ಟಿ. ಜಿ. ಶ್ರೀನಿಧಿ
ಗಣಕಗಳನ್ನು ಬಳಸಿ ಅನೇಕ ಕೆಲಸಗಳನ್ನು ಮಾಡಬಹುದು ಎನ್ನುವ ಹೇಳಿಕೆಯಲ್ಲಿ ಹೊಸತೇನೂ ಇಲ್ಲ. ಅವು ಒಂದು+ಒಂದು ಎಷ್ಟು ಎಂಬ ಲೆಕ್ಕವನ್ನು ಬೇಕಿದ್ದರೂ ಬಿಡಿಸಬಲ್ಲವು, ಮಂಗಳಗ್ರಹದತ್ತ ಹೊರಟ ಗಗನನೌಕೆಯ ಉಡಾವಣೆಯನ್ನು ನಿಯಂತ್ರಿಸಲೂ ಬಲ್ಲವು.
ಆದರೆ ಇಂತಹ ಯಾವುದೇ ಕೆಲಸ ಮಾಡಬೇಕಾದರೂ ಗಣಕಕ್ಕೆ ಸಂಪೂರ್ಣ ಮಾರ್ಗದರ್ಶನ ಬೇಕು. ಲೆಕ್ಕಾಚಾರ ಹೇಗೆ ಮಾಡಬೇಕು, ಅದಕ್ಕಾಗಿ ಯಾವ ದತ್ತಾಂಶ ಬಳಸಬೇಕು ಮುಂತಾದ ಎಲ್ಲ ವಿವರಗಳನ್ನೂ ಲೆಕ್ಕಾಚಾರ ಮಾಡುವಂತೆ ಹೇಳುವ ಮೊದಲೇ ನಾವು ಗಣಕಕ್ಕೆ ಹೇಳಿಕೊಟ್ಟಿರಬೇಕಾಗುತ್ತದೆ.
ಹೀಗೆ ಪ್ರತಿಯೊಂದು ಕೆಲಸವನ್ನೂ ಹೆಜ್ಜೆಹೆಜ್ಜೆಯಾಗಿ ವಿವರಿಸುವುದು ಕ್ರಮವಿಧಿ ಅಥವಾ ಪ್ರೋಗ್ರಾಮುಗಳ ಕೆಲಸ. ಗಣಕ ಯಾವುದೇ ಕೆಲಸ ಮಾಡುವಾಗಲೂ ಅದಕ್ಕೆ ಸಂಬಂಧಪಟ್ಟ ಕ್ರಮವಿಧಿಯಲ್ಲಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುತ್ತದೆ. ಉದಾಹರಣೆಗೆ ಒಂದು + ಒಂದು = ಎರಡು ಎನ್ನುವ ಬದಲು ಒಂದು + ಒಂದು = ಹನ್ನೊಂದು ಎಂದು ಕ್ರಮವಿಧಿಯಲ್ಲಿ ಹೇಳಿದ್ದರೆ ನೀವು ಒಂದು + ಒಂದು ಎಷ್ಟು ಎಂದಾಗ ಉತ್ತರ ಹನ್ನೊಂದು ಎಂದೇ ಬರುತ್ತದೆ.
ತಿಗಣೆಕಾಟದ ಇತಿಹಾಸ
ಯಂತ್ರಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳನ್ನು 'ಬಗ್'ಗಳೆಂದು ಕರೆಯುವ ಅಭ್ಯಾಸ ಬಹಳ ಹಿಂದಿನಿಂದಲೇ ಇತ್ತಂತೆ. ಗಣಕಲೋಕಕ್ಕೆ ಈ ಅಭ್ಯಾಸ ಪ್ರವೇಶಿಸಿದ್ದು ೧೯೪೦ರ ದಶಕದಲ್ಲಿ ಎಂದು ಇತಿಹಾಸ ಹೇಳುತ್ತದೆ.
