ಮಂಗಳವಾರ, ಆಗಸ್ಟ್ 9, 2011

ವೆಬ್ ವಿಹಾರದ ಎರಡು ದಶಕ

ವಿಶ್ವವ್ಯಾಪಿ ಜಾಲ ಸಾರ್ವಜನಿಕ ಬಳಕೆಗಾಗಿ ಲಭ್ಯವಾಗಿ ಇದೀಗ ಇಪ್ಪತ್ತು ವರ್ಷ ಕಳೆದಿದೆ. ಈ ಸಂದರ್ಭದಲ್ಲಿ ವೆಬ್ ಬಗೆಗೆ ಹೀಗೊಂದು ಯೋಚನಾಲಹರಿ...

ಟಿ. ಜಿ. ಶ್ರೀನಿಧಿ

ಆಗಸ್ಟ್ ೬, ೧೯೯೧ - ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಸೃಷ್ಟಿಕರ್ತ ಟಿಮ್ ಬರ್ನರ್ಸ್-ಲೀ ವಿಚಾರಜಾಲವೊಂದರಲ್ಲಿ (ನ್ಯೂಸ್‌ಗ್ರೂಪ್) ತಮ್ಮ ಸೃಷ್ಟಿಯನ್ನು ಹೊರಜಗತ್ತಿಗೆ ಪರಿಚಯಿಸಿದ ದಿನ. ವಿಶ್ವವ್ಯಾಪಿ ಜಾಲ ಸಾರ್ವಜನಿಕ ಬಳಕೆಗೆ ಸಿಗುವಂತಾಗಿ ನಿಜ ಅರ್ಥದಲ್ಲಿ ವಿಶ್ವವ್ಯಾಪಿಯಾದದ್ದೂ ಅದೇ ದಿನದಿಂದ. ಈ ಮಹತ್ವದ ಘಟನೆ ಸಂಭವಿಸಿ ಕಳೆದ ಶನಿವಾರಕ್ಕೆ ಇಪ್ಪತ್ತು ವರ್ಷ.

ಈ ಎರಡು ದಶಕಗಳಲ್ಲಿ ವಿಶ್ವವ್ಯಾಪಿ ಜಾಲ ನಮ್ಮ ಬದುಕನ್ನು ಅಪಾರವಾಗಿ ಬದಲಿಸಿಬಿಟ್ಟಿದೆ; ನಮ್ಮಲ್ಲಿ ಅನೇಕರ ಅದೆಷ್ಟೋ ಕೆಲಸಗಳು ಸಂಪೂರ್ಣವಾಗಿ ವಿಶ್ವವ್ಯಾಪಿ ಜಾಲದ ಮೇಲೆಯೇ ಅವಲಂಬಿತವಾಗಿ ಈಗಾಗಲೇ ಬಹಳ ಸಮಯ ಕಳೆದಿದೆ. ಬೆಡ್‌ರೂಮಲ್ಲಿ ಹೆಗ್ಗಣ ಬಂದರೆ ನಾವು ವಿಶ್ವವ್ಯಾಪಿ ಜಾಲದಲ್ಲಿ ದೊಣ್ಣೆ ಹುಡುಕುವುದಿಲ್ಲ, ನಿಜ. ಆದರೆ ಮಕ್ಕಳ ಹೋಮ್‌ವರ್ಕ್‌ನಿಂದ ದೊಡ್ಡವರ ಆಫೀಸ್‌ವರ್ಕ್‌ವರೆಗೆ ಅದೆಷ್ಟೋ ಸಂದರ್ಭಗಳಲ್ಲಿ ವಿಶ್ವವ್ಯಾಪಿ ಜಾಲದ ಮೊರೆಹೋಗುವುದು ಸಾಮಾನ್ಯ ಅಭ್ಯಾಸ. ಹಲವು ಸಂದರ್ಭಗಳಲ್ಲಿ ನಮ್ಮ ಜ್ಞಾಪಕಶಕ್ತಿಗಿಂತ ಹೆಚ್ಚಾಗಿ ಜಾಲತಾಣಗಳನ್ನು (ವಿಶೇಷವಾಗಿ ಗೂಗಲ್) ಅವಲಂಬಿಸುವುದೂ ಇದೆ.

ಈ ಅಭ್ಯಾಸ ನಮ್ಮ ನೆನಪಿನ ಶಕ್ತಿಯ ಸ್ವರೂಪವನ್ನೇ ಬದಲಿಸುತ್ತಿದೆಯಂತೆ. ಯಾವುದೇ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಗಣಕಗಳಲ್ಲಿ ಉಳಿಸಿಡುವ ಅಭ್ಯಾಸ ವ್ಯಾಪಕವಾಗಿರುವುದರಿಂದ ಮಾಹಿತಿಯನ್ನು ನೇರವಾಗಿ ನೆನಪಿಟ್ಟುಕೊಳ್ಳುವ ಅಭ್ಯಾಸ ಕಡಿಮೆಯಾಗುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅದರ ಬದಲು ಆ ಮಾಹಿತಿ ನಮ್ಮ ಗಣಕದಲ್ಲೋ ಇನ್ನಾವುದೋ ಜಾಲತಾಣದಲ್ಲೋ ಎಲ್ಲಿ, ಹೇಗೆ ಸಿಗುತ್ತದೆ ಎಂದು ನೆನಪಿಟ್ಟುಕೊಳ್ಳುವ ಅಭ್ಯಾಸ ಬೆಳೆಯುತ್ತಿದೆ; ಇಲ್ಲಿ ಗಣಕಗಳು ನಮ್ಮ ಜ್ಞಾಪಕಶಕ್ತಿಗೆ ಪೂರಕವಾಗಿ ಕೂಟಸ್ಮರಣೆಯ (ಟ್ರಾನ್ಸಾಕ್ಟಿವ್ ಮೆಮೊರಿ) ರೂಪದಲ್ಲಿ ಬಳಕೆಯಾಗುತ್ತವೆ ಎಂದು ಈಚೆಗೆ 'ಸೈನ್ಸ್' ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನವೊಂದು ಹೇಳಿದೆ. ಈ ಅಧ್ಯಯನ ಪ್ರಕಟವಾದ ಸಂದರ್ಭದಲ್ಲಿ ಅದಕ್ಕೆ ವಿಶ್ವವ್ಯಾಪಿ ಜಾಲದಲ್ಲೆಲ್ಲ ಸಾಕಷ್ಟು ಪ್ರಚಾರ ಸಿಕ್ಕಿತ್ತು.

ಹೌದಲ್ಲ, ಜಾಲಲೋಕದಲ್ಲಿ ಇಂತಹ ಅದೆಷ್ಟು ಸುದ್ದಿಗಳು ಕಾಣುತ್ತವೆ! ಈ ಸುದ್ದಿಯಾದರೂ ಪರವಾಗಿಲ್ಲ, ಅದರ ಬೆನ್ನಿಗೆ ವಿಶ್ವವಿಖ್ಯಾತ ವಿಜ್ಞಾನ ಪತ್ರಿಕೆಯ ಹೆಸರಿತ್ತು. ಆದರೆ ಎಲ್ಲ ಸುದ್ದಿಗಳೂ ಹೀಗಿರುವುದಿಲ್ಲವಲ್ಲ! ತಲೆಬಾಲವೊಂದೂ ಇಲ್ಲದ ಸುದ್ದಿಗಳು ಎಷ್ಟೋ ಬಾರಿ ಯಾವುದೋ ಅಧ್ಯಯನದ ಫಲಿತಾಂಶವೆಂದೋ ಪ್ರತಿಷ್ಠಿತ ಸಂಸ್ಥೆಯೊಂದರ ಹೇಳಿಕೆಯೆಂದೋ ಹಣೆಪಟ್ಟಿ ಹೊತ್ತು ವಿಶ್ವವ್ಯಾಪಿ ಜಾಲದ ತುಂಬ ಸುತ್ತುತ್ತಿರುತ್ತವೆ.

ವಿಶ್ವವ್ಯಾಪಿ ಜಾಲದಲ್ಲಿ ಯಾವ ವಿಷಯದ ಕುರಿತ ಮಾಹಿತಿ ಬೇಕಾದರೂ ಸಿಗುತ್ತದೆ ಎನ್ನುವ ಮಾತನ್ನು ಸಂಪೂರ್ಣವಾಗಿ ಒಪ್ಪಲು ಇರುವ ಮುಖ್ಯ ಅಡಚಣೆ ಇದೇ - ಇಲ್ಲಿ ಯಾವ ಮಾಹಿತಿ ಸಿಕ್ಕರೂ ಅದನ್ನು ಖಚಿತಪಡಿಸಿಕೊಳ್ಳಲು ಇನ್ನಷ್ಟು ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ಇದರಲ್ಲೇನಾದರೂ ಸೋಮಾರಿತನ ತೋರಿದರೆ ಸುಳ್ಳನ್ನೇ ಸತ್ಯವೆಂದು ನಂಬಿ ಮೋಸಹೋಗುವ ಸಾಧ್ಯತೆ ಎದುರಾಗುತ್ತದೆ.

ಈಚೆಗೆ ಇಂಥದ್ದೊಂದು ಘಟನೆ ನಡೆದಿತ್ತು. "ಕೆನಡಾದ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ೬ ಬ್ರೌಸರ್ ಬಳಸುವ ಬಳಕೆದಾರರ ಬುದ್ಧಿಮಟ್ಟ ಇತರ ಬ್ರೌಸರ್‌ಗಳನ್ನು ಬಳಸುವವರಿಗಿಂತ ಕಡಿಮೆಯಿರುತ್ತದೆ" ಎನ್ನುವುದು ಇದಕ್ಕೆ ಕಾರಣವಾದ ಸುದ್ದಿ. ಆಪ್ಟಿಕ್ವಾಂಟ್ ಎಂಬ ಸಂಸ್ಥೆಯ ಜಾಲತಾಣದಲ್ಲಿ ಈ ಅಧ್ಯಯನದ ವರದಿ ಪ್ರಕಟವಾಗುತ್ತಿದ್ದಂತೆಯೇ ಮಾಧ್ಯಮಕ್ಷೇತ್ರದ ದೊಡ್ಡದೊಡ್ಡ ಸಂಸ್ಥೆಗಳೆಲ್ಲ ಈ ಬಗ್ಗೆ ವರದಿಮಾಡಿಬಿಟ್ಟವು. ಮೇಲ್ನೋಟಕ್ಕೇ ಸಂಶಯಾಸ್ಪದವಾಗಿ ತೋರುತ್ತಿದ್ದ ಈ ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವ ವ್ಯವಧಾನ ಬ್ರೆಕಿಂಗ್ ನ್ಯೂಸ್ ಭರಾಟೆಯಲ್ಲಿದ್ದ ಯಾರಿಗೂ ಇರಲಿಲ್ಲ.

ತಮಾಷೆಯೆಂದರೆ ಆಪ್ಟಿಕ್ವಾಂಟ್ ಎಂಬ ಸಂಸ್ಥೆಯೇ ನಕಲಿ. ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್‌ನ ಹಳೆಯ ಆವೃತ್ತಿಗಳನ್ನು ಬಳಸಿದಾಗ ತನ್ನ ಕೆಲಸದಲ್ಲಿ ಎದುರಾಗುತ್ತಿದ್ದ ತೊಂದರೆಗಳಿಂದ ಬೇಸತ್ತ ವ್ಯಕ್ತಿಯೊಬ್ಬ ಕುಚೋದ್ಯಕ್ಕಾಗಿ ಈ ವರದಿಯನ್ನು ಪ್ರಕಟಿಸಿದ್ದ. ನಕಲಿ ಸಂಸ್ಥೆಯ ತಾಣದಲ್ಲಿದ್ದ ಇನ್ನಿತರ ಮಾಹಿತಿಯನ್ನೆಲ್ಲ ಆತ ಫ್ರಾನ್ಸಿನ ಯಾವುದೋ ಸಂಸ್ಥೆಯ ಜಾಲತಾಣದಿಂದ ಕಾಪಿ-ಪೇಸ್ಟ್ ಮಾಡಿದ್ದ!

ವಿಶ್ವದೆಲ್ಲೆಡೆಯ ಮಾಧ್ಯಮಗಳು ಹೀಗೆ ದಿನದಿನವೂ ಟೋಪಿಹಾಕಿಸಿಕೊಳ್ಳುವುದಿಲ್ಲ ಬಿಡಿ. ಆದರೆ ನಾವು? ಅದೇನೇನೋ ಮಾಡುವ ವೈರಸ್ಸು, ಅದ್ಯಾವುದೋ ದಿನ ಕಾಣಲಿರುವ ಎರಡು ಸೂರ್ಯರು, ತಾಯಿ-ಮಗುವಿನಂತೆ ಕಾಣುವ ಬೆಟ್ಟ - ಹೀಗೆ ನಮ್ಮ ಗಮನಕ್ಕೆ ಬಂದ ಮಾಹಿತಿಯನ್ನೆಲ್ಲ ಸುಳ್ಳೋ ನಿಜವೋ ನೋಡದೆ ಎಲ್ಲರಿಗೂ ಹಂಚಿಬಿಡುತ್ತೇವಲ್ಲ!

ಈ ವಿಶ್ವವ್ಯಾಪಿ ಜಾಲವೇ ಹಾಗೆ ಎನ್ನುತ್ತೀರಾ? ಅದೂ ಸರಿಯೇ ಅನ್ನಿ. ಆದರೆ ಇಲ್ಲಿರುವ ಅಪಾರ ಫಸಲಿನಲ್ಲಿ ಕಾಳನ್ನಷ್ಟೆ ತೆಗೆದುಕೊಂಡು ಜೊಳ್ಳು ಸಿಕ್ಕಸಿಕ್ಕಲ್ಲೆಲ್ಲ ಹಾರಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎನ್ನುವುದನ್ನು ಮರೆಯುವಂತಿಲ್ಲ ಅಷ್ಟೆ. ಕಳೆದೆರಡು ದಶಕಗಳಲ್ಲಿ ನಮ್ಮ ವ್ಯಾಪ್ತಿಯನ್ನು ಪ್ರಪಂಚದಗಲ ವಿಸ್ತರಿಸಿರುವ ವಿಶ್ವವ್ಯಾಪಿ ಜಾಲ ಮುಂಬರುವ ವರ್ಷಗಳಲ್ಲೂ ನಮ್ಮ ಆಪ್ತಮಿತ್ರನಾಗಿ ಉಳಿಯುವಂತೆ ಮಾಡಲು ಇದೇನೂ ತೀರಾ ಕಷ್ಟದ ಕೆಲಸವಲ್ಲ ಬಿಡಿ!

ಆಗಸ್ಟ್ ೯, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge