ಶನಿವಾರ, ಸೆಪ್ಟೆಂಬರ್ 27, 2014

ಪ್ರೊ. ನಾಗರಾಜು ಹೇಳುತ್ತಾರೆ... "ಹೀಗೆಯೇ ಸಂವಹನ ಮಾಡಬೇಕೆಂದು, ಹೀಗೆ ಸಂವಹನ ಮಾಡಲೇಬಾರದೆಂದು ತೋರಿಸಿಕೊಟ್ಟ ಎಲ್ಲರೂ ನನ್ನ ಗುರುಗಳು"

ವಿಜ್ಞಾನ ಸಂವಹನ, ಅದರಲ್ಲೂ ಮೌಖಿಕ ರೂಪದ ವಿಜ್ಞಾನ ಸಂವಹನವನ್ನು ತಮ್ಮ ಬದುಕಿನ ಗುರಿಯಾಗಿಸಿಕೊಂಡ ಅಪರೂಪದ ವಿದ್ವಾಂಸರು ಪ್ರೊ. ಎಂ. ಆರ್. ನಾಗರಾಜು. ವಿಜ್ಞಾನ ಸಂವಹನದಲ್ಲಿ ಸಾಹಿತ್ಯದ ಸ್ಪರ್ಶವಿರಬೇಕು ಎಂದು ನಂಬಿರುವ ಕೆಲವೇ ಲೇಖಕರಲ್ಲಿ ಅವರೂ ಒಬ್ಬರು. ತಮ್ಮ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟರಾದ ಎಂಆರ್‌ಎನ್ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಕಟಣೆ 'ಬಾಲವಿಜ್ಞಾನ'ದ ಮೂಲಕ ರಾಜ್ಯದ ಮೂಲೆಮೂಲೆಗಳ ವಿದ್ಯಾರ್ಥಿಗಳನ್ನು ತಲುಪಿದ್ದಾರೆ. ೧೫,೦೦೦ಕ್ಕೂ ಹೆಚ್ಚು ಮಕ್ಕಳು ಕೇಳಿದ ಪ್ರಶ್ನೆಗಳಿಗೆ ವೈಯಕ್ತಿಕ ಉತ್ತರಗಳನ್ನು ಕಳುಹಿಸಿಕೊಟ್ಟಿರುವ ಅಪರೂಪದ ಸಾಧನೆ ಅವರದ್ದು. 'ತಾಪ ಪ್ರತಾಪ', 'ರಸಸ್ವಾರಸ್ಯ' ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿರುವ ಎಂಆರ್‌ಎನ್ ಪತ್ರಿಕಾ ಲೇಖನಗಳ ಮೂಲಕವೂ ಕನ್ನಡದ ಓದುಗರಿಗೆ ಪರಿಚಿತರಾಗಿದ್ದಾರೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ವಿಜ್ಞಾನ ಮತ್ತು ಪ್ರಕೃತಿ ಕುರಿತ ಅದಮ್ಯ ಕುತೂಹಲವನ್ನು ಜನರಲ್ಲಿ ರೂಪಿಸಿ ತಣಿಸುವುದು ಅಗತ್ಯ ಎಂದು ಭಾವಿಸಿ ನಾನು ವಿಜ್ಞಾನ ಸಂವಹನಕಾರನಾಗಿರಬೇಕು. ಕಲಿತ ವಿಜ್ಞಾನಕ್ಕೂ ಪರಿಚಿತ ಅನುಭವಕ್ಕೂ ಸೇತುವೆ ನಿರ್ಮಿಸಿ ಕೊಟ್ಟಾಗ ಆನಂದಿಸಿ ನನ್ನ ಕೆಲಸ ಮುಂದುವರೆಸಲು ಪ್ರೇರೇಪಿಸುತ್ತಿರುವ ಅಭಿಮಾನಿಗಳು ಬರೆಸುತ್ತಿರುವದೂ ನನ್ನ ಸಂವಹನ ಮುಂದುವರಿಕೆಗೆ ಕಾರಣ. ತಾನು ಕಲಿತದ್ದನ್ನು, ಸಂವಹನ ಮಾಡಿದ್ದನ್ನು ಜನ ಪ್ರೋತ್ಸಾಹಿಸಿದಾಗ ಅದು ಸಹಜ.

ಸಮಾಜದ - ಸಾಮಾಜಿಕರ ಶುದ್ಧೀಕರಣ ವಿಜ್ಞಾನದ ಸಾಮಾಜೀಕರಣದಿಂದ ಮಾತ್ರ ಸಾಧ್ಯ ಎಂದು ಈಗಲೂ ನನ್ನ ಬಲವಾದ ನಂಬಿಕೆ. ಉಳಿದ ಕಾರಣಗಳೂ ಇರಬಹುದು. ಅದನ್ನೆಲ್ಲ ಹೇಳತೊಡಗಿದರೆ ಅದೇ ಒಂದು ಪುಸ್ತಕ ಆದೀತು.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಈ ಪ್ರಶ್ನೆಗೆ ನಾನು ಉತ್ತರಿಸಲಾರೆ. ಕಾರಣ ಸರಳ - ಅನೇಕ ಆಂಗ್ಲ ಹಾಗೂ ಕನ್ನಡ ವಿಜ್ಞಾನ ಸಂವಹನಕಾರರು ನನ್ನ ಮೇಲೆ ಪ್ರಭಾವ ಬೀರಿದ್ದಾರೆ, ಆ ಪಟ್ಟಿ ದೊಡ್ಡದು. ಅನೇಕ ಹೆಸರುಗಳು ಕೈಬಿಟ್ಟು ಹೋಗುವ ಅಪಾಯವೂ ಇದೆ. ಅಂತಹುದೊಂದು ಪಟ್ಟಿಯಿಂದ ಯಾರಿಗೂ ಉಪಯೋಗವಿಲ್ಲ.
ಹೀಗೆಯೇ ಸಂವಹನ ಮಾಡಬೇಕೆಂದು, ಹೀಗೆ ಸಂವಹನ ಮಾಡಲೇಬಾರದೆಂದು ತೋರಿಸಿಕೊಟ್ಟ ಎಲ್ಲರೂ ನನಗೆ ಗುರುಗಳಾಗಿದ್ದಾರೆ.

ನಿಮ್ಮ (ಹಾಗೂ ಇತರ ಸಂವಹನಕಾರರ) ಕೆಲಸವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ? 
ಈ ಪ್ರಶ್ನೆಗೆ ಉತ್ತರವನ್ನು ಹೇಳಬೇಕಾದವರು ನಮ್ಮ ಫಲಾನುಭವಿಗಳು. ಆದರೆ ಇಷ್ಟು ಮಾತ್ರ ಹೇಳಬಲ್ಲೆ: ಪ್ರೋತ್ಸಾಹ ಹೆಚ್ಚಾಗುತ್ತಿದೆ. ಅದಕ್ಕನುಗುಣವಾಗಿ ಸಂವಹನಕಾರರು, ವಿಮರ್ಶನಕಾರರು ರೂಪುಗೊಳ್ಳಬೇಕಾಗಿದೆ. ಸಂವಹನಕಾರರಲ್ಲೂ ಹೊಸ ಸಾಹಸಕ್ಕೆ - ಶೈಲಿಯ ಹುಡುಕಾಟಕ್ಕೆ ಕೈಹಾಕುವ ಪ್ರವೃತ್ತಿ ಹೆಚ್ಚಿಸಿಕೊಳ್ಳಲು ವಿಪುಲ ಅವಕಾಶಗಳಿವೆ.

ವೈಯಕ್ತಿಕವಾಗಿ ನನಗೆ ದೊರೆತ ಪ್ರತಿಕ್ರಿಯೆ ಬಗ್ಗೆ ದಾಖಲಿಸಬಹುದಾದ ಅಂಶವೆಂದರೆ ನಾನು ಸಂತೃಪ್ತ. ಅಂಚೆ ಸಂವಹನ, ಉಪನ್ಯಾಸ, ಲೇಖನಗಳಿಗೆ ಜನರ ಪ್ರತಿಕ್ರಿಯೆಯಿಂದ ನಾನು ತೃಪ್ತ.

ಈ ಕ್ಷೇತ್ರದಲ್ಲಿ ನೀವು ಮಾಡಬಯಸುವ ಮುಂದಿನ ಕೆಲಸ ಯಾವುದು?
ಅಂದಿಗಂದಿನ ಕೆಲಸ ಸಂದನಿತರಲಿ ತೃಪ್ತಿಯ ಬದುಕು ನನ್ನದು. ತಾನಾಗಿ ಬಂದ ಸವಾಲನ್ನು ಎದುರಿಸಿ ಅದರಲ್ಲಿ ತೊಡಗಿಕೊಳ್ಳುವ ನನಗೆ ಯೋಜನೆ ಹಾಕಿಕೊಂಡು ಸಾಧಿಸುವ ಕ್ರಮ ಅಪ್ರಸ್ತುತ.

ವಿಜ್ಞಾನ ಸಂವಹನ ಹೊರತುಪಡಿಸಿ ನಿಮ್ಮ ಇತರ ಆಸಕ್ತಿಗಳು ಯಾವುವು?
ಸಾಹಿತ್ಯ ಮತ್ತಿತರ ಕ್ಷೇತ್ರಗಳ ಸಹಾನುಭೂತಿಪರ ಅಧ್ಯಯನ ಹಾಗು ವಿಭಿನ್ನ ಕ್ಷೇತ್ರಗಳ ಪೂರಕತೆ ಮತ್ತು ಸಮನ್ವಯ.
ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಇಜ್ಞಾನ ಡಾಟ್ ಕಾಮ್ ಪ್ರಾರಂಭಿಸಿರುವ ಸಂದರ್ಶನ ಸರಣಿಯೇ 'ಪೆನ್ ಸ್ಟಾಂಡ್'. ಈ ಸರಣಿಯ ಬಗ್ಗೆ ನಿಮ್ಮ ಅನಿಸಿಕೆ - ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ!
ಪೆನ್‌ ಸ್ಟಾಂಡ್ ಸಂದರ್ಶನ ಸರಣಿಯಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳೂ ಸಂದರ್ಶಿತರ ವೈಯಕ್ತಿಕ ಅನಿಸಿಕೆಗಳು.

ಕಾಮೆಂಟ್‌ಗಳಿಲ್ಲ:

badge