ಶುಕ್ರವಾರ, ಆಗಸ್ಟ್ 8, 2014

ಡಾ. ಸೋಮೇಶ್ವರ ಹೇಳುತ್ತಾರೆ... "ಬದುಕ ಬದಲಿಸಬಹುದಾದ ಅರಿವನ್ನು ಹಂಚುವುದು ನಾಗರಿಕನೊಬ್ಬನ ಕರ್ತವ್ಯ"

ದೂರದರ್ಶನ ಚಂದನ ವಾಹಿನಿಯ ಜನಪ್ರಿಯ ಕ್ವಿಜ್ ಕಾರ್ಯಕ್ರಮ 'ಥಟ್ ಅಂತ ಹೇಳಿ!' ಮೂಲಕ ಜನಪ್ರಿಯರಾಗಿರುವ ಡಾ. ನಾ. ಸೋಮೇಶ್ವರ ಕನ್ನಡದ ಹೆಸರಾಂತ ವಿಜ್ಞಾನ ಸಂವಹನಕಾರರಲ್ಲೊಬ್ಬರು. ಆರೋಗ್ಯ ಸಂಬಂಧಿ ಕೃತಿಗಳ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಹಲವು ಜನಪ್ರಿಯ ಪುಸ್ತಕಗಳನ್ನೂ ರಚಿಸಿರುವ ಸೋಮೇಶ್ವರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ, ಡಾ. ಪಿ. ಎಸ್. ಶಂಕರ್ ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. 'ಥಟ್ ಅಂತ ಹೇಳಿ!' ಕಾರ್ಯಕ್ರಮದ ೨೫೦೦ಕ್ಕೂ ಹೆಚ್ಚು ಕಂತುಗಳನ್ನು ನಡೆಸಿಕೊಟ್ಟಿರುವ ಅಪರೂಪದ ದಾಖಲೆಯೂ ಅವರ ಹೆಸರಿನಲ್ಲಿದೆ. ಈ ದಾಖಲೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಸ್ಥಾನಪಡೆದಿರುವುದು ವಿಶೇಷ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...

ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಸಮಾಜದ ಋಣ ಸಂದಾಯ ಮಾಡಬೇಕೆನ್ನುವ ಬಯಕೆ, ಹಾಗೂ ಕುತೂಹಲಕರವಾದುದನ್ನು ಹಂಚಿಕೊಳ್ಳುವ ಮನೋಭಾವ - ಇವು ನಾನು ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ಬರಲು ಕಾರಣವಾದ ಅಂಶಗಳು ಎನ್ನಬಹುದು. ನನ್ನ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ನೋಡಿದರೂ ಸಾರ್ವಜನಿಕ ಆರೋಗ್ಯ ಶಿಕ್ಷಣ ವೈದ್ಯಕೀಯ ನೀತಿ ಸಂಹಿತೆಯ ಒಂದು ಭಾಗ. ಇದರ ಜೊತೆಗೆ ಬದುಕ ಬದಲಿಸಬಹುದಾದ ಅರಿವನ್ನು ಹಂಚುವುದು ನಾಗರಿಕನೊಬ್ಬನ ಕರ್ತವ್ಯ ಎನ್ನುವ ಅನಿಸಿಕೆ, ಹಾಗೂ ಸಾರ್ವಜನಿಕರಲ್ಲಿ ವಿಶಿಷ್ಠ ಲೇಖಕ ಎಂದು ಗುರುತಿಸಿಕೊಳ್ಳುವ ಬಯಕೆ ಕೂಡ ನನ್ನನ್ನು ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ಕರೆತಂದಿದೆ.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಡಾ. ಶಿವರಾಂ (ರಾಶಿ) ಹಾಗೂ ಡಾ. ಬಿ.ಜಿ.ಎಲ್. ಸ್ವಾಮಿ


ನಿಮ್ಮ (ಹಾಗೂ ಇತರ ಸಂವಹನಕಾರರ) ಕೆಲಸವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ?
ವಿಜ್ಞಾನ ಸಂವಹನಕಾರರ ಕೆಲಸದ ಬಗ್ಗೆ ನನಗೆ ಸಮಾಜದಲ್ಲಿ ಅಂತಹ ಉತ್ಸಾಹವೇನೂ ಕಾಣುತ್ತಿಲ್ಲ. "ವಿಜ್ಞಾನ ಹಾಗೂ ವೈದ್ಯಕೀಯ ಬರಹಗಳು ವಿದ್ಯಾರ್ಥಿಗಳಿಗೆ ಮಾತ್ರ ಅಗತ್ಯ. ಹೆಚ್ಚೆಂದರೆ ವಿಜ್ಞಾನ ವಿದ್ಯಾರ್ಥಿಗಳು ಓದಬಹುದು. ತನ್ನ ದೈನಂದಿನ ಬದುಕಿನಲ್ಲಿ ಶ್ರೀಸಾಮಾನ್ಯ ವಿಜ್ಞಾನ-ಆರೋಗ್ಯ ಮಾಹಿತಿಯನ್ನು ತಿಳಿಯಬೇಕಾದ ಅಗತ್ಯವಿಲ್ಲ" ಎನ್ನುವ ಧೋರಣೆ ಬಹಳ ಜನರಲ್ಲಿದೆ. ಆರೋಗ್ಯದ ವಿಷಯಕ್ಕೆ ಬಂದರಂತೂ ಅನಾರೋಗ್ಯ ತಮ್ಮ ಕಾಲ ಬುಡಕ್ಕೆ ಬಂದಾಗಲಷ್ಟೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವ ಮನೋಭಾವ ಹೆಚ್ಚಿನವರದ್ದು. ಹೀಗಾಗಿ "ಬರಹ-ಭಾಷಣ ಸಮಯವನ್ನು ವ್ಯರ್ಥ ಮಾಡುವ ಕೆಲಸ" ಎಂದು ಬಹು ಜನರ ಅನಿಸಿಕೆ. ಇದೇ ಅವಧಿಯಲ್ಲಿ ಪ್ರಾಕ್ಟೀಸ್ ಮಾಡಿದ್ದರೆ ಎಷ್ಟು ಹಣವನ್ನು ಸಂಪಾದಿಸಬಹುದಿತ್ತು ಎಂಬ ಕನಿಕರ, ತಿಳಿವಳಿಕೆಯಿಲ್ಲದ ದಡ್ಡ ಎನ್ನುವ ಬಿರುದು ಬಹಳಷ್ಟು ಸಲ ದೊರೆತಿದೆ!
ಓದುಗರಿಗೆ ಏನು ಬೇಕು, ಎಷ್ಟು ಬೇಕು ಹಾಗೂ ಅದನ್ನು ಹೇಗೆ ನೀಡಬೇಕು ಎನ್ನುವ ಕಲೆ ಇನ್ನೂ ನಮ್ಮ ಬಹಳಷ್ಟು ಲೇಖಕರಿಗೆ ಕರಗತವಾಗದಿರುವುದು, ಹಾಗೂ ಅಂತಹ ಲೇಖಕರ ಅನಾಕರ್ಷಕ ಬರಹ ಶ್ರೀಸಾಮಾನ್ಯನನ್ನು ವಿಜ್ಞಾನದಿಂದ ದೂರ ಇಟ್ಟಿದೆ ಎನ್ನುವುದು ನನ್ನ ಖಚಿತ ಅಭಿಪ್ರಾಯ.
ಈ ಕ್ಷೇತ್ರದಲ್ಲಿ ನೀವು ಮಾಡಬಯಸುವ ಮುಂದಿನ ಕೆಲಸ ಯಾವುದು?
ಇಂಗ್ಲಿಷ್ - ಕನ್ನಡ ವೈದ್ಯಕೀಯ ನಿಘಂಟು, ವೈದ್ಯ ವಿಶ್ವಕೋಶ, ಎಲ್ಲ ವೈದ್ಯಕೀಯ ಪದ್ಧತಿಗಳ ಒಳ್ಳೆಯ ಅಂಶಗಳನ್ನು ಕ್ರಮಬದ್ಧವಾಗಿ ಹಾಗೂ ಸಮಗ್ರವಾಗಿ ಸಂಗ್ರಹಿಸುವುದು - ಹೀಗೆ ನಾನು ಮಾಡಬಯಸುವ ಕೆಲಸಗಳು ಬಹಳಷ್ಟಿವೆ.

ವಿಜ್ಞಾನ ಸಂವಹನ ಹೊರತುಪಡಿಸಿ ನಿಮ್ಮ ಇತರ ಆಸಕ್ತಿಗಳು ಯಾವುವು?
ಕ್ವಿಜಿಂಗ್, ಟ್ರೆಕಿಂಗ್ ಮತ್ತು ರೀಡಿಂಗ್!

ಡಾ. ನಾ. ಸೋಮೇಶ್ವರ ಅವರ ಪುಸ್ತಕಗಳನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಡಾ. ನಾ. ಸೋಮೇಶ್ವರ ಅವರನ್ನು ಕುರಿತ ವಿಕಿಪೀಡಿಯ ಪುಟ ಇಲ್ಲಿದೆ
ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಇಜ್ಞಾನ ಡಾಟ್ ಕಾಮ್ ಪ್ರಾರಂಭಿಸಿರುವ ಸಂದರ್ಶನ ಸರಣಿಯೇ 'ಪೆನ್ ಸ್ಟಾಂಡ್'. ಈ ಸರಣಿಯ ಬಗ್ಗೆ ನಿಮ್ಮ ಅನಿಸಿಕೆ - ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ!
ಪೆನ್‌ ಸ್ಟಾಂಡ್ ಸಂದರ್ಶನ ಸರಣಿಯಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳೂ ಸಂದರ್ಶಿತರ ವೈಯಕ್ತಿಕ ಅನಿಸಿಕೆಗಳು.  

2 ಕಾಮೆಂಟ್‌ಗಳು:

@spn3187 ಕನ್ನಡಿಗ ಶಿವಕುಮಾರ ನೇಗಿಮನಿ ಹೇಳಿದರು...

ಉತ್ತಮ ಸಂಹನಕಾರ
..
http://spn3187.blogspot.in

Holalkere rangarao laxmivenkatesh ಹೇಳಿದರು...

ಇದು ಅತಿ ಪ್ರಮುಖ ಪ್ರಸಾರಾಂಗವಾಗಿ ಕಾರ್ಯ ನಿರ್ವಹಿಸುತ್ತಿದೆ.

badge