ಮಂಗಳವಾರ, ಆಗಸ್ಟ್ 16, 2011

ಲಂಡನ್ ರಂಪದ ಹೈಟೆಕ್ ರೂಪ

ಟಿ ಜಿ ಶ್ರೀನಿಧಿ

ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ ಮಾಹಿತಿ ತಂತ್ರಜ್ಞಾನ ಸಂಚಿಕೆ ಇದೀಗ ಲಭ್ಯವಿದೆ. ಓದಲು ಇಲ್ಲಿ ಕ್ಲಿಕ್ ಮಾಡಿ!
ಕಳೆದ ವಾರದ ಮಾಧ್ಯಮಗಳಲ್ಲೆಲ್ಲ ಲಂಡನ್ ಗಲಭೆಗಳದೇ ಸುದ್ದಿ. ಊರತುಂಬ ಸುತ್ತುತ್ತಿದ್ದ ಗಲಭೆಕೋರ ಗುಂಪುಗಳ ಕಣ್ಣಿಗೆ ಬಿದ್ದ ಅಂಗಡಿಗಳೆಲ್ಲ ಧ್ವಂಸವಾದವು, ಪೋಲೀಸರಿಗೇ ಪೆಟ್ಟುಬಿದ್ದವು, ಕಟ್ಟಡಗಳು ಬೆಂಕಿಗೆ ಆಹುತಿಯಾದವು. ದುಬಾರಿ ವಸ್ತುಗಳನ್ನು ಮಾರುತ್ತಿದ್ದ ಅಂಗಡಿಗಳಿಗೆ ನುಗ್ಗಿದವರು ಕೈಗೆ ಸಿಕ್ಕಿದ್ದನ್ನೆಲ್ಲ ಹೊತ್ತೊಯ್ದರು; ವಿಶ್ವಸಮರಗಳಿಗೂ ಬಗ್ಗದೆ ನಿಂತಿದ್ದ ಶತಮಾನದಷ್ಟು ಹಳೆಯ ಅಂಗಡಿಯನ್ನೂ ಬಿಡದೆ ಸುಟ್ಟುಹಾಕಿದರು.

ಅಪರಾಧಿಯೆಂದು ಶಂಕಿಸಲಾದ ವ್ಯಕ್ತಿಯೊಬ್ಬ ಪೋಲೀಸರ ಗುಂಡಿಗೆ ಬಲಿಯಾದಾಗ ಶುರುವಾದದ್ದು ಈ ಗಲಭೆ. ಆದರೆ ಗಲಭೆಯ ಸ್ವರೂಪ ಅದೆಷ್ಟು ಬೇಗ ಬದಲಾಯಿತೆಂದರೆ ಕಂಡ ಅಂಗಡಿಗಳಿಗೆಲ್ಲ ನುಗ್ಗಿ ಕೈಗೆ ಸಿಕ್ಕಿದ್ದನ್ನೆಲ್ಲ ಲೂಟಿಮಾಡುವುದಷ್ಟೆ ಗಲಭೆಕೋರರ ಏಕಮಾತ್ರ ಉದ್ದೇಶವಾಗಿಹೋಯಿತು. ಅವರ್‍ಯಾರೋ ಲೂಟಿಮಾಡುತ್ತಿದ್ದಾರೆ, ನಾವೇನು ಕಮ್ಮಿ ಎಂದು ಇನ್ನಷ್ಟು ಗುಂಪುಗಳು ಲೂಟಿಗಿಳಿದವು, ಪ್ರತಿಭಟನೆಯ ರೂಪದಲ್ಲಿ ಶುರುವಾದ ಗಲಾಟೆಯ ಸುದ್ದಿ ಕೇಳಿದವರು ಊರಿನ ತುಂಬ ದರೋಡೆ ಶುರುಮಾಡಿಬಿಟ್ಟರು.

