ಮಂಗಳವಾರ, ನವೆಂಬರ್ 27, 2012

ಥ್ರೀಡಿ ಎಂಬ ಮಾಯಾಮಂತ್ರ


ಟಿ. ಜಿ. ಶ್ರೀನಿಧಿ

ಕೈಯಲ್ಲೊಂದು ಪುಸ್ತಕ ಹಿಡಿದುಕೊಂಡು ನೋಡಿ. ಉದ್ದ-ಅಗಲಗಳ ಜೊತೆಗೆ ಅದರ ದಪ್ಪವೂ ಒಂದು ಆಯಾಮವಾಗಿ ನಮಗೆ ಗೋಚರವಾಗುತ್ತದೆ. ಅಷ್ಟೇ ಅಲ್ಲ, ಅದು ಹಿನ್ನೆಲೆಯಲ್ಲಿರುವ ಸೋಫಾಗಿಂತ ಅದು ನಮಗೆ ಹೆಚ್ಚು ಹತ್ತಿರದಲ್ಲಿರುವುದು ಕೂಡ ಸ್ಪಷ್ಟವಾಗಿ ಕಾಣುತ್ತದೆ.

ಆದರೆ ಅದೇ ಪುಸ್ತಕದಲ್ಲಿರುವ ಯಾವುದೋ ಚಿತ್ರವನ್ನು ಗಮನಿಸಿದಾಗ ನಮಗೆ ಇಂತಹ ಅನುಭವ ಆಗುವುದಿಲ್ಲ. ಚಿತ್ರ ಅದೆಷ್ಟೇ ನೈಜವಾಗಿದ್ದರೂ ಅದಕ್ಕೆ-ಅದರಲ್ಲಿರುವ ವಸ್ತುಗಳಿಗೆ ಉದ್ದ ಅಗಲಗಳಷ್ಟೆ ಇರುತ್ತವೆ; ಆದರೆ ಅದು ನಮಗೆ ಮೂರನೆಯ ಆಯಾಮವನ್ನು ಕಟ್ಟಿಕೊಡುವುದಿಲ್ಲ.

ಇನ್ನು ಕಿಟಕಿಯಾಚೆಗಿನ ದೃಶ್ಯವನ್ನು ಗಮನಿಸಿದರೆ ಎದುರಿಗೆ ಕಾಣುವ ಮನೆ, ರಸ್ತೆಯಲ್ಲಿ ನಿಂತಿರುವ ಕಾರು, ಮರ-ಗಿಡ ಎಲ್ಲವೂ ನಮಗೆ ಮೂರು ಆಯಾಮಗಳಲ್ಲೇ ಕಾಣಸಿಗುತ್ತವೆ. ಆದರೆ ಆಕಾಶದಲ್ಲಿರುವ ಚಂದ್ರ ಹಾಗಲ್ಲ; ಗೋಡೆಯ ಮೇಲಿನ ಕ್ಯಾಲೆಂಡರಿನಂತೆ ಅಲ್ಲೂ ಕಾಣಿಸುವುದು ಎರಡೇ ಆಯಾಮಗಳು!

ಇದಕ್ಕೆಲ್ಲ ಕಾರಣ ನಮ್ಮ ಕಣ್ಣುಗಳಲ್ಲಿರುವ ವಿಶಿಷ್ಟವಾದುದೊಂದು ಸಾಮರ್ಥ್ಯ; ನಮ್ಮ ಕಣ್ಣುಗಳು ಬೆಳಕು ಹಾಗೂ ಬಣ್ಣಗಳನ್ನು ಗುರುತಿಸುತ್ತವಲ್ಲ, ಆಗ ಎಡಗಣ್ಣಿಗೆ ಕಾಣುವ ದೃಶ್ಯ ನಮ್ಮ ಬಲಗಣ್ಣಿಗೆ ಕಾಣುವುದಕ್ಕಿಂತ ಕೊಂಚ ಭಿನ್ನವಾಗಿರುತ್ತದೆ. ಇವೆರಡೂ ಪ್ರತ್ಯೇಕ ದೃಶ್ಯಗಳು ಮೆದುಳನ್ನು ತಲುಪಿ ಒಟ್ಟಾಗಿ ಸೇರಿದಾಗಲಷ್ಟೆ ನಮಗೆ ಮೂರು ಆಯಾಮಗಳ (ಥ್ರೀಡಿ) ದೃಶ್ಯ ಗೋಚರವಾಗುತ್ತದೆ.

ನೈಜ ವಸ್ತುಗಳೇನೋ ನಮಗೆ ಥ್ರೀಡಿ ದೃಶ್ಯಗಳಾಗಿ ಕಾಣಸಿಗುತ್ತವೆ, ಆದರೆ ಪುಸ್ತಕದಲ್ಲಿ ಮುದ್ರಿತವಾದ ಚಿತ್ರಕ್ಕೆ, ಪರದೆಯ ಮೇಲೆ ಕಾಣಿಸುವ ಸಿನಿಮಾಗೆ ಮೂರನೆಯ ಆಯಾಮವೇ ಇರುವುದಿಲ್ಲವಲ್ಲ?


ಅಂತಹ ಸನ್ನಿವೇಶಗಳನ್ನೂ ಮೂರು ಆಯಾಮಗಳಲ್ಲಿ ಪ್ರಸ್ತುತಪಡಿಸಲು ಥ್ರೀಡಿ ಛಾಯಾಗ್ರಹಣ ನಮಗೆ ನೆರವಾಗುತ್ತದೆ.

ಇದರಲ್ಲಿ ಬಳಕೆಯಾಗುವ ತಂತ್ರಜ್ಞಾನ ತೀರಾ ಹೊಸತೇನೂ ಅಲ್ಲ. ನಮ್ಮ ಎರಡೂ ಕಣ್ಣುಗಳಿಗೆ ಕಾಣಿಸುವ ಪ್ರತ್ಯೇಕ ದೃಶ್ಯಗಳನ್ನು ಮೆದುಳು ಒಟ್ಟಿಗೆ ಸೇರಿಸಿ ಸಮಗ್ರ ನೋಟವನ್ನು ಕಟ್ಟಿಕೊಡುತ್ತದಲ್ಲ, ಇದೇ ಕೆಲಸವನ್ನು ತಾಂತ್ರಿಕವಾಗಿ ಮಾಡುವುದೇ ಥ್ರೀಡಿ ತಂತ್ರಜ್ಞಾನದ ಆಶಯ.

ಪ್ರಾರಂಭದ ದಿನಗಳಲ್ಲಿ ಥ್ರೀಡಿ ಚಿತ್ರಗಳನ್ನು ತೆಗೆಯಲು ಬಹಳ ಕಷ್ಟಪಡಬೇಕಾಗಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ, ನಮ್ಮ ನಿಮ್ಮಂತಹ ಬಳಕೆದಾರರೂ ಸುಲಭವಾಗಿ ಥ್ರೀಡಿ ಛಾಯಾಗ್ರಹಣ ಮಾಡಲು ಅನುವುಮಾಡಿಕೊಡುವ ಅನೇಕ ಬಗೆಯ ಕ್ಯಾಮೆರಾಗಳು ಮಾರುಕಟ್ಟೆಯಲ್ಲಿವೆ. ಸ್ಥಿರ ಚಿತ್ರಗಳಷ್ಟೇ ಅಲ್ಲ, ಇಂತಹ ಕೆಲ ಕ್ಯಾಮೆರಾಗಳನ್ನು ಬಳಸಿ ಥ್ರೀಡಿ ವೀಡಿಯೋಗಳನ್ನು ಚಿತ್ರಿಸುವುದು ಕೂಡ ಸಾಧ್ಯ. ಈಚೆಗೆ ಹಲವು ಮೊಬೈಲ್ ದೂರವಾಣಿಗಳಲ್ಲೂ ಥ್ರೀಡಿ ಕ್ಯಾಮೆರಾಗಳು ಬಂದಿವೆ. ಅಷ್ಟೇ ಏಕೆ, ಕಂಪ್ಯೂಟರ್ ತಂತ್ರಾಂಶಗಳ ನೆರವಿನಿಂದ ಸಾಮಾನ್ಯ ಚಿತ್ರಗಳನ್ನೂ ಥ್ರೀಡಿ ರೂಪಕ್ಕೆ ಬದಲಿಸಿಕೊಳ್ಳಬಹುದೆಂದು ಒಮ್ಮೆ ಗೂಗಲ್ ಮೊರೆಹೋದರೆ ಗೊತ್ತಾಗುತ್ತದೆ.

ಥ್ರೀಡಿ ಛಾಯಾಗ್ರಹಣದ ಸಂದರ್ಭದಲ್ಲಿ ಎರಡು ಪ್ರತ್ಯೇಕ ಚಿತ್ರಗಳನ್ನು ಸೆರೆಹಿಡಿಯಲಾಗುತ್ತದೆ. ಎಡಗಣ್ಣಿಗೆ ಹಾಗೂ ಬಲಗಣ್ಣಿಗೆ ಕಾಣಿಸುವ ದೃಶ್ಯದ ನಡುವೆ ವ್ಯತ್ಯಾಸವಿರುತ್ತದಲ್ಲ, ಈ ಎರಡು ಚಿತ್ರಗಳ ನಡುವೆಯೂ ಅಂತಹುದೇ ವ್ಯತ್ಯಾಸವಿರುತ್ತದೆ.

ಚಿತ್ರೀಕರಿಸಿದ್ದನ್ನು ನಮಗೆ ತೋರಿಸುವ ಮುನ್ನ ಇವೆರಡೂ ಚಿತ್ರಗಳನ್ನು ಒಂದರಮೇಲೆ ಒಂದರಂತೆ ಎರಡು ಪದರಗಳಾಗಿ ಹೊಂದಿಸಲಾಗುತ್ತದೆ. ಹೀಗೆ ಹೊಂದಿಸಿದ ಚಿತ್ರವನ್ನು ಥ್ರೀಡಿ ಕನ್ನಡಕದ ಮೂಲಕ ನೋಡಿದಾಗ ಎಡಗಣ್ಣಿಗೆ ಒಂದು ಚಿತ್ರ, ಬಲಗಣ್ಣಿಗೆ ಇನ್ನೊಂದು ಚಿತ್ರ ಗೋಚರವಾಗುತ್ತದೆ. ಈ ಚಿತ್ರಗಳು ಮೆದುಳಿನಲ್ಲಿ ಮತ್ತೆ ಜೋಡಣೆಯಾದಾಗ ನಮಗೆ ಒಟ್ಟಾರೆ ಚಿತ್ರವನ್ನು ಮೂರು ಆಯಾಮಗಳಲ್ಲಿ ನೋಡುತ್ತಿರುವ ಅನುಭವವಾಗುತ್ತದೆ!

ಅದೇನೋ ಸರಿ, ಆದರೆ ಒಂದೇ ಪರದೆಯ ಮೇಲೆ ಪ್ರದರ್ಶಿತವಾಗುವ ಚಿತ್ರ ಎಡಗಣ್ಣಿಗೆ ಬೇರೆ, ಬಲಗಣ್ಣಿಗೆ ಬೇರೆಯಾಗಿ ಕಾಣಿಸುವುದು ಹೇಗೆ?

ಥ್ರೀಡಿ ಚಿತ್ರಗಳ ವೀಕ್ಷಣೆಗೆ ವಿಶೇಷವಾದ ಕನ್ನಡಕ ಬಳಕೆಯಾಗುವುದು ಇದೇ ಕಾರಣಕ್ಕಾಗಿ.

ಥ್ರೀಡಿ ಕನ್ನಡಕ ಎಂದಾಕ್ಷಣ ಮೊದಲು ನಮ್ಮ ಮನಸ್ಸಿಗೆ ಬರುವುದು ನೀಲಿ-ಕೆಂಪು ಗಾಜುಗಳ ಕನ್ನಡಕ. ಮೊದಲಿಗೆ ಥ್ರೀಡಿ ಸಿನಿಮಾ ವೀಕ್ಷಣೆಗೆ ವ್ಯಾಪಕವಾಗಿ ಬಳಕೆಯಾಗುತ್ತಿದ್ದ ಈ ಬಗೆಯ ಕನ್ನಡಕ ಈಗ ಪುಸ್ತಕ-ಪತ್ರಿಕೆಗಳ ಜೊತೆಗೂ ಕಾಣಸಿಗುವುದು ಸಾಮಾನ್ಯವಾಗಿಬಿಟ್ಟಿದೆ. ಈ ಕನ್ನಡಕ ಬಳಸಿ ನೋಡಬಹುದಾದ ಥ್ರೀಡಿ ಚಿತ್ರಗಳಲ್ಲಿ ಕೆಂಪಿನದೊಂದು ನೀಲಿಯದೊಂದು ಪದರ ಇರುತ್ತದೆ. ನೀಲಿ ಗಾಜಿನ ಮೂಲಕ ಕೆಂಪಿನ ಪದರ ಮಾತ್ರವೇ ಕಂಡರೆ ಕೆಂಪು ಗಾಜಿನ ಮೂಲಕ ನೀಲಿಯ ಪದರ ಮಾತ್ರ ಕಾಣಸಿಗುತ್ತದೆ; ಈ ಮೂಲಕ ಬಲಗಣ್ಣಿಗೆ ಹಾಗೂ ಎಡಗಣ್ಣಿಗೆ ಬೇರೆಯದೇ ಆದ ಚಿತ್ರಗಳು ಕಾಣಿಸಿ ಅವು ಮೆದುಳಿನಲ್ಲಿ ಒಂದಕ್ಕೊಂದು ಸೇರಿದಾಗ ನಮ್ಮ ಕಣ್ಣಮುಂದೆ ಮೂರು ಆಯಾಮದ ಚಿತ್ರ ಮೂಡುತ್ತದೆ.

ಆದರೆ ಮಲ್ಟಿಪ್ಲೆಕ್ಸಿನಲ್ಲಿ ಲೇಟೆಸ್ಟ್ ಥ್ರೀಡಿ ಸಿನಿಮಾ ನೋಡಲು ಹೋದಾಗ ಕೊಡುವ ಕನ್ನಡಕದಲ್ಲಾಗಲಿ ಮನೆಗೆ ತಂದ ಹೊಸ ಥ್ರೀಡಿ ಟೀವಿಯ ಜೊತೆಗಿರುವ ಕನ್ನಡಕದಲ್ಲಾಗಲಿ ನೀಲಿ-ಕೆಂಪು ಗಾಜುಗಳಿರುವುದಿಲ್ಲ. ಅಷ್ಟೇ ಏಕೆ, ಇಂತಹ ಕನ್ನಡಕಗಳನ್ನು ನೋಡಿದರೆ ಅವು ಸಾಮಾನ್ಯ ಕನ್ನಡಕಗಳಂತೆಯೇ ಕಾಣುತ್ತವೆ.