ಗಣಕವಿಜ್ಞಾನದ ಆದ್ಯಪ್ರವರ್ತಕರಲ್ಲೊಬ್ಬರಾದ ಹೊವಾರ್ಡ್ ಐಕೆನ್ ನೇತೃತ್ವದಲ್ಲಿ 'ಮಾರ್ಕ್ - ೨' ಗಣಕ ಆಗಷ್ಟೆ ಸಿದ್ಧವಾಗಿತ್ತು. ಅದರ ಪರೀಕ್ಷೆ ನಡೆಯುತ್ತಿದ್ದಾಗ ಲೆಕ್ಕಾಚಾರದಲ್ಲಿ ಏನೋ ತಪ್ಪಾಗುತ್ತಿರುವುದು ತಂತ್ರಜ್ಞರ ಗಮನಕ್ಕೆ ಬಂತು. ತಪ್ಪಿನ ಕಾರಣ ಹುಡುಕುತ್ತ ಹೊರಟ ಅವರಿಗೆ ಸಿಕ್ಕಿದ್ದು ಒಂದು ಹುಳು. ಆ ಹುಳು ವಿದ್ಯುಂತ್ಕಾಂತೀಯ ಟಪ್ಪೆ(ರಿಲೇ)ಯೊಂದರೊಳಗೆ ಸಿಕ್ಕಿಕೊಂಡು ಅದರ ಕೆಲಸಕ್ಕೆ ಅಡ್ಡಿಮಾಡುತ್ತಿತ್ತು; ಪರಿಣಾಮವಾಗಿ ಗಣಕದ ಲೆಕ್ಕಾಚಾರದಲ್ಲಿ ಏರುಪೇರಾಗುತ್ತಿತ್ತು.
ಅದೇ ಹುಳು ಗಣಕವಿಜ್ಞಾನ ಕ್ಷೇತ್ರದಲ್ಲಿ ಪತ್ತೆಯಾದ ಮೊದಲ ಬಗ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮಾರ್ಕ್-೨ ಗಣಕದ ತಂತ್ರಜ್ಞರು ಅಂದು ಆ ಹುಳುವನ್ನು ಅಂಟಿಸಿಟ್ಟಿದ್ದ ದಿನಚರಿ ಪುಸ್ತಕದ ಹಾಳೆ ಇವತ್ತಿಗೂ ಅಮೆರಿಕಾದ ಸ್ಮಿತ್‌ಸೋನಿಯನ್ ರಾಷ್ಟ್ರೀಯ ಇತಿಹಾಸ ವಸ್ತುಸಂಗ್ರಹಾಲಯದಲ್ಲಿ ಭದ್ರವಾಗಿದೆ.
ಬಗೆ ಬಗೆ ಬಗ್
ಬಗ್‌ಗಳಲ್ಲಿ ಅನೇಕ ವಿಧ - ಕ್ಯಾಲ್ಕ್ಯುಲೇಟರ್‌ನಂತೆ ಕೆಲಸಮಾಡಲು ಬರೆಯಲಾದ ತಂತ್ರಾಂಶದ ಕ್ರಮವಿಧಿ ಒಂದು+ಒಂದು ಎಷ್ಟು ಎಂದಾಗ ಹನ್ನೊಂದು ಎಂದರೆ ಅದರಿಂದ ಬಹಳ ದೊಡ್ಡ ಅನಾಹುತವೇನೂ ಆಗಲಾರದು. ಆದರೆ ಸಂಸ್ಥೆಯೊಂದರ ಪಾವತಿಗಳನ್ನೆಲ್ಲ ನೋಡಿಕೊಳ್ಳುವ ತಂತ್ರಾಂಶದಲ್ಲಿರುವ ತಪ್ಪಿನಿಂದಾಗಿ ಎಲ್ಲರಿಗೂ ಎರಡೆರಡು ಸಲ ಹಣ ಪಾವತಿಯಾದರೆ ಆ ಸಂಸ್ಥೆಗೆ ಸಾಕಷ್ಟು ದೊಡ್ಡ ನಷ್ಟವಾಗುತ್ತದೆ. ಇನ್ನು ಆಸ್ಪತ್ರೆಯಲ್ಲಿ ರೋಗಿಗಳ ಜೀವಬೆಂಬಲ ವ್ಯವಸ್ಥೆಯನ್ನು ನೋಡಿಕೊಳ್ಳುವ ತಂತ್ರಾಂಶದಲ್ಲಿ ತಪ್ಪಿದ್ದರೆ?
ಅಂತಹ ಮಹತ್ವದ ಕೆಲಸಗಳನ್ನು ನೋಡಿಕೊಳ್ಳುವ ಗಣಕ ವ್ಯವಸ್ಥೆಗಳಲ್ಲಿರುವ ಬಗ್‌ಗಳು ಭಾರೀ ನಷ್ಟ ಉಂಟುಮಾಡಬಲ್ಲವು, ರೋಗಿಗಳಿಗೆ ವಿಕಿರಣ ಚಿಕಿತ್ಸೆ ನೀಡಲು ಬಳಸಲಾಗುತ್ತಿದ್ದ ಗಣಕದ ತಂತ್ರಾಂಶ ತಪ್ಪಾಗಿ ಕೆಲಸಮಾಡಿದ್ದರಿಂದ ರೋಗಿಗಳ ಮೇಲೆ ಅಗತ್ಯಕ್ಕಿಂತ ಹೆಚ್ಚು ವಿಕಿರಣ ಪ್ರಯೋಗವಾಗಿ ನಾಲ್ಕಾರು ಜನ ಸಾವನ್ನಪ್ಪಿದ ಘಟನೆ ಎಂಬತ್ತರ ದಶಕದಲ್ಲಿ ನಡೆದಿತ್ತು. ಇನ್ನೊಂದು ಸಂದರ್ಭದಲ್ಲಿ ತಂತ್ರಾಂಶದಲ್ಲಿಂದ ಬಗ್‌ನಿಂದಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೊಂದರ ನಿಯಂತ್ರಣ ವ್ಯವಸ್ಥೆಯೇ ನಿಷ್ಕ್ರಿಯವಾಗಿಬಿಟ್ಟಿತ್ತು. ಬಗ್‌ಗಳು ರಾಕೆಟ್ ಉಡಾವಣೆಯ ವೈಫಲ್ಯಕ್ಕೆ, ವಿಮಾನ ಅಪಘಾತಗಳಿಗೆ, ಸಂಪರ್ಕ ಜಾಲಗಳಲ್ಲಿ ಅಡಚಣೆಗೆ ಕಾರಣವಾದ ಇನ್ನೂ ಅನೇಕ ಉದಾಹರಣೆಗಳಿವೆ.
ಬಗೆ ಬಗೆ ತೊಂದರೆ
ಮಾಹಿತಿ ತಂತ್ರಜ್ಞಾನದ ಮೇಲೆ ನಮ್ಮ ಅವಲಂಬನೆ ಹೆಚ್ಚುತ್ತಿದ್ದಂತೆ ಬಗ್‌ಗಳಿಂದಾಗುವ ತೊಂದರೆಯೂ ಹೆಚ್ಚುತ್ತಿದೆ. ಬಗ್ ದೆಸೆಯಿಂದ ಗಣಕಗಳ ಕಾರ್ಯನಿರ್ವಹಣೆಯಲ್ಲಾಗುವ ವ್ಯತ್ಯಯ ಭಾರೀ ಪ್ರಮಾಣದ ಆರ್ಥಿಕ ನಷ್ಟವನ್ನೂ ಉಂಟುಮಾಡುತ್ತಿದೆ ಎಂದು ವರದಿಗಳು ಹೇಳುತ್ತವೆ.
ಇದರಿಂದಾಗಿಯೇ ತಾವು ಒದಗಿಸುವ ಕ್ರಮವಿಧಿಗಳಲ್ಲಿ ತಪ್ಪುಗಳಿಲ್ಲದಂತೆ ನೋಡಿಕೊಳ್ಳಲು ತಂತ್ರಾಂಶ ನಿರ್ಮಾತೃಗಳು ತಮ್ಮ ಕೈಲಾದ ಪ್ರಯತ್ನಗಳನ್ನೆಲ್ಲ ಮಾಡುತ್ತಿರುತ್ತಾರೆ, ಆದರೆ ಅವರ ಕಣ್ತಪ್ಪಿಸಿ ಅದುಹೇಗೋ ಉಳಿದುಕೊಳ್ಳುವ ತಪ್ಪುಗಳು ತಿಗಣೆಗಳಾಗಿ ಬಂದು ಗಣಕ ಬಳಕೆದಾರರನ್ನು ಕಾಡುತ್ತಲೇ ಇರುತ್ತವೆ!
ಆಗಸ್ಟ್ ೨೩, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಗಣಕ ಮಾಡುವ ಲೆಕ್ಕಾಚಾರದಲ್ಲಿ ಆಗುವ ಎಡವಟ್ಟುಗಳಿಗೆ ಇಂತಹ ತಪ್ಪುಗಳೇ ಕಾರಣ. ಕ್ರಮವಿಧಿಗಳನ್ನು ಸರಿಯಾಗಿ ಪರೀಕ್ಷಿಸದೆ ಬಳಕೆದಾರರಿಗೆ ಕೊಟ್ಟಾಗ ಇಂತಹ ತಪ್ಪುಗಳು ಅವರಿಗೆ ಸಾಕಷ್ಟು ತೊಂದರೆಕೊಡುತ್ತವೆ, ಹೆಚ್ಚೂಕಡಿಮೆ ತಿಗಣೆಕಾಟದ ಹಾಗೆ. ಇದರಿಂದಲೇ ಈ ತಪ್ಪುಗಳನ್ನು 'ಬಗ್' ಎಂದು ಕರೆಯುತ್ತಾರೆ.
ತಿಗಣೆಕಾಟದ ಇತಿಹಾಸ
ಯಂತ್ರಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳನ್ನು 'ಬಗ್'ಗಳೆಂದು ಕರೆಯುವ ಅಭ್ಯಾಸ ಬಹಳ ಹಿಂದಿನಿಂದಲೇ ಇತ್ತಂತೆ. ಗಣಕಲೋಕಕ್ಕೆ ಈ ಅಭ್ಯಾಸ ಪ್ರವೇಶಿಸಿದ್ದು ೧೯೪೦ರ ದಶಕದಲ್ಲಿ ಎಂದು ಇತಿಹಾಸ ಹೇಳುತ್ತದೆ.
ಗಣಕವಿಜ್ಞಾನದ ಆದ್ಯಪ್ರವರ್ತಕರಲ್ಲೊಬ್ಬರಾದ ಹೊವಾರ್ಡ್ ಐಕೆನ್ ನೇತೃತ್ವದಲ್ಲಿ 'ಮಾರ್ಕ್ - ೨' ಗಣಕ ಆಗಷ್ಟೆ ಸಿದ್ಧವಾಗಿತ್ತು. ಅದರ ಪರೀಕ್ಷೆ ನಡೆಯುತ್ತಿದ್ದಾಗ ಲೆಕ್ಕಾಚಾರದಲ್ಲಿ ಏನೋ ತಪ್ಪಾಗುತ್ತಿರುವುದು ತಂತ್ರಜ್ಞರ ಗಮನಕ್ಕೆ ಬಂತು. ತಪ್ಪಿನ ಕಾರಣ ಹುಡುಕುತ್ತ ಹೊರಟ ಅವರಿಗೆ ಸಿಕ್ಕಿದ್ದು ಒಂದು ಹುಳು. ಆ ಹುಳು ವಿದ್ಯುಂತ್ಕಾಂತೀಯ ಟಪ್ಪೆ(ರಿಲೇ)ಯೊಂದರೊಳಗೆ ಸಿಕ್ಕಿಕೊಂಡು ಅದರ ಕೆಲಸಕ್ಕೆ ಅಡ್ಡಿಮಾಡುತ್ತಿತ್ತು; ಪರಿಣಾಮವಾಗಿ ಗಣಕದ ಲೆಕ್ಕಾಚಾರದಲ್ಲಿ ಏರುಪೇರಾಗುತ್ತಿತ್ತು.
ಅದೇ ಹುಳು ಗಣಕವಿಜ್ಞಾನ ಕ್ಷೇತ್ರದಲ್ಲಿ ಪತ್ತೆಯಾದ ಮೊದಲ ಬಗ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮಾರ್ಕ್-೨ ಗಣಕದ ತಂತ್ರಜ್ಞರು ಅಂದು ಆ ಹುಳುವನ್ನು ಅಂಟಿಸಿಟ್ಟಿದ್ದ ದಿನಚರಿ ಪುಸ್ತಕದ ಹಾಳೆ ಇವತ್ತಿಗೂ ಅಮೆರಿಕಾದ ಸ್ಮಿತ್‌ಸೋನಿಯನ್ ರಾಷ್ಟ್ರೀಯ ಇತಿಹಾಸ ವಸ್ತುಸಂಗ್ರಹಾಲಯದಲ್ಲಿ ಭದ್ರವಾಗಿದೆ.
ಬಗೆ ಬಗೆ ಬಗ್
ಬಗ್‌ಗಳಲ್ಲಿ ಅನೇಕ ವಿಧ - ಕ್ಯಾಲ್ಕ್ಯುಲೇಟರ್‌ನಂತೆ ಕೆಲಸಮಾಡಲು ಬರೆಯಲಾದ ತಂತ್ರಾಂಶದ ಕ್ರಮವಿಧಿ ಒಂದು+ಒಂದು ಎಷ್ಟು ಎಂದಾಗ ಹನ್ನೊಂದು ಎಂದರೆ ಅದರಿಂದ ಬಹಳ ದೊಡ್ಡ ಅನಾಹುತವೇನೂ ಆಗಲಾರದು. ಆದರೆ ಸಂಸ್ಥೆಯೊಂದರ ಪಾವತಿಗಳನ್ನೆಲ್ಲ ನೋಡಿಕೊಳ್ಳುವ ತಂತ್ರಾಂಶದಲ್ಲಿರುವ ತಪ್ಪಿನಿಂದಾಗಿ ಎಲ್ಲರಿಗೂ ಎರಡೆರಡು ಸಲ ಹಣ ಪಾವತಿಯಾದರೆ ಆ ಸಂಸ್ಥೆಗೆ ಸಾಕಷ್ಟು ದೊಡ್ಡ ನಷ್ಟವಾಗುತ್ತದೆ. ಇನ್ನು ಆಸ್ಪತ್ರೆಯಲ್ಲಿ ರೋಗಿಗಳ ಜೀವಬೆಂಬಲ ವ್ಯವಸ್ಥೆಯನ್ನು ನೋಡಿಕೊಳ್ಳುವ ತಂತ್ರಾಂಶದಲ್ಲಿ ತಪ್ಪಿದ್ದರೆ?
ಅಂತಹ ಮಹತ್ವದ ಕೆಲಸಗಳನ್ನು ನೋಡಿಕೊಳ್ಳುವ ಗಣಕ ವ್ಯವಸ್ಥೆಗಳಲ್ಲಿರುವ ಬಗ್‌ಗಳು ಭಾರೀ ನಷ್ಟ ಉಂಟುಮಾಡಬಲ್ಲವು, ರೋಗಿಗಳಿಗೆ ವಿಕಿರಣ ಚಿಕಿತ್ಸೆ ನೀಡಲು ಬಳಸಲಾಗುತ್ತಿದ್ದ ಗಣಕದ ತಂತ್ರಾಂಶ ತಪ್ಪಾಗಿ ಕೆಲಸಮಾಡಿದ್ದರಿಂದ ರೋಗಿಗಳ ಮೇಲೆ ಅಗತ್ಯಕ್ಕಿಂತ ಹೆಚ್ಚು ವಿಕಿರಣ ಪ್ರಯೋಗವಾಗಿ ನಾಲ್ಕಾರು ಜನ ಸಾವನ್ನಪ್ಪಿದ ಘಟನೆ ಎಂಬತ್ತರ ದಶಕದಲ್ಲಿ ನಡೆದಿತ್ತು. ಇನ್ನೊಂದು ಸಂದರ್ಭದಲ್ಲಿ ತಂತ್ರಾಂಶದಲ್ಲಿಂದ ಬಗ್‌ನಿಂದಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೊಂದರ ನಿಯಂತ್ರಣ ವ್ಯವಸ್ಥೆಯೇ ನಿಷ್ಕ್ರಿಯವಾಗಿಬಿಟ್ಟಿತ್ತು. ಬಗ್‌ಗಳು ರಾಕೆಟ್ ಉಡಾವಣೆಯ ವೈಫಲ್ಯಕ್ಕೆ, ವಿಮಾನ ಅಪಘಾತಗಳಿಗೆ, ಸಂಪರ್ಕ ಜಾಲಗಳಲ್ಲಿ ಅಡಚಣೆಗೆ ಕಾರಣವಾದ ಇನ್ನೂ ಅನೇಕ ಉದಾಹರಣೆಗಳಿವೆ.
ಬಗೆ ಬಗೆ ತೊಂದರೆ
ಮಾಹಿತಿ ತಂತ್ರಜ್ಞಾನದ ಮೇಲೆ ನಮ್ಮ ಅವಲಂಬನೆ ಹೆಚ್ಚುತ್ತಿದ್ದಂತೆ ಬಗ್‌ಗಳಿಂದಾಗುವ ತೊಂದರೆಯೂ ಹೆಚ್ಚುತ್ತಿದೆ. ಬಗ್ ದೆಸೆಯಿಂದ ಗಣಕಗಳ ಕಾರ್ಯನಿರ್ವಹಣೆಯಲ್ಲಾಗುವ ವ್ಯತ್ಯಯ ಭಾರೀ ಪ್ರಮಾಣದ ಆರ್ಥಿಕ ನಷ್ಟವನ್ನೂ ಉಂಟುಮಾಡುತ್ತಿದೆ ಎಂದು ವರದಿಗಳು ಹೇಳುತ್ತವೆ.
ಇದರಿಂದಾಗಿಯೇ ತಾವು ಒದಗಿಸುವ ಕ್ರಮವಿಧಿಗಳಲ್ಲಿ ತಪ್ಪುಗಳಿಲ್ಲದಂತೆ ನೋಡಿಕೊಳ್ಳಲು ತಂತ್ರಾಂಶ ನಿರ್ಮಾತೃಗಳು ತಮ್ಮ ಕೈಲಾದ ಪ್ರಯತ್ನಗಳನ್ನೆಲ್ಲ ಮಾಡುತ್ತಿರುತ್ತಾರೆ, ಆದರೆ ಅವರ ಕಣ್ತಪ್ಪಿಸಿ ಅದುಹೇಗೋ ಉಳಿದುಕೊಳ್ಳುವ ತಪ್ಪುಗಳು ತಿಗಣೆಗಳಾಗಿ ಬಂದು ಗಣಕ ಬಳಕೆದಾರರನ್ನು ಕಾಡುತ್ತಲೇ ಇರುತ್ತವೆ!
ಆಗಸ್ಟ್ ೨೩, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