ಟಿ ಜಿ ಶ್ರೀನಿಧಿ
ಕಳೆದ ಡಿಸೆಂಬರ್‌ನಲ್ಲಿ ಗೂಗಲ್ ಸಂಸ್ಥೆ ತನ್ನ ಹೊಸ ಕೊಡುಗೆಯಾಗಿ ಕ್ರೋಮ್ ಒಎಸ್‌ನ ಪ್ರಾಯೋಗಿಕ ಆವೃತ್ತಿಯನ್ನು ಪರಿಚಯಿಸಿತು.
ಈ ಕ್ರೋಮ್ ಒಎಸ್ ಎನ್ನುವುದು ಒಂದು ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ). ಸರಳವಾಗಿ ಹೇಳಬೇಕಾದರೆ ಕಾರ್ಯಾಚರಣ ವ್ಯವಸ್ಥೆ ಎನ್ನುವುದು ಗಣಕದ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ, ಹಾಗೂ ಅದರಲ್ಲಿರುವ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ ತಂತ್ರಾಂಶ. ವಿಂಡೋಸ್, ಲಿನಕ್ಸ್ ಇವೆಲ್ಲ ಕಾರ್ಯಾಚರಣ ವ್ಯವಸ್ಥೆಗಳೇ.
ಆದರೆ ಕ್ರೋಮ್ ಒಎಸ್ ನಮಗೆ ಗೊತ್ತಿರುವ ಬೇರೆಲ್ಲ ಕಾರ್ಯಾಚರಣ ವ್ಯವಸ್ಥೆಗಳಿಗಿಂತ ವಿಭಿನ್ನವಾದದ್ದು.
ಅದಕ್ಕೆ ಕಾರಣ ಇಷ್ಟೆ - ಕ್ರೋಮ್ ಒಎಸ್ ಕಾರ್ಯಾಚರಣ ವ್ಯವಸ್ಥೆ ಸಂಪೂರ್ಣವಾಗಿ ಬ್ರೌಸರ್ ತಂತ್ರಾಂಶವನ್ನೇ ಆಧರಿಸಿಕೊಂಡು ಕೆಲಸಮಾಡುತ್ತದೆ. ಪದಸಂಸ್ಕರಣಾ ತಂತ್ರಾಂಶ ಬಳಸಿ ಅರ್ಜಿ ಟೈಪಿಸಬೇಕಾಗಿರಲಿ, ಸ್ಪ್ರೆಡ್‌ಶೀಟಿನಲ್ಲಿ ಲೆಕ್ಕಾಚಾರ ಹಾಕುವ ಅಗತ್ಯವಿರಲಿ - ಯಾವುದೇ ಪ್ರತ್ಯೇಕ ತಂತ್ರಾಂಶವನ್ನು ಅನುಸ್ಥಾಪಿಸಿಕೊಳ್ಳುವ ಅಗತ್ಯವಿಲ್ಲದೆ ಎಲ್ಲವೂ ವಿಶ್ವವ್ಯಾಪಿ ಜಾಲದ ಮೂಲಕವೇ ಲಭ್ಯವಾಗುತ್ತದೆ. ಈ ಕಾರ್ಯಾಚರಣ ವ್ಯವಸ್ಥೆಯಲ್ಲಿ ಸಕಲ ಕೆಲಸಗಳಿಗೂ ಬ್ರೌಸರ್ ಬೇಕೇಬೇಕು!
ಬ್ರೌಸರ್ ಅಂದರೇನು?
ವಿಶ್ವವ್ಯಾಪಿ ಜಾಲದಲ್ಲಿರುವ ಜಾಲತಾಣಗಳನ್ನು ನಮ್ಮ-ನಿಮ್ಮ ಗಣಕಗಳಲ್ಲಿ ವೀಕ್ಷಿಸಲು ಬ್ರೌಸರ್ ಅಥವಾ ವೀಕ್ಷಕ ತಂತ್ರಾಂಶಗಳು ಬಳಕೆಯಾಗುತ್ತವೆ. ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ಪಡೆದುಕೊಳ್ಳಲು ಈ ತಂತ್ರಾಂಶ ಅತ್ಯಗತ್ಯ.
ಮೊಜಿಲ್ಲಾ ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್, ಗೂಗಲ್ ಕ್ರೋಮ್ ಮೊದಲಾದವು ಈಗ ಪ್ರಚಲಿತದಲ್ಲಿರುವ ಬ್ರೌಸರ್‌ಗಳಲ್ಲಿ ಮುಖ್ಯವಾದವು. ವಿಶ್ವದ ಮೂಲೆಮೂಲೆಗಳಲ್ಲಿರುವ ಗಣಕಗಳಲ್ಲಿ ಶೇಖರವಾಗಿರುವ ವೆಬ್ ಪುಟಗಳನ್ನು ನಮ್ಮ ಗಣಕಗಳಲ್ಲಿ ವೀಕ್ಷಿಸಲು ಈ ತಂತ್ರಾಂಶಗಳು ಅನುವುಮಾಡಿಕೊಡುತ್ತವೆ. ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ನೋಡುವುದು ಮಾತ್ರವಲ್ಲ; ಆ ಮಾಹಿತಿಯನ್ನು ಉಳಿಸಿಕೊಳ್ಳುವುದು, ಮುದ್ರಿಸಿಕೊಳ್ಳುವುದು, ವಿವಿಧ ಪುಟಗಳ ನಡುವೆ ಹಿಂದೆಮುಂದೆ ಓಡಾಡುವುದು, ಅಚ್ಚುಮೆಚ್ಚಿನ ಪುಟಗಳ ವಿಳಾಸ ಸಂಗ್ರಹಿಸಿಟ್ಟುಕೊಳ್ಳುವುದು - ಇವೆಲ್ಲ ಸೌಲಭ್ಯಗಳೂ ಬ್ರೌಸರ್ ತಂತ್ರಾಂಶದಲ್ಲಿರುತ್ತವೆ.
ಬ್ರೌಸರ್ ಇತಿಹಾಸ
ವಿಶ್ವವ್ಯಾಪಿ ಜಾಲದ ಪ್ರಾರಂಭಿಕ ದಿನಗಳಲ್ಲಿ ರೂಪಗೊಂಡ ಜಾಲತಾಣಗಳಲ್ಲಿ ಪಠ್ಯ ಮಾತ್ರವೇ ಇರುತ್ತಿತ್ತು. ಆದರೆ ಜಾಲತಾಣಗಳಲ್ಲಿ ಪಠ್ಯದ ಚಿತ್ರಗಳು ಕೂಡ ಇದ್ದು ಚಿತ್ರಾತ್ಮಕ ಸಂಪರ್ಕ ಸಾಧನ (ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್) ಲಭ್ಯವಾಗುವಂತಾದಾಗ ಮಾತ್ರ ಈ ಅದ್ಭುತ ವ್ಯವಸ್ಥೆ ಸಾಮಾನ್ಯ ಜನರನ್ನೂ ತಲುಪುವಂತಾಗುತ್ತದೆ, ಎಲ್ಲರ ಆಸಕ್ತಿಯ ವಿಷಯಗಳಿಗೂ ಅಲ್ಲಿ ಸ್ಥಾನ ದೊರಕುತ್ತದೆ ಎಂಬ ಭಾವನೆ ಬಹಳಬೇಗ ಗಣಕತಜ್ಞರಲ್ಲಿ ಮೂಡಿತು.
ಹೀಗೆ ಲಭ್ಯವಾದ ಬಹುಮಾಧ್ಯಮ ಮಾಹಿತಿಯನ್ನು ಪಡೆದುಕೊಳ್ಳಲು ಹೊಸದೊಂದು ತಂತ್ರಾಂಶ ಅಗತ್ಯವಾಯಿತು. ಈಗ ನಮಗೆ ಪರಿಚಿತವಾಗಿರುವ ಬ್ರೌಸರ್ ತಂತ್ರಾಂಶದ ಪರಿಕಲ್ಪನೆ ಹುಟ್ಟಿದ್ದೇ ಆಗ.
ಅಮೆರಿಕಾದ ನ್ಯಾಷನಲ್ ಸೆಂಟರ್ ಫಾರ್ ಸೂಪರ್‌ಕಂಪ್ಯೂಟಿಂಗ್ ಅಪ್ಲಿಕೇಷನ್ಸ್‌ನಲ್ಲಿ ಅಧ್ಯಯನ ನಡೆಸುತ್ತಿದ್ದ ಮಾರ್ಕ್ ಆಂಡ್ರೀಸನ್ ಹಾಗೂ ಎರಿಕ್ ಬೀನಾ ಎಂಬ ವಿದ್ಯಾರ್ಥಿಗಳು ೧೯೯೩ರಲ್ಲಿ 'ಮೊಸಾಯಿಕ್' ಎನ್ನುವ ಬ್ರೌಸರ್ ಸಿದ್ಧಪಡಿಸಿದರು. ವಿಶ್ವವ್ಯಾಪಿ ಜಾಲಕ್ಕೆ ಮೊತ್ತಮೊದಲ ಬಾರಿಗೆ ಚಿತ್ರಾತ್ಮಕ ಸಂಪರ್ಕ ಸಾಧನವನ್ನು ಒದಗಿಸಿದ ಈ ತಂತ್ರಾಂಶ ಅದರ ಭವಿಷ್ಯವನ್ನೇ ಬದಲಾಯಿಸಿಬಿಟ್ಟಿತು.
ಮುಂದಿನ ದಿನಗಳಲ್ಲಿ
ಕ್ಲೌಡ್ ಕಂಪ್ಯೂಟಿಂಗ್‌ನ ವಿಕಾಸವಾಗುತ್ತಿದ್ದಂತೆ ಬ್ರೌಸರ್ ತಂತ್ರಾಂಶದ ಮಹತ್ವ ಹೆಚ್ಚುತ್ತಿದೆ. ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ ವಿವಿಧ ತಂತ್ರಾಂಶಗಳು ಹಾಗೂ ಸಂಬಂಧಿತ ಸೇವೆಗಳು ವಿಶ್ವವ್ಯಾಪಿ ಜಾಲದ ಮೂಲಕವೇ ಲಭ್ಯವಾಗುವುದರಿಂದ ಅವೆಲ್ಲವನ್ನೂ ಬ್ರೌಸರ್ ಮೂಲಕವೇ ಪಡೆದುಕೊಳ್ಳಬೇಕಾಗುತ್ತದೆ.
ಈ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯೋಗಗಳಲ್ಲಿ ಕ್ರೋಮ್ ಒಎಸ್ ಅಗ್ರಗಣ್ಯವಾದದ್ದು. ಗಣಕದಲ್ಲಿ ನಾವು ಬಳಸುವ ತಂತ್ರಾಂಶಗಳು ಹಾಗೂ ಅವನ್ನು ಬಳಸಿ ತಯಾರಿಸುವ ಮಾಹಿತಿ ಎರಡನ್ನೂ ವಿಶ್ವವ್ಯಾಪಿ ಜಾಲದ ಮೂಲಕ ಲಭ್ಯವಾಗಿಸಿ ಅಲ್ಲಿಯೇ ಶೇಖರಿಸಿಡುವ ಮಹತ್ವಾಕಾಂಕ್ಷೆ ಈ ಕಾರ್ಯಾಚರಣ ವ್ಯವಸ್ಥೆಯದ್ದು. ಒಂದುವೇಳೆ ಈ ಪ್ರಯೋಗ ಜನರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾದರೆ ಮುಂದಿನ ವರ್ಷಗಳಲ್ಲಿ ನಾವೆಲ್ಲ ಗಣಕ ಬಳಸುವ ವಿಧಾನದಲ್ಲಿ ಅಪಾರ ಬದಲಾವಣೆಯಾಗುವ ನಿರೀಕ್ಷೆಯಿದೆ.
ಜನವರಿ ೧೧, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