ಶುಕ್ರವಾರ, ಸೆಪ್ಟೆಂಬರ್ 12, 2014

ಡಾ. ರಾಧಾಕೃಷ್ಣ ಹೇಳುತ್ತಾರೆ... "ಓದಿಗಿಂತ ಪರಮ ಸುಖ ಬೇರಿಲ್ಲ"

ಮೂಲವಿಜ್ಞಾನದ ವಿಷಯಗಳ ಕುರಿತು ಕನ್ನಡದಲ್ಲಿ ಬರೆಯುವ ಅಪರೂಪದ ಸಂವಹನಕಾರ ಡಾ. ಎ. ಪಿ. ರಾಧಾಕೃಷ್ಣ. ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿರುವ ರಾಧಾಕೃಷ್ಣರ ಲೇಖನಗಳು ಉದಯವಾಣಿ, ಸುಧಾ, ಕಸ್ತೂರಿ, ತರಂಗ, ಪುಸ್ತಕ ಪ್ರಪಂಚ, ವಿಜ್ಞಾನ ಲೋಕ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಶ್ವಕಿರಣಗಳ ಮಾಯಾಲೋಕ (ಕನ್ನಡ ಪುಸ್ತಕ ಪ್ರಾಧಿಕಾರ), ಮನೆಯಂಗಳದಲ್ಲಿ ಕೃಷ್ಣ ವಿವರ (ಪ್ರಸಾರಾಂಗ ಮಂಗಳೂರು ವಿವಿ) ಸೇರಿದಂತೆ ಈವರೆಗೆ ಪ್ರಕಟವಾಗಿರುವ ಪುಸ್ತಕಗಳ ಸಂಖ್ಯೆ ಮೂರು. ನೊಬೆಲ್ ವಿಜ್ಞಾನಿಗಳು (ಉದಯವಾಣಿ) ಹಾಗೂ ಜ್ಞಾನವಿಜ್ಞಾನ (ವಿಜಯ ಕರ್ನಾಟಕ) ಎಂಬ ಅಂಕಣಗಳನ್ನು ಬರೆದದ್ದೂ ಉಂಟು. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಕವನ- ಪ್ರಬಂಧ ಬರೆಯುವ ಹುಚ್ಚು ಶಾಲಾ ದಿನಗಳಲ್ಲೇ ಇತ್ತು. ನಾನು ಹತ್ತನೇ ತರಗತಿಯಲ್ಲಿದ್ದೆ (೧೯೭೯). ಬೆಂಗಳೂರಿನ ವೈಮಾಂತರಿಕ್ಷ ಪ್ರಯೋಗಾಲಯದ ಕನ್ನಡ ಸಾಂಸ್ಕೃತಿಕ ಸಂಘ ತನ್ನ ಕಣಾದ ವಾರ್ಷಿಕ ಸಂಚಿಕೆಗಾಗಿ  ಕನ್ನಡ ವಿಜ್ಞಾನ ಪ್ರಬಂಧ ಸ್ಪರ್ಧೆ ಏರ್ಪಡಿಸಿರುವುದನ್ನು ಪತ್ರಿಕೆಯಲ್ಲಿ ನೋಡಿದಾಗ ನಾನೇಕೆ ಬರೆಯಬಾರದು ಎಂಬ ಪ್ರಶ್ನೆ ಮೂಡಿತು. ಶಕ್ತಿ ಸಮಸ್ಯೆಗಳು ಎಂಬ ಪ್ರಬಂಧ ಕಳುಹಿಸಿದೆ.  ಶಾಲಾ ವಿಭಾಗದಲ್ಲಿ ಪ್ರಥಮ ಬಹುಮಾನ ದೊರೆಯುವುದರೊಂದಿಗೆ ಕನ್ನಡದಲ್ಲಿ ವಿಜ್ಞಾನ ಲೇಖನ ಬರೆಯುವ ಉತ್ಸಾಹ ಮೊಳೆಯಿತು. ಸ್ಪರ್ಧೆಯಲ್ಲಿ ಪ್ರತಿವರ್ಷ ಭಾಗವಹಿಸುತ್ತ ಬಂದಂತೆ ಕನ್ನಡದಲ್ಲಿ ವಿಜ್ಞಾನ ಬರವಣಿಗೆಯ ಆಸಕ್ತಿ ಇನ್ನಷ್ಟು ಬಲವಾಯಿತು.

ಕಥೆ -ಕಾದಂಬರಿಗಳನ್ನು ಬರೆಯುತ್ತಿದ್ದ ಅಮ್ಮ ಎ. ಪಿ. ಮಾಲತಿ ನನ್ನ ಬರವಣಿಗೆಗೆ ಸದಾ ಸ್ಫೂರ್ತಿ. ನನ್ನ ತಂದೆಯ ಸೋದರ ಭಾವ - ಅಂದರೆ ನನ್ನ ಮಾವ ದಿವಂಗತ ಜಿ. ಟಿ. ನಾರಾಯಣರಾವ್ ಕೂಡ ತಮ್ಮ ಬರವಣಿಗೆ, ಉಪನ್ಯಾಸಗಳಿಂದ ನನ್ನ ಮೇಲೆ ಗಾಢ ಪ್ರಭಾವ ಬೀರಿದರು.
ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ವಾಂಙ್ಮಯಕ್ಕೆ ನೂತನ ಆಯಾಮ ನೀಡಿದ ಜಿಟಿಎನ್,  ನಮ್ಮ ಹಳ್ಳಿಯ ಮನೆಗೆ ಬಂದಾಗಲೆಲ್ಲ ಬರವಣಿಗೆಯ ಸೂಕ್ಷ್ಮಗಳನ್ನು ಹೇಳುತ್ತಿದ್ದರು. ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳನ್ನು ವಿಮರ್ಶೆಯ ನಿಕಷಕ್ಕೊಡ್ಡಿ ಸರಿ ದಾರಿ ತೋರಿಸುತ್ತಿದ್ದರು.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಗಾಢ ಪ್ರಭಾವ ಬೀರಿದವರೆಂದರೆ ನಿಸ್ಸಂಶಯವಾಗಿಯೂ ದಿವಂಗತ ಜಿ. ಟಿ. ನಾರಾಯಣರಾವ್ . ಇವರಲ್ಲದೇ ಟಿ. ಆರ್. ಅನಂತರಾಮು, ಅಡ್ಯನಡ್ಕ ಕೃಷ್ಣ ಭಟ್, ನಾಗೇಶ ಹೆಗಡೆ, ಬಿ. ಎಸ್. ಶೈಲಜಾ, ಹಾಲ್ಡೊಡ್ದೇರಿ ಸುಧೀಂದ್ರ ಹಾಗೂ ಪಾಲಹಳ್ಳಿ ವಿಶ್ವನಾಥರ  ಬರವಣಿಗೆಗಳನ್ನು ಮೆಚ್ಚಿಕೊಳ್ಳುತ್ತೇನೆ. ಇಂಗ್ಲಿಷಿನಲ್ಲಿ ವಿಜ್ಞಾನವನ್ನು ಅದ್ಭುತವಾಗಿ ಸಂವಹನಿಸುವ ಸಗಾನ್, ಅಸಿಮೋವ್, ವೈನ್‌ಬರ್ಗ್, ಅಬ್ರಾಹಮ್ ಪಾಯಾಸ್ ಬರವಣಿಗೆ ನಮಗೆ ಮಾದರಿ. ಒಂದು ಲೇಖನದ ವಿಷಯದ ಆಳಕ್ಕೆ ಇಳಿದು ಅವರು ಬರೆಯುವ ರೀತಿ ನಮ್ಮದಾಗಬೇಕು.

ನಿಮ್ಮ (ಹಾಗೂ ಇತರ ಸಂವಹನಕಾರರ) ಕೆಲಸವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ? 
ಸಮಾಜದಲ್ಲಿ ವಿಜ್ಞಾನದ ಕುರಿತು ಜನರಿಗೆ ಬೆರಗು ಮತ್ತು ಆಸಕ್ತಿ ಇದೆ. ಪ್ರಕಟವಾದ ವಿಜ್ಞಾನ ಲೇಖನದ ಬಗ್ಗೆ ಓದುಗರು ನೀಡುವ ಪ್ರತಿಕ್ರಿಯೆಯೇ ನಿದರ್ಶನ. ಆದರೆ ಪತ್ರಿಕೆಯ ಮಂದಿಗೆ ಇಂಥ ಆಸಕ್ತಿ ಇದ್ದಂತಿಲ್ಲ. ವಿಜ್ಞಾನ - ತಂತ್ರಜ್ಞಾನ ಲೇಖನಗಳಿಗೆ ಓದುಗರಿಲ್ಲ ಅನ್ನುವ ಸಿದ್ಧ ಧೋರಣೆಯೊಂದಿಗೆ ವಿಜ್ಞಾನ ಬರವಣಿಗೆಯ ಬಗೆಗೆ ಅಸಡ್ಡೆ ಮಾಡುತ್ತಿರುವುದು ದುರಂತ. ಕನ್ನಡ  ವಿಜ್ಞಾನ  ವಾಂಙ್ಮಯಕ್ಕೆ ಪತ್ರಿಕೆಗಳು ಇನ್ನಷ್ಟು ಉತ್ತೇಜನ ನೀಡಬೇಕಾಗಿದೆ.

ಈ ಕ್ಷೇತ್ರದಲ್ಲಿ ನೀವು ಮಾಡಬಯಸುವ ಮುಂದಿನ ಕೆಲಸ ಯಾವುದು?
ಭೌತ ವಿಜ್ಞಾನದಲ್ಲಿ ಪ್ರಾಧ್ಯಾಪನ ನನ್ನ ವೃತ್ತಿ. ವೃತ್ತಿಯಲ್ಲಿ  ನಾನು ಒಂದಿಷ್ಟು ಯಶಸ್ವಿಯಾಗಿದ್ದರೆ ಅದಕ್ಕೆ ಕಾರಣ  ನನ್ನ ಪ್ರವೃತ್ತಿಯಾದ  ವಿಜ್ಞಾನ ಬರವಣಿಗೆ.  ಇನ್ನಷ್ಟು ಲೇಖನ, ಪುಸ್ತಕಗಳ ಪ್ರಕಟಣೆ, ಶಾಲೆ- ಕಾಲೇಜುಗಳಲ್ಲಿ ಭೌತ ಮತ್ತು ಖಗೋಳವಿಜ್ಞಾನದ ಬಗೆಗೆ ಕನ್ನಡದಲ್ಲಿ ಉಪನ್ಯಾಸ ನೀಡುತ್ತ ವಿಜ್ಞಾನ ಸಂವಹನದಲ್ಲಿ ಇನ್ನಷ್ಟು ಕೆಲಸ ಮಾಡಬೇಕೆಂಬ ಆಸೆ, ಗುರಿ ಇದೆ.

ವಿಜ್ಞಾನ ಸಂವಹನ ಹೊರತುಪಡಿಸಿ ನಿಮ್ಮ ಇತರ ಆಸಕ್ತಿಗಳು ಯಾವುವು?
ಅಡಿಕೆ ಕೃಷಿ ಕುಟುಂಬದಿಂದ ಬಂದ ನನಗೆ ಕೃಷಿಯ ಆಸಕ್ತಿ ಹುಟ್ಟಿನಿಂದ ಬಂದ ಬಳುವಳಿ. ಯಕ್ಷಗಾನ, ನಾಟಕ, ಶಾಸ್ತ್ರೀಯ ಸಂಗೀತವೆಂದರೆ ನೆಚ್ಚು. ಓದಿಗಿಂತ ಪರಮ ಸುಖ ಬೇರಿಲ್ಲ - ಹಾಗಾಗಿ ರಜೆಯನ್ನು ಹೇಗೆ ಕಳೆಯಬೇಕೆಂಬ ಭಯ ಎನಗಿಲ್ಲ!

ಡಾ. ರಾಧಾಕೃಷ್ಣರ ಲೇಖನಗಳನ್ನು ಅವರ ಬ್ಲಾಗಿನಲ್ಲಿ ಓದಬಹುದು
ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಇಜ್ಞಾನ ಡಾಟ್ ಕಾಮ್ ಪ್ರಾರಂಭಿಸಿರುವ ಸಂದರ್ಶನ ಸರಣಿಯೇ 'ಪೆನ್ ಸ್ಟಾಂಡ್'. ಈ ಸರಣಿಯ ಬಗ್ಗೆ ನಿಮ್ಮ ಅನಿಸಿಕೆ - ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ!
ಪೆನ್‌ ಸ್ಟಾಂಡ್ ಸಂದರ್ಶನ ಸರಣಿಯಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳೂ ಸಂದರ್ಶಿತರ ವೈಯಕ್ತಿಕ ಅನಿಸಿಕೆಗಳು.  

ಕಾಮೆಂಟ್‌ಗಳಿಲ್ಲ:

badge