ಈ ಗಲಭೆಯ ಸ್ವರೂಪ, ಹಾಗೂ ಅದು ಊರತುಂಬ ಹರಡಿದ ವೇಗ ಅಚ್ಚರಿಮೂಡಿಸುವಂತಿತ್ತು. ಇತರ ಸಂದರ್ಭಗಳಲ್ಲಿ ಕಂಡುಬಂದಿದ್ದ ಹಾಗೆ ಯಾವುದೋ ಒಂದು ಗುಂಪು ಮಾತ್ರ ಗಲಭೆಯಲ್ಲಿ ತೊಡಗಿರಲಿಲ್ಲ; ಅಥವಾ ಒಂದೇ ಗುಂಪು ಪ್ರದೇಶದಿಂದ ಪ್ರದೇಶಕ್ಕೆ ಓಡಾಡುತ್ತಲೂ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ಎಲ್ಲೆಂದರಲ್ಲಿ ಗುಂಪುಗಳು ಸೇರುತ್ತಿದ್ದವು, ಅಂಗಡಿಮುಂಗಟ್ಟುಗಳನ್ನು ಲೂಟಿಮಾಡಿ ಕೈಗೆ ಸಿಕ್ಕಷ್ಟನ್ನು ದೋಚಿಕೊಂಡು ನಾಪತ್ತೆಯಾಗಿಬಿಡುತ್ತಿದ್ದವು, ಒಂದು ಕಡೆ ಗಲಾಟೆಯಾದ ಸುದ್ದಿ ಕೇಳಿ ಪೋಲೀಸರು ಅಲ್ಲಿಗೆ ಧಾವಿಸುವಷ್ಟರಲ್ಲಿ ಅಲ್ಲಿಂದ ಎಷ್ಟೋ ದೂರದ ಇನ್ನೊಂದು ಪ್ರದೇಶದಲ್ಲಿ ಬೇರೆಯದೇ ಗುಂಪು ಗಲಭೆ ಪ್ರಾರಂಭಿಸುತ್ತಿತ್ತು.

ಪೋಲೀಸರ ಚಲನವಲನ ಗಮನಿಸಿ ಬಹಳ ಕಡಿಮೆ ಅವಧಿಯಲ್ಲಿ ಯೋಜನೆ ರೂಪಿಸುತ್ತಿದ್ದ ಈ ಗುಂಪುಗಳು ಅತ್ಯಂತ ವ್ಯವಸ್ಥಿತವಾಗಿ ಸೇರುತ್ತಿದ್ದ ಬಗೆ ಬಹಳ ಕುತೂಹಲಕರವಾಗಿತ್ತು, ಪೋಲೀಸರು ಎಷ್ಟೇ ಪರದಾಡಿದರೂ ಅವರಿಗೆ ಗಲಭೆಕೋರರ ಪ್ಲಾನು ಗೊತ್ತಾಗುತ್ತಲೇ ಇರಲಿಲ್ಲ.

ಏಕೆಂದರೆ, ಅನೇಕ ತಜ್ಞರು ಹೇಳುವಂತೆ, ಗಲಭೆಕೋರರು ತಮ್ಮ ನಡುವೆ ಸಂವಹನಕ್ಕಾಗಿ ಬ್ಲ್ಯಾಕ್‌ಬೆರಿ ಮೆಸೆಂಜರ್ ಸೇವೆಯನ್ನು ಬಳಸುತ್ತಿದ್ದರು!


ಹಣ್ಣಿನ ಹೆಸರಿನ ಹೈಟೆಕ್ ಫೋನು
ಬ್ಲ್ಯಾಕ್‌ಬೆರಿ ಎನ್ನುವುದು ಉತ್ತರಾರ್ಧಗೋಲದ ದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಹಣ್ಣು. ನೋಡಲು ನಮ್ಮ ನೇರಳೆಹಣ್ಣಿನಂತೆ ಕಾಣುವ ಇದು ಜಾಮು ಜೆಲ್ಲಿ ಇತ್ಯಾದಿಗಳಲ್ಲೆಲ್ಲ ಬಳಕೆಯಾಗುತ್ತದೆ.

