ಗುರುವಾರ, ಫೆಬ್ರವರಿ 15, 2018

ವಿಮಾನದಲ್ಲಿ ವೈ-ಫೈ

ಟಿ. ಜಿ. ಶ್ರೀನಿಧಿ

ಪ್ರವಾಸಕ್ಕೆಂದೋ ಕಚೇರಿ ಕೆಲಸಕ್ಕೆಂದೋ ವಿಮಾನಯಾನ ಕೈಗೊಳ್ಳುವವರ ಸಂಖ್ಯೆ ಈಚಿನ ಕೆಲವರ್ಷಗಳಲ್ಲಿ ಗಮನಾರ್ಹವಾಗಿ ಹೆಚ್ಚಿದೆ. ಅಂತಾರಾಷ್ಟ್ರೀಯ ವೈಮಾನಿಕ ಸಾರಿಗೆ ಒಕ್ಕೂಟ (ಐಎಟಿಎ), ಸಿಎಪಿಎ - ಸೆಂಟರ್ ಫಾರ್ ಏವಿಯೇಶನ್ ಮುಂತಾದ ಸಂಸ್ಥೆಗಳು ಪ್ರಕಟಿಸಿರುವ ಅಂಕಿ ಅಂಶಗಳಷ್ಟೇ ಅಲ್ಲ; ಭಾರತದ ನಗರಗಳನ್ನು ಪರಸ್ಪರ ಸಂಪರ್ಕಿಸುತ್ತಿರುವ ವಿಮಾನಗಳ ಸಂಖ್ಯೆ, ವಿಮಾನ ನಿಲ್ದಾಣಗಳಲ್ಲಿ ಕಾಣಸಿಗುವ ಪ್ರಯಾಣಿಕರ ದಟ್ಟಣೆ, ಕಡೆಗೆ ನಮ್ಮ ಫೇಸ್‌ಬುಕ್ ಪುಟದಲ್ಲಿ ಕಾಣಸಿಗುವ ಏರ್‌ಪೋರ್ಟ್ ಚೆಕ್-ಇನ್‌ಗಳ ಪ್ರಮಾಣ ಕೂಡ ಈ ಹೇಳಿಕೆಗೆ ಪುಷ್ಟಿಕೊಡುತ್ತಿವೆ!

ಬೆಂಗಳೂರು ವಿಮಾನ ನಿಲ್ದಾಣದಲ್ಲಿದ್ದೇನೆ ಎಂದು ಫೇಸ್ ಬುಕ್ ನಲ್ಲಿ ಹಾಕಿರುತ್ತಾರಲ್ಲ, ಅವರು ಮತ್ತೆ ಪೋಸ್ಟ್ ಮಾಡುವುದು ಮುಂದಿನ ವಿಮಾನ ನಿಲ್ದಾಣ ತಲುಪಿದ ಮೇಲೆಯೇ. ಇದೇಕೆ ಹೀಗೆ? ಏರ್‌ಪೋರ್ಟಿನಲ್ಲಿ ಸೆಲ್ಫಿ ತೆಗೆದು ಪೋಸ್ಟ್ ಮಾಡಿದವರು ವಿಮಾನದಲ್ಲಿ ತಿಂದ ತಿಂಡಿಯ ಫೋಟೋ ಏಕೆ ಹಾಕುವುದಿಲ್ಲ?

ಇದಕ್ಕೆ ಉತ್ತರಿಸುವುದು ಬಹಳ ಸುಲಭ. ಏಕೆಂದರೆ ಭಾರತದೊಳಗೆ ಸಂಚರಿಸುವ ವಿಮಾನಗಳಲ್ಲಿ ಅಂತರಜಾಲ ಸಂಪರ್ಕ ಬಳಸುವ ಸೌಲಭ್ಯವಿಲ್ಲ. ನಮ್ಮಂತಹ ಪ್ರಯಾಣಿಕರಿಗೆ ಸದ್ಯ ಈ ಸೌಲಭ್ಯವೇನಿದ್ದರೂ ಕೆಲವು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ - ಅದೂ ಕೆಲವೇ ಸಂಸ್ಥೆಗಳ ವಿಮಾನಗಳಲ್ಲಿ - ಮಾತ್ರ ಲಭ್ಯ.

ಮೊಬೈಲ್ ಸಂಕೇತಗಳು ವಿಮಾನದ ಉಪಕರಣಗಳ ಕಾರ್ಯಾಚರಣೆಗೆ ಅಡ್ಡಿಯುಂಟುಮಾಡಬಹುದು ಎನ್ನುವ ಕಾರಣದಿಂದ ವಿಮಾನದಲ್ಲಿ ಮೊಬೈಲ್ ಬಳಕೆ ಭಾರತವೂ ಸೇರಿದಂತೆ ಪ್ರಪಂಚದ ಬಹುತೇಕ ದೇಶಗಳಲ್ಲಿ ನಿಷಿದ್ಧ (ಕೆಲ ವಿದೇಶೀ ಸಂಸ್ಥೆಗಳು ಈ ನಿಷೇಧವನ್ನು ತೆರವುಗೊಳಿಸಿವೆ). ಬಾಹ್ಯ ಸಂಪರ್ಕಗಳನ್ನೆಲ್ಲ ಸ್ಥಗಿತಗೊಳಿಸಿಕೊಂಡು ಮೊಬೈಲ್ ಫೋನ್ ಬಳಸುವ ಆಯ್ಕೆಗೆ 'ಫ್ಲೈಟ್ ಮೋಡ್' ಎಂದೇ ಹೆಸರಿರುವುದಕ್ಕೆ ಇದೇ ಕಾರಣ. ಅಂದರೆ, ಬಸ್ಸು-ಕಾರು-ರೈಲಿನಲ್ಲಿ ಪ್ರಯಾಣಿಸುವಾಗ ನಮ್ಮ ಮೊಬೈಲ್ ಜಾಲದ ಮೂಲಕವೇ ಅಂತರಜಾಲ ಸೇವೆ ಪಡೆದುಕೊಳ್ಳುವಂತೆ ವಿಮಾನಗಳಲ್ಲಿ ಅಂತರಜಾಲ ಸಂಪರ್ಕ - ಸದ್ಯಕ್ಕಂತೂ - ಸಿಗುವುದಿಲ್ಲ.

ಹಾಗಾಗಿಯೇ ಕೆಲ ವಿಮಾನಯಾನ ಸಂಸ್ಥೆಗಳು ತಮ್ಮ ಪ್ರಯಾಣಿಕರಿಗೆ ವೈ-ಫೈ ಮೂಲಕ ಅಂತರಜಾಲ ಸಂಪರ್ಕ ಒದಗಿಸುತ್ತಿವೆ. ಆದರೆ ಇದು ಸುಲಭದ ಸಂಗತಿಯೇನಲ್ಲ. ವಿಮಾನಗಳಲ್ಲಿ ಅಂತರಜಾಲ ಸಂಪರ್ಕ ಕಲ್ಪಿಸಲು ಸಂಸ್ಥೆಗಳು ವಿಶೇಷ ವ್ಯವಸ್ಥೆ ಮಾಡಿಕೊಳ್ಳಬೇಕಾದ್ದು ಅನಿವಾರ್ಯ.

ಆ ಸಂಸ್ಥೆಗಳಿಗಿರುವ ಮೊದಲ ಆಯ್ಕೆಯೆಂದರೆ ಆಕಾಶದಿಂದ ಭೂಮಿಯನ್ನು ಸಂಪರ್ಕಿಸುವುದು (ಏರ್ - ಟು - ಗ್ರೌಂಡ್) - ಅಂದರೆ, ಭೂಮಿಯ ಮೇಲಿನ ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಸಂಪರ್ಕಿಸಿ ಅವುಗಳ ಮೂಲಕ ಅಂತರಜಾಲ ಸಂಪರ್ಕ ಒದಗಿಸುವುದು. ಇದು ಪ್ರಾಯೋಗಿಕವಾಗಿ ಸಾಧ್ಯ; ಆದರೆ ಈ ವಿಧಾನದಲ್ಲಿ ಹೆಚ್ಚಿನ ವೇಗದ ಅಂತರಜಾಲ ಸಂಪರ್ಕ ಒದಗಿಸುವುದು ಕಷ್ಟ.

ಇದಕ್ಕೆ ಪರ್ಯಾಯವೆಂದರೆ ಉಪಗ್ರಹ ಆಧಾರಿತ ಸೇವೆಯನ್ನು ಒದಗಿಸುವುದು. ಉಪಗ್ರಹಗಳೊಡನೆ ಸಂಪರ್ಕ ಏರ್ಪಡಿಸಿಕೊಂಡು ಎಲ್ಲ ಪ್ರಯಾಣಿಕರಿಗೂ ಸಾಕಷ್ಟು ವೇಗದ ಅಂತರಜಾಲ ಸಂಪರ್ಕ ನೀಡುವುದು ಈ ವ್ಯವಸ್ಥೆಯಲ್ಲಿ ಸಾಧ್ಯ. ಹಲವು ಸಂಸ್ಥೆಗಳು ತಮ್ಮ ವಿಮಾನಗಳಲ್ಲಿ ಈಗಾಗಲೇ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡಿವೆ.

ಈ ಪೈಕಿ ಯಾವ ಆಯ್ಕೆಯನ್ನೇ ಆದರೂ ಅಳವಡಿಸಲು ಸಾಕಷ್ಟು ವೆಚ್ಚ ತಗುಲುವುದರಿಂದ ವಿಮಾನದಲ್ಲಿ ಅಂತರಜಾಲ ಬಳಕೆಗೆ ನೀಡಬೇಕಾದ ಶುಲ್ಕವೂ ಸಾಕಷ್ಟು ದುಬಾರಿಯೇ. ಎಲ್ಲೋ ಕೆಲ ಸಂಸ್ಥೆಗಳು ಮಾತ್ರ ನಿರ್ದಿಷ್ಟ ಮಿತಿಯೊಳಗೆ ಉಚಿತ ಬಳಕೆಯ ಸೌಲಭ್ಯ ನೀಡಿವೆಯಷ್ಟೇ.

ನಮ್ಮ ದೇಶದಲ್ಲಿ ಮಾತ್ರ ಈವರೆಗೆ ದುಡ್ಡು ಕೊಡುತ್ತೇವೆಂದರೂ ವಿಮಾನಗಳಲ್ಲಿ ಅಂತರಜಾಲ ಸಂಪರ್ಕ ಬಳಸಲು ಸಾಧ್ಯವಿಲ್ಲದ ಪರಿಸ್ಥಿತಿ ಇತ್ತು. ಇದನ್ನು ಬದಲಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಭಾರತದಲ್ಲಿ ಸಂಚರಿಸುವ ವಿಮಾನಗಳಲ್ಲೂ ಅಂತರಜಾಲ ಸಂಪರ್ಕ ಒದಗಿಸಲು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅನುಮತಿ ನೀಡಿದೆ. ಈ ಸೇವೆಯನ್ನು ಒದಗಿಸುವ ಬಗ್ಗೆ ವಿಮಾನಯಾನ ಸಂಸ್ಥೆಗಳು ಆರ್ಥಿಕ ಹಾಗೂ ತಾಂತ್ರಿಕ ದೃಷ್ಟಿಯಿಂದ ಯೋಜಿಸಿದ ಕೂಡಲೇ ನಮ್ಮ ವಿಮಾನಗಳಲ್ಲೂ ಅಂತರಜಾಲ ಸಂಪರ್ಕ ಪಡೆದುಕೊಳ್ಳುವುದು ಸಾಧ್ಯವಾಗಲಿದೆ. ಅಂದರೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ಸೆಲ್ಫಿಗೂ ದೆಹಲಿ ನಿಲ್ದಾಣದಲ್ಲಿನ ಸೆಲ್ಫಿಗೂ ನಡುವೆ ವಿಮಾನದಲ್ಲಿ ಕೊಡುವ ತಣ್ಣನೆ ಸ್ಯಾಂಡ್‌ವಿಚ್ ಚಿತ್ರವೂ ನಮ್ಮ ಫೇಸ್‌ಬುಕ್ ಪುಟದಲ್ಲಿ ಆಗಿಂದಾಗ್ಗೆ ಕಾಣಿಸಿಕೊಳ್ಳಲಿದೆ!

ಅಷ್ಟೇ ಅಲ್ಲ, ಕೆಲ ನಿಬಂಧನೆಗಳಿಗೆ ಒಳಪಟ್ಟಂತೆ (ಉದಾ: ಟೇಕ್ ಆಫ್ ನಂತರ, ವಿಮಾನ ೩೦೦೦ ಮೀಟರ್ ಎತ್ತರ ತಲುಪಿದ ಮೇಲೆ) ಮೊಬೈಲ್ ಕರೆಗಳನ್ನು ಮಾಡುವುದಕ್ಕೂ ಅನುಮತಿ ನೀಡಬಹುದೆಂದು ಟ್ರಾಯ್ ತಿಳಿಸಿದೆ. ತಾಂತ್ರಿಕವಾಗಿ ಇದನ್ನು ಸಾಧ್ಯವಾಗಿಸುವುದು ಹೇಗೆ ಎನ್ನುವುದು ಈಗ ವಿಮಾನಯಾನ ಸಂಸ್ಥೆಗಳಿಗೆ, ದೂರವಾಣಿ ಸೇವೆ ನೀಡುವ ಸಂಸ್ಥೆಗಳಿಗೆ ಬಿಟ್ಟ ವಿಷಯ. ಒಮ್ಮೆ ಅವು ನಿರ್ಧಾರ ಕೈಗೊಂಡು ಈ ಸೇವೆ ಒದಗಿಸಿದವೆಂದರೆ ರೈಲು-ಬಸ್ಸುಗಳೊಳಗೆ ಕೇಳಸಿಗುವ ಮೊಬೈಲ್ ಭರಾಟೆ ವಿಮಾನದಲ್ಲೂ ಕೇಳಿಸುವ ದಿನ ಬಹುಶಃ ದೂರವಿಲ್ಲ ಎನ್ನಿಸುತ್ತದೆ.

ಈ ಸೇವೆಗಳನ್ನು ಎಷ್ಟು ವಿಮಾನಯಾನ ಸಂಸ್ಥೆಗಳು ಒದಗಿಸಲಿವೆ ಮತ್ತು ಅದಕ್ಕೆ ಅವು ಎಷ್ಟು ಶುಲ್ಕ ನಿಗದಿಪಡಿಸಲಿವೆ ಎನ್ನುವುದಷ್ಟೇ ಕಾದುನೋಡಬೇಕಾದ ಸಂಗತಿ. ನಿರೀಕ್ಷೆಯಂತೆ ಈ ಶುಲ್ಕ ದುಬಾರಿಯಾಗಿದ್ದರೆ ನೆಲದ ಮೇಲೆ ಅತ್ಯಲ್ಪ ಬೆಲೆಗೆ ಮೊಬೈಲ್ ಬಳಸಿ ಅಭ್ಯಾಸವಾಗಿರುವ ನಾವೆಲ್ಲ ಅದಕ್ಕೆ ಹೇಗೆ ಸ್ಪಂದಿಸಲಿದ್ದೇವೆ ಎನ್ನುವುದನ್ನೂ ಕಾದುನೋಡಲೇಬೇಕು!

ಪರಿಣತ ಅಭಿಪ್ರಾಯ
"ವಿಮಾನದಲ್ಲಿ ಅಂತರಜಾಲ - ಮೊಬೈಲ್ ಕರೆಗಳ ಸೌಲಭ್ಯ ಉಪಯೋಗಿ ಸೇವೆಯಾದರೂ ಅದನ್ನು ಅವಶ್ಯವಿದ್ದಾಗ ಮಾತ್ರ ಬಳಸುವ ಪ್ರಜ್ಞಾವಂತಿಕೆ ನಮ್ಮ ಜನರಿಗೆ ಬರಬೇಕು. ಇಲ್ಲವಾದರೆ ಅತ್ಯಂತ ಇಕ್ಕಟ್ಟಿನ ಸ್ಥಳವಾದ ವಿಮಾನದ ಒಳಭಾಗದಲ್ಲಿ ಕ್ಷಣಕ್ಕೊಮ್ಮೆ ಸದ್ದುಮಾಡುವ ಮೊಬೈಲು, ಮೊಬೈಲಿನಲ್ಲಿ ಗಟ್ಟಿಯಾಗಿ ಮಾತನಾಡುವ ಸಹಪ್ರಯಾಣಿಕರು ವಿಮಾನ ಪ್ರಯಾಣವನ್ನು ಪ್ರಯಾಸವಾಗಿ ಮಾಡುವುದರಲ್ಲಿ ಸಂಶಯವಿಲ್ಲ. ನಮ್ಮ ಬ್ಲಾಗಿನಲ್ಲಿ ನಡೆಸಿದ ಅಭಿಪ್ರಾಯ ಸಂಗ್ರಹದಲ್ಲಿ ಶೇಕಡಾ ೮೨ರಷ್ಟು ದೇಶೀಯ ಪ್ರಯಾಣಿಕರು ನಮಗೆ ಈ ಸೇವೆ ಅಗತ್ಯವಿಲ್ಲ, ಉಚಿತವಾಗಿ ಅಥವಾ ತೀರಾ ಕಡಿಮೆ ಬೆಲೆಗೆ ದೊರೆತರೆ ಮಾತ್ರ  ಉಪಯೋಗಿಸುವ ಇರಾದೆ ಇದೆ ಎಂದು ಹೇಳಿದ್ದಾರೆ." - ಶ್ರೀನಿಧಿ ಹಂದೆ, airlineblog.in

ಜನವರಿ ೩೧, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge