ಮಂಗಳವಾರ, ಫೆಬ್ರವರಿ 20, 2018

ಮೊಬೈಲ್ ಲೋಕದ ರೆಟ್ರೋ ಸವಾರಿ

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನ್ ಎಂದ ತಕ್ಷಣ ನಮ್ಮ ಗಮನ ಹೋಗುವುದು ಸ್ಮಾರ್ಟ್‌ಫೋನುಗಳ ಕಡೆಗೆ. "ಈಗೇನು ಎಲ್ಲ ಫೋನುಗಳೂ ಸ್ಮಾರ್ಟ್ ತಾನೇ?" ಎಂದು ಕೇಳುವವರೂ ಬೇಕಾದಷ್ಟು ಜನ ಇದ್ದಾರೆ.

ಪ್ರತಿವಾರವೂ ಮಾರುಕಟ್ಟೆಗೆ ಬರುವ ಹೊಸ ಸ್ಮಾರ್ಟ್‌ಫೋನುಗಳನ್ನೂ ಅವುಗಳಲ್ಲಿರುವ ನೂರೆಂಟು ವೈಶಿಷ್ಟ್ಯಗಳನ್ನೂ ನೋಡಿದವರಲ್ಲಿ ಫೋನ್ ಅಂದರೆ ಸ್ಮಾರ್ಟ್‌ಫೋನೇ ಎನ್ನುವ ಅಭಿಪ್ರಾಯ ಮೂಡುವುದು ಸಹಜವೇ. ಆದರೆ ಅಂಕಿ ಅಂಶಗಳ ಪ್ರಕಾರ ಭಾರತದ ಮೊಬೈಲ್ ಬಳಕೆದಾರರ ಪೈಕಿ ಅರ್ಧಕ್ಕಿಂತ ಹೆಚ್ಚುಮಂದಿ ಇಂದಿಗೂ ಸ್ಮಾರ್ಟ್ ಫೋನ್ ಬಳಕೆದಾರರಲ್ಲ!

ಇಷ್ಟೆಲ್ಲ ದೊಡ್ಡ ಸಂಖ್ಯೆಯ ಗ್ರಾಹಕರು ಬಳಸುವುದು, ಸ್ಮಾರ್ಟ್‌ಫೋನ್ ಬಳಕೆದಾರರ ಪಾಲಿಗೆ ಔಟ್‌ಡೇಟೆಡ್ ಎನ್ನಿಸುವ ಹಳೆಯಕಾಲದ ಫೋನುಗಳನ್ನು.

ಮೂರೇ ಬೆರಳಗಲದ ಪರದೆ ಮತ್ತು ಅದರ ಕೆಳಗೊಂದು ಕೀಪ್ಯಾಡ್ ಇರುವ ಇಂತಹ ಪುಟಾಣಿ ಫೋನುಗಳನ್ನು 'ಫೀಚರ್ ಫೋನ್'ಗಳೆಂದು ಗುರುತಿಸಲಾಗುತ್ತದೆ. ಹದಿನೈದು ವರ್ಷಗಳ ಹಿಂದೆ ಜನಪ್ರಿಯವಾಗಿದ್ದ ನೋಕಿಯಾ ಸಂಸ್ಥೆಯ ೩೩೧೦, ಟಾರ್ಚ್‌ಗೆ ಬದಲಿಯಾಗಿ ಹೆಸರುಮಾಡಿದ ೧೧೦೦, ಇಂದೂ ಸಿಗುವ ನೋಕಿಯಾ ೧೦೫ - ಇವೆಲ್ಲವೂ ಫೀಚರ್ ಫೋನುಗಳೇ.

ಸೀಮಿತ ಸೌಲಭ್ಯಗಳು ಹಾಗೂ ಸ್ಮಾರ್ಟ್‌ಫೋನ್ ಹೋಲಿಕೆಯಲ್ಲಿ ತೀರಾ ಕಡಿಮೆಯೆನಿಸುವ ಬೆಲೆ - ಇದು ಈ ಫೋನುಗಳ ವೈಶಿಷ್ಟ್ಯ. ಸೀಮಿತ ಸೌಲಭ್ಯಗಳಿರುವುದರಿಂದ ಇವುಗಳ ಬ್ಯಾಟರಿ ಬಾಳಿಕೆಯೂ ಹೆಚ್ಚು: ಫೀಚರ್ ಫೋನುಗಳನ್ನು ಒಮ್ಮೆ ಚಾರ್ಜ್ ಮಾಡಿದರೆ ದಿನಗಟ್ಟಲೆ ಬಳಸುವುದು ಸಾಧ್ಯವಾಗುವುದು ಇದೇ ಕಾರಣದಿಂದ.

ಹೀಗಿದ್ದರೂ ಸ್ಮಾರ್ಟ್‌ಫೋನುಗಳಲ್ಲಿ ಮಾಡುವಂತೆ ನಮಗಿಷ್ಟವಾದ ಆಪ್‌ಗಳನ್ನೆಲ್ಲ ಫೀಚರ್ ಫೋನುಗಳಲ್ಲಿ ಬಳಸಲಾಗುವುದಿಲ್ಲ. ಇಲ್ಲಿ ಯಾವೆಲ್ಲ ತಂತ್ರಾಂಶಗಳನ್ನು ಬಳಸಬಹುದೆಂದು ಫೋನಿನ ನಿರ್ಮಾತೃಗಳೇ ತೀರ್ಮಾನಿಸುತ್ತಾರೆ. ಸ್ಮಾರ್ಟ್‌ಫೋನುಗಳ ಹೋಲಿಕೆಯಲ್ಲಿ ಇಲ್ಲಿ ದೊರಕುವ ಯಂತ್ರಾಂಶ ಆಧರಿತ ಸೌಲಭ್ಯಗಳು (ಉದಾ: ಜಿಪಿಎಸ್, ಎನ್‌ಎಫ್‌ಸಿ) ಕಡಿಮೆ, ಬಳಕೆಯಾಗುವ ಯಂತ್ರಾಂಶಗಳ ಸಾಮರ್ಥ್ಯವೂ (ಉದಾ: ಕ್ಯಾಮೆರಾ) ಕಡಿಮೆಯೇ. ೪ಜಿ ಹಾಗಿರಲಿ, ಈ ಫೋನುಗಳಲ್ಲಿ ೩ಜಿ ಸೌಲಭ್ಯ ಇರುವುದೂ ಅಪರೂಪ ಎನ್ನುವುದು ಈವರೆಗಿನ ಪರಿಸ್ಥಿತಿ.

ಹಾಗಿದ್ದರೂ ಫೀಚರ್ ಫೋನುಗಳ ಜನಪ್ರಿಯತೆ ಇಷ್ಟು ಉನ್ನತ ಮಟ್ಟದಲ್ಲಿದೆ ಎನ್ನುವುದಾದರೆ ಸ್ಮಾರ್ಟ್‌ಫೋನುಗಳಲ್ಲಿ ಸಿಗುವಂತಹ ಸೌಲಭ್ಯಗಳು ಅವುಗಳಲ್ಲೂ ಯಾಕೆ ಸಿಗುವಂತಾಗಬಾರದು?

ಸದ್ಯ ಫೀಚರ್ ಫೋನುಗಳಿ‌ಗೆ ಮರುಹುಟ್ಟು ತಂದುಕೊಟ್ಟಿರುವುದು ಇದೇ ಆಲೋಚನೆ. ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿರುವ ಅತಿವೇಗದ ಅಂತರಜಾಲ ಸಂಪರ್ಕ, ವಿಓಎಲ್‌ಟಿಇ (VoLTE) ಸೌಲಭ್ಯಗಳನ್ನೆಲ್ಲ ಇದೀಗ ಫೀಚರ್ ಫೋನುಗಳಲ್ಲೂ ಒದಗಿಸಲಾಗುತ್ತಿದೆ. ಪ್ರಾಥಮಿಕ ಕ್ಯಾಮೆರಾ ಕಾಣಸಿಗುವುದೇ ಅಪರೂಪವಾಗಿದ್ದ ಈ ಕ್ಯಾಮೆರಾಗಳಲ್ಲಿ ಇದೀಗ ಸೆಲ್ಫಿ ಕ್ಯಾಮೆರಾಗಳೂ ಕಾಣಿಸಿಕೊಳ್ಳುತ್ತಿವೆ.

ಹೆಚ್ಚು ವೇಗದ ಅಂತರಜಾಲ ಸಂಪರ್ಕ ಹಾಗೂ ಕ್ಯಾಮೆರಾ ಸೌಲಭ್ಯದೊಡನೆ ಇದೀಗ ಫೀಚರ್ ಫೋನುಗಳಲ್ಲಿ ಸಮಾಜಜಾಲಗಳ ಬಳಕೆಯೂ ಸರಾಗವಾಗಿದೆ. ಇದರ ಜೊತೆಯಲ್ಲೇ ಹೆಚ್ಚಿನ ಸಂಖ್ಯೆಯ ಹಾಗೂ ಹೆಚ್ಚು ವೈವಿಧ್ಯಮಯವಾದ ತಂತ್ರಾಂಶಗಳನ್ನು (ಮೊಬೈಲ್ ಆಪ್) ಬಳಸುವ ಸೌಲಭ್ಯ ಕೂಡ ಫೀಚರ್ ಫೋನ್ ಬಳಕೆದಾರರಿಗೆ ದೊರಕುತ್ತಿದೆ. ಪಠ್ಯ ಸಂದೇಶಗಳ ಮೂಲಕವೇ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಬಳಸಲು ಅನುವುಮಾಡಿಕೊಡುವ *99# ಸೌಲಭ್ಯ (ಯುಪಿಐ ಸೃಷ್ಟಿಸಿದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾದ ಕೊಡುಗೆ) ಇಂತಹ ಬೆಳವಣಿಗೆಗಳಿಗೊಂದು ಉತ್ತಮ ಉದಾಹರಣೆ.

ಈ ಎಲ್ಲ ಬದಲಾವಣೆಗಳ ಮೂಲಕ ಸದ್ಯ ಅಂತರಜಾಲ ಲೋಕದಿಂದ ದೂರವಿರುವ ಮೊಬೈಲ್ ಬಳಕೆದಾರರಿಗೂ ಅದರ ಅನುಕೂಲತೆಗಳನ್ನು ಪರಿಚಯಿಸುವುದು ಸಾಧ್ಯ ಎನ್ನುವುದು ಪರಿಣತರ ಅಭಿಪ್ರಾಯ. ಮನರಂಜನೆ, ಶಿಕ್ಷಣ, ಸುದ್ದಿ, ಸರಕಾರಿ ಸೇವೆಗಳೇ ಮುಂತಾದ ಆನ್‌ಲೈನ್ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಇದೊಂದು ಉತ್ತಮ ಮಾರ್ಗವಾಗಲಿದೆ ಎಂದು ಅವರು ಹೇಳುತ್ತಾರೆ.

ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ತಮ್ಮತ್ತ ಸೆಳೆದುಕೊಳ್ಳಲು, ಅವರಿಂದ ಹೆಚ್ಚಿನ ಆದಾಯ ನಿರೀಕ್ಷಿಸಲು ಮೊಬೈಲ್ ಸೇವಾ ಸಂಸ್ಥೆಗಳಿಗೂ ಇದು ಉತ್ತಮ ಮಾರ್ಗ. ಕರೆಮಾಡಲು, ಎಸ್ಸೆಮ್ಮೆಸ್ ಕಳಿಸಲು ಎಷ್ಟು ಬೇಕೋ ಅಷ್ಟೇ ಕರೆನ್ಸಿ ಹಾಕಿಸುತ್ತಿದ್ದ ಬಳಕೆದಾರ ಇದೀಗ ಡೇಟಾ ಪ್ಯಾಕನ್ನೂ ಕೊಳ್ಳುವಂತಾದರೆ ಅವರಿಗೆ ಲಾಭವೇ ತಾನೇ? ಜಿಯೋ, ಏರ್‌ಟೆಲ್, ವೋಡಾಫೋನ್, ಬಿಎಸ್‌ಎನ್‌ಎಲ್ ಸೇರಿದಂತೆ ಪ್ರಮುಖ ಮೊಬೈಲ್ ಸೇವಾ ಸಂಸ್ಥೆಗಳೆಲ್ಲ ಒಂದೊಂದು ಫೀಚರ್ ಫೋನ್ ಹಿಂದೆ ಬೆಂಬಲವಾಗಿ ನಿಂತಿರುವುದರ, ವಿಶೇಷ ಕೊಡುಗೆಗಳನ್ನು ಘೋಷಿಸಿರುವುದರ ಹಿನ್ನೆಲೆಯಲ್ಲಿರುವುದು ಇದೇ ಕಾರಣ. ಸದ್ಯ ನಗರಪ್ರದೇಶಗಳಲ್ಲೇ ಹೆಚ್ಚಾಗಿ ಬಳಕೆಯಾಗುತ್ತಿರುವ ಮೊಬೈಲ್ ಟೀವಿಯಂತಹ ಡೇಟಾ ಆಧರಿತ ಸೇವೆಗಳನ್ನು ಈ ಮೂಲಕ ಗ್ರಾಮೀಣ ಪ್ರದೇಶಗಳತ್ತಲೂ ಕೊಂಡೊಯ್ಯಬಹುದು ಎನ್ನುವುದು ಈ ಸಂಸ್ಥೆಗಳ ಯೋಚನೆ.

ಇದನ್ನೂ ಓದಿ: ಜಿಯೋಫೋನ್ ಬಂದಿದೆ, ಅದರಲ್ಲಿ ಏನಿದೆ?

ತಾವು ಹಿಂದೊಮ್ಮೆ ಬಳಸಿದ್ದ ಫೀಚರ್ ಫೋನುಗಳೊಡನೆ ಗ್ರಾಹಕರಿಗೆ ಇರಬಹುದಾದ ಭಾವನಾತ್ಮಕ ನಂಟನ್ನು ಬಳಸಿಕೊಳ್ಳುವ ಪ್ರಯತ್ನಗಳೂ ನಡೆದಿವೆ. ನೋಕಿಯಾ ಸಂಸ್ಥೆಯ ಜನಪ್ರಿಯ ಮಾದರಿ ೩೩೧೦ ಫೋನನ್ನು ಒಂದೂವರೆ ದಶಕದ ನಂತರ ಮತ್ತೆ ಮಾರುಕಟ್ಟೆಗೆ ಪರಿಚಯಿಸಿದ್ದು, ಮೋಟರೋಲಾ ಸಂಸ್ಥೆ ತನ್ನ ಮೋಟೋ ರೇಜರ್ ಮೊಬೈಲನ್ನು ಮತ್ತೆ ಬಿಡುಗಡೆಗೊಳಿಸಲು ಹೊರಟಿರುವುದೆಲ್ಲ ಇಂತಹ ಪ್ರಯತ್ನಗಳ ಭಾಗವಾಗಿಯೇ. ಸ್ಮಾರ್ಟ್‌ಫೋನ್ ಸಹವಾಸ ಸಾಕು ಎನ್ನುವವರು ಸ್ಮಾರ್ಟ್ ಅಲ್ಲದ ಇಂತಹ ಫೋನುಗಳತ್ತ (ಇವನ್ನು 'ಡಂಬ್‌ಫೋನ್' ಎಂದೂ ಕರೆಯುವ ಅಭ್ಯಾಸವಿದೆ) ಮರಳುವುದನ್ನು ಇಂತಹ ಪ್ರಯತ್ನಗಳು ಪ್ರೋತ್ಸಾಹಿಸುತ್ತಿವೆ.

ದಶಕಗಳ ಹಿಂದಿನ ವಿನ್ಯಾಸದ ಉಡುಪುಗಳು ಹೊಸ ಫ್ಯಾಶನ್ ಹೆಸರಿನಲ್ಲಿ ಮತ್ತೆ ಪ್ರಚಲಿತಕ್ಕೆ ಬರುತ್ತವಲ್ಲ, ಹಾಗೇ ಮೊಬೈಲ್ ಫೋನ್ ಜಗತ್ತಿನಲ್ಲೂ ರೆಟ್ರೋ ಸವಾರಿ ಶುರುವಾಗಿದೆ. ಇದು ಎಷ್ಟು ದಿನ ಸುದ್ದಿಯಲ್ಲಿರುತ್ತದೆ, ಎಷ್ಟು ದೂರ ಸಾಗುತ್ತದೆ ಎನ್ನುವುದನ್ನು ಮಾತ್ರ ಇನ್ನೂ ಕಾದುನೋಡಬೇಕಿದೆ.

ನವೆಂಬರ್ ೧೧, ೨೦೧೭ರ ವಿಶ್ವವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge