ಭಾನುವಾರ, ನವೆಂಬರ್ 18, 2012

'ವಿಜ್ಞಾನ' ಸಂಪುಟಗಳ ಲೋಕಾರ್ಪಣೆ

ಇಜ್ಞಾನ ವಾರ್ತೆ

ಕನ್ನಡ ವಿಜ್ಞಾನ ಸಾಹಿತ್ಯದ ಆದ್ಯ ಪ್ರವರ್ತಕರಾದ ಶ್ರೀ ಬೆಳ್ಳಾವೆ ವೆಂಕಟನಾರಣಪ್ಪ ಹಾಗೂ ಶ್ರೀ ನಂಗಪುರಂ ವೆಂಕಟೇಶಯ್ಯಂಗಾರ್‍ಯರು ೧೯೧೮-೧೯ರಷ್ಟು ಹಿಂದೆಯೇ 'ವಿಜ್ಞಾನ' ಎಂಬ ಕನ್ನಡ ಮಾಸಪತ್ರಿಕೆಯನ್ನು ಪ್ರಾರಂಭಿಸಿದ್ದರು. ಅಷ್ಟೇ ಅಲ್ಲ, ಎಲ್ಲ ಸವಾಲುಗಳನ್ನು ಎದುರಿಸಿ ಆ ಪತ್ರಿಕೆಯನ್ನು ಎರಡು ವರ್ಷಗಳ ಕಾಲ ನಡೆಸಿಯೂ ಇದ್ದರು.

ಕನ್ನಡ ವಿಜ್ಞಾನ ಸಂವಹನ ಹಾಗೂ ಪತ್ರಿಕೋದ್ಯಮ - ಎರಡೂ ಕ್ಷೇತ್ರಗಳ ಪಾಲಿಗೆ ಇಂದಿಗೂ ಅಮೂಲ್ಯ ದಾಖಲೆಗಳಾಗಿರುವ ಈ ಇಪ್ಪತ್ನಾಲ್ಕು ಸಂಚಿಕೆಗಳು ಇದೀಗ ಎರಡು ಸಂಪುಟಗಳಲ್ಲಿ ಮರುಮುದ್ರಣ ಕಾಣುತ್ತಿವೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಉದಯಭಾನು ಕಲಾಸಂಘದ ಸಹಭಾಗಿತ್ವದಲ್ಲಿ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನೊಡನೆ ಸಿದ್ಧವಾಗಿರುವ ಈ ಸಂಪುಟಗಳನ್ನು ನವೆಂಬರ್ ೧೯, ೨೦೧೨ರ ಸೋಮವಾರ ಲೋಕಾರ್ಪಣೆಗೊಳಿಸಲಾಗುತ್ತಿದೆ. ಬೆಂಗಳೂರು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಲಿರುವ ಈ ಸಮಾರಂಭದ ಸಂದರ್ಭದಲ್ಲಿ 'ವಿಜ್ಞಾನ' ಸಂಪುಟಗಳಿಗೆ ಶೇ. ೨೫ರ ರಿಯಾಯಿತಿ ನೀಡಲಾಗುವುದು. ಆಮಂತ್ರಣ ಪತ್ರಿಕೆಯನ್ನು ದೊಡ್ಡಗಾತ್ರದಲ್ಲಿ ನೋಡಲು ಪಕ್ಕದ ಚಿತ್ರದ ಮೇಲೆ ಕ್ಲಿಕ್ ಮಾಡಿ.

ಈ ಅಪೂರ್ವ ಪತ್ರಿಕೆಯ ಸಂಚಿಕೆಗಳನ್ನು ಓದಲು ನಮಗೆ ಮತ್ತೊಂದು ಅವಕಾಶ ನೀಡಿರುವ ಸಂಕಲನಕಾರರಾದ ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಹಾಗೂ ಶ್ರೀ ಟಿ. ಆರ್. ಅನಂತರಾಮುರವರನ್ನು ಇಜ್ಞಾನ ಡಾಟ್ ಕಾಮ್ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.

('ವಿಜ್ಞಾನ' ಪತ್ರಿಕೆಯ ಮೊದಲ ಸಂಪುಟದ ಲೇಖನಗಳನ್ನು ಸಿರಿನುಡಿ ಜಾಲತಾಣದಲ್ಲಿ ಓದಬಹುದು)

ಕಾಮೆಂಟ್‌ಗಳಿಲ್ಲ:

badge