ಗುರುವಾರ, ಆಗಸ್ಟ್ 21, 2014

ಡಾ. ಪಾಲಹಳ್ಳಿ ವಿಶ್ವನಾಥ್ ಹೇಳುತ್ತಾರೆ... "ವಿಜ್ಞಾನ ಸಾಮಾನ್ಯ ಜನತೆಯನ್ನು ಮುಟ್ಟದೇ ಹೋದರೆ ಸಮಾಜದಲ್ಲಿ ಬದಲಾವಣೆಗಳು ಬರುವುದಿಲ್ಲ"

ವಿಜ್ಞಾನಿಗಳು ಸಾಮಾನ್ಯ ಜನರಿಗೋಸ್ಕರ ಬರೆಯುವುದು ಅಪರೂಪ ಎಂಬ ಆಪಾದನೆಗೆ ಅಪವಾದದಂತೆ ನಮಗೆ ಸಿಗುವವರು ಬಹಳ ಕಡಿಮೆ ಜನ. ಅಂತಹವರಲ್ಲೊಬ್ಬರು ಡಾ. ಪಾಲಹಳ್ಳಿ ವಿಶ್ವನಾಥ್. ಮೈಸೂರು ಮತ್ತು ಮಿಶಿಗನ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನಮಾಡಿ ಮುಂಬಯಿಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಿ. ಐ. ಎಫ್. ಆರ್) ಮತ್ತು ಬೆಂಗಳೂರಿನ ಭಾರತೀಯ ಜ್ಯೋತಿರ್ವಿಜ್ಞಾನ ಸಂಸ್ಥೆಯಲ್ಲಿ (ಐ. ಐ. ಎ)  ಸೇವೆಸಲ್ಲಿಸಿರುವ ಡಾ. ವಿಶ್ವನಾಥ್ ಭಾರತ ಮತ್ತು ಅಮೆರಿಕದಲ್ಲಿ ಹಲವಾರು ಭೌತವಿಜ್ಞಾನ ಮತ್ತು ಖಗೋಳ ವಿಜ್ಞಾನದ ಪ್ರಯೋಗಗಳಲ್ಲಿ ಭಾಗಿಯಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಕನ್ನಡದಲ್ಲಿ ವಿಜ್ಞಾನ ಬರವಣಿಗೆಯಲ್ಲಿ ತೊಡಗಿರುವ ಅವರ ಲೇಖನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಭೂಮಿಯಿಂದ ಬಾನಿನತ್ತ', 'ಕಣ ಕಣ ದೇವಕಣ', 'ಖಗೋಳ ವಿಜ್ಞಾನದ ಕಥೆ' ಮೊದಲಾದವು ಅವರ ಪುಸ್ತಕಗಳು. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಸುಮಾರು ೫೦ ವರ್ಷಗಳಷ್ಟು ಸಮಯ ಭೌತ ಮತ್ತು ಖಗೋಳವಿಜ್ಞಾನ ಕ್ಷೇತ್ರದಲ್ಲಿ ಸಂಶೋಧಕನಾಗಿ ಕೆಲಸಮಾಡಿದ್ದೇನೆ. ಮೂಲಭೂತ ವಿಜ್ಞಾನ ಕ್ಷೇತ್ರಗಳಿಗೆ ಹೆಚ್ಚು ವಿದ್ಯಾರ್ಥಿಗಳು ಬರದಿರುವ ಅಂಶವನ್ನು ಗಮನಿಸಿದಾಗ ನನಗೆ ವಿಜ್ಞಾನ ಸಂವಹನದ ಅಗತ್ಯ ಕಂಡುಬಂತು. ಯಾವ ಭಾಷೆಯಲ್ಲಿ ಬರೆಯುವುದು ಎನ್ನುವುದು ಮುಂದಿನ ಪ್ರಶ್ನೆಯಾಯಿತು. ಹೇಗೂ ದೇಶದ ಮಹಾನಗರಗಳಲ್ಲಿ ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನ , ಮ್ಯಾನೇಜ್‌ಮೆಂಟ್ ಇತ್ಯಾದಿ ಕ್ಷೇತ್ರಗಳಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದು, ಮೂಲವಿಜ್ಞಾನವನ್ನು ನಿರ್ಲಕ್ಷಿಸುತ್ತಿದ್ದಾರೆ. ಹಾಗೊಮ್ಮೆ ಆಸಕ್ತಿ ಇದ್ದರೂ ಅವರಿಗೆ ಇಂಗ್ಲಿಷಿನಲ್ಲಿ ಪರಿಣಿತಿಯಿದ್ದು ಆ ಭಾಷೆಯಲ್ಲಿ ಅನೇಕ ಪುಸ್ತಕಗಳಿರುವುದರಿಂದ ಯಾವ ತೊಂದರೆಯೂ ಇಲ್ಲ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ನನಗೆ ಇಂಗ್ಲಿಷಿನಲ್ಲಿ ಬರೆಯುವ ಅವಶ್ಯಕತೆ ಕಂಡುಬರಲಿಲ್ಲ.  ಆದರೆ ಗ್ರಾಮೀಣ ಪ್ರದೇಶಗಳು ಮತ್ತು ಚಿಕ್ಕ ಊರುಗಳ ವಿದ್ಯಾರ್ಥಿಗಳು ಪ್ರಾದೇಶಿಕ ಭಾಷೆಯಲ್ಲೇ‌ ಹೆಚ್ಚು ಸಂಪರ್ಕ ಇಟ್ಟುಕೊಂಡಿದ್ದಾರೆ. ಈ ವಿದ್ಯಾರ್ಥಿಗಳು ತಮ್ಮ ಭಾಷೆಯಲ್ಲೇ ಓದಲು ವಿಜ್ಞಾನದ ಹೆಚ್ಚು ಪುಸ್ತಕಗಳಿಲ್ಲ. ಆದ್ದರಿಂದ ಪ್ರಾದೇಶಿಕ ಭಾಷೆಯಲ್ಲಿ ವಿಜ್ಞಾನ ಸಂವಹನೆಯ ಅವಶ್ಯಕತೆ ಬಹಳವಿದೆ.
ಕನ್ನಡದ ವಿದ್ಯಾರ್ಥಿಗಳಿಗೆ ವಿಜ್ಞಾನದ ಲೇಖನ ಮತ್ತು ಪುಸ್ತಕಗಳನ್ನು ಓದುವ ಅವಕಾಶ ಸಿಕ್ಕರೆ ಅವರು ಮೂಲವಿಜ್ಞಾನದ ಕಡೆ ಒಲವು ತೋರಿಸುವ ಸಾಧ್ಯತೆ ಇದೆ. ಹಾಗಾಗಿಯೇ ನಾನು ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದೆ.

ಸಾಮಾನ್ಯ ಜನತೆಯಲ್ಲಿ ವೈಜ್ಞಾನಿಕ ಮನೋಭಾವ ಇನ್ನೂ ವ್ಯಾಪಕವಾಗಿ ಬೆಳೆದಿಲ್ಲ. ಅವರಲ್ಲಿ ವಿಜ್ಞಾನದ ಅರಿವು ಇಲ್ಲದಿರುವುದು ಇದಕ್ಕೊಂದು ಪ್ರಮುಖ ಕಾರಣ. ಸಾಮಾನ್ಯ ಜನರು ಹೆಚ್ಚಾಗಿ ತಮ್ಮ ಭಾಷೆಯಲ್ಲೇ ಓದಲು ಇಷ್ಟಪಡುವುದರಿಂದ ಅವರನ್ನು ಪ್ರಾದೇಶಿಕ ಭಾಷೆಗಳ ಮೂಲಕವೇ ಸಂಪರ್ಕಿಸುವುದು ಒಳ್ಳೆಯದು. ಸಾಮಾನ್ಯ ಜನತೆಯಲ್ಲಿ ವಿಜ್ಞಾನದ ಅರಿವು ಹೆಚ್ಚಿದರೆ ಸಮಾಜದಲ್ಲಿರುವ ಮೂಢನಂಬಿಕೆಗಳು ಮತ್ತು ಅಂಧಶ್ರದ್ಧೆ ಸ್ವಲ್ಪವಾದರೂ ಹೋಗಬಹುದು ಎನ್ನಿಸಿದ್ದು ನಾನು ಈ ಕ್ಷೇತ್ರದತ್ತ ಬರಲು ಇನ್ನೊಂದು ಕಾರಣ.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ನನಗೆ ಕನ್ನಡದಲ್ಲಿ ಹೆಚ್ಚು ಲೇಖಕರು ಗೊತ್ತಿಲ್ಲ. ಹಿಂದಿನವರಲ್ಲಿ ಆರ್.ಎಲ್. ನರಸಿಂಹಯ್ಯನವರ ಕೆಲವು ಲೇಖನಗಳು ಇಷ್ಟವಾದವು. ಈಗಿನವರಲ್ಲಿ ಡಾ ಬಿ. ಎಸ್. ಶೈಲಜಾ, ಶ್ರೀ ಟಿ. ಆರ್. ಅನಂತರಾಮು, ಸುಧೀಂದ್ರ ಹಾಲ್ದೊಡ್ಡೇರಿ, ನಾಗೇಶ ಹೆಗಡೆ ಮೊದಲಾದ ಲೇಖಕರ ಬರಹಗಳನ್ನು ಇಷ್ಟಪಡುತ್ತೇನೆ.

ನಿಮ್ಮ (ಹಾಗೂ ಇತರ ಸಂವಹನಕಾರರ) ಕೆಲಸವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ? 
ನನ್ನ ಜೀವನದ ಹೆಚ್ಚು ಭಾಗವನ್ನು ಕರ್ನಾಟಕದ ಹೊರಗೆ ಕಳೆದಿರುವುದರಿಂದ ನನಗೆ ಇಲ್ಲಿ ಹೆಚ್ಚು ಜನಸಂಪರ್ಕವಿಲ್ಲ. ಆದ್ದರಿಂದ ಇದಕ್ಕೆ ಸರಿಯಾದ ಉತ್ತರ ಕೊಡಲು ಆಗದು. ಹಲವರು ನನ್ನ ಲೇಖನ - ಪುಸ್ತಕಗಳನ್ನು ಮೆಚ್ಚಿಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ ಎಂದಷ್ಟೇ ಹೇಳಬಲ್ಲೆ.

ಒಂದೆರಡು ಪತ್ರಿಕೆಗಳನ್ನು ಬಿಟ್ಟರೆ, ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನ್ನಡದ ವೈಜ್ಞಾನಿಕ ಬರಹಗಳಿಗೆ ಅಷ್ಟು ಉತ್ತೇಜನವಿಲ್ಲ. ಅದು ಬದಲಾಗಬೇಕು. ಬರಹಗಾರರೂ ಅಷ್ಟೆ, ವಿಜ್ಞಾನದಲ್ಲಿ ಆಸಕ್ತಿ ಇದ್ದು ಬರೆಯುವ ಇಚ್ಛೆ ಇರುವವರು ಹೆಚ್ಚುಹೆಚ್ಚು ಬರೆಯಬೇಕು. ಆದರೆ ವಿಜ್ಞಾನದ ವಿಷಯಗಳನ್ನು ಸ್ವತಃ ಸರಿಯಾಗಿ ಅರ್ಥಮಾಡಿಕೊಳ್ಳದೆ ಬರೆದರೆ ಓದುಗರಿಗೆ ಅನ್ಯಾಯವಾಗುತ್ತದೆ.

ಈ ಕ್ಷೇತ್ರದಲ್ಲಿ ನೀವು ಮಾಡಬಯಸುವ ಮುಂದಿನ ಕೆಲಸ ಯಾವುದು?
ಈ ಸಂವಹನ ಕೆಲಸವನ್ನು ಮುಂದುವರೆಸಲು ಬಯಸುತ್ತೇನೆ. ವಿಜ್ಞಾನ ಸಾಮಾನ್ಯ ಜನತೆಯನ್ನು ಮುಟ್ಟದೇ ಹೋದರೆ ಸಮಾಜದಲ್ಲಿ ಬದಲಾವಣೆಗಳು ಬರುವುದಿಲ್ಲ.

ವಿಜ್ಞಾನ ಸಂವಹನ ಹೊರತುಪಡಿಸಿ ನಿಮ್ಮ ಇತರ ಆಸಕ್ತಿಗಳು ಯಾವುವು?
ನನಗೆ ಇತಿಹಾಸ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಇದೆ. ಇಂಗ್ಲಿಷಿನಲ್ಲಿ ಸಣ್ಣಪುಟ್ಟ ಕಥೆಗಳನ್ನು ಬರೆದಿದ್ದೇನೆ. ಕನ್ನಡದಲ್ಲಿ ಅನೇಕ ಕ್ಷೇತ್ರಗಳ ಐತಿಹಾಸಿಕ ವ್ಯಕ್ತಿಗಳ ಬಗ್ಗೆ ಬರೆಯಬೇಕು ಎಂಬ ಆಸೆ ಇದೆ.

ಡಾ. ವಿಶ್ವನಾಥರ ಲೇಖನಗಳನ್ನು ಅವರ ಬ್ಲಾಗಿನಲ್ಲಿ ಓದಬಹುದು

ಡಾ. ವಿಶ್ವನಾಥ್ ಬರೆದ 'ಆಕಾಶದಲ್ಲೊಂದು ಮನೆ' ಕೃತಿಯ ಪರಿಚಯ ಇಲ್ಲಿದೆ
ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಇಜ್ಞಾನ ಡಾಟ್ ಕಾಮ್ ಪ್ರಾರಂಭಿಸಿರುವ ಸಂದರ್ಶನ ಸರಣಿಯೇ 'ಪೆನ್ ಸ್ಟಾಂಡ್'. ಈ ಸರಣಿಯ ಬಗ್ಗೆ ನಿಮ್ಮ ಅನಿಸಿಕೆ - ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ!
ಪೆನ್‌ ಸ್ಟಾಂಡ್ ಸಂದರ್ಶನ ಸರಣಿಯಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳೂ ಸಂದರ್ಶಿತರ ವೈಯಕ್ತಿಕ ಅನಿಸಿಕೆಗಳು.  

3 ಕಾಮೆಂಟ್‌ಗಳು:

Holalkere rangarao laxmivenkatesh ಹೇಳಿದರು...

ಇದು ಸರಿ. ಕೊನೇಪಕ್ಷ ವಿದ್ಯಾರ್ಥಿಗಳನ್ನು ಚಿಂತಕರನ್ನು, ಮತ್ತು ಶಿಕ್ಷಕರನ್ನು ಮುಟ್ಟುವುದು ಅನಿವಾರ್ಯ...

RADHAKRISHNA ಹೇಳಿದರು...

ಡಾ.ಪಾಲಹಳ್ಳಿ ವಿಶ್ವನಾಥ್ ತೀರ ಇತ್ತೀಚೆಗೆ ಕನ್ನಡದಲ್ಲಿ ಶುದ್ಧ ವಿಜ್ಞಾನ ಲೇಖನಗಳನ್ನು ಬರೆಯಲು ಹೊರಟು ಕನ್ನಡ ವಿಜ್ಞಾನ ಸಾಹಿತ್ಯವನ್ನು ಇನ್ನಷ್ಟು ಸಮೃದ್ಧಗೊಳಿಸಲು ಹೊರಟ ಹಿರಿಯರು. ಸ್ವತ: ಖಗೋಳ ಮತ್ತು ನ್ಯೂಕ್ಲಿಯರ್ ವಿಜ್ಞಾನಿಗಳೂ ಮತ್ತು ಪ್ರಾಧ್ಯಾಪಕರಾಗಿದ್ದ ಶ್ರೀವಿಶ್ವನಾಥರ ಬರಹಗಳಲ್ಲಿ ಉತ್ಕೃಷ್ಟ ವಿಜ್ಞಾನ ಬರಹಗಳ
ಆನುಷಂಗಿಕ ಲಕ್ಷಣಗಳಾದ ಪರಿಕಲ್ಪನಾತ್ಮಕ ಸ್ಪಷ್ಟತೆ ಮತ್ತು ಸುಂದರ ನಿರೂಪಣೆಯನ್ನು ಗಮನಿಸಬಹುದು. ಈ ಹಿರಿಯರು ನಮಗೆಲ್ಲ ಸ್ಪೂರ್ತಿ.

palahali ಹೇಳಿದರು...

ರಾಧಾಕೃಷ್ಣ ಅವರಿಗೆ

ನನ್ನ ಬರಹಗಳು ಇಷ್ಟವಾದದ್ದಕ್ಕೆ ಧನ್ಯವಾದಗಳು. ನಾನು ಬರೆಯುವುದು ಓದುಗರಿಗೆ ಅರ್ಥವಾದರೆ ಸ೦ತೋಷವಾಗುತ್ತದೆ.

badge