ಈ ಹಣ್ಣಿಗೆ ಏನೇನೂ ಸಂಬಂಧವಿಲ್ಲದಿದ್ದರೂ ಇದೇ ಹೆಸರನ್ನು ಇಟ್ಟುಕೊಂಡಿರುವುದು ಒಂದು ಅತ್ಯಾಧುನಿಕ ಮೊಬೈಲ್ ಫೋನು. ಸಾಮಾನ್ಯ ದೂರವಾಣಿಯಂತೆ ಕೆಲಸಮಾಡುವುದರ ಜೊತೆಗೆ ಜೊತೆಗೆ ಇಮೇಲು, ಮೆಸೇಜು, ಇಂಟರ್ನೆಟ್ಟು ಇತ್ಯಾದಿ ಸೌಲಭ್ಯಗಳನ್ನೆಲ್ಲ ಹೊಂದಿರುವ ಈ ಸಾಧನ ಈಚಿನ ವರ್ಷಗಳಲ್ಲಿ ವೃತ್ತಿನಿರತರ ಬಿಡುವಿಲ್ಲದ ಬದುಕಿನ ಪ್ರಮುಖ ಭಾಗವಾಗಿಹೋಗಿದೆ.

ಮೊಬೈಲ್ ಜಾಲಗಳನ್ನು ಬಳಸಿ ಮಾಹಿತಿ ಸಂವಹನ ನಡೆಸುವ ಈ ಉಪಕರಣ ಮಾರುಕಟ್ಟೆಗೆ ಬಂದದ್ದು ೧೯೯೭ರಲ್ಲಿ, ಇದನ್ನು ಪರಿಚಯಿಸಿದ್ದು ಕೆನಡಾ ದೇಶದ ರೀಸರ್ಚ್ ಇನ್ ಮೋಷನ್ (ಆರ್‌ಐಎಂ) ಎಂಬ ಸಂಸ್ಥೆ. ಎಲ್ಲೇ ಇದ್ದರೂ ಸದಾ ಇಮೇಲ್ ಸೌಲಭ್ಯ ಹೊಂದಲು ಅನುವುಮಾಡಿಕೊಟ್ಟ ಈ ಉಪಕರಣ ಬಹಳ ಬೇಗ ಜನಪ್ರಿಯವಾಯಿತು. ಭಾರತವೂ ಸೇರಿದಂತೆ ವಿಶ್ವದ ನೂರಾರು ರಾಷ್ಟ್ರಗಳಲ್ಲಿ ಸ್ಥಳೀಯ ಮೊಬೈಲ್ ಸಂಸ್ಥೆಗಳ ಮೂಲಕ ಬ್ಲ್ಯಾಕ್‌ಬೆರಿ ಸೇವೆ ಲಭ್ಯವಿದೆ.

ಬ್ಲ್ಯಾಕ್‌ಬೆರಿ ಮೆಸೆಂಜರ್ ಎನ್ನುವುದು ಈ ದೂರವಾಣಿಗಳಲ್ಲಿ ಲಭ್ಯವಿರುವ ಜನಪ್ರಿಯ ಸೇವೆಗಳಲ್ಲೊಂದು. ಈ ಅಂತರಜಾಲ ಆಧರಿತ ಮೆಸೇಜಿಂಗ್ ಸೇವೆಯನ್ನು ಬಳಸಿ ಬ್ಲ್ಯಾಕ್‌ಬೆರಿ ಬಳಕೆದಾರರು ತಮ್ಮ ಗೆಳೆಯರ ಬಳಗದೊಡನೆ ಸಂಪರ್ಕದಲ್ಲಿರುವುದು ಸಾಧ್ಯ. ಲಂಡನ್ನಿನ ದೊಂಬಿಕೋರರು ವ್ಯಾಪಕವಾಗಿ ಬಳಸಿದ್ದಾರೆ ಎನ್ನಲಾಗಿರುವುದು ಇದೇ ಸೇವೆಯನ್ನು.

ಪ್ರತಿಭಟನೆಯೂ ಹೈಟೆಕ್
ಪ್ರತಿಭಟನೆಗಳಲ್ಲಿ ಮೊಬೈಲ್ ದೂರವಾಣಿ ಹಾಗೂ ಅಂತರಜಾಲದ ಬಳಕೆಯಾಗುತ್ತಿರುವುದು ಇದೇ ಮೊದಲೇನಲ್ಲ. ಈಜಿಪ್ಟ್, ಯೆಮೆನ್, ಟುನೀಷಿಯಾ, ಬಹರೇನ್ ಮುಂತಾದ ಹಲವೆಡೆಗಳಲ್ಲಿ ಈಚೆಗೆ ಚಳವಳಿಗಳು ನಡೆದಾಗ ಅವುಗಳಲ್ಲಿ ಫೇಸ್‌ಬುಕ್, ಟ್ವೀಟರ್ ಮುಂತಾದ ಸಮಾಜಜಾಲಗಳು ಬಹಳ ಪ್ರಮುಖ ಪಾತ್ರ ವಹಿಸಿದ್ದವು. ಈ ಜಾಲಗಳ ಮೂಲಕ ಪ್ರತಿಭಟನಾಕಾರರ ನಡುವೆ ಅತ್ಯಂತ ಕ್ಷಿಪ್ರಗತಿಯ ಮಾಹಿತಿ ಸಂವಹನ ಸಾಧ್ಯವಾಗಿತ್ತು. ಹಾಗೆ ವಿನಿಮಯವಾಗುತ್ತಿದ್ದ ಮಾಹಿತಿಯೆಲ್ಲ ಅಂತರಜಾಲದ ಮೂಲಕ ಎಲ್ಲರಿಗೂ ಮುಕ್ತವಾಗಿ ಲಭಿಸುತ್ತಿತ್ತು. ಆ ಎಲ್ಲ ಸಂದರ್ಭಗಳಲ್ಲೂ ನಡೆಯುತ್ತಿದ್ದದ್ದು ಸಾರ್ವಜನಿಕ ಚಳವಳಿಗಳೇ ಆಗಿದ್ದರಿಂದ ಅದು ಅನುಕೂಲಕರವೂ ಆಗಿತ್ತು,

ಆದರೆ ಲಂಡನ್ನಿನಲ್ಲಿ ನಡೆದದ್ದು ಸಾರ್ವಜನಿಕ ಚಳವಳಿಯಲ್ಲವಲ್ಲ! ಎಷ್ಟೇ ಆದರೂ ಅದು ದುಷ್ಕರ್ಮಿಗಳು ತಮ್ಮ ಸ್ವಂತ ಲಾಭಕ್ಕಾಗಿ ನಡೆಸಿದ ಲೂಟಿ. ಈ ಸಂದರ್ಭಕ್ಕೆ ಸಮಾಜ ಜಾಲಗಳು ಸೂಕ್ತವಾಗಲಾರವು ಎನಿಸಿದ್ದರಿಂದಲೇ ಅವರು ಬ್ಲ್ಯಾಕ್‌ಬೆರಿ ಮೆಸೆಂಜರ್ (ಬಿಬಿಎಂ) ಸೇವೆಯತ್ತ ಮುಖಮಾಡಿದ್ದು.

ಇದು ಬಿಬಿಎಂ
ಗೆಳೆಯರ ಗುಂಪುಗಳಿಗೆ ಉಚಿತ ಸಂದೇಶಗಳನ್ನು ಕಳುಹಿಸಲು ಬ್ಲ್ಯಾಕ್‌ಬೆರಿ ಮೆಸೆಂಜರ್ ಸೇವೆ ಅನುವುಮಾಡಿಕೊಡುತ್ತದೆ. ಗುಂಪಿನ ಸದಸ್ಯರಲ್ಲಿ ಯಾರಾದರೂ ಆಹ್ವಾನಿಸದ ಹೊರತು ಬೇರೆ ಯಾರೂ ಆ ಗುಂಪನ್ನು ಸೇರುವಂತೆಯೇ ಇಲ್ಲ. ಗುಂಪಿನ ಸದಸ್ಯರೆಲ್ಲ ಬ್ಲ್ಯಾಕ್‌ಬೆರಿ ಬಳಕೆದಾರರಾಗಿರಬೇಕಾದದ್ದೂ ಕಡ್ಡಾಯ.

ಅಷ್ಟೇ ಅಲ್ಲ, ಕಳುಹಿಸುವವರ ಬ್ಲ್ಯಾಕ್‌ಬೆರಿಯಿಂದ ಹೊರಟಾಗಲೇ ಸಂದೇಶವನ್ನು ಗೂಢಲಿಪೀಕರಣ (ಎನ್‌ಕ್ರಿಪ್ಟ್) ಮಾಡಲಾಗುತ್ತದೆ. ಹೀಗಾಗಿ ಸಂದೇಶವನ್ನು ಯಾರಿಗೆ ಕಳುಹಿಸಲಾಗಿದೆಯೋ ಅವರು ಮಾತ್ರ ಆ ಸಂದೇಶವನ್ನು ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ. ಸಂದೇಶದ ವಿನಿಮಯ ಆರ್‌ಐಎಂ ಸಂಸ್ಥೆಯ ಸ್ವಂತ ಸರ್ವರ್‌ಗಳ ಮೂಲಕವೇ ನಡೆಯುವುದರಿಂದ ಅಲ್ಲೂ ಉನ್ನತ ಮಟ್ಟದ ಗೌಪ್ಯತೆ ಕಾಪಾಡಲಾಗುತ್ತದೆ.

ಬೆಂಬಿಡದ ವಿವಾದ
ಬ್ಲ್ಯಾಕ್‌ಬೆರಿ ಬಳಸಿ ನಡೆಸಲಾಗುವ ಸಂವಹನ ವಿವಾದಕ್ಕೆಡೆಮಾಡಿಕೊಟ್ಟಿರುವುದು ಇದು ಮೊದಲ ಬಾರಿಯೇನೆಲ್ಲ. ಈ ಸಂವಹನದ ವೈಶಿಷ್ಟ್ಯವಾದ ಗೌಪ್ಯತೆಯನ್ನು ಸಮಾಜವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ತಮ್ಮ ಸುರಕ್ಷತಾ ಸಂಸ್ಥೆಗಳಿಗೆ ಬ್ಲ್ಯಾಕ್‌ಬೆರಿ ಸಂದೇಶಗಳನ್ನು ಓದಲು ಅನುವುಮಾಡಿಕೊಡುವಂತೆ ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳು ಈ ಹಿಂದೆಯೇ ಆರ್‌ಐಎಂ ಸಂಸ್ಥೆಯ ಮೇಲೆ ಒತ್ತಡ ಹೇರಿವೆ. ಅರಬ್ ರಾಷ್ಟ್ರಗಳಲ್ಲಿ ಕೆಲಕಾಲ ಬ್ಲ್ಯಾಕ್‌ಬೆರಿ ಸೇವೆಯನ್ನು ಸಂಪೂರ್ಣವಾಗಿಯೇ ತಡೆಹಿಡಿಯಲಾಗಿತ್ತು.

ಇದೀಗ ಮತ್ತೆ ಸುದ್ದಿಯಲ್ಲಿರುವ ಆರ್‌ಐಎಂ ಸಂಸ್ಥೆ ಲಂಡನ್ ಗಲಭೆಗಳ ವಿಚಾರಣೆಗೆ ಅಗತ್ಯವಾದ ಎಲ್ಲ ನೆರವನ್ನೂ ಕೊಡುವುದಾಗಿ ಪ್ರಕಟಿಸಿದೆ.

ವಿಚಾರಣೆಯಲ್ಲೂ ತಂತ್ರಜ್ಞಾನ
ಈ ಆಶ್ವಾಸನೆಯ ಜೊತೆಜೊತೆಗೇ ಲಂಡನ್ ಗಲಭೆಗೂ ತಂತ್ರಜ್ಞಾನಕ್ಕೂ ಮತ್ತೊಂದು ರೂಪದ ನಂಟು ಸೃಷ್ಟಿಯಾಗಿದೆ. ಗಲಭೆ ಪ್ರಕರಣದ ವಿಚಾರಣೆಯಲ್ಲಿ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿರುವುದು ಇದಕ್ಕೆ ಕಾರಣ.

