ಟಿ. ಜಿ. ಶ್ರೀನಿಧಿ
ವಿವಿಧ ಕೆಲಸಗಳಿಗಾಗಿ ರಹಸ್ಯ ಸಂಕೇತಗಳ ಬಳಕೆ ಬಹು ಹಿಂದಿನಿಂದಲೂ ನಡೆದುಬಂದಿರುವ ಸಂಗತಿ. ಇವತ್ತಿನ ಪಾಸ್‌ವರ್ಡ್-ಪಿನ್‌ಗಳ ಕತೆ ಹಾಗಿರಲಿ, ಹಲವು ನೂರು ವರ್ಷಗಳ ಹಿಂದಿನ ಸನ್ನಿವೇಶಗಳನ್ನು ಕಟ್ಟಿಕೊಡುವ ತ.ರಾ.ಸು. ಕಾದಂಬರಿಗಳಲ್ಲೂ ಕೋಟೆಬಾಗಿಲು ತೆರೆದುಕೊಳ್ಳುವುದು ಗುಪ್ತಪದ ಹೇಳಿದಾಗಲೇ!
ಹಣಕಾಸು ವ್ಯವಹಾರಗಳಲ್ಲಿ, ಖಾಸಗಿ ಮಾಹಿತಿಯ ನಿರ್ವಹಣೆಯಲ್ಲಿ ವಿದ್ಯುನ್ಮಾನ ಸಾಧನಗಳ ಬಳಕೆ ಹೆಚ್ಚಿದಮೇಲಂತೂ ಪಾಸ್‌ವರ್ಡ್ ಬಳಕೆಗೆ ಎಲ್ಲಿಲ್ಲದ ಮಹತ್ವ ಬಂದಿದೆ. ಸುಲಭವಾಗಿ ಊಹಿಸಲು ಸಾಧ್ಯವಿಲ್ಲದಂತಹ ಪದಗಳನ್ನು ಆರಿಸಿಕೊಳ್ಳುವುದು, ಆರಿಸಿಕೊಂಡ ಪದಗಳ ಗೌಪ್ಯತೆ ಕಾಪಾಡಿಕೊಳ್ಳುವುದು, ಕುತಂತ್ರಾಂಶಗಳು ಅವನ್ನು ಕದಿಯದಂತೆ ನೋಡಿಕೊಳ್ಳುವುದು - ಎಲ್ಲವನ್ನೂ ಹೊರಪ್ರಪಂಚದಲ್ಲಿ ಬೆಲೆಬಾಳುವ ವಸ್ತುಗಳನ್ನು ಜೋಪಾನ ಮಾಡಿದಷ್ಟೇ ಕಾಳಜಿಯಿಂದ ಮಾಡಬೇಕಾದ ಪರಿಸ್ಥಿತಿ ಇವತ್ತಿನದು.
ಪಾಸ್‌ವರ್ಡ್ ಸುರಕ್ಷತೆಯ ಕುರಿತು ನಮ್ಮ ಕಾಳಜಿ ಹೆಚ್ಚಿದಂತೆ ಅದನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ದುಷ್ಕರ್ಮಿಗಳ ಪ್ರಯತ್ನಗಳೂ ಹೆಚ್ಚುತ್ತಿವೆ. ಪಾಸ್‌ವರ್ಡ್ ತಂತ್ರಜ್ಞಾನದಲ್ಲಿ ಹಲವಾರು ಬದಲಾವಣೆಗಳಾಗಿರುವುದರ ಹಿನ್ನೆಲೆಯಲ್ಲಿರುವುದು ಇದೇ ಅಂಶ.
ನಾಲ್ಕು ಅಂಕಿ, ಆರು ಅಕ್ಷರ - ಹೀಗೆ ಏನು ಬೇಕಿದ್ದರೂ ಆಗಿರಬಹುದಾಗಿದ್ದ ಪಾಸ್‌ವರ್ಡುಗಳು ಇಂದು ನಿರ್ದಿಷ್ಟ ಕ್ರಮದಲ್ಲಿರಬೇಕಾದ್ದು ಅನಿವಾರ್ಯವಾಗಿದೆ. ಅಕ್ಷರ - ಅಂಕಿ - ಲೇಖನಚಿಹ್ನೆಗಳ ಜೋಡಣೆಯಿಂದ ನಮ್ಮ ಪಾಸ್‌ವರ್ಡನ್ನು ಹೆಚ್ಚು ಸುರಕ್ಷಿತವನ್ನಾಗಿಸುವುದು, ಅದನ್ನು ಇತರರು ಸುಲಭಕ್ಕೆ ಊಹಿಸದಂತೆ ನೋಡಿಕೊಳ್ಳುವುದು ಇದರ ಉದ್ದೇಶ. ಹೀಗಿದ್ದೂ ಪಾಸ್‌ವರ್ಡ್ ಕಳ್ಳತನವಾಗಿಬಿಟ್ಟರೆ? ಸಂಭಾವ್ಯ ನಷ್ಟವನ್ನು ತಪ್ಪಿಸಲು ಓಟಿಪಿಗಳಿವೆ. ನಮ್ಮ ರಹಸ್ಯಪದದ ಜೊತೆಗೆ ಮೊಬೈಲಿನಲ್ಲಿ ಬರುವ ಇನ್ನೊಂದು ಸಂಕೇತವನ್ನೂ ಸುರಕ್ಷತೆಯ ಹೆಚ್ಚುವರಿ ಕ್ರಮವಾಗಿ ಬಳಸುವುದು ಇದರ ಉದ್ದೇಶ.
ಇದೇರೀತಿ ಬೇರೆಬೇರೆ ಉದ್ದೇಶಗಳಿಗಾಗಿ ಬೇರೆಬೇರೆ ರೀತಿಯ, ಬೇರೆಬೇರೆ ಮಟ್ಟದ ಸುರಕ್ಷತೆಯಿರುವ ಕ್ರಮಗಳನ್ನು ಬಳಸಲಾಗುತ್ತದೆ. ಈಚಿನ ಹಲವು ಮೊಬೈಲ್ ಫೋನುಗಳಲ್ಲಿ ಕಾಣಸಿಗುತ್ತಿರುವ ಫಿಂಗರ್‌ಪ್ರಿಂಟ್ ಸೆನ್ಸರ್ ಉದ್ದೇಶವೂ ಇದೇ. ಪಾಸ್‌ವರ್ಡ್, ಪಿನ್ ಅಥವಾ ಪ್ಯಾಟರ್ನ್‌ಗಳ (pattern, ವಿನ್ಯಾಸ) ಜಾಗದಲ್ಲಿ ನಮ್ಮ ವಿಶಿಷ್ಟ ಗುರುತಾದ ಬೆರೆಳೊತ್ತನ್ನು (ಫಿಂಗರ್‌ಪ್ರಿಂಟ್) ಪಾಸ್‌ವರ್ಡ್‌ನಂತೆ ಬಳಸುವುದನ್ನು ಈ ಸಾಧನ ಸಾಧ್ಯವಾಗಿಸುತ್ತದೆ. ಮೊಬೈಲ್ ಬಳಸುವಾಗಲಷ್ಟೇ ಅಲ್ಲ; ಪಾಸ್‌ಪೋರ್ಟ್ - ವೀಸಾ ಸಂದರ್ಶನಕ್ಕೆ ಹೋದಾಗ, ಆಧಾರ್ ಮಾಡಿಸುವಾಗ, ಅದನ್ನು ಬಳಸಿ ನಮ್ಮ ಗುರುತನ್ನು ದೃಢೀಕರಿಸುವಾಗಲೆಲ್ಲ ನಮ್ಮ ಬೆರಳೊತ್ತೇ ಪಾಸ್‌ವರ್ಡ್‌ನಂತೆ ಬಳಕೆಯಾಗುತ್ತದೆ. ಹಿಂದಿನ ಕಾಲದಲ್ಲಿ ಅಕ್ಷರ ಬರೆಯಲು ಬಾರದವರು ಎಡಗೈ ಹೆಬ್ಬೆರಳಿನ ಗುರುತನ್ನು ಕಾಗದದ ಮೇಲೆ ಒತ್ತುತ್ತಿದ್ದರು, ಡಿಜಿಟಲ್ ಸಾಕ್ಷರರಾದ ನಾವು ವಿದ್ಯುನ್ಮಾನ ಸಾಧನಗಳನ್ನು ಬಳಸಿ ಹೆಬ್ಬೆರಳ ಗುರುತು ಒತ್ತುತ್ತಿದ್ದೇವೆ - ಇಷ್ಟೇ ವ್ಯತ್ಯಾಸ!
ಹೀಗೆ ವ್ಯಕ್ತಿಗಳನ್ನು ಗುರುತಿಸಲು ಅವರ ಬೆರಳೊತ್ತನ್ನು ಬಳಸುವ ವ್ಯವಸ್ಥೆಯನ್ನು ಬಯೋಮೆಟ್ರಿಕ್ ವ್ಯವಸ್ಥೆಯೆಂದು ಕರೆಯುವುದನ್ನು ನೀವು ಕೇಳಿರಬಹುದು. ಇಲ್ಲಿ ಪ್ರಸ್ತಾಪವಾಗುವ 'ಬಯೋಮೆಟ್ರಿಕ್ಸ್' ಎನ್ನುವುದು ಪ್ರತಿ ವ್ಯಕ್ತಿಗೂ ವಿಶಿಷ್ಟವಾಗಿರುವ ಬೆರಳ ಗುರುತು, ಅಕ್ಷಿಪಟಲ ಮುಂತಾದ ವಿಷಯಗಳನ್ನು ಸುರಕ್ಷತಾ ಕ್ರಮಗಳ ಅಂಗವಾಗಿ ಬಳಸುವುದನ್ನು ಸಾಧ್ಯವಾಗಿಸುವ ಪರಿಕಲ್ಪನೆ.
ಇಂತಹ ವಿಶಿಷ್ಟ ಸಂಗತಿಗಳ ಪೈಕಿ ಮನುಷ್ಯರ ಮುಖಚರ್ಯೆ ಕೂಡ ಒಂದು. ಬೆರಳೊತ್ತನ್ನು ಗುರುತಿಸಲು ಫಿಂಗರ್‌ಪ್ರಿಂಟ್ ರೆಕಗ್ನಿಶನ್ ತಂತ್ರಜ್ಞಾನ ಬಳಕೆಯಾದಂತೆ ಮುಖಚರ್ಯೆಯನ್ನು ಗುರುತಿಸಲು 'ಫೇಸ್ ರೆಕಗ್ನಿಶನ್', ಅಂದರೆ ಮುಖಚರ್ಯೆಯನ್ನುಗುರುತಿಸುವ ತಂತ್ರಜ್ಞಾನವನ್ನು ಬಳಸಲಾಗುತ್ತದೆ.
ಮೂಗಿನ ಉದ್ದ-ಅಗಲ, ಕಣ್ಣಿನ ಸ್ಥಾನ, ಕೆನ್ನೆಯೆಲುಬಿನ ಆಕಾರ - ಹೀಗೆ ಮುಖದ ಅನೇಕ ಲಕ್ಷಣಗಳನ್ನು ದಾಖಲಿಸಿಕೊಂಡು ಗುರುತು ದೃಢೀಕರಣಕ್ಕಾಗಿ ಬಳಸುವುದು ಈ ತಂತ್ರಜ್ಞಾನದ ವೈಶಿಷ್ಟ್ಯ (ಹೀಗೆ ದಾಖಲಿಸಿಕೊಳ್ಳುವ ಮಾಹಿತಿಯನ್ನು 'ಫೇಸ್‌ಪ್ರಿಂಟ್' ಎಂದೂ ಗುರುತಿಸಲಾಗುತ್ತದೆ). ಒಮ್ಮೆ ಈ ಮಾಹಿತಿಯನ್ನೆಲ್ಲ ದಾಖಲಿಸಿಕೊಂಡಮೇಲೆ ಕ್ಯಾಮೆರಾ ಎದುರಿನ ವ್ಯಕ್ತಿಯ ಮುಖವನ್ನು ಇದರೊಡನೆ ಹೋಲಿಸಿನೋಡಿ ಅವರನ್ನು ಗುರುತಿಸುವುದು ಸಾಧ್ಯವಾಗುತ್ತದೆ. ಸುರಕ್ಷತಾ ಕ್ರಮಗಳ ಅಂಗವಾಗಿ, ಹಣಕಾಸು ವ್ಯವಹಾರಗಳನ್ನು ದೃಢೀಕರಿಸಲು, ಗುಂಪಿನಲ್ಲಿರುವ ವ್ಯಕ್ತಿಗಳನ್ನು ಗುರುತಿಸಲು - ಹೀಗೆ ಈ ತಂತ್ರಜ್ಞಾನ ಹಲವಾರು ಉದ್ದೇಶಗಳಿಗಾಗಿ ಬಳಕೆಯಾಗುತ್ತದೆ. ಸಮಾಜಜಾಲದಲ್ಲಿ ಸೇರಿಸುವ ಚಿತ್ರಗಳಲ್ಲಿ ಯಾರಿದ್ದಾರೆ ಎಂದು ಊಹಿಸಿ ಹೇಳುತ್ತದಲ್ಲ, ಅದೂ ಈ ತಂತ್ರಜ್ಞಾನದ್ದೇ ಇನ್ನೊಂದು ರೂಪ. ಎದುರಿನ ದೃಶ್ಯದಲ್ಲಿರುವ ವ್ಯಕ್ತಿಗಳ ಮುಖವನ್ನು ಕ್ಯಾಮೆರಾಗಳು ಗುರುತಿಸುವುದೂ ಹೀಗೆಯೇ.
ಮೊಬೈಲ್ ಫೋನ್ ಸುರಕ್ಷತೆಗೆ ಪಾಸ್‌ವರ್ಡ್, ಫಿಂಗರ್‌ಪ್ರಿಂಟ್ ಇತ್ಯಾದಿಗಳನ್ನು ಬಳಸಿದಂತೆ ಮುಖಚರ್ಯೆಯನ್ನುಗುರುತಿಸುವ ತಂತ್ರಜ್ಞಾನವನ್ನು (ಫೇಶಿಯಲ್ ರೆಕಗ್ನಿಶನ್) ಬಳಸುವುದೂ ಸಾಧ್ಯವೆಂದು ಈಗಾಗಲೇ ತಿಳಿದಿತ್ತು. ಆದರೆ ಈ ಪರಿಕಲ್ಪನೆ ಸಣ್ಣಪ್ರಮಾಣದ ಪ್ರಯೋಗಗಳನ್ನು ಹೊರತುಪಡಿಸಿದಂತೆ ವ್ಯಾಪಕ ಬಳಕೆಗೆ ಬಂದಿರಲಿಲ್ಲ, ಅಷ್ಟೇ. ಇತ್ತೀಚೆಗೆ ಪರಿಚಯಿಸಲಾದ 'ಆಪಲ್ ಐಫೋನ್ ಎಕ್ಸ್' ಸ್ಮಾರ್ಟ್‌ಫೋನ್ ಬಳಕೆದಾರರ ಮುಖಚರ್ಯೆಯನ್ನೂ ಪಾಸ್‌ವರ್ಡ್‌ನಂತೆ ಬಳಸುವುದನ್ನು ಸಾಧ್ಯವಾಗಿಸುವ ಮೂಲಕ ಈ ಪರಿಸ್ಥಿತಿಯನ್ನು ಬದಲಿಸಿದೆ. ಅಲ್ಲಿಗೆ ಪಾಸ್‌ವರ್ಡ್ ಪಯಣ 'ಫೇಸ್'ವರ್ಡ್ ತನಕ ಬಂದು ತಲುಪಿದಂತಾಗಿದೆ. ಈ ಪಯಣ ಮುಂದಿನ ದಿನಗಳಲ್ಲಿ ನಮ್ಮನ್ನು ಎಲ್ಲೆಲ್ಲಿಗೆ ಕೊಂಡೊಯ್ಯಲಿದೆಯೋ, ಕಾದುನೋಡುವುದೊಂದೇ ದಾರಿ!
ಸೆಪ್ಟೆಂಬರ್ ೧೭, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