ಟಿ. ಜಿ. ಶ್ರೀನಿಧಿ
ಕಳೆದ ವಾರದಲ್ಲಿ ಆಪಲ್ ಸಂಸ್ಥೆ ಸತತವಾಗಿ ಸುದ್ದಿಯಲ್ಲಿತ್ತು. ವಾರದ ಶುರುವಿನಲ್ಲಿ ಇದಕ್ಕೆ ಕಾರಣವಾದದ್ದು ಐಫೋನ್ ೫ರ ನಿರೀಕ್ಷೆ. ಕಳೆದ ಮಂಗಳವಾರದ "ಲೆಟ್ಸ್ ಟಾಕ್ ಐಫೋನ್" ಕಾರ್ಯಕ್ರಮದಲ್ಲಿ ಐಫೋನ್‌ನ ಈ ಹೊಸ ಅವತಾರದ ಪರಿಚಯವಾಗಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು.
ಐಫೋನ್ ೫ ಹೇಗಿರಬಹುದು, ಅದರಲ್ಲಿ ಆಪಲ್ ಏನೇನು ಹೊಸ ವೈಶಿಷ್ಟ್ಯಗಳನ್ನು ಸೇರಿಸಿರಬಹುದು ಎಂಬ ಪ್ರಶ್ನೆಗಳು ಎಲ್ಲ ದಿಕ್ಕುಗಳಿಂದಲೂ ಕೇಳಿಬಂದು ಸಾಕಷ್ಟು ಆಸಕ್ತಿ ಸೃಷ್ಟಿಯಾಗಿತ್ತು. ಸ್ಟೀವ್ ಜಾಬ್ಸ್ ನಿವೃತ್ತಿಯ ನಂತರ ಆಪಲ್‌ನ ನೇತೃತ್ವ ವಹಿಸಿಕೊಂಡಿರುವ ಟಿಮ್ ಕುಕ್ ಈ ಕಾರ್ಯಕ್ರಮವನ್ನು ಹೇಗೆ ನಡೆಸಿಕೊಡಬಹುದು ಎನ್ನುವ ಕುತೂಹಲವೂ ಇತ್ತು. ಕಾರ್ಯಕ್ರಮಕ್ಕೆ ಸ್ಟೀವ್ ಜಾಬ್ಸ್ ಬಂದರೂ ಬರಬಹುದು ಎಂಬ ವದಂತಿ ಬಿಬಿಸಿಯಲ್ಲೂ ಕಾಣಿಸಿಕೊಂಡಿತ್ತು!
ಆದರೆ ಕಾರ್ಯಕ್ರಮ ಶುರುವಾಗಿ ಸ್ವಲ್ಪಹೊತ್ತಿನಲ್ಲೇ ಕುತೂಹಲವೆಲ್ಲ ತಣ್ಣಗಾಗಿಹೋಯಿತು. ಏಕೆಂದರೆ ಅಲ್ಲಿ ಐಫೋನ್ ೫ರ ಸುದ್ದಿಯೇ ಇರಲಿಲ್ಲ!
ಸದ್ಯ ಮಾರುಕಟ್ಟೆಯಲ್ಲಿರುವ ಐಫೋನ್ ೪ರಲ್ಲೇ ಕೊಂಚ ಬದಲಾವಣೆಗಳನ್ನು ಮಾಡಿದ ಆಪಲ್ ಸಂಸ್ಥೆ ಅದನ್ನು ಐಫೋನ್ ೪ಎಸ್ ಎಂಬ ಹೆಸರಿನಲ್ಲಿ ಪರಿಚಯಿಸಿತು.
ಈ ಹೊಸ ಐಫೋನ್ ನೋಡಲು ಐಫೋನ್ ೪ರಂತೆಯೇ ಇದ್ದರೂ ಅದರೊಳಗೆ ಬೇಕಾದಷ್ಟು ಹೊಸತನ ಇದೆ ಎಂದು ಆಪಲ್ ಸಂಸ್ಥೆ ಹೇಳಿಕೊಂಡಿದೆ; ಉತ್ತಮ ಕ್ಯಾಮೆರಾ, ಹೆಚ್ಚು ಸಾಮರ್ಥ್ಯದ ಬ್ಯಾಟರಿ, ಹೊಸ ಐಓಎಸ್ ೫ ಕಾರ್ಯಾಚರಣ ವ್ಯವಸ್ಥೆ. ಐಫೋನ್ ೪ನಲ್ಲಿದ್ದುದಕ್ಕಿಂತ ಉತ್ತಮವಾದ ಆಂಟೆನಾ - ಹೊಸತುಗಳ ಪಟ್ಟಿಯಲ್ಲಿ ಇಂತಹ ಹಲವು ಅಂಶಗಳಿವೆ.
ಆದರೆ ಸಂಪೂರ್ಣ ಹೊಸರೂಪದ ನಿರೀಕ್ಷೆ ಹುಟ್ಟುಹಾಕಿದ್ದ ಐಫೋನ್ ೫ ಬರಲಿಲ್ಲ ಎಂಬ ಅಂಶ ಆಪಲ್ ಅಭಿಮಾನಿಗಳಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಯಿತು. ತಂತ್ರಜ್ಞಾನ ಬ್ಲಾಗುಗಳು, ಜಾಲತಾಣಗಳು ಆಪಲ್ ಸಂಸ್ಥೆಯನ್ನು ಹಿಗ್ಗಾಮುಗ್ಗಾ ಟೀಕಿಸಿದವು. ಹಿಂದೆ ಸ್ಟೀವ್ ಜಾಬ್ಸ್ ಮಾಡುತ್ತಿದ್ದಂತೆ ಹೊಸ ಮುಖ್ಯಸ್ಥ ಟಿಮ್ ಕುಕ್ ಕಾರ್ಯಕ್ರಮದಲ್ಲಿ ಮುಖ್ಯ ಪಾತ್ರ ವಹಿಸಿರಲಿಲ್ಲ ಎನ್ನುವ ಅಂಶ ಕೂಡ ಸಾಕಷ್ಟು ಟೀಕೆಗೆ ಗುರಿಯಾಯಿತು. ಆಪಲ್ ಸಂಸ್ಥೆಯ ಶೇರು ಬೆಲೆ ತಾತ್ಕಾಲಿಕವಾಗಿ ಕುಸಿತ ಕಂಡದ್ದೂ ಆಯಿತು.
* * *
ಇದೆಲ್ಲ ಆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಸ್ಟೀವ್ ಜಾಬ್ಸ್ ನಿಧನದ ಸುದ್ದಿ ಬಂತು. ತಂತ್ರಜ್ಞಾನ ಕ್ಷೇತ್ರದ ದಿಗ್ಗಜನೊಬ್ಬನ ಮರಣ ವಾರ್ತೆ ಕೇಳಿ ವಿಶ್ವದೆಲ್ಲೆಡೆಯ ಅಭಿಮಾನಿಗಳು ತಮ್ಮ ವಿಷಾದ ಸೂಚಿಸಿದರು. ಫೋರ್ಬ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಸೌದಿ ಅರೇಬಿಯಾದ ಕೋಟ್ಯಾಧಿಪತಿ ರಾಜಕುಮಾರನ ಹೇಳಿಕೆ "ಮೂರು ಆಪಲ್‌ಗಳು ಪ್ರಪಂಚವನ್ನು ಬದಲಿಸಿದವು: ಆಡಂನದು, ನ್ಯೂಟನ್ನಿನದು, ಮತ್ತು ಸ್ಟೀವ್ ಜಾಬ್ಸ್‌ನದು!" ಪ್ರಪಂಚದೆಲ್ಲೆಡೆಯ ಅಭಿಮಾನಿಗಳ ಒಕ್ಕೊರಲಿನ ಅಭಿಪ್ರಾಯದಂತೆಯೇ ಕೇಳಿಬಂತು.
ಸ್ಟೀವ್ ಜಾಬ್ಸ್ ಆರೋಗ್ಯ ಕ್ಷೀಣಿಸುತ್ತಿದ್ದ ಸುದ್ದಿ ಆಪಲ್ ಸಂಸ್ಥೆಯ ಉನ್ನತಾಧಿಕಾರಿಗಳಿಗೆ ಮೊದಲೇ ಗೊತ್ತಿದ್ದಿರಬೇಕು, ಹೀಗಾಗಿಯೇ ಮಂಗಳವಾರದ ಕಾರ್ಯಕ್ರಮ ಕೊಂಚ ಸಪ್ಪೆಯಾಗಿತ್ತು ಎಂಬ ಸಂಶಯ ಬಂದ ತಕ್ಷಣ ಕೆಲ ಬ್ಲಾಗಿಗರು, ಪತ್ರಕರ್ತರು ತಮ್ಮ ಟೀಕೆಗಳಿಗಾಗಿ ಕ್ಷಮೆಕೋರಿದ ಘಟನೆಯೂ ನಡೆಯಿತು.
ಇದೆಲ್ಲವುದರ ನಡುವೆ ಐಫೋನ್ ೪ಎಸ್ ಅನ್ನು ಎಲ್ಲರೂ ಮರೆತೇಬಿಟ್ಟರು ಎನ್ನುವಷ್ಟರಲ್ಲಿ ಅದರಲ್ಲಿರುವ ಒಂದು ವೈಶಿಷ್ಟ್ಯದ ವಿವರಗಳು ಅಲ್ಲಲ್ಲಿ ಕಾಣಿಸಿಕೊಳ್ಳಲು ಪ್ರಾರಂಭವಾಗಿದೆ.
* * *
ಐಫೋನ್ ೪ಎಸ್‌ನಲ್ಲಿರುವ 'ಸಿರಿ' ಎಂಬ ತಂತ್ರಾಂಶವೇ ಈ ವೈಶಿಷ್ಟ್ಯ.
ದೂರವಾಣಿ ಬಳಸಿ ಮಾತನಾಡುವುದು ಹೊಸ ವಿಷಯವೇನಲ್ಲ; ಆದರೆ ಈ ತಂತ್ರಾಂಶದ ಸಹಾಯದಿಂದ ದೂರವಾಣಿಯ ಜೊತೆಗೆ ಮಾತನಾಡುವುದು ಸಾಧ್ಯ!
ಬೆಳಗಿನ ಜಾಗಿಂಗ್ ಮಾಡುತ್ತಿದ್ದೀರಿ ಅಂತಲೋ, ಚಪಾತಿ ಹಿಟ್ಟು ಕಲಸುತ್ತಿದ್ದೀರಿ ಅಂತಲೋ ಕಲ್ಪಿಸಿಕೊಳ್ಳಿ, ಆಗಲೇ ನಿಮ್ಮ ಮಿತ್ರರಿಗೆ ಏನೋ ಎಸ್ಸೆಮ್ಮೆಸ್ ಕಳುಹಿಸಬೇಕು ಎಂದು ನೆನಪು ಬರುತ್ತದೆ. ಮಾಡುತ್ತಿರುವ ಕೆಲಸ ಬಿಟ್ಟು ಎಸ್ಸೆಮ್ಮೆಸ್ ಟೈಪಿಸಲು ಶುರುಮಾಡುವ ಬದಲು ಸಿರಿ ತಂತ್ರಾಂಶ ಬಳಸಿ ಸಂದೇಶ ಕಳುಹಿಸುವ ಜವಾಬ್ದಾರಿಯನ್ನು ನಿಮ್ಮ ದೂರವಾಣಿಗೇ ಅಂಟಿಸಿಬಿಡಬಹುದು. "ಇಂಥವರಿಗೆ ಇಂಥ ಎಸ್ಸೆಮ್ಮೆಸ್ ಕಳಿಸು" ಎಂದು ಹೇಳಿದರೆ ಸಾಕು, ಆ ಆದೇಶವನ್ನು ಅರ್ಥಮಾಡಿಕೊಳ್ಳುವ ತಂತ್ರಾಂಶ ನೀವು ಹೇಳಿದ ಕೆಲಸ ಮಾಡಿ ಮುಗಿಸುತ್ತದಂತೆ!
ಈ ತಂತ್ರಾಂಶ ಬಳಸಿ ಹವಾಮಾನ ಮುನ್ಸೂಚನೆ, ಆಸುಪಾಸಿನಲ್ಲಿರುವ ಅಂಗಡಿ-ಹೋಟಲ್ಲುಗಳ ಬಗೆಗಿನ ಮಾಹಿತಿ ಮುಂತಾದ ವಿವರಗಳನ್ನೆಲ್ಲ ನಿಮ್ಮ ದೂರವಾಣಿಯಿಂದ ಪಡೆದುಕೊಳ್ಳಬಹುದು; ವಿಶ್ವವ್ಯಾಪಿ ಜಾಲದಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಹುಡುಕಿಕೊಡುವಂತೆ ಹೇಳಬಹುದು. ಸಂಜೆ ಆಫೀಸು ಮುಗಿಸಿಕೊಂಡು ಹೊರಡುವಾಗ ಮನೆಗೆ ಮೈಸೂರು ಪಾಕು ಕೊಂಡೊಯ್ಯಲು ನೆನಪಿಸು ಎಂದು ಹೇಳುವುದೂ ಸಾಧ್ಯ!
* * *
ಮೂಲತಃ ಬೇರೊಬ್ಬರು ಅಭಿವೃದ್ಧಿಪಡಿಸಿದ ಸಿರಿ ತಂತ್ರಾಂಶವನ್ನು ೨೦೧೦ರಲ್ಲಿ ಆಪಲ್ ಸಂಸ್ಥೆ ಕೊಂಡುಕೊಂಡಿತು. ಆದರೆ ಅದು ಆಪಲ್ ಉತ್ಪನ್ನಗಳ ಅಂಗವಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲ ಬಾರಿಗೆ.
ತಕ್ಕಮಟ್ಟಿಗೆ ಕುತೂಹಲ ಕೆರಳಿಸಿರುವ 'ಸಿರಿ'ಯ ಉಪಯುಕ್ತತೆ ಹಾಗೂ ಕಾರ್ಯಕ್ಷಮತೆಯ ಬಗ್ಗೆ ಕೆಲವೊಂದು ಸಂಶಯಗಳೂ ವ್ಯಕ್ತವಾಗಿವೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹುದೊಂದು ತಂತ್ರಾಂಶದ ಬಳಕೆ ಸರಿಯೇ ಎನ್ನುವ ಪ್ರಶ್ನೆಯೂ ಕೇಳಿಬಂದಿದೆ.
ಈಗಾಗಲೇ ಮಾರುಕಟ್ಟೆಯಲ್ಲಿರುವ ಹಲವಾರು ಸ್ಪೀಚ್ ರೆಕಗ್ನಿಷನ್ ತಂತ್ರಾಂಶಗಳಿಗಿಂತ 'ಸಿರಿ' ಹೇಗೆ ಭಿನ್ನವಾಗಿರಲಿದೆ, ಅವೆಲ್ಲವುದರಲ್ಲೂ ಇರುವ ತೊಂದರೆಗಳನ್ನು ನಿವಾರಿಸುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂದು ಕಾದುನೋಡಬೇಕಿದೆ.
ಅಕ್ಟೋಬರ್ ೧೧, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾಗಿರುವ ಲೇಖನ, 'ವಿಜ್ಞಾಪನೆ' ಅಂಕಣದ ಐವತ್ತನೇ ಬರೆಹ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