ಗಲಭೆಗ್ರಸ್ತ ಪ್ರದೇಶಗಳ ಸಿಸಿಟಿವಿಗಳಲ್ಲಿ ದಾಖಲಾದ ಚಿತ್ರಗಳನ್ನು ಅಂತರಜಾಲದ ಮೂಲಕ ಹಂಚಿಕೊಳ್ಳುತ್ತಿರುವ ಪೋಲೀಸ್ ಇಲಾಖೆ ದುಷ್ಕರ್ಮಿಗಳನ್ನು ಗುರುತಿಸುವಲ್ಲಿ ಸಮುದಾಯದ ನೆರವು ಕೇಳುತ್ತಿದೆ. ಚಿತ್ರಗಳಲ್ಲಿರುವವರನ್ನು ಗುರುತಿಸಲು ಫೇಸ್ ರೆಕಗ್ನಿಷನ್ ತಂತ್ರಜ್ಞಾನವನ್ನು ಬಳಸುವ ಪ್ರಯತ್ನಗಳೂ ನಡೆದಿವೆ.

ತಪ್ಪೆಲ್ಲ ತಂತ್ರಜ್ಞಾನದ್ದು ಎನ್ನುವುದು ಸರಿಯೆ?
ಮುಂದಿನ ದಿನಗಳಲ್ಲಿ ಈ ರೀತಿಯ ಸನ್ನಿವೇಶಗಳು ಎದುರಾದಾಗ ಮೆಸೇಜಿಂಗ್ ಹಾಗೂ ಸಮಾಜಜಾಲ ಸೇವೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡಬೇಕು ಎನ್ನುವ ಅಭಿಪ್ರಾಯಗಳು ವ್ಯಾಪಕವಾಗಿ ಕೇಳಿಬಂದಿವೆ.

ಆದರೆ ಅದೇ ಸೇವೆಗಳು ಗಲಭೆಯ ಸಂದರ್ಭದಲ್ಲಿ ಮಾಹಿತಿ ಪ್ರಸಾರದಲ್ಲಿ ನೆರವಾಗಿವೆ; ಗಲಾಟೆಯಿದ್ದ ಪ್ರದೇಶಗಳ ಬಗೆಗೆ ಮಾಹಿತಿ ನೀಡಿ ಅಮಾಯಕರು ಅತ್ತ ಹೋಗದಂತೆ ಎಚ್ಚರಿಸಿವೆ. ಗಲಭೆಯ ನಂತರ ಅತ್ಯಗತ್ಯವಾಗಿ ಆಗಬೇಕಿದ್ದ ಸ್ವಚ್ಛತಾ ಕಾರ್ಯಕ್ಕೆ ಜನರನ್ನು ಸೇರಿಸುವಲ್ಲೂ ಟ್ವೀಟರ್‌ನಂತಹ ಸಮಾಜ ಜಾಲಗಳು ಸಹಾಯಮಾಡಿವೆ.

ಈ ಸಂದರ್ಭದಲ್ಲಿ ತಜ್ಞರೊಬ್ಬರು ಹೇಳಿದ ಮಾತುಗಳು ಉಲ್ಲೇಖಾರ್ಹ: "ತಂತ್ರಜ್ಞಾನ ಒಂದು ದೂರವಾಣಿಯಿದ್ದಂತೆ; ದೂರವಾಣಿಯನ್ನು ಒಳ್ಳೆಯ ಕೆಲಸಕ್ಕೆ ಬಳಸುತ್ತೀರೋ ಕೆಟ್ಟ ಕೆಲಸಕ್ಕೆ ಬಳಸುತ್ತೀರೋ ಅದು ನಿಮಗೆ ಬಿಟ್ಟದ್ದು. ತಂತ್ರಜ್ಞಾನವನ್ನು ಕೆಟ್ಟ ಕೆಲಸಕ್ಕೆ ಬಳಸಲಾಗಿದೆ ಎಂದಾಕ್ಷಣ ತಪ್ಪೆಲ್ಲ ತಂತ್ರಜ್ಞಾನದ್ದೇ ಎನ್ನಲಾಗದು ಅಲ್ಲವೆ?"

ಆಗಸ್ಟ್ ೧೬, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge