ಶನಿವಾರ, ಫೆಬ್ರವರಿ 10, 2018

ವಾರಾಂತ್ಯ ವಿಶೇಷ: ಸ್ಮಾರ್ಟ್ ಸಹಾಯಕರ ಸುತ್ತಮುತ್ತ

ಟಿ. ಜಿ. ಶ್ರೀನಿಧಿ

ಒಬ್ಬರು ಹೇಳಿದ ಕೆಲಸವನ್ನು ಇನ್ನೊಬ್ಬರು ಮಾಡುವುದಿಲ್ಲ ಎನ್ನುವುದು ಬಹುತೇಕ ಮನೆಗಳಲ್ಲಿ ವಾಗ್ವಾದಕ್ಕೆ, ಜಗಳಕ್ಕೆ ಕಾರಣವಾಗುವ ವಿಷಯ. ಕುಡಿಯಲು ನೀರು ಬೇಕು, ಬುಟ್ಟಿಯಲ್ಲಿ ಹಾಲಿನ ಕೂಪನ್ ಇಡಬೇಕು, ದಿನಸಿ ತರಿಸಬೇಕು, ಬೆಳಿಗ್ಗೆ ಏಳಲು ಅಲಾರಂ ಇಡಬೇಕು... ಹೀಗೆ ಇಂತಹ ಕೆಲಸಗಳಲ್ಲಿ ಹಲವಾರು ವಿಧಗಳಿರುವುದು ಸಾಧ್ಯ. ಈ ಪೈಕಿ ಕೆಲವು ಕೆಲಸಗಳಿಗೆ ಓಡಾಟ ಬೇಕು, ಇನ್ನು ಕೆಲವನ್ನು ಕಂಪ್ಯೂಟರಿನಲ್ಲೋ ಮೊಬೈಲಿನಲ್ಲೋ ಮಾಡಿಕೊಳ್ಳಬಹುದು.

ಓಡಾಡಿ ಮಾಡಬೇಕಿರುವ ಕೆಲಸಗಳು ಹಾಗಿರಲಿ, ಮೊಬೈಲಿನಲ್ಲೋ ಕಂಪ್ಯೂಟರಿನಲ್ಲೋ ಮಾಡಬೇಕಾದ ಕೆಲಸಗಳನ್ನಾದರೂ ಯಾರಾದರೂ ಮಾಡಿಕೊಡುವಂತಿದ್ದರೆ? ಜೀವನ ಸ್ವಲ್ಪವಾದರೂ ಸರಳವಾಗುತ್ತದೆ - ಮನೆಯ ಜಗಳ ಕೊಂಚಮಟ್ಟಿಗೆ ಕಡಿಮೆಯಾಗುತ್ತದೆ ಅಲ್ಲವೇ? 'ಸ್ಮಾರ್ಟ್ ಸಹಾಯಕ'ರ ಸೃಷ್ಟಿಯ ಹಿಂದಿರುವುದು ಇದೇ ಆಲೋಚನೆ.

ಇಷ್ಟಕ್ಕೂ ಸ್ಮಾರ್ಟ್ ಸಹಾಯಕರೆಂದರೆ ಯಾರು? ಬುದ್ಧಿವಂತ ಮನೆಕೆಲಸದವರೇ?
ಖಂಡಿತಾ ಅಲ್ಲ. ಅಸಲಿಗೆ ಇವರು ಮನುಷ್ಯರೇ ಅಲ್ಲ!

ನಿಜ, ದಿನನಿತ್ಯದ ಕೆಲವು ಕೆಲಸಗಳಲ್ಲಿ ನಮಗೆ ನೆರವಾಗಬಲ್ಲ ಯಂತ್ರಾಂಶ - ತಂತ್ರಾಂಶಗಳೇ ಈ ಸ್ಮಾರ್ಟ್ ಸಹಾಯಕರು. ಧ್ವನಿ ಅಥವಾ ಪಠ್ಯರೂಪದ ಸಂದೇಶಗಳಿಗೆ ಪ್ರತಿಕ್ರಿಯಿಸುವುದು, ನಾವು ಹೇಳಿದ ಕೆಲಸ ಮಾಡಿಕೊಡುವುದು ಇವುಗಳ ವೈಶಿಷ್ಟ್ಯ. ಮಾತನಾಡುವ ಅಥವಾ ಚಾಟ್ ಮಾಡುವ ಮೂಲಕವೇ ನಿರ್ದಿಷ್ಟ ತಂತ್ರಾಂಶ ತೆರೆಯುವುದು, ದೂರವಾಣಿ ಕರೆ ಮಾಡುವುದು, ಸಂದೇಶ ಕಳಿಸುವುದು, ಹಾಡು ಕೇಳುವುದು, ಆನ್‍ಲೈನ್ ಶಾಪಿಂಗ್ ಮಾಡುವುದೆಲ್ಲ ಈ ಸಹಾಯಕರಿಂದಾಗಿ ಸಾಧ್ಯವಾಗುತ್ತದೆ.

ಸರಳ ಉದಾಹರಣೆಯೊಂದನ್ನು ನೋಡೋಣ. ಅಡುಗೆ ಮಾಡುವಾಗ ಯಾವುದೋ ತಿನಿಸಿನ ಸರಿಯಾದ ಪಾಕವಿಧಾನ ತಿಳಿದುಕೊಳ್ಳಬೇಕೆನಿಸುತ್ತದೆ ಎಂದುಕೊಳ್ಳಿ. ಇದನ್ನು ತಿಳಿಯಲು ಇರುವ ಮಾರ್ಗಗಳು ಎರಡು - ಯಾರಿಗಾದರೂ ಕರೆಮಾಡುವುದು, ಇಲ್ಲವೇ ಯೂಟ್ಯೂಬ್‌ ವೀಡಿಯೋ ನೋಡುವುದು. ಬಿಡುವಾಗಿದ್ದಾಗ ಇವೆರಡೂ ಸುಲಭದ ಕೆಲಸಗಳೇ ಆದರೂ ಅಡುಗೆ ಕೆಲಸದಲ್ಲಿ ತೊಡಗಿರುವಾಗ ಇದನ್ನೆಲ್ಲ ಮಾಡಲು ಕೈಗೆ ಬಿಡುವಿರುವುದಿಲ್ಲ.

ಸ್ಮಾರ್ಟ್ ಸಹಾಯಕರು ಸಹಾಯಕ್ಕೆ ಬರುವುದೇ ಇಂತಹ ಸಂದರ್ಭಗಳಲ್ಲಿ. 'ಓಕೆ ಗೂಗಲ್' ಎನ್ನುವ ಮೂಲಕ ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿರುವ 'ಗೂಗಲ್ ಅಸಿಸ್ಟೆಂಟ್'ಳನ್ನು ಎಚ್ಚರಿಸಿದರೆ ಆಕೆ ಯೂಟ್ಯೂಬ್ ವೀಡಿಯೋವನ್ನೂ ಹುಡುಕಿಕೊಡಬಲ್ಲಳು, ನಿಮ್ಮಮ್ಮನಿಗೆ ಫೋನ್ ಕರೆಯನ್ನೂ ಮಾಡಬಲ್ಲಳು!

ಅಂದಹಾಗೆ ಇದನ್ನು ಸಾಧ್ಯವಾಗಿಸಲು ನಿಮ್ಮಲ್ಲಿ ವಿಶೇಷ ಸಾಧನಗಳೇನೂ ಇರಬೇಕಾಗಿಲ್ಲ, ಹೆಚ್ಚುವರಿ ಶುಲ್ಕ ಕೊಟ್ಟು ತಂತ್ರಾಂಶಗಳನ್ನು ಕೊಳ್ಳಬೇಕಾದ ಅಗತ್ಯವೂ ಇಲ್ಲ. ನಿಮ್ಮ ಮೊಬೈಲಿನಲ್ಲಿ ಗೂಗಲ್ ಅಸಿಸ್ಟೆಂಟ್ ಸವಲತ್ತನ್ನು ಒಮ್ಮೆ ಸಕ್ರಿಯಗೊಳಿಸಬೇಕು, ಅಂತರಜಾಲ ಸಂಪರ್ಕ ಇರಬೇಕು ಹಾಗೂ ನಿಮ್ಮ ಧ್ವನಿ ಕೇಳಿಸುವಷ್ಟು ಹತ್ತಿರದಲ್ಲಿ ಮೊಬೈಲ್ ಇರಬೇಕು - ಅಷ್ಟೇ! ಧ್ವನಿರೂಪದ ನಿರ್ದಿಷ್ಟ ಆದೇಶಗಳನ್ನು (ಉದಾ: 'ಕಾಲ್ ಅಮ್ಮ', 'ಓಪನ್ ಯೂಟ್ಯೂಬ್', 'ಸೆಂಡ್ ಮೆಸೇಜ್') ಅರ್ಥಮಾಡಿಕೊಳ್ಳುವ ಈ ವ್ಯವಸ್ಥೆ ಅದನ್ನು ಥಟ್ಟನೆ ಪಾಲಿಸುತ್ತದೆ.

ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆಯಲ್ಲಿ 'ಗೂಗಲ್ ಅಸಿಸ್ಟೆಂಟ್' ಇರುವಂತೆಯೇ ಆಪಲ್ ಐಓಎಸ್‍ನಲ್ಲಿ 'ಸಿರಿ', ವಿಂಡೋಸ್‌ನಲ್ಲಿ 'ಕೊರ್ಟಾನಾ'ಗಳೆಂಬ ಸವಲತ್ತುಗಳೂ ಇವೆ. ಅಷ್ಟೇ ಏಕೆ, ಸ್ವಂತ ಕಾರ್ಯಾಚರಣ ವ್ಯವಸ್ಥೆಯೇನೂ ಇಲ್ಲದ ಅಮೆಜಾನ್ ಕೂಡ 'ಅಲೆಕ್ಸಾ' ಎನ್ನುವ ಇಂಥದ್ದೇ ಸೌಲಭ್ಯವನ್ನು ರೂಪಿಸಿಕೊಂಡಿದೆ. ಧ್ವನಿಯ ಬದಲು ಪಠ್ಯರೂಪದ ಸಂದೇಶಗಳನ್ನು ಆಧರಿಸಿ ಕೆಲಸಮಾಡುವ ಹಲವು ಆಪ್‌ಗಳೂ ಇವೆ.
ಇದನ್ನೂ ಓದಿ: ಕಂಪ್ಯೂಟರ್ ಜೊತೆ ಮಾತು-ಕತೆ!
ಮಿತ್ರರೊಬ್ಬರಿಗೆ ವಾಟ್ಸ್‌ಆಪ್ ಕಳಿಸುವುದೋ ಬೆಳಿಗ್ಗೆಗೆ ಅಲಾರಂ ಇಟ್ಟುಕೊಳ್ಳುವುದೋ ಸಾಮಾನ್ಯವಾಗಿ ಮೂರು-ನಾಲ್ಕು ಹೆಜ್ಜೆಗಳ ಕೆಲಸ (ತಂತ್ರಾಂಶ ತೆರೆಯುವುದು, ನಮ್ಮ ಆಯ್ಕೆ ಸೂಚಿಸುವುದು ಇತ್ಯಾದಿ). ಇಂತಹ ಕೆಲಸಗಳನ್ನು ನಮ್ಮ ಹಸ್ತಕ್ಷೇಪದ ಅಗತ್ಯವೇ ಇಲ್ಲದೆ (ಅಂದರೆ, ನಮ್ಮ ಕೈಗೆ ಕೆಲಸವನ್ನೇ ಕೊಡದೆ) ಮಾಡಿಕೊಡುವುದು ಸ್ಮಾರ್ಟ್ ಸಹಾಯಕರ ಉದ್ದೇಶ. ನಿರ್ದಿಷ್ಟ ಮಾಹಿತಿಗಾಗಿ ಗೂಗಲ್ ಸರ್ಚ್ ಮಾಡುವುದು, ಪದಗಳ ಅರ್ಥವನ್ನೋ ಅನುವಾದವನ್ನೋ ಹುಡುಕಿಕೊಡುವುದು, ಜೋಕ್ ಹೇಳುವುದು, ಟ್ಯಾಕ್ಸಿ ಕರೆಸುವುದು, ತಿಂಡಿತಿನಿಸು - ದಿನಸಿ ಇತ್ಯಾದಿಗಳನ್ನು ಆರ್ಡರ್ ಮಾಡುವುದೂ ಇವರಿಗೆ ಗೊತ್ತು.

ಹಾಗೆಂದಮೇಲೆ ಸ್ಮಾರ್ಟ್ ಸಹಾಯಕರು ಫೋನಿನಲ್ಲೇ ಯಾಕಿರಬೇಕು? ಈ ಪ್ರಶ್ನೆಗೆ ಉತ್ತರರೂಪವಾಗಿ ಪ್ರತ್ಯೇಕ ಯಂತ್ರಾಂಶ ರೂಪದ ಸ್ಮಾರ್ಟ್ ಸಹಾಯಕರೂ ಸಿದ್ಧರಾಗಿದ್ದಾರೆ.

ಇತ್ತೀಚೆಗೆ ಭಾರತೀಯ ಮಾರುಕಟ್ಟೆಗೆ ಪರಿಚಯವಾದ 'ಅಮೆಜಾನ್ ಎಕೋ' ಸಾಧನಸರಣಿ ಇದಕ್ಕೊಂದು ಉದಾಹರಣೆ. ಇದೇ ರೀತಿ ಗೂಗಲ್ ಸಂಸ್ಥೆ 'ಗೂಗಲ್ ಹೋಮ್' ಎಂಬ ಸಾಧನವನ್ನೂ ಆಪಲ್ ಸಂಸ್ಥೆ 'ಆಪಲ್ ಹೋಮ್‍ಪಾಡ್' ಎಂಬ ಸಾಧನವನ್ನೂ ಪರಿಚಯಿಸಿವೆ. ಮೊಬೈಲಿನಲ್ಲಿ ತಂತ್ರಾಂಶ ರೂಪದಲ್ಲಿರುವ ಬದಲು ಪ್ರತ್ಯೇಕ ಯಂತ್ರಾಂಶವಾಗಿರುವುದರಿಂದ ಟೀವಿ ರೇಡಿಯೋಗಳಂತೆ ಇವನ್ನೂ ಒಂದೆಡೆ ಇಟ್ಟಿರುವುದು, ಮನೆಯ ಇತರ ಸದಸ್ಯರೊಡನೆ ಮಾತನಾಡಿದಂತೆ ಇವುಗಳ ಜೊತೆಗೂ ಮಾತನಾಡುವುದು, ಉತ್ತರ ಪಡೆದುಕೊಳ್ಳುವುದು ಸುಲಭ ಎನ್ನುವುದು ಈ ಸಾಧನಗಳ ಸೃಷ್ಟಿಯ ಹಿಂದಿರುವ ಆಲೋಚನೆ.



ಅಂದಹಾಗೆ ಈ ಸಾಧನಗಳದ್ದು ಹೀಗೆ ಹೇಳಿದರೆ ಹೀಗೆಯೇ ಮಾಡುವುದು ಎನ್ನುವ ಮಕ್ಕಿ-ಕಾ-ಮಕ್ಕಿ ಕಾರ್ಯವೈಖರಿಯೇನೂ ಅಲ್ಲ. ನೀವು ಹೇಳಿದ ಕೆಲಸ ಪೂರೈಸಲು ಹೆಚ್ಚಿನ ಮಾಹಿತಿ ಬೇಕಿದ್ದರೆ ಕೇಳಿ ಪಡೆದುಕೊಳ್ಳುವುದು (ಉದಾ: ಕರೆಮಾಡಬೇಕಿರುವುದು ಅಮ್ಮನ ಮೊಬೈಲಿಗೋ ಲ್ಯಾಂಡ್‍ಲೈನಿಗೋ), ಲಭ್ಯವಿರುವ ಆಯ್ಕೆಗಳ ಬಗ್ಗೆ ತಿಳಿಸುವುದು (ಉದಾ: ಬರೆದುಕೊಂಡಿರುವ ಸಂದೇಶ ಸರಿಯಿದೆಯೋ ಬದಲಿಸಬೇಕೋ) ಮುಂತಾದ ಸೌಲಭ್ಯಗಳೂ ಸ್ಮಾರ್ಟ್ ಅಸಿಸ್ಟೆಂಟ್ ವ್ಯವಸ್ಥೆಯಲ್ಲಿರುತ್ತವೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಮಶೀನ್ ಲರ್ನಿಂಗ್ ಮುಂತಾದ ಅತ್ಯಾಧುನಿಕ ತಂತ್ರಜ್ಞಾನಗಳ ನೆರವಿನಿಂದ ಇವು ತಮ್ಮ ಕಾರ್ಯವೈಖರಿಯನ್ನು ನಿರಂತರವಾಗಿ ಉತ್ತಮಪಡಿಸಿಕೊಳ್ಳುವ ನಿಟ್ಟಿನಲ್ಲಿ (ಉದಾ: ನೀವು ಯಾವಾಗಲೂ ಅಮ್ಮನ ಮೊಬೈಲಿಗೇ ಕರೆಮಾಡುತ್ತಿದ್ದರೆ ಮುಂದಿನ ಬಾರಿ ನೇರ ಆ ಸಂಖ್ಯೆಗೇ ಕರೆಮಾಡುವುದು) ಕೂಡ ಪ್ರಯತ್ನಗಳು ಸಾಗಿವೆ.

ಸದ್ಯ ಬಹುತೇಕ ಸ್ಮಾರ್ಟ್ ಸಹಾಯಕ ವ್ಯವಸ್ಥೆಗಳು ಇಂಗ್ಲಿಷನ್ನೇ ಬಳಸುತ್ತವೆ, ನಿಜ. ಆದರೆ ಧ್ವನಿ ಗುರುತಿಸುವ (ಸ್ಪೀಚ್ ರೆಕಗ್ನಿಶನ್) ತಂತ್ರಜ್ಞಾನ ಇದೀಗ ಸ್ಥಳೀಯ ಭಾಷೆಗಳಲ್ಲೂ ಬೆಳೆಯುತ್ತಿದೆ. ಹಾಗಾಗಿ ಈ ಸಾಧನಗಳು ಶೀಘ್ರವೇ ಬೇರೆ ಭಾಷೆಗಳನ್ನೂ ಗುರುತಿಸುವ ಸಾಮರ್ಥ್ಯ ಪಡೆದುಕೊಳ್ಳಲಿವೆ. ಇಂತಹ ಸೌಲಭ್ಯಗಳನ್ನೆಲ್ಲ ಬಳಸಿಕೊಂಡು ನಾವು ಹೆಚ್ಚು ಸಮರ್ಥರಾಗುತ್ತೇವೋ, ನಮ್ಮ ಕೆಲಸವನ್ನೆಲ್ಲ ಇವುಗಳಿಗೆ ವಹಿಸಿಕೊಟ್ಟು ಇನ್ನಷ್ಟು ಸೋಮಾರಿಗಳಾಗುತ್ತೇವೋ ಎನ್ನುವ ನಿರ್ಧಾರವನ್ನು ಮಾತ್ರ - ಇನ್ನೂ - ನಾವೇ ಮಾಡಬೇಕು!

ಅಕ್ಟೋಬರ್ ೮, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge