ಟಿ ಜಿ ಶ್ರೀನಿಧಿ
bit.ly/g9X0oN, goo.gl/FrX4, mcaf.ee/27f1a - ಈ ಬಗೆಯ ಪುಟ್ಟಪುಟ್ಟ ವೆಬ್ ವಿಳಾಸಗಳನ್ನು ನೀವು ನೋಡಿರಬಹುದು. 'ಶಾರ್ಟ್ ಯುಆರ್‌ಎಲ್' ಎಂದು ಕರೆಸಿಕೊಳ್ಳುವ ಇಂತಹ ಪುಟ್ಟ ವಿಳಾಸಗಳು ವಿಶ್ವವ್ಯಾಪಿ ಜಾಲದಲ್ಲಿ ಈಗ ಬಹಳ ಜನಪ್ರಿಯವಾಗಿವೆ.
ಯುಆರ್‌ಎಲ್ ಅಂದರೇನು?
ವಿಶ್ವವ್ಯಾಪಿ ಜಾಲದಲ್ಲಿ ಲಭ್ಯವಿರುವ ಕೋಟ್ಯಂತರ ಜಾಲತಾಣಗಳನ್ನು ಪ್ರತ್ಯೇಕವಾಗಿ ಗುರುತಿಸಲು ಅನುವುಮಾಡಿಕೊಡುವ ವಿಳಾಸಕ್ಕೆ ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ ಅಥವಾ ಯುಆರ್‌ಎಲ್ ಎಂದು ಹೆಸರು. ಪ್ರತಿಯೊಂದು ಜಾಲತಾಣಕ್ಕೂ ವಿಶಿಷ್ಟವಾದ ಯುಆರ್‌ಎಲ್ ಇರುತ್ತದೆ. ಇದು ಆ ಜಾಲತಾಣದ ವಿಳಾಸಕ್ಕೆ ಸಮಾನ.
ಆದರೆ ಇಂತಹ ವಿಳಾಸಗಳು ಕೆಲವೊಮ್ಮೆ ತೀರಾ ಉದ್ದವಾಗಿರುತ್ತವೆ, ಇಲ್ಲವೇ ನೆನಪಿಟ್ಟುಕೊಳ್ಳಲು ಕಷ್ಟವಾಗುವಂತಿರುತ್ತವೆ. ಉದಯವಾಣಿ ಡಾಟ್ ಕಾಮ್, ಗೂಗಲ್ ಡಾಟ್ ಕಾಂ ಮೊದಲಾದ ವಿಳಾಸಗಳನ್ನು ನೆನಪಿಟ್ಟುಕೊಂಡಷ್ಟು ಸುಲಭವಾಗಿ http://74.127.61.106/epaper/PDFList.aspx?Pg=H&Edn=BN&DispDate=2/1/2011ನಂತಹ ವಿಳಾಸವನ್ನು ನೆನಪಿಡಲು ಆಗುವುದಿಲ್ಲ.
ಪುಟ್ಟ ವಿಳಾಸಗಳ ಅಗತ್ಯ ಉಂಟಾಗುವುದೇ ಇಲ್ಲಿ. ಕಳೆದವಾರ ಈ ಅಂಕಣದಲ್ಲಿ ಪ್ರಕಟವಾಗಿದ್ದ ಬರೆಹವನ್ನು http://e-jnana.blogspot.com/2011/02/blog-post.html ಎಂಬ ವಿಳಾಸದಲ್ಲಿ ನೋಡಿ ಎಂದು ಹೇಳುವ ಬದಲು ಪುಟ್ಟದಾಗಿ goo.gl/eLnpG ನೋಡಿ ಎಂದು ಹೇಳಬಹುದು.
ಇಲ್ಲಿ goo.gl/eLnpG ಎನ್ನುವುದು ಪುಟ್ಟ ವಿಳಾಸಕ್ಕೊಂದು ಉದಾಹರಣೆ. ಮೂಲ ವಿಳಾಸವನ್ನು ದಾಖಲಿಸಿಕೊಂಡು ಅದರ ಬದಲಿಗೆ ಬಳಸಬಹುದಾದ ಇಂತಹ ಪುಟ್ಟ ವಿಳಾಸಗಳನ್ನು ಕೊಡುವ ಅನೇಕ ತಾಣಗಳು ವಿಶ್ವವ್ಯಾಪಿ ಜಾಲದಲ್ಲಿವೆ. bit.ly, ಗೂಗಲ್ ಸಂಸ್ಥೆಯ goo.gl, ಮೆಕಫಿ ಸಂಸ್ಥೆಯ mcaf.ee ಇವೆಲ್ಲ ಈ ಬಗೆಯ ಕೆಲ ತಾಣಗಳು.
