ಭಾನುವಾರ, ಆಗಸ್ಟ್ 17, 2014

ವಿಶ್ವ ಛಾಯಾಗ್ರಹಣ ದಿನ ವಿಶೇಷ: ಛಾಯಾಗ್ರಹಣಕ್ಕೆ ೧೭೫ ವರ್ಷ

ಕಂಪ್ಯೂಟರ್ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ 'ಓಪನ್ ಸೋರ್ಸ್' ಪರಿಕಲ್ಪನೆಯ ರೂಪವೊಂದನ್ನು ೧೭೫ ವರ್ಷಗಳ ಹಿಂದೆಯೇ ಪರಿಚಯಿಸಿದ್ದು ಡಿಗೇರೋಟೈಪ್ ತಂತ್ರಜ್ಞಾನ. ಲೂಯಿ ಡಿಗೇರ್ ರೂಪಿಸಿದ ಈ ತಂತ್ರಜ್ಞಾನದ ಹಕ್ಕುಸ್ವಾಮ್ಯವನ್ನು ೧೮೩೯ರಲ್ಲಿ ಫ್ರೆಂಚ್ ಸರಕಾರ ಕೊಂಡು ಅದನ್ನು "ಮನುಕುಲಕ್ಕೆ ಕೊಡುಗೆ"ಯಾಗಿ ಸಮರ್ಪಿಸಿದ ದಿನವೇ ಆಗಸ್ಟ್ ೧೯. ಇದೀಗ ವಿಶ್ವ ಛಾಯಾಗ್ರಹಣ ದಿನವೆಂದು ನಾವು ಗುರುತಿಸುವುದು ಇದೇ ದಿನವನ್ನು. ಈ ಸಂದರ್ಭದಲ್ಲಿ ಛಾಯಾಗ್ರಹಣದ ವಿಕಾಸದತ್ತ ಹೀಗೊಂದು ನೋಟ...
ಟಿ. ಜಿ. ಶ್ರೀನಿಧಿ

ಮನುಷ್ಯ ತನ್ನ ಕಣ್ಣಮುಂದಿನ ದೃಶ್ಯವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ಮಾಡದ ಪ್ರಯತ್ನವೇ ಇಲ್ಲ ಎನ್ನಬಹುದೇನೋ. ಶಿಲಾಯುಗದ ರೇಖಾಚಿತ್ರಗಳಿಂದ ಪರಿಣತರ ಕಲಾಕೃತಿಗಳವರೆಗೆ ಅನೇಕ ಸೃಷ್ಟಿಗಳ ಉದ್ದೇಶ ಇದೇ ಆಗಿರುವುದನ್ನು ನಾವು ಗಮನಿಸಬಹುದು.

ಆದರೆ ಇಂತಹ ಪ್ರಯತ್ನಗಳಿಗೆ ಒಂದು ದೊಡ್ಡ ಸಮಸ್ಯೆ ಅಡ್ಡಬರುತ್ತಿತ್ತು - ಕಂಡದ್ದನ್ನು ಕಂಡಂತೆ ಚಿತ್ರಿಸಲು ಎಲ್ಲರಿಗೂ ಬರುವುದಿಲ್ಲ, ಹಾಗೂ ನಮಗೆ ಬಂದಂತೆ ಚಿತ್ರಿಸಿದರೆ ಅದು ನಾವು ಕಂಡದ್ದನ್ನು ನಿಖರವಾಗಿ ಪ್ರತಿನಿಧಿಸುವುದಿಲ್ಲ!

ಹಾಗಾದರೆ ನಾವು ಕಂಡದ್ದನ್ನು ಕಂಡಹಾಗೆಯೇ ದಾಖಲಿಸಿಟ್ಟುಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲಿ ನಡೆದ ಪ್ರಯತ್ನಗಳು ಒಂದೆರಡಲ್ಲ.

