ಟಿ ಜಿ ಶ್ರೀನಿಧಿ
ಗಣಕದಲ್ಲಿ ಕೆಲಸಮಾಡುತ್ತಿರುವಾಗ ಕೆಲವೊಮ್ಮೆ ನೀವು ಬಳಸುತ್ತಿದ್ದ ತಂತ್ರಾಂಶ ಇದ್ದಕ್ಕಿದ್ದಹಾಗೆ ದಿಕ್ಕುತೋಚದೆ ಹ್ಯಾಂಗ್ ಆಗುವುದನ್ನು ನೀವು ಗಮನಿಸಿಯೇ ಇರುತ್ತೀರಿ. ಆಗೆಲ್ಲ ನಿಮ್ಮ ಸಹಾಯಕ್ಕೆ ಬರುವುದು ಮೂರು ಬೆರಳಿನ ಸಲಾಮು, ಅರ್ಥಾತ್ ಕಂಟ್ರೋಲ್-ಆಲ್ಟ್-ಡಿಲೀಟ್!
ಗಣಕದ ಕೀಲಿಮಣೆಯಲ್ಲಿ ಕಂಟ್ರೋಲ್, ಆಲ್ಟ್ ಹಾಗೂ ಡಿಲೀಟ್ - ಈ ಮೂರೂ ಕೀಲಿಗಳನ್ನು ಒಟ್ಟಿಗೆ ಒತ್ತುವ ಆಯ್ಕೆಯನ್ನು ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯ ಬಳಕೆದಾರರು ಬಹಳ ವ್ಯಾಪಕವಾಗಿ ಬಳಸುತ್ತಾರೆ. ತಂತ್ರಾಂಶಗಳು ಹ್ಯಾಂಗ್ ಆದಾಗ ಅವುಗಳ ಕೆಲಸವನ್ನು ಬಲವಂತವಾಗಿ ಸ್ಥಗಿತಗೊಳಿಸಲು ಅಥವಾ ಯಾವ ತಂತ್ರಾಂಶವೂ ಪ್ರತಿಕ್ರಿಯೆ ನೀಡದ ಸಂದರ್ಭದಲ್ಲಿ ಗಣಕವನ್ನು ರೀಬೂಟ್ ಮಾಡಲು ಅನುವುಮಾಡಿಕೊಡುವ ರಾಮಬಾಣ ಈ ಕಂಟ್ರೋಲ್-ಆಲ್ಟ್-ಡಿಲೀಟ್.
ಅಷ್ಟೇ ಅಲ್ಲ, ಗಣಕಕ್ಕೆ ಲಾಗ್‌ಆನ್ ಆಗುವಾಗ, ಗುಪ್ತಪದ ಬದಲಿಸಲು, ಟಾಸ್ಕ್ ಮ್ಯಾನೇಜರ್ ತಂತ್ರಾಂಶವನ್ನು ತೆರೆಯಲು, ಲಾಗ್‌ಆಫ್ ಅಥವಾ ಶಟ್‌ಡೌನ್ ಮಾಡಲು - ಹೀಗೆ ಅನೇಕ ಕೆಲಸಗಳಿಗೂ ಇದೇ ಮೂರು ಕೀಲಿಗಳ ಸಂಯೋಜನೆ ಸಹಾಯಮಾಡುತ್ತದೆ. ಓಎಸ್/೨ ಹಾಗೂ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ ಬಳಸುವ ಗಣಕಗಳಲ್ಲೂ ಕಂಟ್ರೋಲ್-ಆಲ್ಟ್-ಡಿಲೀಟ್ ಬಳಸಿ ರೀಬೂಟ್ ಮಾಡುವುದು ಸಾಧ್ಯ. ಇಷ್ಟೆಲ್ಲ ಕೆಲಸಗಳಿಗೆ ಸಹಾಯಮಾಡುವ ಈ ಸಂಯೋಜನೆಗೆ ಮೂರು ಬೆರಳಿನ ಸಲಾಮು ಅಥವಾ ಥ್ರೀ ಫಿಂಗರ್ ಸಲ್ಯೂಟ್ ಎಂಬ ಅಡ್ಡಹೆಸರೂ ಇದೆ.
ಯಾವುದೇ ಕೆಲಸ ಸಾಧಿಸಲು ಕೀಲಿಮಣೆಯಲ್ಲಿ ಮೂರು ಕೀಲಿಗಳನ್ನು ಒಟ್ಟಿಗೆ ಒತ್ತುವ ಕಲ್ಪನೆಯೇ ವಿಚಿತ್ರವಾದದ್ದು. ಅದರಲ್ಲೂ ಕೀಲಿಮಣೆಯ ಒಂದು ಮೂಲೆಯಲ್ಲಿರುವ ಕಂಟ್ರೋಲ್ ಹಾಗೂ ಆಲ್ಟ್ ಜೊತೆಗೆ ಇನ್ನೊಂದು ಮೂಲೆಯಲ್ಲಿರುವ ಡಿಲೀಟ್ ಕೀಲಿಯನ್ನು ಒತ್ತುವುದಂತೂ ಇನ್ನೂ ವಿಚಿತ್ರವಾದ ಕಲ್ಪನೆ. ಆದರೂ ವಿಶ್ವದೆಲ್ಲೆಡೆ ಕೋಟ್ಯಂತರ ಜನರು ಈ ಸಂಯೋಜನೆಯನ್ನು ಹೆಚ್ಚೂಕಡಿಮೆ ಮೂವತ್ತು ವರ್ಷಗಳಿಂದ ಬಳಸುತ್ತಿದ್ದಾರೆ.