ವಿಳಾಸ ಸಂಕ್ಷಿಪ್ತಗೊಳಿಸುವ (ಯುಆರ್‌ಎಲ್ ಶಾರ್ಟನಿಂಗ್) ಸೇವೆ ಒದಗಿಸುವ ಇಂತಹ ಯಾವುದೇ ಜಾಲತಾಣಕ್ಕೆ ಹೋಗಿ ನಿಮಗೆ ಉದ್ದವೆನಿಸುವ ಯಾವುದೇ ವಿಳಾಸವನ್ನು ದಾಖಲಿಸುತ್ತಿದ್ದಂತೆಯೇ ಅದಕ್ಕೆ ಪರ್ಯಾಯವಾದ ಶಾರ್ಟ್ ಯುಆರ್‌ಎಲ್ ಸಿದ್ಧವಾಗುತ್ತದೆ. ಇದನ್ನು ನೀವು ಎಲ್ಲಿ ಯಾರ ಜೊತೆಗೆ ಬೇಕಿದ್ದರೂ ಹಂಚಿಕೊಳ್ಳಬಹುದು. ಮೂಲ ವಿಳಾಸ ಹಾಗೂ ಪುಟ್ಟ ವಿಳಾಸ ಎರಡನ್ನೂ ನೆನಪಿಟ್ಟುಕೊಳ್ಳುವ ಯುಆರ್‌ಎಲ್ ಶಾರ್ಟನಿಂಗ್ ಸೇವೆ ಅವೆರಡನ್ನೂ ಹೊಂದಿಸಿ ಬಳಕೆದಾರರು ಪುಟ್ಟ ವಿಳಾಸ ದಾಖಲಿಸಿದಾಗೆಲ್ಲ ಅವರನ್ನು ಮೂಲ ವಿಳಾಸಕ್ಕೇ ಕರೆದೊಯ್ಯುತ್ತದೆ.
ಪುಟ್ಟ ವಿಳಾಸದ ಒಂದು ದಶಕ
ವಿಶ್ವವ್ಯಾಪಿ ಜಾಲದಲ್ಲಿ ಪುಟ್ಟ ವಿಳಾಸಗಳನ್ನು ಬಳಸುವ ಅಭ್ಯಾಸ ಇತ್ತೀಚಿನದೇನಲ್ಲ. 'ಮೇಕ್ ಎ ಶಾರ್ಟರ್ ಲಿಂಕ್' ಎಂಬ ಜಾಲತಾಣ ೨೦೦೧ರಷ್ಟು ಹಿಂದೆಯೇ ಯುಆರ್‌ಎಲ್ ಶಾರ್ಟನಿಂಗ್ ಸೇವೆ ಒದಗಿಸುತ್ತಿತ್ತು. ನಂತರದ ದಿನಗಳಲ್ಲಿ 'ಟೈನಿ ಯುಆರ್‌ಎಲ್' ಎಂಬ ತಾಣ ಕೂಡ ಸಾಕಷ್ಟು ಹೆಸರುಮಾಡಿತ್ತು.
೨೦೦೬ರಲ್ಲಿ ಕಾಣಿಸಿಕೊಂಡ ಟ್ವೀಟರ್‌ನಿಂದಾಗಿ ಪುಟ್ಟ ವಿಳಾಸಗಳ ಜನಪ್ರಿಯತೆ ಇನ್ನಷ್ಟು ಹೆಚ್ಚಿತು. ಇಲ್ಲಿ ನೂರಾ ನಲವತ್ತು ಅಕ್ಷರಗಳೊಳಗಾಗಿ ಸಂದೇಶಗಳನ್ನು ಬರೆಯಬೇಕಾದ ಅನಿವಾರ್ಯತೆ ಇದ್ದುದರಿಂದ ದೊಡ್ಡದೊಡ್ಡ ವಿಳಾಸಗಳಿಗೆ ಜಾಗವೇ ಇಲ್ಲದಂತಾಯಿತು.
ಇದೀಗ ಟ್ವೀಟರ್‌ನಲ್ಲಿ bit.ly ಎಂಬ ಯುಆರ್‌ಎಲ್ ಶಾರ್ಟನಿಂಗ್ ಸೇವೆ ವ್ಯಾಪಕವಾಗಿ ಬಳಕೆಯಾಗುತ್ತದೆ.
ಪುಟ್ಟದಲ್ಲ ಈ ಸಮಸ್ಯೆ
ಈ ಪುಟ್ಟ ವಿಳಾಸಗಳು ಯಾವ ಮೂಲ ವಿಳಾಸಕ್ಕೆ ಕರೆದೊಯ್ಯುತ್ತವೆ ಎಂದು ಮೇಲ್ನೋಟಕ್ಕೆ ಗೊತ್ತಾಗುವುದಿಲ್ಲ. ಹೀಗಾಗಿ ಇವುಗಳನ್ನು ವೈರಸ್ ಹರಡುವಂತಹ ಕೆಟ್ಟ ಉದ್ದೇಶಗಳಿಗಾಗಿಯೂ ಬಳಸಲಾಗುತ್ತಿದೆ. ಇತ್ತೀಚೆಗೆ ಟ್ವೀಟರ್‌ನಲ್ಲಿ ಕಾಣಿಸಿಕೊಂಡಿದ್ದ ಇಂಥದ್ದೊಂದು ಪುಟ್ಟ ವಿಳಾಸ ಸಾಕಷ್ಟು ತೊಂದರೆ ಉಂಟುಮಾಡಿತ್ತು; ಆ ವಿಳಾಸಕ್ಕೆ ಹೋದವರಿಗೆಲ್ಲ ನಿಮ್ಮ ಗಣಕಕ್ಕೆ ವೈರಸ್ ಬಂದಿದೆ ಎಂದು ಹೆದರಿಸಿ ಆಂಟಿ-ವೈರಸ್ ನೀಡುವ ನೆಪದಲ್ಲಿ ಯಾವುದೋ ಕುತಂತ್ರಾಂಶವನ್ನು ಅವರ ಗಣಕದಲ್ಲಿ ಅನುಸ್ಥಾಪಿಸಲಾಗುತ್ತಿತ್ತು. ಬೇಡದ ತಂತ್ರಾಂಶಕ್ಕೆ ದುಡ್ಡು ಬೇರೆ ಕೊಟ್ಟು ಆ ತಂತ್ರಾಂಶದಿಂದ ಆಗುವ ತೊಂದರೆಯನ್ನೂ ಅನುಭವಿಸುವ ಪಾಡು ಬಳಕೆದಾರರದು!
ಇಂತಹ ತೊಂದರೆ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ ಅಪರಿಚಿತ ಮೂಲಗಳಿಂದ ಬಂದ, ಅಥವಾ ಸಂದೇಹಾಸ್ಪದ ಸಂದೇಶಗಳಲ್ಲಿರುವ ಪುಟ್ಟ ವಿಳಾಸಗಳ ಕೊಂಡಿಯ ಮೇಲೆ ಕ್ಲಿಕ್ಕಿಸದಿರುವುದು ಎಂದು ತಜ್ಞರು ಹೇಳುತ್ತಾರೆ. ನೀವು ನೋಡಹೊರಟಿರುವ ಪುಟ್ಟ ವಿಳಾಸ ಎಲ್ಲಿಗೆ ಕರೆದೊಯ್ಯಲಿದೆ ಎಂದು ಪರೀಕ್ಷಿಸಿನೋಡುವ ಸೌಲಭ್ಯ ಬಳಸಿಕೊಳ್ಳುವುದೂ ಒಳ್ಳೆಯ ಆಯ್ಕೆಯೇ. mcaf.ee ತಾಣ ಇಂತಹ ಸೌಲಭ್ಯ ಒದಗಿಸುತ್ತಿರುವ ಯುಆರ್‌ಎಲ್ ಶಾರ್ಟನಿಂಗ್ ಸೇವೆಗಳಿಗೊಂದು ಉದಾಹರಣೆ.
ಫೆಬ್ರುವರಿ ೮, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