ಇಂತಹ ಪ್ರಯತ್ನಗಳಲ್ಲೊಂದಾದ 'ಕ್ಯಾಮೆರಾ ಅಬ್ಸ್‌ಕ್ಯೂರಾ' (Camera Obscura, ಪಿನ್‌ಹೋಲ್ ಕ್ಯಾಮೆರಾ ಎಂದೂ ಪರಿಚಿತ) ನಮ್ಮ ಎದುರಿನ ದೃಶ್ಯದ ತಲೆಕೆಳಗಾದ ರೂಪವನ್ನು ಪರದೆಯ ಮೇಲೆ ಚಿಕ್ಕದಾಗಿ ಮೂಡಿಸಿ ಚಿತ್ರಕಾರರಿಗೆ ಅದನ್ನು ನಕಲು ಮಾಡಿಕೊಳ್ಳಲು ನೆರವಾಗುತ್ತಿತ್ತು. ಬೇಕಾದ ದೃಶ್ಯವನ್ನು ಕ್ಷಿಪ್ರವಾಗಿ ಬರೆದುಕೊಳ್ಳುವ ಕಲಾವಿದರಿಗೇನೋ ಸರಿ, ಆದರೆ ಚಿತ್ರಬಿಡಿಸಲು ಬಾರದವರಿಗೆ ಇದರಿಂದ ಯಾವ ಉಪಯೋಗವೂ ಆಗುತ್ತಿರಲಿಲ್ಲ.

ಚಿತ್ರಬಿಡಿಸಲು ಬಾರದವರೂ ಈ ತಂತ್ರ ಬಳಸಬೇಕೆಂದರೆ ಪರದೆಯ ಮೇಲೆ ಮೂಡುವ ಚಿತ್ರ ತನ್ನಷ್ಟಕ್ಕೆ ತಾನೇ ಒಂದೆಡೆ ದಾಖಲಾಗುವಂತಿರಬೇಕು. ಹಾಗೆಂದು ಯೋಚಿಸಿ ಕಾರ್ಯಪ್ರವೃತ್ತನಾದವನು ಫ್ರಾನ್ಸಿನ ನಿಸೆಫೋರ್ ನಿಯಪ್ಸ್ ಎಂಬ ವ್ಯಕ್ತಿ. ಕ್ಯಾಮೆರಾ ಅಬ್ಸ್‌ಕೂರಾದಲ್ಲಿ ಚಿತ್ರಕಾರರಿಗಾಗಿ ಇದ್ದ ಪರದೆಯ ಜಾಗದಲ್ಲಿ ರಾಸಾಯನಿಕವಾಗಿ ಸಂಸ್ಕರಿಸಿದ ಲೋಹದ ಫಲಕವನ್ನು ತಂದು ಕೂರಿಸಿ 'ಹೀಲಿಯೋಗ್ರಫಿ' ಎಂಬ ತಂತ್ರಜ್ಞಾನವನ್ನು ರೂಪಿಸಿದ್ದು ಇವನ ಸಾಧನೆ.
ಕ್ಯಾಮೆರಾ ರಂಧ್ರದ ಮೂಲಕ ಹಾದ ಬೆಳಕು ಈ ಫಲಕದ ಮೇಲೆ ಬಿದ್ದಾಗ ಅದು ಕ್ಯಾಮೆರಾ ಎದುರಿನ ದೃಶ್ಯವನ್ನು ಫಲಕದ ಮೇಲೆ ಅಚ್ಚುಹಾಕಿಬಿಡುತ್ತಿತ್ತು.

ಆದರೆ ಈ ಪ್ರಕ್ರಿಯೆ ಪೂರ್ಣವಾಗಲು ಏಳೆಂಟು ಗಂಟೆಗಳಷ್ಟು ಸಮಯ ಬೇಕಿತ್ತು. ಅಲ್ಲದೆ ಈ ತಂತ್ರಜ್ಞಾನದ ನೆರವಿನಿಂದ ಮೂಡಿದ ಚಿತ್ರಗಳ ಗುಣಮಟ್ಟವೂ ಹೇಳಿಕೊಳ್ಳುವಂತಿರಲಿಲ್ಲ. ಫಲಕದ ಮೇಲೆ ಅಚ್ಚಾದ ಚಿತ್ರ ಮತ್ತೆ ಬೆಳಕಿನ ಸಂಪರ್ಕಕ್ಕೆ ಬಂದಾಗ ಕಪ್ಪಾಗಿಹೋಗುವ ಸಾಧ್ಯತೆಯೂ ಇತ್ತು.

ಇಷ್ಟೆಲ್ಲ ಕೊರತೆಗಳಿರುವ ತಂತ್ರಜ್ಞಾನವನ್ನು ಬಳಸಲು ಯಾರು ತಾನೆ ಇಷ್ಟಪಡುತ್ತಾರೆ? ಹಾಗಾಗಿ ಛಾಯಾಗ್ರಹಣದ ತಂತ್ರಜ್ಞಾನವನ್ನು ಇನ್ನಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಪ್ರಯೋಗಗಳು ಮುಂದುವರೆದವು.

ಈ ಕೆಲಸದಲ್ಲಿ ತೊಡಗಿದ ಹಲವರಲ್ಲಿ ಫ್ರಾನ್ಸಿನವನೇ ಆದ ಲೂಯಿ ಡಿಗೇರ್ ಎನ್ನುವವನದು ಪ್ರಮುಖ ಹೆಸರು. ಈತ ರೂಪಿಸಿದ 'ಡಿಗೇರೋಟೈಪ್' ತಂತ್ರಜ್ಞಾನ ಉತ್ತಮ ಗುಣಮಟ್ಟದ ಛಾಯಾಚಿತ್ರಗಳನ್ನು - ಸುಮಾರು ಅರ್ಧಗಂಟೆಯ ಆಸುಪಾಸಿನಲ್ಲಿಯೇ - ಸೆರೆಹಿಡಿಯುವುದನ್ನು ಸಾಧ್ಯವಾಗಿಸಿತು. ತೀರಾ ಏಳೆಂಟು ಗಂಟೆ ಕಾಯುವ ಅಗತ್ಯವಿಲ್ಲದ್ದು, ಹಾಗೂ ಒಮ್ಮೆ ದಾಖಲಾದ ಚಿತ್ರ ಫಲಕದ ಮೇಲೆ ಹಾಳಾಗದೆ ಉಳಿಯುತ್ತಿದ್ದದ್ದು ಈ ತಂತ್ರಜ್ಞಾನದ ವೈಶಿಷ್ಟ್ಯ.

ಈ ತಂತ್ರಜ್ಞಾನ ಜನಸಾಮಾನ್ಯರನ್ನು ತಲುಪಿದ ರೀತಿಯಿದೆಯಲ್ಲ, ಅದು ಇವೆಲ್ಲದಕ್ಕಿಂತ ಹೆಚ್ಚು ವಿಶೇಷವಾದದ್ದು. ಕಂಪ್ಯೂಟರ್ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ 'ಓಪನ್ ಸೋರ್ಸ್' ಪರಿಕಲ್ಪನೆಯ ರೂಪವೊಂದನ್ನು ೧೭೫ ವರ್ಷಗಳ ಹಿಂದೆಯೇ ಪರಿಚಯಿಸಿದ್ದು ಡಿಗೇರೋಟೈಪ್ ತಂತ್ರಜ್ಞಾನ. ಲೂಯಿ ಡಿಗೇರ್ ರೂಪಿಸಿದ ಈ ತಂತ್ರಜ್ಞಾನದ ಹಕ್ಕುಸ್ವಾಮ್ಯವನ್ನು ೧೮೩೯ರಲ್ಲಿ ಫ್ರೆಂಚ್ ಸರಕಾರ ಕೊಂಡು ಅದನ್ನು "ಮನುಕುಲಕ್ಕೆ ಕೊಡುಗೆ"ಯಾಗಿ ಸಮರ್ಪಿಸಿದ ದಿನವೇ ಆಗಸ್ಟ್ ೧೯. ಇದೀಗ ವಿಶ್ವ ಛಾಯಾಗ್ರಹಣ ದಿನವೆಂದು ನಾವು ಗುರುತಿಸುವುದು ಇದೇ ದಿನವನ್ನು.

ಹಾಗೆ ನೋಡಿದರೆ ಲೂಯಿ ಡಿಗೇರ್ ಛಾಯಾಗ್ರಹಣ ತಂತ್ರಜ್ಞಾನದ ಏಕಮಾತ್ರ ಸೃಷ್ಟಿಕರ್ತನೇನೂ ಅಲ್ಲ. ಇನ್ನು ಡಿಗೇರೋಟೈಪ್ ತಂತ್ರಜ್ಞಾನ ಛಾಯಾಗ್ರಹಣ ಕ್ಷೇತ್ರದ ಏಕೈಕ ಕ್ರಾಂತಿಕಾರಕ ಆವಿಷ್ಕಾರವೂ ಅಲ್ಲ. ಆದರೆ ಈ ತಂತ್ರಜ್ಞಾನ ಜನತೆಯನ್ನು ಮುಕ್ತವಾಗಿ ತಲುಪಿದ ರೀತಿಯಿದೆಯಲ್ಲ, ಛಾಯಾಗ್ರಹಣದ ದಿಕ್ಕನ್ನೇ ಬದಲಿಸಿದ ಘಟನೆ ಅದು. ಆ ಘಟನೆ ಸಂಭವಿಸಿದ ದಿನಕ್ಕೆ ವಿಶ್ವ ಛಾಯಾಗ್ರಹಣ ದಿನವೆಂಬ ಗೌರವ ದೊರಕುವುದಕ್ಕೂ ಇದೇ ಕಾರಣ.

ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

"ಈ ತಂತ್ರಜ್ಞಾನ ಒಬ್ಬ ವ್ಯಕ್ತಿಯ ಹಿಡಿತದಲ್ಲೇ ಇದ್ದಿದ್ದರೆ ಅದು ದೀರ್ಘಕಾಲದವರೆಗೆ ಬದಲಾಗದೆ ಉಳಿಯುವ ಸಾಧ್ಯತೆ ಇತ್ತು; ಒಂದೊಮ್ಮೆ ವಿಕಾಸವನ್ನೇ ಕಾಣದೆ ಸತ್ತುಹೋಗಿದ್ದರೂ ಆಶ್ಚರ್ಯವಿರಲಿಲ್ಲ. ಆದರೆ ಈಗ ಇದು ಸಾರ್ವಜನಿಕವಾಗಿರುವುದರಿಂದ ಖಂಡಿತಾ ಏಳಿಗೆ ಕಾಣುತ್ತದೆ, ಎಲ್ಲರ ನೆರವನ್ನೂ ಪಡೆದು ಅಭಿವೃದ್ಧಿಹೊಂದುತ್ತದೆ" - ಡಿಗೇರೋಟೈಪ್ ತಂತ್ರಜ್ಞಾನವನ್ನು ಮುಕ್ತವಾಗಿ ತೆರೆದಿಟ್ಟ ಈ ಘಟನೆಯನ್ನು ಕುರಿತು ಫ್ರಾನ್ಸಿನ ವಿಜ್ಞಾನಿಯೊಬ್ಬ ಹೇಳಿದ ಮಾತುಗಳು ಇವು. ಕಳೆದ ಒಂದೂಮುಕ್ಕಾಲು ಶತಮಾನದ ಅವಧಿಯಲ್ಲಿ ಛಾಯಾಗ್ರಹಣ ಸಾಗಿಬಂದ ಹಾದಿಯನ್ನು ಈ ಮಾತುಗಳು ಅತ್ಯಂತ ಸಶಕ್ತವಾಗಿ ಪ್ರತಿನಿಧಿಸುತ್ತವೆ ಎನ್ನಬಹುದು.

ನಿಜ. ೧೮೩೯ರಿಂದ ಇಲ್ಲಿಯವರೆಗೆ ಛಾಯಾಗ್ರಹಣ ಕ್ಷೇತ್ರ ಕಂಡಿರುವ ಬದಲಾವಣೆಗಳೇ ಅಂತಹವು. ಒಂದೊಂದು ಬದಲಾವಣೆಯೂ ಹಿಂದಿನ ಸಾಧನೆಗಳಿಗಿಂತ ಉತ್ತಮ, ಒಂದೊಂದು ಆವಿಷ್ಕಾರವೂ ತಂತ್ರಜ್ಞಾನ ವಿಕಾಸದ ಹಾದಿಯನ್ನೇ ಬದಲಿಸಿಬಿಡುವಷ್ಟು ಶಕ್ತಿಶಾಲಿ!

ಡಿಗೇರೋಟೈಪಿನ ಲೋಹ ಫಲಕಗಳ ಜಾಗದಲ್ಲಿ ಬಂದ ಕಾಗದದ ಫಿಲ್ಮುಗಳು ಒಂದೇ ಚಿತ್ರವನ್ನು ಎಷ್ಟುಬಾರಿ ಬೇಕಾದರೂ ಮುದ್ರಿಸಲು ಅನುವುಮಾಡಿಕೊಟ್ಟವು. ಜಾರ್ಜ್ ಈಸ್ಟ್‌ಮನ್ ಸ್ಥಾಪಿಸಿದ ಕೊಡಕ್ ಸಂಸ್ಥೆ ಜನಸಾಮಾನ್ಯರ ಕೈಗೂ ಕ್ಯಾಮೆರಾಗಳು ಎಟುಕುವಂತೆ ಮಾಡಿತು. ಫೋಟೋ ತೆಗೆದ ಮೇಲೆ ಅದನ್ನು ನೋಡಲು ಅಷ್ಟೆಲ್ಲ ಕಾಯುವುದು ಏಕೆ ಎನ್ನುವ ಪ್ರಶ್ನೆ ಕ್ಲಿಕ್ಕಿಸಿದ ಚಿತ್ರವನ್ನು ಥಟ್ಟನೆ ಮುದ್ರಿಸುವ ಪೊಲರಾಯ್ಡ್ ತಂತ್ರಜ್ಞಾನವನ್ನು ರೂಪಿಸಿತು.

