ಮಂಗಳವಾರ, ಜುಲೈ 26, 2011

ಗುಂಪುಗುತ್ತಿಗೆಯ ಗುಟ್ಟು ಗೊತ್ತೆ?

ಟಿ. ಜಿ. ಶ್ರೀನಿಧಿ

ಗೂಗಲ್‌ನ ಅನುವಾದ ಸೇವೆ ಇತ್ತೀಚೆಗಷ್ಟೆ ಕನ್ನಡದಲ್ಲೂ ಲಭ್ಯವಾದದ್ದು, ಹಾಗೂ ವಿಚಿತ್ರ ಅನುವಾದಗಳಿಂದಾಗಿ ಸಾಕಷ್ಟು ಟೀಕೆಗೊಳಗಾದದ್ದು ನಿಮಗೆಲ್ಲ ಗೊತ್ತೇ ಇದೆ. ಎಲ್ಲೆಡೆಯಿಂದಲೂ ಬಂದ ಟೀಕೆಗಳಿಗೆ ಕಾರಣವೂ ಇಲ್ಲದಿರಲಿಲ್ಲ; ಏಕೆಂದರೆ ಬಹಳಷ್ಟು ಸನ್ನಿವೇಶಗಳಲ್ಲಿ ತೀರಾ ಸರಳ ಪದಪುಂಜಗಳಿಗೂ ಸರಿಯಾದ ಅನುವಾದ ಸಿಗುತ್ತಿರಲಿಲ್ಲ. ಇಷ್ಟೆಲ್ಲ ಟೀಕೆಗಳನ್ನು ಮುಂಚಿತವಾಗಿಯೇ ನಿರೀಕ್ಷಿಸಿದ್ದ ಗೂಗಲ್ ಸಂಸ್ಥೆ "ಕನ್ನಡ ಅನುವಾದ ಸೇವೆ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ; ಹೀಗಾಗಿ ಯಾವುದೇ ಅನುವಾದ ಸರಿಯಾಗಿಲ್ಲ ಎನ್ನಿಸಿದರೆ ಅದನ್ನು ನೀವೇ ಉತ್ತಮಪಡಿಸುವ ಸೌಲಭ್ಯವಿದೆ" ಎಂದು ಹೇಳಿಬಿಟ್ಟಿತ್ತು.

ಉದಾಹರಣೆಗೆ 'Visit our website to read this article' ಎಂಬ ಸಾಲಿನ ಅನುವಾದ 'ಈ ಲೇಖನ ಓದಲು ನಮ್ಮ ವೆಬ್‌ಸೈಟ್ ಭೇಟಿ' ಎಂದು ಕಾಣಿಸಿಕೊಂಡರೆ ಅದನ್ನು ನಾವೇ 'ಈ ಲೇಖನ ಓದಲು ನಮ್ಮ ಜಾಲತಾಣಕ್ಕೆ ಭೇಟಿ ನೀಡಿ' ಎಂದು ತಿದ್ದಬಹುದು. ಬಳಕೆದಾರರೇ ಇಂತಹ ತಪ್ಪುಗಳನ್ನೆಲ್ಲ ಸರಿಪಡಿಸುತ್ತ ಹೋದಂತೆ ಅನುವಾದದ ಗುಣಮಟ್ಟವೂ ಉತ್ತಮಗೊಳ್ಳುತ್ತದೆ ಎನ್ನುವುದು ಈ ಸೌಲಭ್ಯ ಒದಗಿಸಿರುವುದರ ಹಿಂದಿನ ಉದ್ದೇಶ.

ಅಷ್ಟೇ ಅಲ್ಲ, ಹೀಗೆ ಬಳಕೆದಾರರೆಲ್ಲರ ನೆರವನ್ನು ಏಕಕಾಲದಲ್ಲೇ ಪಡೆದುಕೊಳ್ಳುವುದರಿಂದ ಕೆಲಸವೂ ಬೇಗ ಆಗುತ್ತದೆ. ಅವರಲ್ಲಿ ಯಾರಿಗೂ ಸಂಭಾವನೆ ಪಾವತಿಸುವ ಪ್ರಶ್ನೆಯೇ ಇಲ್ಲದ್ದರಿಂದ ಗೂಗಲ್‌ಗೆ ಇದರಿಂದ ಯಾವ ಖರ್ಚೂ ಆಗುವುದಿಲ್ಲ!

ಇದು ಕ್ರೌಡ್‌ಸೋರ್ಸಿಂಗ್
ಈ ಪರಿಕಲ್ಪನೆಯ ಹೆಸರೇ ಕ್ರೌಡ್‌ಸೋರ್ಸಿಂಗ್ ಅಥವಾ ಗುಂಪುಗುತ್ತಿಗೆ. ಕೆಲಸಗಳನ್ನು ಹೊರಗುತ್ತಿಗೆ ನೀಡುವುದನ್ನು ಸೂಚಿಸುವ ಹೆಸರಾಂತ ಪದ 'ಔಟ್‌ಸೋರ್ಸಿಂಗ್' ಇದೆಯಲ್ಲ, ಅದೇ ಪದವನ್ನು ತಿರುಚಿ ಕ್ರೌಡ್‌ಸೋರ್ಸಿಂಗ್ ಎಂಬ ಹೆಸರನ್ನು ಸೃಷ್ಟಿಸಲಾಗಿದೆ.

ಅಂತರಜಾಲದ ಮೂಲಕ ನಡೆಯುವ ಯಾವುದೇ ಕೆಲಸದಲ್ಲಿ ಜನರ ಗುಂಪಿನ ಸಹಾಯ ಪಡೆದುಕೊಳ್ಳುವುದು ಗುಂಪುಗುತ್ತಿಗೆಯ ಉದ್ದೇಶ. ಹಲವಾರು ಜನ ಈ ಕೆಲಸದಲ್ಲಿ ಭಾಗಿಯಾಗುವುದರಿಂದ ಕೆಲಸದ ಗುಣಮಟ್ಟ ಕೂಡ ಸಾಕಷ್ಟು ಚೆನ್ನಾಗಿಯೇ ಇರುತ್ತದೆ. ಅಂದಹಾಗೆ ಗುಂಪುಗುತ್ತಿಗೆ ಕೆಲಸಗಳಲ್ಲಿ ಸಹಾಯಮಾಡುವವರಿಗೆ ಸಾಮಾನ್ಯವಾಗಿ ಯಾವುದೇ ಸಂಭಾವನೆ ನೀಡಲಾಗುವುದಿಲ್ಲ. ಇಂತಹ ಕೆಲಸಗಳಿಗಾಗಿ ಸಂಭಾವನೆ ದೊರಕುವುದು ಎಲ್ಲೋ ಬೆರಳೆಣಿಕೆಯಷ್ಟು ಸನ್ನಿವೇಶಗಳಲ್ಲಿ ಮಾತ್ರ; ಅದೂ ವೃತ್ತಿಪರರಿಗೆ ನೀಡಬೇಕಾದ ಶುಲ್ಕಕ್ಕೆ ಹೋಲಿಸಿದರೆ ತೀರಾ ಸಣ್ಣ ಮೊತ್ತವಷ್ಟೆ.

ಗುಂಪುಗುತ್ತಿಗೆಯ ಇತಿಹಾಸ
ಗುಂಪುಗುತ್ತಿಗೆಯ ಪರಿಕಲ್ಪನೆ ತೀರಾ ಹೊಸದೇನೂ ಅಲ್ಲ. ನಿಘಂಟುಗಳ ತಯಾರಿ, ಮಾರುಕಟ್ಟೆ ಸಮೀಕ್ಷೆ ಇತ್ಯಾದಿಗಳಲ್ಲಿ ಇದರ ಬಳಕೆ ಬಹಳ ಹಿಂದಿನಿಂದಲೇ ಇತ್ತು. ವಿಶ್ವವ್ಯಾಪಿ ಜಾಲದ ಜನಪ್ರಿಯತೆಯೊಡನೆ ಗುಂಪುಗುತ್ತಿಗೆಯ ವ್ಯಾಪ್ತಿಯೂ ಹೆಚ್ಚಾಯಿತು, ಅಷ್ಟೆ.

