ಭಾನುವಾರ, ಆಗಸ್ಟ್ 3, 2014

ಡಾ. ಪವನಜ ಹೇಳುತ್ತಾರೆ... "ನನಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿದ್ದೇ ಶಿವರಾಮ ಕಾರಂತರ ಪುಸ್ತಕಗಳಿಂದ"

ಕನ್ನಡ ಮತ್ತು ಕಂಪ್ಯೂಟರ್ ಎಂದಾಕ್ಷಣ ನಮಗೆ ನೆನಪಿಗೆ ಬರುವವರಲ್ಲಿ ಡಾ. ಯು. ಬಿ. ಪವನಜರದು ಪ್ರಮುಖ ಹೆಸರು. ವೈಜ್ಞಾನಿಕ ಸಂಶೋಧನೆ, ತಂತ್ರಾಂಶ ತಯಾರಿಕೆ, ತಂತ್ರಜ್ಞಾನ ಸಂವಹನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪುಮೂಡಿಸಿರುವ ಪವನಜರು ಪ್ರಸ್ತುತ ಬೆಂಗಳೂರಿನ ಸೆಂಟರ್ ಫಾರ್ ಇಂಟರ್‌ನೆಟ್ ಆಂಡ್ ಸೊಸೈಟಿಯಲ್ಲಿ ಕೆಲಸಮಾಡುತ್ತಿದ್ದಾರೆ. ಕರ್ನಾಟಕ ಸರಕಾರದ ತಂತ್ರಾಂಶ ಸಮಿತಿಯ ಸದಸ್ಯರೂ ಆಗಿರುವ ಡಾ. ಪವನಜ ತಮ್ಮ ಅಂಕಣಗಳಿಂದ ಜನಪ್ರಿಯರು. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ 'eಳೆ', 'ಒಂದು ಸೊನ್ನೆ', 'ಗಣಕಿಂಡಿ' ಮುಂತಾದ ಅಂಕಣಗಳಲ್ಲದೆ ಪ್ರಸ್ತುತ 'ಗ್ಯಾಜೆಟ್ ಲೋಕ' ಅಂಕಣ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...

ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗ ಡಾ| ಶಿವರಾಮ ಕಾರಂತರ ವಿಜ್ಞಾನ ಪ್ರಪಂಚದ ನಾಲ್ಕೂ ಸಂಪುಟಗಳನ್ನು ಓದಿದ್ದೆ. ನನಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿದ್ದೇ ಆ ಪುಸ್ತಕಗಳನ್ನು ಓದಿದ್ದರಿಂದ. ಅನಂತರ ಕಸ್ತೂರಿಯಲ್ಲಿ ಪಾವೆಂ ಅವರ ವಿಶೇಷ ಆಸಕ್ತಿಯಿಂದ ಬರುತ್ತಿದ್ದ ವಿಜ್ಞಾನದ ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನೂ ಓದುತ್ತಿದ್ದೆ. ರಾಜಶೇಖರ ಭೂಸನೂರಮಠ ಅವರು ಬರೆಯುತ್ತಿದ್ದ ವೈಜ್ಞಾನಿಕ ಕಥೆಗಳೂ ನನ್ನ ವಿಜ್ಞಾನದ ಆಸಕ್ತಿಗೆ ನೀರೆರೆದವು. ವಿಜ್ಞಾನವನ್ನು ಓದಿ ಅದರಲ್ಲಿ ಸ್ನಾತಕೋತ್ತರ ಪದವಿ ಪಡೆದು ಮುಂಬಯಿಯ ಭಾಭಾ ಪರಮಾಣು ಸಂಶೋಧನಾ ಕೇಂದ್ರವನ್ನು ವಿಜ್ಞಾನಿಯಾಗಿ ಸೇರಲು - ಮತ್ತು ವಿಜ್ಞಾನ ಸಂವಹನದಲ್ಲಿ ತೊಡಗಿಕೊಳ್ಳಲು ಕೂಡ - ಇವೆಲ್ಲ ಪೂರಕವಾದವು.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಶಿವರಾಮ ಕಾರಂತ, ಬಿ.ಜಿ.ಎಲ್. ಸ್ವಾಮಿ, ನಾಗೇಶ ಹೆಗಡೆ, ಅನುಪಮಾ ನಿರಂಜನ, ಸಿ.ಆರ್. ಚಂದ್ರಶೇಖರ, ಟಿ. ಆರ್. ಅನಂತರಾಮು - ಈ ಪಟ್ಟಿ ಸಾಕಷ್ಟು ದೊಡ್ಡದೇ!


ನಿಮ್ಮ (ಹಾಗೂ ಇತರ ಸಂವಹನಕಾರರ) ಕೆಲಸವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ? 
ಮಾಹಿತಿಯನ್ನು ಬಯಸುವವರು ಈ ಕೆಲಸವನ್ನು ಮೆಚ್ಚುತ್ತಿದ್ದಾರೆ, ಸ್ವಾಗತಿಸುತ್ತಿದ್ದಾರೆ, ಲೇಖನಗಳನ್ನು ಓದಿ ಅದರಲ್ಲಿ ನೀಡಿದ ಮಾಹಿತಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಈ “ಸಾಹಿತಿ”ಗಳ ಬಳಗ ಮಾತ್ರ ತಾವು ಬರೆಯುವ “ಸೃಜನಶೀಲ” ಸಾಹಿತ್ಯ ಮಾತ್ರವೇ ಸಾಹಿತ್ಯ ಎಂದು ನಂಬಿದ್ದಾರೆ.


ಈ ಕ್ಷೇತ್ರದಲ್ಲಿ ನೀವು ಮಾಡಬಯಸುವ ಮುಂದಿನ ಕೆಲಸ ಯಾವುದು?
ಮಾಡಬಯಸುವ ಕೆಲಸಗಳು ಹಲವಾರಿವೆ. ಆದರೆ ಇವೆಲ್ಲ ಇನ್ನೂ ಜನರಿಗೆ ಬೇಕೇ ಎಂಬ ಅನುಮಾನ ಬರತೊಡಗಿದೆ. ಇದಕ್ಕೆ ಮುಖ್ಯ ಕಾರಣ ಈಚೆಗೆ ಅತಿಯಾಗಿರುವ ಇಂಗ್ಲಿಷಿನ ಪಿತ್ತ. ಹಳ್ಳಿಗಳಲ್ಲಿ ಮಾತ್ರ ಈಗ ಕನ್ನಡ ಉಳಿದಿದೆ. ಅಲ್ಲಿಯ ಮಕ್ಕಳು ಮಾತ್ರ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಹೋಗುತ್ತಾರೆ. ಉಳಿದಂತೆ ಸಣ್ಣ ಪಟ್ಟಣಗಳಲ್ಲೂ ಮಕ್ಕಳು ಇಂಗ್ಲಿಷ್ ಮಾಧ್ಯಮದತ್ತ ಹೊರಳಿದ್ದಾರೆ. ಅವರಿಗೆ ಕನ್ನಡದಲ್ಲಿ ವಿಜ್ಞಾನವನ್ನು ಹೇಳುವ ಅಗತ್ಯವಿಲ್ಲ. ಈ ಬೆಳವಣಿಗೆಗೆ ಮುಖ್ಯ ಕಾರಣ ಮತ್ತೆ ನಮ್ಮ ಸಾಹಿತಿಗಳು. ಅವರು ಮಾಹಿತಿ ಸಾಹಿತ್ಯವನ್ನು ಸೃಷ್ಟಿ ಮಾಡಲೇ ಇಲ್ಲ. ಮಾಹಿತಿ ಸಾಹಿತ್ಯವನ್ನು ಸೃಷ್ಟಿ ಮಾಡುವವರನ್ನು ಗುರುತಿಸುವುದು, ಅವರ ಕೆಲಸಗಳಿಗೆ ಸ್ವಲ್ಪ ಪ್ರೋತ್ಸಾಹ ನೀಡುವುದು ಮೊದಲಾದ ಕೆಲಸಗಳನ್ನೂ ಮಾಡಲಿಲ್ಲ. ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ಅತ್ಯಗತ್ಯವಾದ ಮಾಹಿತಿ ಸಾಹಿತ್ಯದ ಕೊರತೆ ಇದೆ. ಇದರಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಕಡೆ ತಳ್ಳುತ್ತಿದ್ದಾರೆ. ಹೀಗಾಗಿ ಇತ್ತೀಚಿಗೆ “ಅತ್ತ ಕನ್ನಡವೂ ಬಾರದ, ಸರಿಯಾಗಿ ಇಂಗ್ಲಿಷೂ ಬಾರದ” ಒಂದು ಎಡಬಿಡಂಗಿ ಜನಾಂಗ ಸೃಷ್ಟಿಯಾಗಿದೆ.

ವಿಜ್ಞಾನ ಸಂವಹನ ಹೊರತುಪಡಿಸಿ ನಿಮ್ಮ ಇತರ ಆಸಕ್ತಿಗಳು ಯಾವುವು?
ಪುಸ್ತಕ ಓದುವುದು, ಛಾಯಾಗ್ರಹಣ, ಕನ್ನಡ ಭಾವಗೀತೆಗಳು, ಸಂಗೀತ, ಕನ್ನಡ ನಾಟಕ, ಅತ್ಯುತ್ತಮ ಸಿನಿಮಾ, ಮಾಹಿತಿ ತಂತ್ರಜ್ಞಾನ, ಗ್ಯಾಜೆಟ್,...

ಡಾ. ಯು. ಬಿ. ಪವನಜ ಅವರನ್ನು ಕುರಿತ ವಿಕಿಪೀಡಿಯ ಪುಟ ಇಲ್ಲಿದೆ
ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಇಜ್ಞಾನ ಡಾಟ್ ಕಾಮ್ ಪ್ರಾರಂಭಿಸಿರುವ ಸಂದರ್ಶನ ಸರಣಿಯೇ 'ಪೆನ್ ಸ್ಟಾಂಡ್'. ಈ ಸರಣಿಯ ಬಗ್ಗೆ ನಿಮ್ಮ ಅನಿಸಿಕೆ - ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ!
ಪೆನ್‌ ಸ್ಟಾಂಡ್ ಸಂದರ್ಶನ ಸರಣಿಯಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳೂ ಸಂದರ್ಶಿತರ ವೈಯಕ್ತಿಕ ಅನಿಸಿಕೆಗಳು.  

ಕಾಮೆಂಟ್‌ಗಳಿಲ್ಲ:

badge