ಡಿಜಿಟಲ್ ಕ್ಯಾಮೆರಾ ಆವಿಷ್ಕಾರವಾದ ನಂತರವಂತೂ ಛಾಯಾಗ್ರಹಣದ ರೂಪುರೇಷೆಯೇ ಬದಲಾಯಿತು. ಫಿಲ್ಮ್ ರೋಲ್ ಕೊಳ್ಳುವ, ಅದನ್ನು "ತೊಳೆಸಿ" ಪ್ರಿಂಟುಮಾಡಿಸುವ ಜಂಜಾಟವನ್ನೆಲ್ಲ ತಪ್ಪಿಸಿದ್ದು ಸಣ್ಣ ಸಾಧನೆಯೇ? ಮೊಬೈಲುಗಳಲ್ಲಿ ಕ್ಯಾಮೆರಾ ಬಂದಮೇಲಂತೂ ಎಲ್ಲ ಕೈಗಳಿಗೂ ಒಂದೊಂದು ಕ್ಯಾಮೆರಾ ಸಿಕ್ಕಿಬಿಟ್ಟಿದೆ, ಜೊತೆಗೆ ಅಂತರಜಾಲದ ಮೂಲಕ ಪುಂಖಾನುಪುಂಖವಾಗಿ ಚಿತ್ರಗಳನ್ನು ಹಾರಿಬಿಡುವ ರಹದಾರಿಯೂ! ಇನ್ನು ಕಾರಿಗೆ, ಬೈಕಿಗೆ, ಕಡೆಗೆ ಬೈಕಿನ ಹೆಲ್ಮೆಟ್ಟಿಗೆ ಜೋಡಿಸಬಹುದಾದ ಕ್ಯಾಮೆರಾಗಳೂ ಇಲ್ಲದಿಲ್ಲ.


ಅಂದಹಾಗೆ ವೈವಿಧ್ಯವಿರುವುದು ಕ್ಯಾಮೆರಾಗಳಲ್ಲಷ್ಟೇ ಅಲ್ಲ, ಅವುಗಳನ್ನು ಬಳಸಿ ಕ್ಲಿಕ್ಕಿಸಲಾಗುವ ಚಿತ್ರಗಳಲ್ಲೂ ಹೊಸಹೊಸ ಟ್ರೆಂಡುಗಳು ಬಂದಿವೆ. ನಮ್ಮ ಮುಂದಿನ ದೃಶ್ಯವನ್ನು ಕ್ಲಿಕ್ಕಿಸುವ ಬದಲಿಗೆ ನಮ್ಮನ್ನೇ ಕ್ಯಾಮೆರಾದ ಗುರಿಯನ್ನಾಗಿಸಿ 'ಸೆಲ್ಫಿ' ಚಿತ್ರಗಳನ್ನು ಸೆರೆಹಿಡಿಯುವ ಪ್ರವೃತ್ತಿ ಅಭೂತಪೂರ್ವ ಜನಪ್ರಿಯತೆ ಗಳಿಸಿಕೊಂಡಿರುವುದು ಇಂತಹ ಟ್ರೆಂಡುಗಳಿಗೊಂದು ಉದಾಹರಣೆ ಮಾತ್ರ.

ಕ್ಯಾಮೆರಾದಲ್ಲಿ ಚಿತ್ರಗಳು ದಾಖಲಾಗುವ ವಿಧಾನವೂ ನಿಧಾನಕ್ಕೆ ಬದಲಾಗುತ್ತಿದೆ. ಫೋಕಸ್ ಸರಿಯಾಗಲಿಲ್ಲ ಎಂದು ಕೊರಗುವುದನ್ನು ತಪ್ಪಿಸಿ, ಚಿತ್ರ ಕ್ಲಿಕ್ಕಿಸಿದ ನಂತರವೂ ನಮಗೆ ಬೇಕಾದ ಭಾಗವನ್ನು ಫೋಕಸ್ ಮಾಡಲು ನೆರವಾಗುವ ಲೈಟ್ ಫೀಲ್ಡ್ ತಂತ್ರಜ್ಞಾನ ಇದಕ್ಕೊಂದು ಉದಾಹರಣೆ.

ಹಾಗೆಯೇ ಕ್ಲಿಕ್ಕಿಸಿದ ಚಿತ್ರಗಳು ಬಳಕೆಯಾಗುವ ರೀತಿಯಲ್ಲೂ ಬದಲಾವಣೆ ಕಾಣಸಿಗುತ್ತಿದೆ.  ಭಾಷೆ ಗೊತ್ತಿಲ್ಲದ ಊರಿಗೆ ಹೋದಾಗ ಬೋರ್ಡಿನಲ್ಲಿ ಏನು ಬರೆದಿದೆ ಎಂದು ಯಾರನ್ನೋ ಕೇಳುವ ಬದಲು ಅದರ ಫೋಟೋ ತೆಗೆದು ಬೋರ್ಡಿನಲ್ಲಿರುವ ಪಠ್ಯದ ಅನುವಾದವನ್ನು ನಮ್ಮ ಭಾಷೆಯಲ್ಲೇ ಓದಿಕೊಳ್ಳುವುದು ಛಾಯಾಗ್ರಹಣ ತಂತ್ರಜ್ಞಾನದ ಕೊಡುಗೆಯೇ ತಾನೆ!

ಅದೇನೋ ಸರಿ. ಛಾಯಾಗ್ರಹಣ ಎಂಬ ಈ ಅದ್ಭುತ ತಂತ್ರಜ್ಞಾನದ ಹೊಳಪು ಒಂದೂ ಮುಕ್ಕಾಲು ಶತಮಾನ ಕಳೆದರೂ ಮುಕ್ಕಾಗದೆ ಉಳಿದುಕೊಂಡಿದೆ; ತನ್ನ ಅಪಾರ ಸಾಧ್ಯತೆಗಳಿಂದ ಬೆರಗು ಹುಟ್ಟಿಸುವ ಬೆನ್ನಿನಲ್ಲೇ ನಾಳೆ ಹೊಸತೇನು ಬರುತ್ತದೋ ಎಂದು ನಿರೀಕ್ಷಿಸುವಂತೆಯೂ ಮಾಡುತ್ತಿದೆ.

ನಿಜ, ನಾಳೆ ಅದಾವ ಹೊಸ ಕಲ್ಪನೆ ಸಾಕಾರವಾಗಲಿದೆಯೋ, ಒಮ್ಮೆ ಕ್ಲಿಕ್ ಮಾಡಿ ನೋಡೋಣ!

ಆಗಸ್ಟ್ ೧೭, ೨೦೧೪ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

3 ಕಾಮೆಂಟ್‌ಗಳು:

Unknown ಹೇಳಿದರು...

ಒಂದು ಆವಿಷ್ಕಾರ ಸಮಾಜಕ್ಕೆ ನೀಡಿದ ಕೊಡುಗೆ, ಅದು ಬೆಳೆದು ಬಂದ ಹಾದಿ, ಕಂಡಂತಹ ವಿವಿಧ ಬದಲಾವಣೆಗಳನ್ನು ಅಚ್ಚುಕಟ್ಟಾಗಿ ಸಾಮಾನ್ಯರುಗೂ ಅರ್ಥವಾಗುವಂಗುವಂತೆ ಬರೆದಿರುವ ನಿಮ್ಮ ಲೇಖನ ಓದಿ ಸಂತೋಷವಾಯಿತು.


ಧನ್ಯವಾದಗಳು ಸರ್.

Srinidhi ಹೇಳಿದರು...

ಧನ್ಯವಾದಗಳು. ತಮ್ಮ ಪ್ರತಿಕ್ರಿಯೆ ಓದಿ ಖುಷಿಯಾಯಿತು. ಬಿಡುವಾದಾಗಲೆಲ್ಲ ಇಜ್ಞಾನ ಡಾಟ್ ಕಾಮ್‌ನತ್ತ ಬಂದುಹೋಗಿ!

Unknown ಹೇಳಿದರು...

ಶಿವು ಹಿರೇಮಠ
ಮಹಾಪೌರರು
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

ಅತ್ಯ್ತುತ್ತಮ ಮಾಹಿತೆಗಾಗಿ ಧನ್ಯವಾದಗಳು,

badge