ಕಂಟ್ರೋಲ್ ಆಲ್ಟ್ ಡಿಲೀಟ್ ಇಷ್ಟೆಲ್ಲ ಜನಪ್ರಿಯವಾಗುತ್ತದೆ ಎಂಬ ಕಲ್ಪನೆ ಅದರ ಸೃಷ್ಟಿಕರ್ತ ಡೇವಿಡ್ ಬ್ರಾಡ್ಲಿಗೂ ಇರಲಿಲ್ಲವಂತೆ. ೧೯೮೦ರಲ್ಲೋ ೮೧ರಲ್ಲೋ ಆದ ಈ ಸಂಯೋಜನೆಯ ಸೃಷ್ಟಿ ಅಂತಹ ಸ್ಮರಣಾರ್ಹ ಘಟನೆಯೇನೂ ಆಗಿರಲಿಲ್ಲ ಎಂಬುದು ಅವರ ಹೇಳಿಕೆ.
ಆಗ ಐಬಿಎಂ ಸಂಸ್ಥೆಯಲ್ಲಿ 'ಐಬಿಎಂ ಪಿಸಿ'ಯ ಮೇಲೆ ಕೆಲಸ ನಡೆಯುತ್ತಿತ್ತು. ಅದಕ್ಕಾಗಿ ತಂತ್ರಾಂಶಗಳನ್ನು ರೂಪಿಸಿ ಪರೀಕ್ಷಿಸುತ್ತಿದ್ದ ತಂತ್ರಜ್ಞರು ಅನೇಕಬಾರಿ ಗಣಕವನ್ನು ರೀಬೂಟ್ ಮಾಡಬೇಕಾಗುತ್ತಿತ್ತು. ಪ್ರತಿಬಾರಿಯೂ ಗಣಕವನ್ನು ಆರಿಸಿ ಪುನಃ ಚಾಲೂ ಮಾಡುವಾಗ ಪವರ್ ಆನ್ ಸೆಲ್ಫ್ ಟೆಸ್ಟ್(ಪೋಸ್ಟ್)ನಿಂದಾಗಿ ಕೆಲ ನಿಮಿಷಗಳಷ್ಟು ಸಮಯ ವ್ಯಯವಾಗುತ್ತಿತ್ತು. ಇದರ ಬದಲು ಗಣಕವನ್ನು ಆರಿಸದೆಯೇ ರೀಬೂಟ್ ಮಾಡಿದರೆ ಸಾಕಷ್ಟು ಸಮಯದ ಉಳಿತಾಯವಾಗಬಹುದು ಎಂಬ ಆಲೋಚನೆಯ ಪರಿಣಾಮವೇ ಕಂಟ್ರೋಲ್ ಆಲ್ಟ್ ಡಿಲೀಟ್ ಸಂಯೋಜನೆಯ ಸೃಷ್ಟಿ.
ಆಕಸ್ಮಿಕವಾಗಿ ಕೀಲಿಗಳನ್ನು ಒತ್ತುವ ಸಾಧ್ಯತೆ ತಪ್ಪಿಸುವ ಒಂದೇ ಕಾರಣದಿಂದ ಕೀಲಿಮಣೆಯ ವಿರುದ್ಧ ಮೂಲೆಗಳಲ್ಲಿರುವ ಕಂಟ್ರೋಲ್, ಆಲ್ಟ್ ಹಾಗೂ ಡಿಲೀಟ್ ಕೀಲಿಗಳನ್ನು ಈ ಉದ್ದೇಶಕ್ಕಾಗಿ ಆರಿಸಿಕೊಳ್ಳಲಾಯಿತಂತೆ. ಆ ಸಮಯದಲ್ಲಿ ನಮ್ಮನಿಮ್ಮಂತಹ ಗಣಕ ಬಳಕೆದಾರರಿಗೆ ಈ ಆಯ್ಕೆ ಒದಗಿಸುವ ಯಾವ ಉದ್ದೇಶವೂ ಇರಲಿಲ್ಲ ಎನ್ನುವುದು ತಮಾಷೆಯ ಸಂಗತಿ.
ಈ ಕೀಲಿಗಳ ಆಯ್ಕೆಗಾಗಲೀ ಅಥವಾ ಈ ಸಂಯೋಜನೆಯನ್ನು ಬಳಸಿದಾಗ ಗಣಕವನ್ನು ರೀಬೂಟ್ ಮಾಡುವ ತಂತ್ರಾಂಶದ ಸೃಷ್ಟಿಗಾಗಲೀ ಹೆಚ್ಚೇನೂ ಸಮಯ ಹಿಡಿಸಲಿಲ್ಲ ಎಂದು ಬ್ರಾಡ್ಲಿ ಹೇಳುತ್ತಾರೆ. ಗಣಕ ಕ್ಷೇತ್ರದಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿರುವ ಅವರು ತಮ್ಮ ಸಣ್ಣದೊಂದು ಸೃಷ್ಟಿ ಇಷ್ಟೆಲ್ಲ ಜನಪ್ರಿಯವಾಗುತ್ತದೆ ಎಂದು ಖಂಡಿತಾ ಅಂದುಕೊಂಡಿರಲಿಲ್ಲವಂತೆ.
ಫೆಬ್ರುವರಿ ೧, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್:
ಈ ಆವಿಷ್ಕಾರವನ್ನು ಪರಿಚಯ ಮಾಡಿಕೊಟ್ಟಿದ್ದಕ್ಕೆ ಮೂರು ಬೆರೆಳಿನ ಸಲಾಮ್ ಅಲ್ಲ ಪೂರ್ತಿ ಕೈಯತ್ತಿ ಸಲಾಮ್ ಮಾಡುತ್ತೇನೆ - ಇ ಜ್ಞಾನ ಡಾಟ್ ಕಾಮ್‍ಗೆ
ಕಾಮೆಂಟ್ ಪೋಸ್ಟ್ ಮಾಡಿ