ಟಿ ಜಿ ಶ್ರೀನಿಧಿ
೧೮-೧೯ನೇ ಶತಮಾನದ ಕೈಗಾರಿಕಾ ಕ್ರಾಂತಿಯ ನಂತರ ಮನುಕುಲದ ಮೇಲೆ ಅಷ್ಟೇ ದೊಡ್ಡ ಪ್ರಭಾವ ಬೀರಿರುವುದು ಮಾಹಿತಿ ಕ್ರಾಂತಿ. ಆಧುನಿಕ ಗಣಕಗಳ ಬೆಳೆವಣಿಗೆಯೊಡನೆ ಪ್ರಾರಂಭವಾದದ್ದು ಈ ಕ್ರಾಂತಿ. ಅಂತರಜಾಲದ ವಿಕಾಸ, ವಿಶ್ವವ್ಯಾಪಿ ಜಾಲದ ಹುಟ್ಟು, ಅತ್ಯಾಧುನಿಕ ಸಂವಹನ ಮಾಧ್ಯಮಗಳ ಉಗಮ ಮುಂತಾದ ಎಲ್ಲ ಹೆಜ್ಜೆಗಳೂ ನಮ್ಮ ಬದುಕನ್ನು ಅಪಾರವಾಗಿ ಬದಲಿಸಿವೆ. ವಿಶ್ವವ್ಯಾಪಿ ಜಾಲದಲ್ಲಿ, ಮೊಬೈಲ್ ಮೂಲಕ, ದೂರದರ್ಶನ-ಆಕಾಶವಾಣಿಗಳಲ್ಲಿ, ಪತ್ರಿಕೆಗಳಲ್ಲಿ - ಹೀಗೆ ಎಲ್ಲೆಲ್ಲಿ ನೋಡಿದರೂ ಮಾಹಿತಿಯ ಮಹಾಪೂರವೇ ನಮ್ಮನ್ನು ಆವರಿಸಿಕೊಂಡಿದೆ.
ಮಾಹಿತಿ ಎಂದರೇನು?
ವಿಶಾಲ ಅರ್ಥದಲ್ಲಿ ನೋಡಿದಾಗ ಈ ಪ್ರಪಂಚದಲ್ಲಿರುವ ಯಾವುದೇ ವಸ್ತುವಿಶೇಷದ ಬಗೆಗಿನ ವಿವರಗಳನ್ನು ಮಾಹಿತಿ ಎಂದು ಕರೆಯಬಹುದು. ಆದರೆ ಗಣಕವಿಜ್ಞಾನದ ಪ್ರಕಾರ ಯಾವುದೇ ವಸ್ತು ಅಥವಾ ವಿಷಯದ ಬಗೆಗಿನ ದತ್ತಾಂಶ(ಡೇಟಾ)ವನ್ನು ಗಣಕೀಕರಣಗೊಳಿಸಿ ಅಗತ್ಯಕ್ಕೆ ತಕ್ಕಂತೆ ಸಂಸ್ಕರಿಸಿದಾಗ ಅದು ಮಾಹಿತಿ ಎಂದು ಕರೆಸಿಕೊಳ್ಳುತ್ತದೆ.
ಗಣಕದಲ್ಲಿ ರೂಪಿಸಲಾದ ಯಾವುದೇ ಕಡತ, ಇಮೇಲ್ ಸಂದೇಶ, ಅಂತರಜಾಲದ ಮೂಲಕ ಲಭ್ಯವಿರುವ ಚಿತ್ರಗಳು, ಪಠ್ಯ, ಹಾಡು - ಇವೆಲ್ಲವೂ ಮಾಹಿತಿಗೆ ಉದಾಹರಣೆಗಳು. ಎಟಿಎಂ ಕಾರ್ಡುಗಳಲ್ಲಿ, ಮೊಬೈಲಿನ ಸಿಮ್‌ನಲ್ಲಿ, ಗೃಹೋಪಯೋಗಿ ಉಪಕರಣಗಳಲ್ಲಿ - ಎಲ್ಲಕಡೆಯೂ ಮಾಹಿತಿ ಸಂಗ್ರಹವಾಗಿರುತ್ತದೆ. ಇವಿಷ್ಟೇ ಅಲ್ಲದೆ ಪುಸ್ತಕಗಳು, ಪತ್ರಿಕೆಗಳು, ಟೀವಿ ಕಾರ್ಯಕ್ರಮಗಳು, ಜಾಹಿರಾತುಗಳು, ದೂರವಾಣಿ ಕರೆಗಳು, ಎಸ್‌ಎಂಎಸ್, ಎಂಎಂಎಸ್ - ಎಲ್ಲವನ್ನೂ ಮಾಹಿತಿ ಎಂದು ಪರಿಗಣಿಸಬಹುದು.
ಬಿಟ್ ಬೈಟ್ ಲೆಕ್ಕ
ಗಣಕದ ಸ್ಮೃತಿಯಲ್ಲಿ, ಅಂದರೆ ಮೆಮೊರಿಯಲ್ಲಿ, ಯಾವುದೇ ಮಾಹಿತಿ ಉಳಿಯಬೇಕಾದರೂ ಅದು ದ್ವಿಮಾನ ಪದ್ಧತಿಯ ಸಂಖ್ಯೆಗಳ (೧ ಅಥವಾ ೦) ರೂಪದಲ್ಲಿ ಮಾತ್ರ ಶೇಖರವಾಗುವುದು ಸಾಧ್ಯ.
ದ್ವಿಮಾನ ಸಂಖ್ಯೆಯ ಆಂಗ್ಲ ಹೆಸರು ಬೈನರಿ ಡಿಜಿಟ್; ಈ ಹೆಸರಿನ ಮೊದಲ ಎರಡು ಹಾಗೂ ಕೊನೆಯದೊಂದು ಅಕ್ಷರಗಳನ್ನು ಸೇರಿಸಿ ಬಿಟ್ ಎಂಬ ಹೆಸರು ರೂಪಗೊಂಡಿದೆ. ಇದು ಮಾಹಿತಿಯ ಪ್ರಮಾಣವನ್ನು ಅಳೆಯಲು ಬಳಕೆಯಾಗುವ ಅತ್ಯಂತ ಸಣ್ಣ ಏಕಮಾನ.
ಹೆಚ್ಚು ದೊಡ್ಡದಾದ ಮಾಹಿತಿಯ ಸಂಗ್ರಹವನ್ನು ರಚಿಸಲು ಇಂತಹ ಹಲವಾರು ಬಿಟ್‌ಗಳನ್ನು ಒಗ್ಗೂಡಿಸಿ ಹೊಸ ಘಟಕಗಳನ್ನು ರೂಪಿಸಿಕೊಳ್ಳಲಾಗಿದೆ. ಎಂಟು ಬಿಟ್‌ಗಳ ಇಂಥದೊಂದು ಘಟಕವೇ ಬೈಟ್ (ಅಷ್ಟಕ). ಒಂದು ಅಕ್ಷರ, ಅಂಕಿ ಅಥವಾ ವ್ಯಾಕರಣ ಚಿಹ್ನೆಯಂತಹ ಯಾವುದೇ ಬಗೆಯ ಮಾಹಿತಿಯನ್ನು ಒಂದು ಬೈಟ್ ಪ್ರತಿನಿಧಿಸುತ್ತದೆ. ಉದಾಹರಣೆಗೆ ಹೇಳುವುದಾದರೆ ವಿಂಡೋಸ್‌ನ ನೋಟ್‌ಪ್ಯಾಡ್ ತಂತ್ರಾಂಶದಲ್ಲಿ ಶೇಖರಿಸಿಟ್ಟ srinidhi ಎಂಬ ಹೆಸರು ಗಣಕದ ಸ್ಮೃತಿಯಲ್ಲಿ ಎಂಟು ಬೈಟ್‌ಗಳನ್ನು ಬಳಸಿಕೊಳ್ಳುತ್ತದೆ.
ಇದೇ ರೀತಿ, ೧೦೨೪ ಬೈಟ್‌ಗಳು ಒಂದು ಕಿಲೋಬೈಟ್ (ಕೆಬಿ) ಎನಿಸಿಕೊಂಡರೆ ೧೦೨೪ ಕಿಲೋಬೈಟ್‌ಗಳು ಒಂದು ಮೆಗಾಬೈಟ್ (ಎಂಬಿ) ಎಂದು ಕರೆಸಿಕೊಳ್ಳುತ್ತವೆ. ಒಂದು ಫ್ಲಾಪಿ ಡಿಸ್ಕ್‌ನಲ್ಲಿ ೧.೪೪ ಎಂಬಿ ಮಾಹಿತಿ ದಾಖಲಿಸಬಹುದಿತ್ತು ಎಂದೋ ಒಂದು ಸಿ.ಡಿ.ಯಲ್ಲಿ ೭೦೦ ಎಂಬಿ ಮಾಹಿತಿ ದಾಖಲಿಸಬಹುದು ಎಂದೋ ಹೇಳುತ್ತಾರಲ್ಲ, ಅವರೆಲ್ಲ ಮಾತನಾಡುವುದು ಇದೇ ಎಂಬಿ ಬಗೆಗೆ.
ಹಾಗೆಯೇ, ೧೦೨೪ ಎಂಬಿ ಒಂದು ಗಿಗಾಬೈಟ್‌ಗೆ (ಜಿಬಿ) ಸಮಾನ. ಇಂದಿನ ಗಣಕಗಳಲ್ಲಿರುವ ಹಾರ್ಡ್‌ಡಿಸ್ಕ್‌ನಲ್ಲಿ ಶೇಖರವಾಗಿರುವ ಮಾಹಿತಿಯನ್ನು ಗಿಗಾಬೈಟ್‌ಗಳ ಲೆಕ್ಕದಲ್ಲಿಯೇ ಅಳೆಯಲಾಗುತ್ತದೆ. ನೂರಾರು ಗಿಗಾಬೈಟ್‌ನಷ್ಟು ಮಾಹಿತಿ ಸಂಗ್ರಹಿಸಬಲ್ಲ ಹಾರ್ಡ್‌ಡಿಸ್ಕ್‌ಗಳು ಈಗ ಎಲ್ಲ ಗಣಕಗಳಲ್ಲೂ ಸಾಮಾನ್ಯ. ಎರಡರಿಂದ ನಾಲ್ಕು ಗಿಗಾಬೈಟ್ ಮಾಹಿತಿ ಸಂಗ್ರಹಣಾ ಸಾಮರ್ಥ್ಯವುಳ್ಳ ರ್‍ಯಾಮ್‌ಗಳೂ ವ್ಯಾಪಕ ಬಳಕೆಯಲ್ಲಿವೆ.
ಇದೇ ರೀತಿಯಲ್ಲಿ ೧೦೨೪ ಗಿಗಾಬೈಟ್ ಮಾಹಿತಿ ಒಂದು ಟೆರಾಬೈಟ್‌ಗೆ ಸಮಾನ. ಬೈಟ್‌ಗಳ ಲೆಕ್ಕದಲ್ಲಿ ನೋಡಿದರೆ ಒಂದು ಟೆರಾಬೈಟ್ ಎನ್ನುವುದು ಹೆಚ್ಚೂಕಡಿಮೆ ಒಂದು ಲಕ್ಷ ಕೋಟಿ ಬೈಟ್‌ಗಳಿಗೆ ಸಮಾನ. ಟೆರಾಬೈಟ್ ಸಾಮರ್ಥ್ಯದ ಹಾರ್ಡ್‌ಡಿಸ್ಕ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ.
ಇದು ಎಕ್ಸಾಬೈಟ್
ನಮ್ಮ ಬದುಕಿನ ಪ್ರತಿ ಕ್ಷಣದಲ್ಲೂ ಅಪಾರ ಪ್ರಮಾಣದ ಮಾಹಿತಿ ನಮ್ಮನ್ನು ಸುತ್ತುವರೆದಿರುತ್ತದೆ ಎಂಬುದೇನೋ ಸರಿ, ಆದರೆ ಈ ಮಾಹಿತಿಯ ಒಟ್ಟು ಪ್ರಮಾಣ ಎಷ್ಟು ಎನ್ನುವುದನ್ನು ಅಳೆಯಲು ಸಾಧ್ಯವೆ?
ಖಂಡಿತಾ ಸಾಧ್ಯ ಎನ್ನುತ್ತಿದ್ದಾರೆ ವಿಜ್ಞಾನಿಗಳು. ೨೦೦೭ನೇ ಇಸವಿಯವರೆಗೆ ಪ್ರಪಂಚದಲ್ಲಿ ಶೇಖರವಾಗಿದ್ದ ಮಾಹಿತಿಯ ಪ್ರಮಾಣ ೨೯೫ ಎಕ್ಸಾಬೈಟ್‌ನಷ್ಟಿತ್ತು ಎಂದು ಅವರು ಅಂದಾಜಿಸಿದ್ದಾರೆ. ಒಂದು ಎಕ್ಸಾಬೈಟ್ ಮಾಹಿತಿ ನೂರು ಕೋಟಿ ಗಿಗಾಬೈಟ್‌ಗಳಿಗೆ ಸಮಾನ. ಇಷ್ಟೆಲ್ಲ ಮಾಹಿತಿಯನ್ನು ಸಿ.ಡಿ.ಗಳಲ್ಲಿ ಶೇಖರಿಸಿ ಒಂದರ ಮೇಲೊಂದು ಪೇರಿಸಿಟ್ಟರೆ ಆ ಗೋಪುರ ಚಂದ್ರನನ್ನೂ ದಾಟಿ ಮುಂದೆಹೋಗುತ್ತದಂತೆ!
ಫೆಬ್ರುವರಿ ೨೨, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