ಲರೂ ಕಾಣಿಸಲು ಪರದಾಡಬೇಕಾಗುತ್ತದೆ. ಅದೇ ೧೨೦ ಡಿಗ್ರಿ ಫೀಲ್ಡ್ ಆಫ್ ವ್ಯೂ ಇರುವ ಕ್ಯಾಮೆರಾ ಆದರೆ ಅಷ್ಟೂ ಮಂದಿ ಸುಲಭವಾಗಿ ಸೆಲ್ಫಿಯೊಳಗೆ ಸೆರೆಯಾಗಬಹುದು!

ಹೀಗೆ ಹೆಚ್ಚಿನ ಫೀಲ್ಡ್ ಆಫ್ ವ್ಯೂ ಇರುವ ಕ್ಯಾಮೆರಾಗಳನ್ನು 'ವೈಡ್ ಆಂಗಲ್ ಕ್ಯಾಮೆರಾ'ಗಳೆಂದು ಕರೆಯುತ್ತಾರೆ. ಈಚೆಗೆ ಮಾರುಕಟ್ಟೆಗೆ ಬಂದಿರುವ ಅನೇಕ ಮೊಬೈಲುಗಳಲ್ಲಿ (ಉದಾ: ಏಸಸ್ ಜೆನ್‌ಫೋನ್ ೪ ಸೆಲ್ಫಿ) ಸಾಮಾನ್ಯ ಸೆಲ್ಫಿ ಕ್ಯಾಮೆರಾ ಜೊತೆಗೆ ಹೆಚ್ಚುವರಿಯಾದ ವೈಡ್ ಆಂಗಲ್ ಸೆಲ್ಫಿ ಕ್ಯಾಮೆರಾ ಕೂಡ ಇರುವುದನ್ನು ನಾವು ಗಮನಿಸಬಹುದು. ಇಂತಹ ಕ್ಯಾಮೆರಾಗಳಲ್ಲಿ ಹೆಚ್ಚು ಜನರಿರುವ ಸೆಲ್ಫಿಗಳನ್ನು ಸೆರೆಹಿಡಿಯಬಹುದಲ್ಲ, ಹಾಗಾಗಿ ಏಕವಚನದ 'ಸೆಲ್ಫಿ' ಬದಲು ಇವನ್ನು ಬಹುವಚನದಲ್ಲಿ 'ವೀಫಿ' (wefie) ಎಂದು ಕರೆಯುವ ಅಭ್ಯಾಸವೂ ಶುರುವಾಗಿದೆ.

ಸೆಪ್ಟೆಂಬರ್ ೨೪, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge