ಬುಧವಾರ, ಅಕ್ಟೋಬರ್ 18, 2017

ವಾರದ ವಿಶೇಷ: ಬೆಳಕು ಸೂಸುವ ಡಯೋಡುಗಳ ಬಗ್ಗೆ...

ಟಿ. ಜಿ. ಶ್ರೀನಿಧಿ

ಮಕ್ಕಳ ಆಟಿಕೆ, ಸೀರಿಯಲ್ ಸೆಟ್, ಟ್ರಾಫಿಕ್ ಸಿಗ್ನಲ್, ಬಸ್ಸು - ರೈಲಿನ ಬೋರ್ಡು ಮುಂತಾದ ಕಡೆಗಳಲ್ಲಿ ಎಲ್‌ಇಡಿಗಳು ಬಳಕೆಯಾಗುವುದು ನಮಗೆ ಗೊತ್ತೇ ಇದೆ. ಬಹುತೇಕ ಟೀವಿ, ಮೊಬೈಲ್ ಫೋನುಗಳ ಪರದೆಯನ್ನು ಬೆಳಗುವುದೂ ಇದೇ ಎಲ್‌ಇಡಿಗಳು.

ಎಲ್‌ಇಡಿ ಎನ್ನುವುದು ಲೈಟ್ ಎಮಿಟಿಂಗ್ ಡಯೋಡ್ ಎನ್ನುವ ಹೆಸರಿನ ಹ್ರಸ್ವರೂಪ.
ಡಯೋಡ್ ಎಂಬ ಅರೆವಾಹಕ (ಸೆಮಿಕಂಡಕ್ಟರ್) ಸಾಧನದ ಮೂಲಕ ವಿದ್ಯುತ್ ಹರಿಸಿದಾಗ ಅದರೊಳಗೆ ಸಂಚರಿಸುವ ಇಲೆಕ್ಟ್ರಾನುಗಳು ಫೋಟಾನ್ ಎಂಬ ಕಣಗಳನ್ನು ಬಿಡುಗಡೆಮಾಡುತ್ತವೆ. ಬೆಳಕಿನ ಮೂಲ ಕಣಗಳೇ ಈ ಫೋಟಾನುಗಳು.

ಬಹಳಷ್ಟು ಡಯೋಡುಗಳಿಂದ ಹೊರಸೂಸುವ ಬೆಳಕು ನಮ್ಮ ಕಣ್ಣಿಗೆ ಕಾಣದ ರೂಪದಲ್ಲಿರುತ್ತವೆ (ಉದಾ: ಇನ್‌ಫ್ರಾರೆಡ್, ಅಂದರೆ ಅತಿರಕ್ತ ಕಿರಣಗಳು). ಡಯೋಡುಗಳ ನಿರ್ಮಾಣದಲ್ಲಿ ನಿರ್ದಿಷ್ಟ ಅರೆವಾಹಕ ವಸ್ತುಗಳನ್ನು ಬಳಸುವ ಮೂಲಕ ನಮ್ಮ ಕಣ್ಣಿಗೆ ಕಾಣುವ ಬೆಳಕು ಹೊರಸೂಸುವಂತೆ ಮಾಡುವುದೂ ಸಾಧ್ಯ. ನಿತ್ಯವೂ ನಮ್ಮ ಸಂಪರ್ಕಕ್ಕೆ ಬರುವ ಬಹುತೇಕ ಎಲ್‌ಇಡಿಗಳು ಇದೇ ಪರಿಕಲ್ಪನೆಯನ್ನು ಬಳಸುತ್ತವೆ.

ಅಂದಹಾಗೆ ಎಲ್‌ಇಡಿಗಳ ಬಳಕೆ ಬೆಳಕಿನ ಉತ್ಪಾದನೆಗಷ್ಟೇ ಸೀಮಿತವೇನಲ್ಲ. ನೀರಿನ ಶುದ್ಧೀಕರಣ, ಮಾಹಿತಿ ಸಂವಹನ ಮುಂತಾದ ಕ್ಷೇತ್ರಗಳಲ್ಲೂ ಇವುಗಳ ಬಳಕೆ ಸಾಧ್ಯವಿದೆ. ನಿಸ್ತಂತು (ವೈರ್‌ಲೆಸ್) ಮಾಹಿತಿ ಸಂವಹನದಲ್ಲಿ ರೇಡಿಯೋ ಅಲೆಗಳ ಬದಲಿಗೆ ಬೆಳಕಿನ ಕಿರಣಗಳನ್ನು ಬಳಸಿದರೆ ಕ್ಷಿಪ್ರ ಹಾಗೂ ಸುರಕ್ಷಿತ ಮಾಹಿತಿ ಸಂವಹನ ಸಾಧ್ಯವಾಗುತ್ತದೆ. ನಮಗೆಲ್ಲ ಪರಿಚಯವಿರುವ ವೈ-ಫೈ ತಂತ್ರಜ್ಞಾನಕ್ಕೆ ಪರ್ಯಾಯವಾಗಿ ಬೆಳೆಯಬಲ್ಲ ಈ ಲೈ-ಫೈ, ಅಂದರೆ 'ಲೈಟ್ ಎನೇಬಲ್ಡ್ ವೈ-ಫೈ'ಯಲ್ಲಿ ಎಲ್‌ಇಡಿಗಳ ಬಳಕೆ ಸಾಧ್ಯವೆಂದು ವಿಜ್ಞಾನಿಗಳು ಈಗಾಗಲೇ ತೋರಿಸಿದ್ದಾರೆ.

ಮಾರ್ಚ್ ೨೨, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
badge