ಈ ಕನ್ನಡಕಗಳನ್ನು ಪೋಲರೈಸ್ಡ್ ಗ್ಲಾಸಸ್ ಎಂದು ಕರೆಯುತ್ತಾರೆ. ಈ ಕನ್ನಡಕ ಬಳಸಿ ನೋಡುವ ಥ್ರೀಡಿ ಚಿತ್ರಗಳನ್ನು ಪರಸ್ಪರ ಹೊಂದಾಣಿಕೆಯಿರುವ ಎರಡು ಪ್ರೊಜೆಕ್ಟರುಗಳ ಸಹಾಯದಿಂದ ಪರದೆಯ ಮೇಲೆ ತೋರಿಸಲಾಗುತ್ತದೆ. ಇದರಲ್ಲಿ ಒಂದು ಪ್ರೊಜೆಕ್ಟರಿನಿಂದ ಮೂಡುವ ಚಿತ್ರಣದ ಧ್ರುವೀಕರಣ (ಪೋಲರೈಸೇಶನ್) ಇನ್ನೊಂದು ಪ್ರೊಜೆಕ್ಟರಿನಿಂದ ಮೂಡುವ ಚಿತ್ರಣದ ಧ್ರುವೀಕರಣಕ್ಕಿಂತ ಭಿನ್ನವಾಗಿರುತ್ತದೆ. ವೀಕ್ಷಕರು ಧರಿಸುವ ಕನ್ನಡಕದ ಒಂದೊಂದು ಗಾಜು ಇಂತಹ ಒಂದೊಂದು ಚಿತ್ರಣವನ್ನು ಮಾತ್ರ ತೋರಿಸುವುದರಿಂದ ಎಡಗಣ್ಣಿಗೆ-ಬಲಗಣ್ಣಿಗೆ ಕೊಂಚ ಭಿನ್ನವೇ ಆದ ದೃಶ್ಯಗಳು ಕಾಣುತ್ತವೆ; ಮೆದುಳು ಅವೆರಡು ದೃಶ್ಯಗಳನ್ನೂ ಜೋಡಿಸಿದಾಗ ಮತ್ತೆ ನಮಗೆ ಥ್ರೀಡಿ ದರ್ಶನವಾಗುತ್ತದೆ!

ಇಷ್ಟೇ ಅಲ್ಲ, ಕನ್ನಡಕದ ನೆರವಿಲ್ಲದೆಯೇ ಥ್ರೀಡಿ ಚಿತ್ರಗಳನ್ನು ನೋಡುವ ತಂತ್ರಜ್ಞಾನ ಕೂಡ ಇದೆ. ಕ್ಯಾಮೆರಾ ಅಥವಾ ಮೊಬೈಲ್ ದೂರವಾಣಿಯಲ್ಲಿ ಕ್ಲಿಕ್ಕಿಸಿದ ಥ್ರೀಡಿ ಚಿತ್ರವನ್ನು ಅದೇ ಕ್ಯಾಮೆರಾ ಅಥವಾ ದೂರವಾಣಿಯ ಪರದೆಯಲ್ಲಿ ಯಾವುದೇ ಕನ್ನಡಕದ ಅಗತ್ಯವಿಲ್ಲದೆ ನೋಡುವುದು ಸಾಧ್ಯವಾಗಿದೆ. ಅಷ್ಟೇ ಏಕೆ, ಮಾಮೂಲಿ ಚಿತ್ರಗಳನ್ನು ಮುದ್ರಿಸಿಕೊಂಡಂತೆಯೇ ಥ್ರೀಡಿ ಚಿತ್ರಗಳನ್ನು ಮುದ್ರಿಸಿಕೊಳ್ಳುವ ಆಯ್ಕೆಯೂ ಕೆಲವು ದೇಶಗಳಲ್ಲಿ ಬಂದಿದೆ.

ಒಟ್ಟಿನಲ್ಲಿ ನಮ್ಮ ನಿಜದ ಬದುಕು ಮೂರು ಆಯಾಮದಲ್ಲಿರುವಂತೆಯೇ ಟೀವಿ-ಸಿನಿಮಾಗಳ ವರ್ಚುಯಲ್ ಜಗತ್ತು ಕೂಡ ಮೂರು ಆಯಾಮಗಳ ಕಡೆಗೆ ದಾಪುಗಾಲು ಹಾಕುತ್ತಿದೆ. ತಂತ್ರಜ್ಞಾನದ ಏನೆಲ್ಲ ಬೆಳೆವಣಿಗೆಗಳನ್ನು ಮುಕ್ತ ಮನಸ್ಸಿನಿಂದ ಬರಮಾಡಿಕೊಂಡಿರುವ ನಮಗೇನು ಹಿಂಜರಿಕೆಯೇ, ಬನ್ನಿ, ನಾವೂ ಥ್ರೀಡಿ ಜಗತ್ತಿಗೆ ಸಿದ್ಧರಾಗೋಣ!

ನವೆಂಬರ್ ೨೭, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge