ಕಂಪ್ಯೂಟರಿನಲ್ಲಿ ಮಾಹಿತಿಯನ್ನು ಉಳಿಸಿಡಲು ವಿವಿಧ ಬಗೆಯ ಶೇಖರಣಾ ಸಾಧನಗಳು (ಸ್ಟೋರೇಜ್ ಡಿವೈಸಸ್) ಬಳಕೆಯಾಗುವುದು ನಮಗೆಲ್ಲ ಗೊತ್ತು. ಹಿಂದಿನ ಫ್ಲಾಪಿಡಿಸ್ಕ್‌ಗಳಿಂದ ಇಂದಿನ ಹಾರ್ಡ್ ಡಿಸ್ಕ್, ಸಿ.ಡಿ., ಡಿವಿಡಿಗಳವರೆಗೆ ಇಂತಹ ಹಲವಾರು ಶೇಖರಣಾ ಸಾಧನಗಳಲ್ಲಿ ಮಾಹಿತಿ ಸಂಗ್ರಹವಾಗುವುದು ವೃತ್ತಾಕಾರದ ತಟ್ಟೆಗಳಂತಹ (ಡಿಸ್ಕ್) ಮಾಧ್ಯಮದ ಮೇಲೆ.
ಇಂತಹ ತಟ್ಟೆಗಳಲ್ಲಿ, ಸಹಜವಾಗಿಯೇ, ಮಾಹಿತಿ ಸಂಗ್ರಹವಾಗುವ ಹಾದಿಯೂ ವೃತ್ತಾಕಾರವಾಗಿಯೇ ಇರುತ್ತದೆ. ಡಿಸ್ಕ್‌ನ ಕೇಂದ್ರದಿಂದ ಪ್ರಾರಂಭಿಸಿ ಅದರ ಹೊರಭಾಗದವರೆಗೂ ಇರುವ, ಏಕಕೇಂದ್ರದ ಇಂತಹ ವೃತ್ತಗಳನ್ನು 'ಟ್ರ್ಯಾಕ್' ಎಂದು ಕರೆಯುತ್ತಾರೆ. ಊರ ಸುತ್ತ ರಿಂಗ್ ರೋಡ್ ಇರುತ್ತದಲ್ಲ, ಇಂತಹ ಪ್ರತಿಯೊಂದು ವೃತ್ತವನ್ನೂ ಒಂದೊಂದು ರಿಂಗ್ ರೋಡ್ ಎನ್ನಬಹುದು ಬೇಕಾದರೆ!
ಫ್ಲಾಪಿ ಡಿಸ್ಕ್‌ನಂತಹ ಕಡಿಮೆ ಸಾಮರ್ಥ್ಯದ ಶೇಖರಣಾ ಸಾಧನಗಳಲ್ಲಿ ಟ್ರ್ಯಾಕ್‌ಗಳ ಸಂಖ್ಯೆ ಬಹಳ ಕಡಿಮೆಯಿರುತ್ತಿತ್ತು - ೮೦, ೧೬೦ ಹೀಗೆ. ಇದರ ಹೋಲಿಕೆಯಲ್ಲಿ ನೋಡಿದರೆ ಇಂದಿನ ಹಾರ್ಡ್ ಡಿಸ್ಕ್‌ಗಳ ಪ್ರತಿ ತಟ್ಟೆಯಲ್ಲೂ ಸಾವಿರಾರು ಸಂಖ್ಯೆಯ ಟ್ರ್ಯಾಕ್‌ಗಳಿರುತ್ತವೆ.
ಇಂತಹ ಪ್ರತಿ ಟ್ರ್ಯಾಕ್ ಅನ್ನೂ ಹಲವು ಸಣ್ಣಸಣ್ಣ ಭಾಗಗಳಾಗಿ ವಿಂಗಡಿಸಲಾಗಿರುತ್ತದೆ - ಪ್ರತಿ ರಸ್ತೆಯಲ್ಲೂ ಇಂತಿಷ್ಟು ಸಂಖ್ಯೆಯ ನಿವೇಶನಗಳಿರುತ್ತವಲ್ಲ, ಹಾಗೆ. ಇಂತಹ ಭಾಗಗಳಿಗೆ 'ಸೆಕ್ಟರ್' ಎಂದು ಹೆಸರು. ನಮ್ಮ ಕಡತಗಳಲ್ಲಿನ ಮಾಹಿತಿಯನ್ನು ಇಂತಹ ನೂರಾರು-ಸಾವಿರಾರು ಸೆಕ್ಟರ್‌ಗಳಲ್ಲಿ ಉಳಿಸಿಡಲಾಗುತ್ತದೆ.
ಇದನ್ನೂ ಓದಿ: ಹಾರ್ಡ್ ಡಿಸ್ಕ್ ಡ್ರೈವ್ ಮತ್ತು ಸಾಲಿಡ್ ಸ್ಟೇಟ್ ಡ್ರೈವ್ಈ ಪೈಕಿ ಯಾವುದೇ ಸೆಕ್ಟರಿನಲ್ಲಿ ಯಾಂತ್ರಿಕ ದೋಷ ಕಾಣಿಸಿಕೊಂಡರೆ, ಅಲ್ಲಿ ಮಾಹಿತಿಯನ್ನು ಉಳಿಸುವಾಗ ಏನಾದರೂ ತಪ್ಪಾಗಿದ್ದರೆ ಆ ಕಡತವನ್ನು ತೆರೆಯುವುದೇ ಅಸಾಧ್ಯವಾಗಬಹುದು. ಇಂತಹ ದೋಷಯುಕ್ತ ಸೆಕ್ಟರುಗಳನ್ನು 'ಬ್ಯಾಡ್ ಸೆಕ್ಟರ್' ಎಂದು ಗುರುತಿಸಲಾಗುತ್ತದೆ.
ಬ್ಯಾಡ್‌ಸೆಕ್ಟರುಗಳನ್ನು ಪರಿಶೀಲಿಸಿ ಸರಿಪಡಿಸಲು ಪ್ರಯತ್ನಿಸುವ ಕೆಲ ತಂತ್ರಾಂಶಗಳಿವೆ (ವಿವರಗಳಿಗೆ 'fix bad sectors' ಎಂದು ಗೂಗಲ್ ಮಾಡಿ) . ಯಾಂತ್ರಿಕ ದೋಷವಿರುವ ಸೆಕ್ಟರುಗಳನ್ನು ಸರಿಪಡಿಸುವುದು ಬಹುತೇಕ ಅಸಾಧ್ಯವಾದ್ದರಿಂದ ಇಂತಹ ತಂತ್ರಾಂಶಗಳು ಮುಂದೆ ಅವನ್ನು ಬಳಸದಂತೆ ಗುರುತಿಸುತ್ತವೆ, ಅಷ್ಟೇ.
ಏಪ್ರಿಲ್ ೮, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