ಟಿ. ಜಿ. ಶ್ರೀನಿಧಿ
ಕಳೆದ ವಾರದಲ್ಲಿ ಬೆಂಗಳೂರಿನ ಬಿಸಿನೆಸ್‌ಮನ್ ಚೇತನ್‌ಗೆ ಕೈಕಾಲು ಕಟ್ಟಿಹಾಕಿದ ಅನುಭವ. ಕೆಲಸದ ಮೇಲೆ ಹೊರಗಡೆ ಹೋಗಿದ್ದಾಗ ಆಫೀಸಿನಿಂದ ಇಮೇಲ್ ಇಲ್ಲ, ಗ್ರಾಹಕರಿಗೆ ಅರ್ಜೆಂಟಾಗಿ ಕೊಟೇಶನ್ ಕಳುಹಿಸೋಣ ಎಂದರೆ ಅದೂ ಆಗುತ್ತಿಲ್ಲ, ಯಾವ ವೆಬ್‌ಸೈಟೂ ತೆರೆಯಲಾಗುತ್ತಿಲ್ಲ, ಅದೆಲ್ಲ ಹೋಗಲಿ ಎಂದರೆ ಗರ್ಲ್‌ಫ್ರೆಂಡ್ ಜೊತೆ ಚಾಟ್ ಮಾಡುವಂತೆಯೂ ಇಲ್ಲ!
ಇಷ್ಟೆಲ್ಲ ಫಜೀತಿಗೆ ಕಾರಣವಾಗಿದ್ದು ಅವರ ಬ್ಲ್ಯಾಕ್‌ಬೆರಿ.
ದಿನದ ಬಹುಪಾಲು ಸಮಯ ಕೆಲಸದ ಮೇಲೆ ಬಿಜಿಯಾಗಿರುವ ಚೇತನ್ ಒಂದು ಕಡೆ ಕುಳಿತುಕೊಳ್ಳುವುದೇ ಅಪರೂಪ. ಆದರೆ ಅವರ ಕೆಲಸಕ್ಕೆ ಸದಾಕಾಲ ಅಂತರಜಾಲ ಸಂಪರ್ಕ, ಇಮೇಲ್ ವ್ಯವಸ್ಥೆ ಎಲ್ಲವೂ ಬೇಕೇಬೇಕು. ಹೋದ ಕಡೆಗೆಲ್ಲ ಲ್ಯಾಪ್‌ಟಾಪ್ ತೆಗೆದುಕೊಂಡು ಹೋಗುವುದೂ ಸಮಸ್ಯೆಯೇ. ಹಾಗಾಗಿಯೇ ಅವರು ಬ್ಲ್ಯಾಕ್‌ಬೆರಿ ಬಳಸುತ್ತಾರೆ. ಎಸ್ಸೆಮ್ಮೆಸ್ ಕಳುಹಿಸಿದಷ್ಟೇ ಸುಲಭವಾಗಿ ಇಮೇಲ್ ಕಳುಹಿಸಲು ಅನುವುಮಾಡಿಕೊಡುವ ಬ್ಲ್ಯಾಕ್‌ಬೆರಿಯಲ್ಲಿ ಅಂತರಜಾಲಾಟ ಕೂಡ ಸುಲಭ. ಬ್ಲ್ಯಾಕ್‌ಬೆರಿ ಮೆಸೆಂಜರ್ (ಬಿಬಿಎಂ) ಬಳಸಿ ಗರ್ಲ್‌ಫ್ರೆಂಡ್ ಜೊತೆ ಹರಟೆಹೊಡೆಯುವುದೂ ಸುಲಭವೇ! ಬರಿಯ ಚಾಟಿಂಗ್ ಅಷ್ಟೇ ಅಲ್ಲ, ಚಿತ್ರ-ವಿಡಿಯೋ-ಧ್ವನಿರೂಪದ ಕಡತಗಳನ್ನೂ ಕಳುಹಿಸಬಹುದು.
ಆದರೆ ಹೋದವಾರ ಆದದ್ದೇ ಬೇರೆ.
ಮೂರು-ನಾಲ್ಕು ದಿನಗಳವರೆಗೆ ಬ್ಲ್ಯಾಕ್‌ಬೆರಿ ಸೇವೆಗಳು ಅಸ್ತವ್ಯಸ್ತವಾಗಿಬಿಟ್ಟಿದ್ದವು; ಇಮೇಲ್ ಇಲ್ಲ, ಇಂಟರ್‌ನೆಟ್ ಇಲ್ಲ, ಬ್ಲ್ಯಾಕ್‌ಬೆರಿ ಮೆಸೆಂಜರ್ ಸೇವೆಯೂ ಇಲ್ಲದೆ ಬಳಕೆದಾರರೆಲ್ಲ ಪರದಾಡುವಂತಾಗಿತ್ತು. ಇನ್ನೇನು ಸರಿಹೋಯಿತು ಅನ್ನುವಷ್ಟರಲ್ಲಿ ಮತ್ತೆ ಕೈಕೊಡುತ್ತಿದ್ದ ಸೇವೆ ಬಳಕೆದಾರರ ತಾಳ್ಮೆಯನ್ನೂ ಪರೀಕ್ಷಿಸುತ್ತಿತ್ತು.
ಸಮಸ್ಯೆ ಮೊದಲಿಗೆ ಶುರುವಾದದ್ದು ಯುರೋಪಿನಲ್ಲಿ. ಲಂಡನ್ ಸಮೀಪದ ಬ್ಲ್ಯಾಕ್‌ಬೆರಿ ಡೇಟಾಸೆಂಟರ್ ಒಂದರಲ್ಲಿ ಪ್ರಾರಂಭವಾದ ತೊಂದರೆ ಬಹಳ ಬೇಗ ಮಧ್ಯಪ್ರಾಚ್ಯ, ಏಷ್ಯಾ, ಆಫ್ರಿಕಾ, ಅಮೆರಿಕಾಗಳಿಗೂ ಹರಡಿತು. ಯಾವುದೋ ಒಂದು ಕೋರ್ ಸ್ವಿಚ್‌ನಲ್ಲಿ ಕಾಣಿಸಿಕೊಂಡಿತೆಂದು ಹೇಳಲಾದ ಸಮಸ್ಯೆಯಿಂದಾಗಿ ಸುಮಾರು ನಾಲ್ಕು ದಿನಗಳ ಕಾಲ ವಿಶ್ವದೆಲ್ಲೆಡೆಯ ಬ್ಲ್ಯಾಕ್‌ಬೆರಿ ಬಳಕೆದಾರರ ಪಾಲಿಗೆ ಬ್ಲ್ಯಾಕ್‌ಬೆರಿ ಸೇವೆ ಹೆಚ್ಚೂಕಡಿಮೆ ನಿಂತೇಹೋಗಿತ್ತು. ಸಮಸ್ಯೆಯಿದ್ದ ಅವಧಿಯಲ್ಲಿ ಕಳುಹಿಸಲಾಗದೆ ಉಳಿದುಕೊಂಡ ಸಂದೇಶಗಳ ಭಾರೀ ಪ್ರಮಾಣದಿಂದಾಗಿ ಮೂಲ ಸಮಸ್ಯೆ ಬಗೆಹರಿದ ಮೇಲೂ ಬ್ಲ್ಯಾಕ್‌ಬೆರಿ ಸೇವೆ ಸಂಪೂರ್ಣವಾಗಿ ಸರಿಹೋಗಿರಲಿಲ್ಲ.
ಬ್ಲ್ಯಾಕ್‌ಬೆರಿ ಸೇವೆ ಎಲ್ಲ ಮೊಬೈಲ್ ಜಾಲಗಳಲ್ಲೂ ಲಭ್ಯವಿದೆ ನಿಜ; ಆದರೆ ಬ್ಲ್ಯಾಕ್‌ಬೆರಿ ಮೂಲಕ ದೊರಕುವ ಇಮೇಲ್, ಅಂತರಜಾಲ ಹಾಗೂ ಬಿಬಿಎಂ ಸೇವೆಗಳು ಬ್ಲ್ಯಾಕ್‌ಬೆರಿಯ ಸ್ವಂತ ವ್ಯವಸ್ಥೆಗಳನ್ನೇ ಅವಲಂಬಿಸಿವೆ. ಬ್ಲ್ಯಾಕ್‌ಬೆರಿ ಸರ್ವರ್‌ಗಳಿಗೂ ಬಳಕೆದಾರರ ಹ್ಯಾಂಡ್‌ಸೆಟ್‌ಗೂ ಸಂಪರ್ಕ ಕಲ್ಪಿಸುವುದಷ್ಟೆ ಮೊಬೈಲ್ ಜಾಲಗಳ ಕೆಲಸ. ಹೀಗಾಗಿ ಮೊಬೈಲ್ ಜಾಲದಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಬ್ಲ್ಯಾಕ್‌ಬೆರಿ ಬಳಕೆದಾರರು ಪರದಾಡಬೇಕಾಗಿ ಬಂತು. ಕರೆ ಮಾಡುವ ಹಾಗೂ ಎಸ್ಸೆಮ್ಮೆಸ್ ಕಳುಹಿಸುವ ಸೌಲಭ್ಯ ಮೊಬೈಲ್ ಜಾಲದ ಮೂಲಕ ದೊರಕುವುದರಿಂದ ಆ ಸೇವೆಗಳಿಗೆ ಮಾತ್ರ ಯಾವುದೇ ತೊಂದರೆಯಾಗಿರಲಿಲ್ಲ.
ಬ್ಲ್ಯಾಕ್‌ಬೆರಿ ಜಾಲದಲ್ಲಿ ಸಮಸ್ಯೆಗಳು ಶುರುವಾಗಿವೆ ಎಂಬ ಸುದ್ದಿ ಬಹಳ ಬೇಗ ಸಮಾಜ ಜಾಲಗಳಲ್ಲಿ ಕಾಣಿಸಿಕೊಂಡಿತು. ಏನಾಗುತ್ತಿದೆ ಎಂಬ ಮಾಹಿತಿಯೇ ಇಲ್ಲದ ಬಳಕೆದಾರರು ಟ್ವೀಟರ್‌ನಲ್ಲಿ ಎಷ್ಟೆಲ್ಲ ಗಲಾಟೆಮಾಡಿದರೂ ಬ್ಲ್ಯಾಕ್‌ಬೆರಿ ಸೇವೆ ಒದಗಿಸುವ ಸರ್ಚ್ ಇನ್ ಮೋಶನ್ (ಆರ್‌ಐಎಮ್) ಸಂಸ್ಥೆ ಬಹಳ ಹೊತ್ತು ಗಪ್‌ಚುಪ್ಪಾಗಿ ಕೂತಿತ್ತು; ಇದರಿಂದ ಬಳಕೆದಾರರ ಕೋಪ ಇನ್ನಷ್ಟು ಜಾಸ್ತಿಯಾಯಿತು. ನಿಧಾನಕ್ಕೆ ಬಂದ ಸಮಜಾಯಿಷಿಯೂ ಅಸ್ಪಷ್ಟವಾಗಿದ್ದು ಬಳಕೆದಾರರ ಕೋಪ ಹೆಚ್ಚಿಸುವುದನ್ನು ಬಿಟ್ಟರೆ ಬೇರೇನಕ್ಕೂ ಉಪಯೋಗವಾಗಲಿಲ್ಲ. ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾಧ್ಯಮದ ಮುಂದೆ ಅಧಿಕೃತ ಹೇಳಿಕೆ ಕೊಡಲು ತುಸು ಹೆಚ್ಚೇ ನಿಧಾನಿಸಿದ್ದು ಆರ್‌ಐಎಂನ ಇಮೇಜ್‌ಗೆ ಸಾಕಷ್ಟು ಹಾನಿಮಾಡಿತು ಎಂದೇ ಹೇಳಬೇಕು.
ಬ್ಲ್ಯಾಕ್‌ಬೆರಿ ಸೇವೆಯಲ್ಲಾದ ವ್ಯತ್ಯಯ ಬಳಕೆದಾರರಿಗೆ ಮಾಡಿದ ತೊಂದರೆ ಅಷ್ಟಿಷ್ಟಲ್ಲ. ಹತ್ತು ಲಕ್ಷಕ್ಕೂ ಹೆಚ್ಚು ಬಳಕೆದಾರದೊಡನೆ ಬ್ಲ್ಯಾಕ್‌ಬೆರಿ ಪಾಲಿಗೆ ಆಶಾದಾಯಕವಾಗಿ ಬೆಳೆಯುತ್ತಿರುವ ಭಾರತೀಯ ಮಾರುಕಟ್ಟೆಯ ಗ್ರಾಹಕರೂ ಇದರಿಂದ ಸಾಕಷ್ಟು ಕಿರಿಕಿರಿ ಅನುಭವಿಸಬೇಕಾಯಿತು. ಶೇರು ವಹಿವಾಟಿನಂತಹ ಮಹತ್ವದ ಕೆಲಸಗಳಿಗೆ ಬ್ಲ್ಯಾಕ್‌ಬೆರಿ ಸೇವೆ ನೆಚ್ಚಿಕೊಂಡಿದ್ದವರಿಗಂತೂ ಈ ಸಮಸ್ಯೆ ಸಾಕಷ್ಟು ನಷ್ಟವನ್ನೂ ಉಂಟುಮಾಡಿತು. ಬ್ಲ್ಯಾಕ್‌ಬೆರಿ ಮೆಸೆಂಜರ್ ಕೈಕೊಟ್ಟಿದ್ದರಿಂದ ಸಮಸ್ಯೆಯಾದದ್ದು ಚೇತನ್‌ಗಷ್ಟೆ ಅಲ್ಲ! ಬಿಬಿಎಂ ಇಲ್ಲದೆ ಏನೋ ಕಳೆದುಕೊಂಡಂತೆ ಅನ್ನಿಸುತ್ತಿದೆ ಎಂದು ಅಮಿತಾಬ್ ಬಚ್ಚನ್ ಹಾಗೂ ಸಾನಿಯಾ ಮಿರ್ಜಾ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದರೆಂದು ಸುದ್ದಿಸಂಸ್ಥೆಗಳು ವರದಿಮಾಡಿವೆ.
ಮೊದಲೇ ಕುಸಿಯುತ್ತಿದ್ದ ಬ್ಲ್ಯಾಕ್‌ಬೆರಿ ಮಾರುಕಟ್ಟೆ ಕಳೆದ ವಾರದ ಸಮಸ್ಯೆಗಳಿಂದಾಗಿ ಇನ್ನಷ್ಟು ಹದಗೆಡಲಿದೆಯೆ ಎಂಬ ಪ್ರಶ್ನೆ ಇದೀಗ ಎಲ್ಲರ ಮುಂದೆಯೂ ಇದೆ. ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಬ್ಲ್ಯಾಕ್‌ಬೆರಿಗೆ ಪ್ರಬಲ ಪ್ರತಿಸ್ಪರ್ಧಿಗಳಾಗಿರುವ ಆಪಲ್ ಐಫೋನ್ ಹಾಗೂ ಆಂಡ್ರಾಯ್ಡ್ ಫೋನುಗಳಿಗೆ ಈ ಸನ್ನಿವೇಶ ಅನುಕೂಲಕರವಾಗಿ ಪರಿಣಮಿಸಲಿದೆಯೆ ಎಂದು ಕಾದುನೋಡಬೇಕಿದೆ.
ಅಕ್ಟೋಬರ್ ೧೮, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