ಸಮುದಾಯದ ಸಹಭಾಗಿತ್ವದಲ್ಲಿ ಸಿದ್ಧವಾಗುವ ಎಲ್ಲ ಮುಕ್ತ ತಂತ್ರಾಂಶಗಳೂ ಈ ಪರಿಕಲ್ಪನೆಯನ್ನು ಬಳಸಿಕೊಳ್ಳುತ್ತವೆ. ಇದರಿಂದಾಗಿಯೇ ಇಂದು ಅನೇಕ ಉತ್ಕೃಷ್ಟ ತಂತ್ರಾಂಶಗಳು ಉಚಿತವಾಗಿ ಲಭಿಸುವಂತಾಗಿದೆ. ಯಾರು ಬೇಕಾದರೂ ಮಾಹಿತಿ ಸೇರಿಸಲು ಅನುವುಮಾಡಿಕೊಟ್ಟಿರುವ ವಿಶ್ವವಿಖ್ಯಾತ ವಿಕಿಪೀಡಿಯಾ ವಿಶ್ವಕೋಶ ಕೆಲಸಮಾಡುವುದೂ ಗುಂಪುಗುತ್ತಿಗೆಯ ಆಧಾರದಲ್ಲೇ. ಅಷ್ಟೇ ಏಕೆ, ಆನ್‌ಲೈನ್ ಮಾರುಕಟ್ಟೆಯಾಗಿ ಹೆಸರುಮಾಡಿರುವ ಇ-ಬೇ, ಹವ್ಯಾಸಿ ಛಾಯಾಗ್ರಾಹಕರ ಚಿತ್ರಗಳಿಗೆ ಮಾರುಕಟ್ಟೆ ಒದಗಿಸುವ ಐಸ್ಟಾಕ್‌ಫೋಟೋ ಮುಂತಾದ ತಾಣಗಳೂ ಈ ಪರಿಕಲ್ಪನೆಯನ್ನು ಬಳಸಿಕೊಂಡಿವೆ. ಫೇಸ್‌ಬುಕ್ ಕನ್ನಡ ಆವೃತ್ತಿಯ ತಯಾರಿ ಕೆಲಸವನ್ನೂ ಕ್ರೌಡ್‌ಸೋರ್ಸ್ ಮಾಡಲಾಗಿತ್ತು.

ಸಂಶೋಧನೆಯಲ್ಲೂ ಬಳಕೆ
ನಮ್ಮ ಗಣಕ ಬಳಸದಿರುವ ಸಮಯದಲ್ಲಿ ಅದರ ಸಂಸ್ಕರಣಾ ಸಾಮರ್ಥ್ಯವನ್ನು ವೈಜ್ಞಾನಿಕ ಸಂಶೋಧನೆಗಳಿಗಾಗಿ ಬಳಸಿಕೊಳ್ಳಲು ಅನುವುಮಾಡಿಕೊಡುವ ಗ್ರಿಡ್ ಕಂಪ್ಯೂಟಿಂಗ್ ಕಾರ್ಯಕ್ರಮಗಳೂ ಗುಂಪುಗುತ್ತಿಗೆಯ ಇನ್ನೊಂದು ರೂಪವೇ. ರಸಾಯನಶಾಸ್ತ್ರದಲ್ಲಿ ಉನ್ನತ ಅಧ್ಯಯನಗಳನ್ನು ಕೈಗೊಂಡಿರುವ ಫೋಲ್ಡಿಂಗ್@ಹೋಮ್, ಕ್ಷೀರಪಥ ಗೆಲಾಕ್ಸಿಯ ಕುರಿತು ಕೆಲಸಮಾಡುತ್ತಿರುವ ಮಿಲ್ಕಿವೇ@ಹೋಮ್, ಭೂಮಿಯಾಚೆಗಿನ ಬದುಕಿಗಾಗಿ ಹುಡುಕಾಟ ನಡೆಸುವ ಸೆಟಿ@ಹೋಮ್, ನಕ್ಷತ್ರಗಳ ಕುರಿತು ಸಂಶೋಧನೆ ಮಾಡುತ್ತಿರುವ ಐನ್‌ಸ್ಟೈನ್@ಹೋಮ್ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಇಲ್ಲಿ ಉದಾಹರಿಸಬಹುದು.

ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಆಸಕ್ತಿ ಇರುವವರು ಅವುಗಳ ಜಾಲತಾಣದಿಂದ ಅಗತ್ಯ ತಂತ್ರಾಂಶವನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಬಳಕೆದಾರರ ಗಣಕ ತನ್ನ ಪೂರ್ಣ ಸಂಸ್ಕರಣಾ ಸಾಮರ್ಥ್ಯವನ್ನು ಬಳಸುತ್ತಿಲ್ಲದ ಸಂದರ್ಭಗಳಲ್ಲಿ ಆ ತಂತ್ರಾಂಶ ತನಗೆ ಬೇಕಾದ ಲೆಕ್ಕಾಚಾರ ಮಾಡಿಕೊಳ್ಳುತ್ತದೆ; ಸಂಸ್ಕರಿಸಬೇಕಾದ ದತ್ತಾಂಶ ಪಡೆದುಕೊಳ್ಳಲು, ಸಂಸ್ಕರಿಸಿದ ನಂತರ ದೊರೆತ ಮಾಹಿತಿಯನ್ನು ತಿರುಗಿ ಕಳುಹಿಸಲು ಮಾತ್ರ ಅಂತರಜಾಲ ಸಂಪರ್ಕ ಇರಬೇಕು ಅಷ್ಟೆ.

ಸಂಭಾವನೆಯೂ ಉಂಟು
ಗುಂಪುಗುತ್ತಿಗೆಯ ಪರಿಕಲ್ಪನೆಯನ್ನು ಕೊಂಚ ಬದಲಿಸಿ ಅಳವಡಿಸಿಕೊಂಡಿರುವ ಜಾಲತಾಣಗಳೂ ಇವೆ. ಇವುಗಳ ಮೂಲಕ ಗುಂಪುಗುತ್ತಿಗೆ ಕೆಲಸಗಳಲ್ಲಿ ಸಹಾಯಮಾಡಲು ಹೊರಟವರು ಒಂದಷ್ಟು ಸಂಭಾವನೆಯನ್ನೂ ನಿರೀಕ್ಷಿಸಬಹುದು.

ಇತ್ತೀಚೆಗಷ್ಟೆ ಪ್ರಾರಂಭವಾದ ಪ್ರೈಜಸ್ (www.prizes.org) ಇಂತಹ ತಾಣಗಳಿಗೊಂದು ಉದಾಹರಣೆ; ಇದು ಗೂಗಲ್ ಸಂಸ್ಥೆಯ ಸೃಷ್ಟಿ. ನಿಮ್ಮ ಮನೆಯ ವಿನ್ಯಾಸ ಆಗಬೇಕೆ, ನಿಮ್ಮ ಮಗುವಿಗೋ ಸಂಸ್ಥೆಗೋ ಜಾಲತಾಣಕ್ಕೋ ಒಂದು ಒಳ್ಳೆಯ ಹೆಸರು ಬೇಕೆ, ಯಾವುದೋ ಸಮಾರಂಭದಲ್ಲಿ ಭಾಷಣ ಮಾಡಬೇಕೆ, ಪ್ರವಾಸ ಹೊರಡಲು ಮಾರ್ಗದರ್ಶನ ಬೇಕೆ - ಇಂತಹ ಯಾವುದೇ ಬೇಡಿಕೆ ಹಾಗೂ ಅದಕ್ಕಾಗಿ ನೀವು ಎಷ್ಟು ಹಣ ಕೊಡಬಲ್ಲಿರಿ ಎನ್ನುವುದನ್ನು ಈ ತಾಣದಲ್ಲಿ ದಾಖಲಿಸಿದರೆ ಸಾಕು; ಇಲ್ಲಿನ ಬಳಕೆದಾರರು ನಿಮಗೆ ಪರಿಹಾರ ಒದಗಿಸುತ್ತಾರೆ. ಅದರಲ್ಲಿ ಅತ್ಯುತ್ತಮವೆಂದು ನೀವು ಆಯ್ದುಕೊಂಡದ್ದಕ್ಕೆ ಹಣ ಕೊಟ್ಟರಾಯ್ತು!

ಅಮೆಜಾನ್ ಸಂಸ್ಥೆಯ ಮೆಕ್ಯಾನಿಕಲ್ ಟರ್ಕ್ (www.mturk.com) ತಾಣ ಕೂಡ ಗುಂಪುಗುತ್ತಿಗೆಯ ಕಲ್ಪನೆಯನ್ನೇ ಆಧರಿಸಿ ಕೆಲಸಮಾಡುತ್ತದೆ. ಗಣಕಗಳ ಮೂಲಕ ಮಾಡಲು ಕಷ್ಟವಾದ, ಆದರೆ ಮನುಷ್ಯರಿಂದ ಸುಲಭವಾಗಿ ಆಗಬಲ್ಲ ಕೆಲಸಗಳನ್ನು ಇಲ್ಲಿ ಪಟ್ಟಿಮಾಡಲಾಗಿರುತ್ತದೆ (ಉದಾ: ಮಹತ್ವಕ್ಕೆ ತಕ್ಕಂತೆ ಸರ್ಚ್ ಇಂಜನ್ ಫಲಿತಾಂಶಗಳ ಜೋಡಣೆ, ಜಾಲತಾಣದಲ್ಲಿ ಮಾರಾಟಕ್ಕಿರುವ ವಸ್ತುಗಳ ಸೂಕ್ತ ವರ್ಗೀಕರಣ ಇತ್ಯಾದಿ). ಅನುವಾದಗಳಿಗೆ, ಅಭಿಪ್ರಾಯಗಳಿಗೂ ಆಗಿಂದಾಗ್ಗೆ ಬೇಡಿಕೆಯಿರುತ್ತದೆ. ಅಗತ್ಯಕ್ಕೆ ತಕ್ಕಂತೆ ಉತ್ತಮ ಗುಣಮಟ್ಟದ ಕೆಲಸ ಮಾಡಿಕೊಟ್ಟವರಿಗೆ ಪೂರ್ವನಿರ್ಧಾರಿತ ಸಂಭಾವನೆಯೂ ಸಿಗುತ್ತದೆ.

ಹೀಗೂ ಉಂಟು!
ಮೆಕ್ಯಾನಿಕಲ್ ಟರ್ಕ್ ತಾಣಕ್ಕೆ ಒಂದಷ್ಟು ಪುಕ್ಕಟೆ ಪ್ರಚಾರ ಒದಗಿಸಿಕೊಟ್ಟ ಸುದ್ದಿಯೊಂದು ಇತ್ತೀಚೆಗಷ್ಟೆ ಅಮೆರಿಕಾದಿಂದ ಕೇಳಿಬಂದಿದೆ. ಅಲ್ಲಿನ ಯಾವುದೋ ವ್ಯಾಪಾರಿ ಸಂಸ್ಥೆ ಮದುಮಕ್ಕಳಿಗಾಗಿ ಸ್ಪರ್ಧೆಯೊಂದನ್ನು ಆಯೋಜಿಸಿತ್ತು. ಅತಿ ಹೆಚ್ಚಿನ ಓಟು ಗಳಿಸಿ ಗೆದ್ದವರಿಗೆ ಭಾರೀ ಬಹುಮಾನವೂ ಇತ್ತು. ಈ ಬಹುಮಾನ ಗೆಲ್ಲಲೇಬೇಕೆಂದು ಛಲತೊಟ್ಟ ಜೋಡಿಯೊಂದು ಈ ತಾಣದ ಮೂಲಕ ಪ್ರತಿ ಓಟಿಗೆ ಏಳು ಸೆಂಟುಗಳವರೆಗೆ ಹಣ ಕೊಟ್ಟು ಒಂದಷ್ಟು ಓಟುಹಾಕಿಸಿಕೊಂಡಿತಂತೆ.

ಇಷ್ಟೇ ಅಲ್ಲ, ತನ್ನ ಉತ್ಪನ್ನಗಳ ಬಗೆಗೆ ಬೇರೆಬೇರೆ ತಾಣಗಳಲ್ಲಿ ಒಳ್ಳೆಯ ಅಭಿಪ್ರಾಯ ಬರೆಯಿರಿ ಎಂದು ಯಾವುದೋ ಸಂಸ್ಥೆ ಈ ತಾಣದ ಬಳಕೆದಾರರ ಮುಂದೆ ಬೇಡಿಕೆಯನ್ನೂ ಇಟ್ಟಿತ್ತಂತೆ.

ನೋಡಿದಿರಾ, ಹೇಗಿದೆ ಕ್ರೌಡ್‌ಸೋರ್ಸಿಂಗ್ ಮಹಿಮೆ?

ಜುಲೈ ೨೬, ೨೦೧೧ರ ಉದಯವಾಣಿಯಲ್ಲಿ 'ಕ್ರೌಡ್‌ಸೋರ್ಸಿಂಗ್ ಎಂದರೆ ಗೊತ್ತೇ?' ಎಂಬ ಶೀರ್ಷಿಕೆಯೊಡನೆ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge